ಐಶ್ವರ್ಯ ರೈ ಬಗ್ಗೆ ರಾಹುಲ್ ಗಾಂಧಿ ಟೀಕೆ: ಅಮಿತಾಭ್ ಟ್ವೀಟ್- ಭಲೇ ಎಂಥ ಉತ್ತರ ಎಂದ ಫ್ಯಾನ್ಸ್!
ತಮ್ಮನ್ನು ಹಾಗೂ ಸೊಸೆ ಐಶ್ವರ್ಯ ರೈ ಅವರ ಬಗ್ಗೆ ಕೀಳಾಗಿ ಮಾತನಾಡಿರುವ ರಾಹುಲ್ ಗಾಂಧಿ ಅವರ ಕುರಿತು ಅಮಿತಾಭ್ ಮಾಡಿರುವ ಟ್ವೀಟ್ ಏನು?
ರಾಜಕಾರಣಿಗಳು ಮಾತಿನ ಭರದಲ್ಲಿ ಏನೇನೋ ಹೇಳಿ ಎಡವಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಇದೇ ಕಾರಣಕ್ಕೆ ಅರ್ಹ ರಾಜಕಾರಣಿ ಎನಿಸಿಕೊಳ್ಳಬೇಕಾದರೆ ಅವರಿಗೆ ತಾವು ಏನು ಹೇಳುತ್ತೇವೆ ಎನ್ನುವ ಬಗ್ಗೆ ಮೈಮೇಲೆ ಅರಿವು ಇರಬೇಕಾದ ಅಗತ್ಯವಿರುತ್ತದೆ. ಇದಾಗಲೇ ಹಲವು ರಾಜಕಾರಣಿಗಳು ಏನೋ ಹೇಳಲು ಹೋಗಿ ಇನ್ನೇನೋ ಹೇಳಿ ಟ್ರೋಲ್ಗೆ ಒಳಗಾಗುವುದು ಸಾಮಾನ್ಯ. ತಮ್ಮ ಪಕ್ಷದ ಹೆಸರನ್ನೇ ಮರೆತು ಬೇರೆ ಪಕ್ಷವನ್ನು ಹೊಗಳುವುದು, ಆ ಪಕ್ಷಕ್ಕೆ ಮತ ನೀಡಿ ಎನ್ನುವುದು ಇವೆಲ್ಲ ಟ್ರೋಲ್ಗಳು ಸಕತ್ ವೈರಲ್ ಆಗುವುದು ಉಂಟು. ಆದರೆ ಇದನ್ನು ತಮಾಷೆಯ ರೂಪದಲ್ಲಿ ಎಲ್ಲರೂ ತೆಗೆದುಕೊಳ್ಳುತ್ತಾರಷ್ಟೇ. ಆದರೆ ಮಾತಿನ ಭರದಲ್ಲಿ ಒಬ್ಬರ ವಿರುದ್ಧ ಕೆಟ್ಟ ರೀತಿಯಲ್ಲಿ ಮಾತನಾಡಿದಾಗ ವಿವಾದ ಸುತ್ತಿಕೊಳ್ಳುವುದು ಉಂಟು. ಇದಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೆಲವು ಕೇಸ್ಗಳು ಇದಾಗಲೇ ನಡೆಯುತ್ತಿರುವ ಹೊತ್ತಿನಲ್ಲಿಯೇ ನಟಿ ಐಶ್ವರ್ಯ ರೈ ಅವರನ್ನು ನಾಚ್ ನೇ ವಾಲಿ ಎಂದು ಕರೆಯುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿರುವುದು, ಇದರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿರುವುದು ಗೊತ್ತೇ ಇದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ರಾಹುಲ್ ಗಾಂಧಿ ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಅವರ ಸೊಸೆ ಐಶ್ವರ್ಯಾ ರೈ ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜನವರಿ 22ರಂದು ಅಯೋಧ್ಯಾದಲ್ಲಿ ನಡೆದ ರಾಮ ಮಂದಿರ ಉದ್ಘಾಟನೆ ಸಮಾರಂಭದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ರಾಹುಲ್ ಗಾಂಧಿ ಅವರು ಐಶ್ವರ್ಯಾ ರೈ ಹೆಸರು ಪ್ರಸ್ತಾಪಿಸಿದ್ದರು. ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜನರನ್ನು ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ. ಆದರೆ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಅವರೆಲ್ಲ ಬಂದಿದ್ದರು ಎಂದು ಟೀಕಿಸಿದ್ದರು. ಅಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ. ಆದರೆ ಇದನ್ನು ಹೇಳುವಾಗ, ಐಶ್ವರ್ಯ ರೈ ಅವರನ್ನು ನಾಚ್ ನೇ ವಾಲಿ ಎಂದಿದ್ದರು. ಇದರ ವಿರುದ್ಧ ಇದಾಗಲೇ ಬಿಜೆಪಿ ನಾಯಕರು ಸೇರಿದಂತೆ ಹಲವರು ಸಿಡಿದೆದ್ದಿದ್ದಾರೆ.
ಐಶ್ವರ್ಯ ರೈಗೆ ಅವಹೇಳನ ಆರೋಪ, ರಾಹುಲ್ ಗಾಂಧಿ ವಿರುದ್ಧ ಖ್ಯಾತ ಗಾಯಕಿ ಸೇರಿ ಹಲವರ ಆಕ್ರೋಶ!
ರಾಮ ಮಂದಿರ ಉದ್ಘಾಟನೆಗೆ ಕೆಲವು ಬಾಲಿವುಡ್ ನಟ-ನಟಿಯರು ಹೋಗಿದ್ದರು. ಆದರೆ ಐಶ್ವರ್ಯಾ ರೈ ಅವರು ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಆದರೂ ಅವರ ಹೆಸರನ್ನು ರಾಹುಲ್ ಗಾಂಧಿ ಎಳೆದು ತಂದಿರುವುದು ಇನ್ನಷ್ಟು ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಐಶ್ವರ್ಯಾ ರೈ ಅವರನ್ನು ಅವಹೇಳನೆ ಮಾಡುವ ಮೂಲಕ ರಾಹುಲ್ ಗಾಂಧಿ ಮತ್ತಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಹೇಳಿದೆ. ಜತೆಗೆ ಕನ್ನಡತಿಯೊಬ್ಬರನ್ನು ರಾಹುಲ್ ಗಾಂಧಿ ಅವಮಾನಿಸುತ್ತಿರುವಾಗ ಸಿದ್ಧರಾಮಯ್ಯ ಅದನ್ನು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದೆ.
ಇವೆಲ್ಲವುಗಳ ನಡುವೆ ಇದೀಗ ಐಶ್ವರ್ಯ ರೈ ಅವರ ಮಾವ, ಅಮಿತಾಭ್ ಬಚ್ಚನ್ ಟ್ವೀಟ್ ಒಂದನ್ನು ಮಾಡಿದ್ದಾರೆ. ಎಲ್ಲಿಯೂ ಯಾರ ಹೆಸರನ್ನೂ ಪ್ರಸ್ತಾಪಿಸದೇ, ತಾವು ಯಾವ ವಿಷಯದ ಬಗ್ಗೆ ಬರೆಯುತ್ತಿದ್ದೇವೆ ಎನ್ನುವುದನ್ನೂ ಹೇಳದ ಅಮಿತಾಭ್ ಅವರು, ಮೌನವಾಗಿಯೇ ತಾವು ಹೇಳಬೇಕಾದದ್ದನ್ನು ಹೇಳಿ ಮುಗಿಸಿದ್ದಾರೆ. ಇದು ವರ್ಕ್ ಔಟ್ ಸಮಯ .. ಇದರಿಂದ ದೇಹದ ಚಲನಶೀಲತೆ .. ಮನಸ್ಸಿನ ಮೇಲೆ ಹಿಡಿತ .. ಎಲ್ಲವನ್ನೂ ಸಾಧಿಸಬಹುದು ಎಂದು ಬರೆದುಕೊಂಡಿದ್ದಾರೆ. ಇದರ ಒಳಾರ್ಥ ದೇಹ ಮತ್ತು ಮನಸ್ಸಿನ ಮೇಲೆ ನಿಗ್ರಹ ಇರಬೇಕು ಎಂದು ರಾಹುಲ್ ಗಾಂಧಿಯವರಿಗೆ ಬಿಗ್ ಬಿ ಸೂಚ್ಯವಾಗಿ ಹೇಳಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಮನಸ್ಸಿನ ಮೇಲೆ ನಿಗ್ರಹ ಇಲ್ಲದ ಸಮಯದಲ್ಲಿ ನಾಲಿಗೆ ಹರಿಬಿಡುವುದು, ತಮ್ಮ ಅಸ್ತಿತ್ವ ಏನು ಎನ್ನುವುದನ್ನು ತಿಳಿದುಕೊಳ್ಳದೇ ಬೇರೆಯವರನ್ನು ನಾಚ್ ನೇ ವಾಲಿ ಎನ್ನುವುದು ಎಲ್ಲವೂ ಆಗುತ್ತದೆ ಎಂದಿರುವ ಅಮಿತಾಭ್ ಅಭಿಮಾನಿಗಳು, ಏನೂ ಹೇಳದೇ ಇದ್ದರೂ, ಎಲ್ಲವನ್ನೂ ಹೇಳಿದ್ದೀರಿ ಎಂದಿದ್ದಾರೆ.