Animal: ಹೆಣ್ಣಿನ ಮೇಲೆ ದೌರ್ಜನ್ಯ, ಕ್ರೌರ್ಯ ನೋಡೋದೆಂದ್ರೆ ಅಷ್ಟು ಇಷ್ಟನಾ? ಇದೆಂಥ ಮನಸ್ಥಿತಿ? ನಟಿ ದೀಪಿಕಾ ಹೇಳಿದ್ದೇನು?
ಕ್ರೌರ್ಯ, ರಕ್ತಪಾತ, ಹೆಣ್ಣಿನ ದೌರ್ಜನ್ಯ ನೋಡಿ ಖುಷಿ ಪಡುವ ಮನಸ್ಥಿತಿಯೇ ನಮ್ಮದು? ಅನಿಮಲ್ ಚಿತ್ರ ನೋಡಿ ನಟಿ ದೀಪಿಕಾ ಹೇಳಿದ್ದೇನು?
ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ದಿಮ್ರಿ ಅಭಿನಯದ ಅನಿಮಲ್ ಚಿತ್ರ ನಾಗಾಲೋಟದಿಂದ ಓಡುತ್ತಲಿದೆ. ಇದೇ ಡಿಸೆಂಬರ್1 ರಂದು ಬಿಡುಗಡೆಯಾಗಿರುವ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಇದಾಗಲೇ ಐದಾರು ದಿನಗಳಲ್ಲಿಯೇ ಜಗತ್ತಿನಾದ್ಯಂತ 500 ಕೋಟಿ ರೂಪಾಯಿ ಗಳಿಸಿದೆ. ಅಡಲ್ಟ್ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ಮುನ್ನುಗ್ಗಿ ಸಾಗುತ್ತಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಅವರ ಬೆತ್ತಲೆ ಪ್ರದರ್ಶನ ಒಂದೆಡೆಯಾದರೆ, ಇನ್ನೊಂದೆಡೆ ಈ ಚಿತ್ರದ ತುಂಬಾ ದೌರ್ಜನ್ಯಗಳೇ ಹೆಚ್ಚಾಗಿವೆ ಎನ್ನಲಾಗಿದೆ. CBFC ಇಂಥ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೂ, ಅನಿಮಲ್‌ನಲ್ಲಿ ಮಹಿಳೆಯರನ್ನು ಹೊಡೆಯುವ, ಅವಮಾನಿಸುವ, ಬಲವಂತಪಡಿಸುವ ಕೌಟುಂಬಿಕ ದೌರ್ಜನ್ಯದ ಹಲವಾರು ದೃಶ್ಯಗಳನ್ನು ಹೊಂದಿವೆ. ಆದರೆ ಇಂಥ ಅಮಾನವೀಯ ಚಿತ್ರಗಳನ್ನು ನೋಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದರೆ ಜನರ ಮನಸ್ಥಿತಿ ಎಂಥದ್ದಿರಬಹುದು ಎಂಬ ಚರ್ಚೆಯೂ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಈ ಚಿತ್ರದಲ್ಲಿ ರಣಬೀರ್ ಕಪೂರ್ ಪಾತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಚಿತ್ರದಲ್ಲಿನ ಅವರ ನಟನಾ ಕೌಶಲ್ಯವನ್ನು ಶ್ಲಾಘಿಸಿದರೆ, ಇತರರು ಮಹಿಳಾ ವಿರೋಧಿ ಚಿತ್ರದಲ್ಲಿ ಹಿಂಸೆಯನ್ನು ಚಿತ್ರಿಸಿದ್ದಾರೆ ಎಂದು ಅವರ ಸ್ತ್ರೀದ್ವೇಷದ ಪಾತ್ರವನ್ನು ಟೀಕಿಸುತ್ತಿದ್ದಾರೆ. ಅನಿಮಲ್ ಚಿತ್ರದಲ್ಲಿ ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಇದೆ. ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವಾಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ ನಾಯಕ. ಸ್ತ್ರೀದ್ವೇಷಿಯಾಗಿಯೂ ಹಲವು ಕಡೆ ನಾಯಕ ಕಾಣಿಸುತ್ತಾನೆ.
ಈ ರೀತಿಯ ಟೀಕೆಗಳ ಹೊರತಾಗಿಯೂ ಅವರ ಪತ್ನಿ ಆಲಿಯಾ ಭಟ್ ಅವರು ಅನಿಮಲ್‌ನಲ್ಲಿ ಗಂಡನ ಪಾತ್ರದ ಬಗ್ಗೆ ತುಂಬಾ ಪಾಸೆಟಿವ್ ಆಗಿ ಮಾತನಾಡಿದ್ದಾರೆ. ಇದೀಗ ನಟಿ ದೀಪಿಕಾ ಪಡುಕೋಣೆ ಕೂಡ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರವು ತುಂಬಾ ಚೆನ್ನಾಗಿದೆ. ಎಲ್ಲ ಪಾತ್ರಗಳೂ ಚೆನ್ನಾಗಿ ಮೂಡಿಬಂದಿವೆ ಎಂದಿರುವ ದೀಪಿಕಾ ಪಡುಕೋಣೆ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ವೈಭವೀಕರಿಸಲಾಗಿರುವುದು ಸರಿಯಲ್ಲ ಎಂದಿದ್ದಾರೆ. ಈ ಬಗ್ಗೆ ತಮಗೆ ವಿಷಾದವಿದೆ ಎಂದು ಹೇಳಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆ ಶುರುವಾಗಿದೆ. ಹಲವು ಬಾಲಿವುಡ್ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡಿ, ಮುನ್ನುಗ್ಗುತ್ತಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರದ್ದು ರಾಕ್ಷಸಿ ಅವತಾರ. ಈ ಸಿನಿಮಾದಲ್ಲಿ ನಾಯಕ ರಣಬೀರ್ ಕಪೂರ್ ಜನರಿಗೆ ಇಷ್ಟವಾಗಲು ಹೇಗೆ ಸಾಧ್ಯ ಎನ್ನುತ್ತಿದ್ದಾರೆ. ಜನರ ಮನಸ್ಥಿತಿಗೆ ಇದು ಸಾಕ್ಷಿ ಎಂಬ ಚರ್ಚೆ ನಡೆಯುತ್ತಿದೆ. ಆದರೆ ವಾಸ್ತವಲ್ಲಿ, ಕ್ರೌರ್ಯ, ಹಿಂಸೆ, ದೌರ್ಜನ್ಯ, ಸೆಕ್ಸ್ ಇಂಥವುಗಳಿಗೆ ಪ್ರಾಶಸ್ತ್ಯ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಇದೇ ಕಾರಣಕ್ಕೆ ತಾನೇ ಹೀರೋಗಳ ಕೈಯಲ್ಲಿ ಲಾಂಗು, ಮಚ್ಚು ಹಿಡಿಸಿ ಚಿತ್ರಗಳನ್ನು ಓಡಿಸುವುದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇವರನ್ನೇ ಅನುಕರಿಸಿ ಕೊಲೆ, ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ ಎನ್ನುತ್ತಿದ್ದಾರೆ.
'ಅನಿಮಲ್' ಚಿತ್ರದ ಹಸಿಬಿಸಿ ದೃಶ್ಯದ ಬಳಿಕ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ನಲ್ಲಿ ಬರೆದ್ರು ದಾಖಲೆ!