ಶಾರುಖ್ ಖಾನ್ ಜೊತೆ ನಟಿಸಿದ್ದ ಬಾಲಿವುಡ್ನ ಹಿರಿಯ ನಟಿ ಅನಿತಾ ಕನ್ವಾಲ್ ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಬಳಿ ಇರುವ ಉಳಿತಾಯದ ಹಣ ಕೇವಲ ಒಂದು ವರ್ಷಕ್ಕೆ ಮಾತ್ರ ಸಾಕಾಗಲಿದ್ದು, ಚಿತ್ರರಂಗದಲ್ಲಿ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ.
ಚಿತ್ರರಂಗವೇ ಹಾಗೆ ಇಲ್ಲಿ ಬಿಕಾರಿಯಾಗಿದ್ದವರು ಸ್ಟಾರ್ಗಳಾಗಿ ಮೆರೆಯುತ್ತಾರೆ, ಒಂದು ಕಾಲದಲ್ಲಿ ಸ್ಟಾರ್ಗಳಾಗಿ ಮೆರೆದಿದ್ದವರು ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ತಲುಪುತ್ತಾರೆ. ಸ್ಯಾಂಡಲ್ವುಡ್ ನಿಂದ ಹಿಡಿದು ಬಾಲಿವುಡ್ನವರೆಗೂ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಈಗಿನ ತಾಜಾ ಉದಾಹರಣೆ ಎಂದರೆ ಬಾಲಿವುಡ್ನ ಈ ಹಿರಿಯ ನಟಿ. ಒಂದು ಕಾಲದಲ್ಲಿ ಸ್ಟಾರ್ ನಟನ ಜೊತೆಗೆ ತೆರೆಹಂಚಿಕೊಂಡಿದ್ದ ನಟಿ ಇಂದು ಎಂಥ ಸ್ಥಿತಿಗೆ ತಲುಪಿದ್ದಾರೆಂದರೆ ಉಳಿತಾಯದ ಹಣ ಇನ್ನೊಂದು ವರ್ಷದವರೆಗೆ ಆಗಬಹುದು, ಮುಂದೇನು ಎಂಬ ಚಿಂತೆ ಎದುರಾಗಿದೆ. ಕೆಲಸಕ್ಕಾಗಿ ಅಲೆದಾರು ಯಾರೂ ಕೆಲಸ ಕೊಡುತ್ತಿಲ್ಲ. ಯಾರು ಈ ನಟಿ?
'ಬನೇಗಿ ಅಪ್ನಿ ಬಾತ್', 'ಶಾಂತಿ' ಮತ್ತು 'ಸಸುರಾಲ್ ಗೆಂಡಾ ಫೂಲ್'ನಂತಹ ಧಾರಾವಾಹಿಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಹಿರಿಯ ನಟಿ ಅನಿತಾ ಕನ್ವಾಲ್ ಇತ್ತೀಚಿನ ಸಂದರ್ಶನವೊಂದರಲ್ಲಿಅವರು ತಮ್ಮ ಜೀವನ ಯಾವ ಹಂತಕ್ಕೆ ತಲುಪಿದೆ ಎಂಬುದನ್ನ ತಿಳಿಸಿದ್ದಾರೆ. ಅವರ ಬಳಿ ಇದ್ದ ಹಣವೆಲ್ಲ ಖರ್ಚಾಗಿ ಹೋಗಿದೆ. ಈ ಉಳಿದಿರುವ ಹಣವೂ ಮುಂದಿನ ಒಂದು ವರ್ಷದೊಳಗೆ ಖಾಲಿಯಾಗಬಹುದು. ಆದರೆ ಯಾವುದೇ ಕೆಲಸ ಇಲ್ಲದಿರುವುದು ಮುಂದೇನು ಎಂಬ ಚಿಂತೆ ಎದುರಾಗಿದೆ ಎಂದು ತಿಳಿಸಿದ್ದಾರೆ. ಮಾನಸಿಕ ನೆಮ್ಮದಿಗಾಗಿ ಏನಾದರೂ ಕೆಲಸ ಮಾಡಬೇಕೆಂದರೂ, ಚಿತ್ರರಂಗದ ಅನೇಕರನ್ನು ಕೆಲಸ ಕೇಳಿ ಸಂಪರ್ಕಿಸಿದ್ದರೂ ಯಾರೂ ಕೆಲಸ ಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇಲ್ಲಿವರೆಗೆ ನಾನು ಚಿತ್ರರಂಗದಲ್ಲಿ ಎಷ್ಟೊಂದು ಕೆಲಸ ಮಾಡಿದ್ದೇನೆ. ಆದರೆ ಅನೇಕರು ನನ್ನನ್ನು ಮರೆತೇ ಬಿಟ್ಟಿದ್ದಾರೆ ಎಂದು ನಿರಾಶೆ ವ್ಯಕ್ತಪಡಿಸಿರುವ ಹಿರಿಯ ನಟಿ ಅನಿತಾ, ವಿವಿಧ ಸಿನಿಮಾ, ಕಿರುತೆರೆಯಲ್ಲಿನ ತಮ್ಮ ಹಿಂದಿನ ನಟನೆ, ಶಾರೂಖ್ ಖಾನ್ ಜೊತೆಗೆ ತೆರೆ ಹಂಚಿಕೊಂಡಿದ್ದು, ನಿರ್ಮಾಪಕ ಪ್ರಕಾಶ್ ಝಾ ಅವರೊಂದಿಗೆ ಕೆಲಸ ಮಾಡಿದ್ದ ಬಗ್ಗೆ ಮೆಲುಕು ಹಾಕಿದ್ದಾರೆ.
ಒಂದೇ ವರ್ಷದಲ್ಲಿ ನನ್ನ ಸೇವಿಂಗ್ ಮುಗಿದು ಹೋಗುತ್ತೆ!
'ಬನೇಗಿ ಅಪ್ನಿ ಬಾತ್', 'ಶಾಂತಿ' ಮತ್ತು 'ಸಸುರಾಲ್ ಗೆಂಡಾ ಫೂಲ್'ನಂತಹ ಧಾರಾವಾಹಿಗಳಲ್ಲಿನ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾದ ಅನಿತಾ, ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು, ಕಠಿಣ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ್ದಾರೆ. ಅವರು, 'ನಾನು ದುಡಿಯಲೇಬೇಕು. ನನ್ನ ಉಳಿತಾಯ ಹಣ ಅಬ್ಬಾಬ್ಬ ಎಂದರೆ ಇನ್ನು ಒಂದು ವರ್ಷಕ್ಕೆ ಆಗುತ್ತದೆ. ಅಷ್ಟರಲ್ಲಿ ಹಣ ಖಾಲಿಯಾಗಬಹುದು. ಹೀಗಿರುವಾಗ ನಾನು ಇನ್ನೂ 10-12 ವರ್ಷ ಬದುಕಿದರೆ? ಆಗ ಬದುಕಲು ಏನು ಮಾಡಬೇಕು? ಈಗ ನನ್ನ ಮನೆಯೊಂದೇ ನನ್ನ ಬಳಿ ಇರುವ ಆಸ್ತಿ. ಉಳಿತಾಯ ಹಣ ಒಂದೇ ವರ್ಷದಲ್ಲಿ ಖಾಲಿಯಾಗುತ್ತದೆ. ಹಾಗಾಗಿ ನನಗೆ ಕೆಲಸ ಬೇಕು ಎಂದಿದ್ದಾರೆ.
ನನಗೆ ಮಕ್ಕಳಿದ್ದಾರೆ. ಮಕ್ಕಳು ಮಕ್ಕಳೇ. ಅವರು ನನಗೆ ಸಹಾಯ ಮಾಡಲು ಬಯಸಿದ್ರೂ ನಾನು ಅವರಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ. ನನ್ನ ಜೀವನ ನನ್ನ ದುಡಿಮೆಯ ಹಣದಿಂದ ಮುಂದುವರಿಯಬೇಕು. ಹೀಗಾಗಿ ನಾನು ಇತರರಿಗೆ ಹಿಂತಿರುಗಿಸುವ ಸ್ಥಿತಿಯಲ್ಲಿ ಬದುಕಲು ಬಯಸುತ್ತೇನೆ. ನನ್ನ ಬದುಕು ನಡೆಸಲು ನಾನೇ ದುಡಿಯಬೇಕು. ಅದಕ್ಕಾಗಿ ನನಗೆ ಕೆಲಸ ಬೇಕು ಎಂದಿದ್ದಾರೆ.
ಇಂದಿನ ಹೊಸ ಕಲಾವಿದರಿಗೆ ನನ್ನ ಹಿಂದಿನ ಕೆಲಸದ ಬಗ್ಗೆ ತಿಳಿದಿಲ್ಲ. ಹೆಚ್ಚಾಗಿ ನನ್ನ ಗುರುತೇ ಇಲ್ಲ. ನಾನು ಕೆಲಸ ಕೇಳಿದಾಗ ಚಿಕ್ಕ ಪಾತ್ರ ಕೊಡಲಾಗುತ್ತದೆ. ಅನಿತಾ ಕನ್ವಾಲ್ ಯಾರು ಅಥವಾ ಅವರು ಎಂತಹ ಕೆಲಸಗಳನ್ನು ಮಾಡಿದ್ದಾರೆ ಎಂಬುದು ಇಂದಿನ ಯುವ ಕಲಾವಿದರಿಗೆ ಯಾರಿಗೂ ತಿಳಿದಿಲ್ಲವೆಂದರೆ ನಾನೇನು ಮಾಡಲು ಸಾಧ್ಯ? ನಾನು ಆಡಿಷನ್ಗಳಿಗೆ ಹೋಗುತ್ತೇನೆ, ಕಾಸ್ಟಿಂಗ್ ನಿರ್ದೇಶಕರನ್ನು ಭೇಟಿಯಾಗುತ್ತೇನೆ, ಆದರೆ ನನಗೆ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಶಾರುಖ್ ಖಾನ್ ಜೊತೆಗೆ ತೆರೆಹಂಚಿಕೊಂಡ ಬಗ್ಗೆ ಹೇಳಿದ್ದೇನು?
ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಿದ ಅನುಭವದ ಕುರಿತು ಅನಿತಾ ಕನ್ವಾಲ್ ಮಾತನಾಡಿದ್ದಾರೆ.'ಕಭಿ ಹಾನ್ ಕಭಿ ನಾ' (Kabhi Haan Kabhi Naa) ಚಿತ್ರದಲ್ಲಿ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದೆ. ಈ ಚಿತ್ರದಲ್ಲಿ ದೀಪಕ್ ತಿಜೋರಿ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದೆ. ಆದರೆ ನನ್ನ ಶಾರುಖ್ ಜೊತೆಗಿನ ಮುಖ್ಯ ದೃಶ್ಯಗಳನ್ನೇ ಕತ್ತರಿಸಿ ಹಾಕಿದ್ದರು. ಆ ಚಿತ್ರಕ್ಕಾಗಿ ಯಾವುದೇ ಆಡಿಷನ್ ನೀಡಿರಲಿಲ್ಲ. ಆ ಕಾಲಕ್ಕೆ ನಾನು ಚಿತ್ರರಂಗಕ್ಕೆ ಸಂಪೂರ್ಣ ಹೊಸಬಳಾಗಿದ್ದೆ. ಸಹಜವಾಗಿಯೇ ದೆಹಲಿಯಲ್ಲಿದ್ದ ದಿನಗಳಿಂದಲೇ ಶಾರುಖ್ ಖಾನ್ಗೆ ನನ್ನ ಪರಿಚಯವಿತ್ತು. ಇದೊಂದು ಅತ್ಯುತ್ತಮ ಅನುಭವ. ಆಗ ದೀಪಕ್ ತಿಜೋರಿ ಅವರ ತಾಯಿಯ ಪಾತ್ರವನ್ನು ಮಾಡಲು ನಾನು ತುಂಬಾ ಚಿಕ್ಕವಳಾಗಿದ್ದೆನೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ನನಗಾಗಲೇ ವಯಸ್ಸು ಆಗ ಕೇವಲ 35 ಅಥವಾ 36 ವರ್ಷವಾಗಿತ್ತು. ಆದರೆ ಅದು ಅದ್ಭುತವಾದ ಪಾತ್ರವಾಗಿತ್ತು. ಮೂಲತಃ ಈ ಪಾತ್ರದಲ್ಲಿ ಹೆಚ್ಚಿನ ವಿಷಗಳಿದ್ದವು. ಆದರೆ ಎಡಿಟಿಂಗ್ ಮಾಡುವಾಗ ಕೆಲವು ಭಾಗಗಳನ್ನು ತೆಗೆದುಹಾಕಲಾಯಿತು. 'ದೀವಾನಾ' ಚಿತ್ರವು ದೊಡ್ಡ ಹಿಟ್ ಆಯಿತು; ಇದೇ ಕಾರಣಕ್ಕಾಗಿ ಶಾರುಖ್ ಅವರ ಮೋಟಾರ್ಸೈಕಲ್ ದೃಶ್ಯವನ್ನು ಹೆಚ್ಚು ಸೇರ್ಪಡೆಗೊಳಿಸಲಾಯ್ತು. ನಮ್ಮ ದೃಶ್ಯಗಳನ್ನು ಕತ್ತರಿಸಲಾಯ್ತು. ಇಷ್ಟಾದರೂ ಜನರು ನನ್ನನ್ನು, ನನ್ನ ನಟನೆಯನ್ನು ಗಮನಿಸಿದರು. ಆ ನಂತರ ನಾನು ಟಿವಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ. ಶಾರುಖ್ ಖಾನ್ ಜೊತೆಗಿನ ನನ್ನ ಮುಖ್ಯ ದೃಶ್ಯವೇ ಕತ್ತರಿಸಿದ್ದು ತುಂಬಾ ಬೇಸರ ತರಿಸಿತ್ತು ಎಂದು ಹೇಳಿಕೊಂಡಿದ್ದಾರೆ.
ಆ ಚಿತ್ರಕ್ಕಾಗಿ ಒಂದೇ ಬಾರಿ ಪೂರ್ಣ ಸಂಭಾವನೆ ಕೊಟ್ಟಿದ್ದ ಪ್ರಕಾಶ್ ಝಾ
2003ರ 'ಗಂಗಾಜಲ್' ಚಿತ್ರದಲ್ಲಿ ಪ್ರಕಾಶ್ ಝಾ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ನೆನಪಿಸಿಕೊಂಡ ಅನಿತಾ ಕನ್ವಾಲ್ ಅವರು, ಚಿತ್ರದ ಯಶಸ್ಸಿನ ನಂತರ ನನ್ನ ಸಂಭಾವನೆಯನ್ನು ದುಪ್ಪಟ್ಟು ಮಾಡಲಾಗಿತ್ತು. ಪ್ರಕಾಶ್ ಝಾ ಅವರೊಂದಿಗೆ ಕೆಲಸ ಮಾಡಿದ್ದು ಒಂದು ಅದ್ಭುತ ಅನುಭವ. ಪ್ರಕಾಶ್ ಝಾ ಅವರ ಬಗ್ಗೆ ಒಂದು ವಿಷಯವಿದೆ. ಅದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು 'ಗಂಗಾಜಲ್' ಚಿತ್ರದಲ್ಲಿ ಕೆಲಸ ಮಾಡಿದಾಗ, ನನಗೆ ಸಿಗಬೇಕಾದ ಪೂರ್ಣ ಸಂಭಾವನೆಯು ಸಮಯಕ್ಕೆ ಸರಿಯಾಗಿ ತಲುಪಿತ್ತು ಎಂದರು.
ಅವತ್ತೊಂದು ದಿನ ಅವರ ಕಚೇರಿಯಿಂದ ನನಗೆ ಫೋನ್ ಕರೆ ಬಂತು; ನನಗಾಗಿ ಒಂದು ಚೆಕ್ ಸಿದ್ಧವಾಗಿದೆ ಎಂದು ಅವರು ತಿಳಿಸಿದರು. ಅದಕ್ಕೆ ನಾನು ನನಗೆ ಈಗಾಗಲೇ ನನ್ನ ಸಂಭಾವನೆ ಸಿಕ್ಕಿದೆ ಎಂದಿದ್ದೆ. ಆಗ ಅವರು, *ಗಂಗಾಜಲ್* (Gangaajal) ಚಿತ್ರವು ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ಪ್ರಕಾಶ್ಜೀ ಅವರು ಎಲ್ಲರಿಗೂ ಹೆಚ್ಚುವರಿಯಾಗಿ ಮತ್ತೊಂದು ಚೆಕ್ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಿದರು. ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಒಂದು ಸಿನಿಮಾ ಹಿಟ್ ಆದಾಗ ಕಲಾವಿದರಿಗೆ ಹೀಗೆ ಯಾರು ತಾನೇ ಹೆಚ್ಚುವರಿ ಸಂಭಾವನೆ ಕೊಡಲು ಮುಂದೆ ಬರುತ್ತಾರೆ? ಆದರೆ ಪ್ರಕಾಶ್ ಝಾ ಅವರು ಚಿತ್ರದಲ್ಲಿ ಒಪ್ಪಿಕೊಂಡ ಸಂಭಾವನೆ ಹೊರತಾಗಿಯೂ ಚಿತ್ರ ಯಶಸ್ಸು ಕಂಡಾಗ ಹೆಚ್ಚುವರಿಯಾಗಿ ಚೆಕ್ ನೀಡಿದ್ದರು ಎಂದು ಹಿರಿಯ ನಟಿ ಮೆಲುಕು ಹಾಕಿದ್ದಾರೆ.


