ಹೆಣ್ಣೆಂದರೆ 'ಅನಿಮಲ್' ನಿರ್ದೇಶಕನ ದೃಷ್ಟಿಯಲ್ಲಿ ಹೀಗಂತೆ! ಯಾವುದ್ರಿಂದ ಹೊಡಿಬೇಕು ನಿಂಗೆ ಕೇಳ್ತಿದ್ದಾರೆ ನೆಟ್ಟಿಗರು
ಹೆಣ್ಣೆಂದರೆ 'ಅನಿಮಲ್' ನಿರ್ದೇಶಕನ ದೃಷ್ಟಿಯಲ್ಲಿ ಇಷ್ಟು ಕೀಳಂತೆ! ವೈರಲ್ ಆಗಿರೋ ವಿಡಿಯೋದಲ್ಲಿ ಈ ವ್ಯಕ್ತಿ ಏನು ಹೇಳಿದ್ದಾರೆ ಕೇಳಿ...
'ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ದಿಮ್ರಿ ಅಭಿನಯದ ಅನಿಮಲ್ ಚಿತ್ರ ನಾಗಾಲೋಟದಿಂದ ಓಡುತ್ತಲಿದೆ. ಇದೇ ಡಿಸೆಂಬರ್ 1 ರಂದು ಬಿಡುಗಡೆಯಾಗಿರುವ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿ 13 ದಿನಗಳಲ್ಲಿಯೇ ಜಗತ್ತಿನಾದ್ಯಂತ 800 ಕೋಟಿ ರೂಪಾಯಿ ದಾಟಿದೆ. ಅಡಲ್ಟ್ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ಮುನ್ನುಗ್ಗಿ ಸಾಗುತ್ತಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ಅರೆಬೆತ್ತಲೆ ಹಾಗೂ ತೃಪ್ತಿ ಡಿಮ್ರಿಯವರ ಸಂಪೂರ್ಣ ಬೆತ್ತಲೆ ಪ್ರದರ್ಶನ ಒಂದೆಡೆಯಾದರೆ, ಇನ್ನೊಂದೆಡೆ ಈ ಚಿತ್ರದ ತುಂಬಾ ದೌರ್ಜನ್ಯಗಳೇ ಹೆಚ್ಚಾಗಿವೆ ಎನ್ನಲಾಗಿದೆ. CBFC ಇಂಥ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೂ, ಅನಿಮಲ್‌ನಲ್ಲಿ ಮಹಿಳೆಯರನ್ನು ಹೊಡೆಯುವ, ಅವಮಾನಿಸುವ, ಬಲವಂತಪಡಿಸುವ ಕೌಟುಂಬಿಕ ದೌರ್ಜನ್ಯದ ಹಲವಾರು ದೃಶ್ಯಗಳನ್ನು ಹೊಂದಿವೆ. ಆದರೆ ಇಂಥ ಅಮಾನವೀಯ ಚಿತ್ರಗಳನ್ನು ನೋಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದರೆ ಜನರ ಮನಸ್ಥಿತಿ ಎಂಥದ್ದಿರಬಹುದು ಎಂಬ ಚರ್ಚೆಯೂ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಅನಿಮಲ್ ಚಿತ್ರದಲ್ಲಿ ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಇದೆ. ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವಾಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ ನಾಯಕ. ಸ್ತ್ರೀದ್ವೇಷಿಯಾಗಿಯೂ ಹಲವು ಕಡೆ ನಾಯಕ ಕಾಣಿಸುತ್ತಾನೆ. ಅಷ್ಟಕ್ಕೂ ಇಷ್ಟು ಹಿಂಸಾತ್ಮಕ ಮನೋಭಾವನೆ ಒಬ್ಬ ನಿರ್ದೇಶಕನಲ್ಲಿ ಬರಲು ಹೇಗೆ ಸಾಧ್ಯ ಎಂದು ಚಿತ್ರ ನೋಡಿದವರು ಅಂದುಕೊಂಡಿದ್ದರು. ಅದರ ಬೆನ್ನಲ್ಲೇ, ಅನಿಮಲ್ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ಕೇಳಿದವರು ಗರಂ ಆಗಿದ್ದಾರೆ. ಅದರಲ್ಲಿಯೂ ಹೆಣ್ಣುಮಕ್ಕಳು ನಿನ್ನನ್ನು ಯಾವುದರಿಂದ ಹೊಡೆಯಬೇಕು ಎಂದು ಪ್ರಶ್ನಿಸುತ್ತಿದ್ದಾರೆ.
ಅಷ್ಟಕ್ಕೂ ಮಹಿಳೆ ಎಂದರೆ ಈ ನಿರ್ದೇಶಕನ ದೃಷ್ಟಿಯಲ್ಲಿ ಯಾವುದೇ ಸರಕಿಗಿಂತ ಕಮ್ಮಿಯೇನಲ್ಲ. ಹೆಣ್ಣೆಂದರೆ ತಮ್ಮದೇ ರೀತಿಯ ವ್ಯಾಖ್ಯಾನ ನೀಡಿರುವ ಸಂದೀಪ್ ಅವರು, ನೀವು ನಿಮ್ಮ ಪತ್ನಿಯ ಕಪಾಳಕ್ಕೆ ಹೊಡೆಯದಿದ್ದರೆ, ನೀವು ಎಲ್ಲಿ ಬೇಕು ಅಲ್ಲಿ ನಿಮ್ಮ ಪತ್ನಿಯನ್ನು ಮುಟ್ಟಲು ಸಾಧ್ಯವಾಗದಿದ್ದರೆ, ನೀವು ಮುತ್ತು ಕೊಡಲು ಸಾಧ್ಯವಾಗದಿದ್ದರೆ ಮತ್ತು ಪತ್ನಿಯನ್ನು ಬೈಯ್ಯದಿದ್ದರೆ ಆ ಸಂಬಂಧದಲ್ಲಿ ನಾನು ಭಾವನೆಗಳನ್ನೇ ಕಾಣುವುದಿಲ್ಲ ಎಂದಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಅನಿಮಲ್ ಚಿತ್ರದಲ್ಲಿ ಹೆಣ್ಣನ್ನು ಈ ಪರಿ ತೋರಿಸಿರುವ ಈ ತೆಲಗು ನಿರ್ದೇಶಕನಿಗೆ ಮದ್ವೆಯಾಗಿದ್ದರೆ, ಆಕೆಯ ಹೆಂಡತಿಯ ಪಾಡೇನು ಎಂದು ಕೇಳುಗರು ಪ್ರಶ್ನಿಸುತ್ತಿದ್ದಾರೆ.
ಇಂಥ ಮನಸ್ಥಿತಿ ಇರುವ ಸಂದೀಪ್ ರೆಡ್ಡಿ ವಂಗಾ ಅವರ ಹೆಚ್ಚಿನ ಸಿನಿಮಾಗಳಲ್ಲಿ ಪುರುಷ ಪಾತ್ರಗಳನ್ನು ಅತ್ಯುನ್ನತ ಎಂಬಂತೆ ಬಿಂಬಿಸುತ್ತಾರೆ ಎನ್ನಲಾಗಿದೆ. ಅನಿಮಲ್ಗೂ ಮೊದಲು ಇವರು ನಿರ್ದೇಶಿಸಿದ್ದ, ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಸಿನಿಮಾದಲ್ಲಿಯೂ ಇದೇ ಆರೋಪ ಕೇಳಿಬಂದಿತ್ತು. ಆಗ ಈ ಸಿನಿಮಾವನ್ನು ನಟಿ ಅನಸೂಯಾ ಭಾರದ್ವಾಜ್ ಅವರು ಸಾಕಷ್ಟು ಹೀಯಾಳಿಸಿದ್ದರು. ಕಬೀರ್ ಸಿಂಗ್ ಸಿನಿಮಾದಲ್ಲಿ ಕೂಡ ಇದೇ ರೀತಿ ಇದೆ ಎನ್ನಲಾಗಿದೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆಯನ್ನು ಜನರು ಎಷ್ಟು ಇಷ್ಟಪಟ್ಟು ನೋಡುತ್ತಾರೆ, ಜನರ ಮನಸ್ಸು ಎಷ್ಟು ಹೀನಸ್ಥಿತಿಗೆ, ಹಿಂಸಾತ್ಮಕ ಸ್ಥಿತಿಗೆ ತಲುಪಿದೆ ಎನ್ನುವುದಕ್ಕೆ ಅನಿಮಲ್ ಚಿತ್ರದ ಭರ್ಜರಿ ಕಲೆಕ್ಷನ್ ನೋಡಿದರೆ ತಿಳಿಯುತ್ತದೆ.
ಅರೆನಗ್ನ ನಟಿಯರನ್ನೆಲ್ಲಾ ಹಿಂದಿಕ್ಕಿದ 'ಅನಿಮಲ್' ಬೆತ್ತಲೆ ರಾಣಿ ತೃಪ್ತಿಗೆ ಸಿಕ್ತು ಇನ್ನೊಂದು ಪ್ರತಿಷ್ಠಿತ ಸ್ಥಾನ!