ಸಿನಿಮಾ ಸೇರಲು ಅಪ್ಪ-ಅಮ್ಮನನ್ನು ಕೋರ್ಟ್ ಕಟಕಟೆಗೆ ಎಳೆತಂದಿದ್ದ ನಟಿ ಅಮಿಷಾ ಪಟೇಲ್!
ನಟಿ ಅಮಿಷಾ ಪಟೇಲ್ ಅವರ ಗದರ್-2 ಬಿಡುಗಡೆಗೆ ಸಿದ್ಧವಾಗಿರುವ ಈ ಹೊತ್ತಿನಲ್ಲಿ, ಅವರ ಜೀವನದ ರೋಚಕ ಕಥೆಯೊಂದು ಬೆಳಕಿಗೆ ಬಂದಿದೆ.
ಬಾಲಿವುಡ್ ನಟಿ ಅಮಿಷಾ ಪಟೇಲ್ ( Ameesha Patel ) ಅಭಿನಯದ ಗದರ್-2 ಇದೇ 11ರಂದು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರಮಂದಿರಗಳಲ್ಲಿ ಟಿಕೆಟ್‌ಗಳ ಪೂರ್ವ ಬುಕಿಂಗ್ ಪ್ರಾರಂಭವಾಗಿದೆ. ಈ ಚಿತ್ರಕ್ಕಾಗಿ ಜನ ಕಾತರದಿಂದ ಕಾಯುತ್ತಿದ್ದಾರೆ, ಗದರ್: ಏಕ್ ಪ್ರೇಮ್ ಕಥಾ ಚಿತ್ರ ಸೂಪರ್ ಹಿಟ್ ಆದ ನಂತರ ಈಗ ಗದರ್-2 ತೆರೆಗೆ ಬರಲಿದೆ. ಈ ಚಿತ್ರದ ಮೂಲಕ ನಟಿ ಅಮಿಷಾ ಪಟೇಲ್ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಹೃತಿಕ್ ರೋಷನ್ ಅವರ 'ಕಹೋ ನಾ ಪ್ಯಾರ್' ಹಿಟ್ ನಂತರ ಎರಡನೇ ಚಿತ್ರ ಗದರ್ ಕೂಡ ಹಿಟ್ ಆಗಿತ್ತು. ಇದೀಗ ಗದರ್-2 ನತ್ತ ಚಿತ್ತ ಹರಿಸಿದ್ದಾರೆ. ಇದರಲ್ಲಿ ಸನ್ನಿ ಡಿಯೋಲ್, ಉತ್ಕರ್ಷ್ ಶರ್ಮಾ ಮತ್ತು ಸಿಮ್ರತ್ ಕೌರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಅಮಿಷಾ ಅವರ ಜೀವನದ ಕುರಿತು ಅತ್ಯಂತ ಕುತೂಹಲದ ವಿಡಿಯೋ ಒಂದು ವೈರಲ್ ಆಗಿದೆ. ಹೆತ್ತವರನ್ನು ವಿರೋಧಿಸಿ, ಅವರ ವಿರುದ್ಧ ಕೋರ್ಟ್ ಸಮರ ಸಾರಿ, ನಟನಾ ವೃತ್ತಿಯನ್ನು ಅವರು ಹೇಗೆ ಆರಿಸಿಕೊಂಡರು ಎನ್ನುವ ಕೌತುಕದ ವಿಷಯವಿದು.
ಗದರ್ ಬಿಡುಗಡೆಯಾದ ನಂತರ ಅಮಿಷಾ ಖುದ್ದು ಹೆತ್ತವರೊಂದಿಗೆ (Parents) ದೊಡ್ಡ ಜಗಳವಾಡಿದ್ದರು ಎನ್ನುವುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಅದಕ್ಕೆ ಕಾರಣ, ಗದರ್ ಚಿತ್ರದ ದೊಡ್ಡ ಯಶಸ್ಸಿನ ನಂತರ ಅಮಿಷಾ ನಟನೆಯನ್ನು ತೊರೆಯಬೇಕೆಂದು ಅವರ ಪೋಷಕರು ಬಯಸಿದ್ದರು. ಇದರಿಂದ ಅಪ್ಪ-ಅಮ್ಮ ಮತ್ತು ಮಗಳ ನಡುವೆ ಜಟಾಪಟಿ ನಡೆದಿದೆ. ತಮ್ಮ ಮಗಳು ಬಣ್ಣದ ಲೋಕಕ್ಕೆ ಹೋಗುವುದು ಪಾಲಕರಿಗೆ ಇಷ್ಟವಿರಲಿಲ್ಲ. ಈಕೆ ತುಂಬಾ ಚಿಕ್ಕವಳಾಗಿದ್ದು, ಅಭ್ಯಾಸದ ಕಡೆಗೆ ಗಮನ ಹರಿಸುವುದು ಉತ್ತಮ ಎಂದು ಅವರು ಸಲಹೆ ಇತ್ತಿದ್ದರು. ಆದಾಗ್ಯೂ, ಅಮಿಷಾ ನಟನೆಯನ್ನು ಮುಂದುವರಿಸಲು ನಿರ್ಧರಿಸಿದರು. ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಜಗಳ ಇಲ್ಲಿಗೇ ಮುಗಿಯಲಿಲ್ಲ. ಅಮಿಷಾ ಮತ್ತು ಆಕೆಯ ಪೋಷಕರ ನಡುವಿನ ಜಗಳವು ನ್ಯಾಯಾಲಯದ ಮೆಟ್ಟಿಲೇರಿತ್ತು! ನಟಿಯ ಪೋಷಕರು ಮಗಳ ವಿರುದ್ಧವೇ ಪ್ರಕರಣ ದಾಖಲಿಸಿದ್ದರು. ಆಕೆಯನ್ನು ನಟನೆಯಿಂದ ತಡೆಯುವಂತೆ ನ್ಯಾಯಾಲಯವನ್ನು ಕೋರಿದ್ದರು. ಅದಾಗಲೇ ನಿರ್ದೇಶಕ ವಿಕ್ರಮ್ ಭಟ್ ಅವರೊಂದಿಗೆ ಅಮಿಷಾ ಅವರ ಹೆಸರು ಥಳಕು ಹಾಕಿಕೊಂಡಿತ್ತು. ಈ ನಿಕಟತೆಯನ್ನು ಅವರು ಕೋರ್ಟ್ನಲ್ಲಿ (Court) ವಿರೋಧಿಸಿದ್ದರು. ಅದೇ ಇನ್ನೊಂದೆಡೆ, ತಮ್ಮ ಪಾಲಕರ ವಿರುದ್ಧವೇ ಸಿಡಿದಿದ್ದಿದ್ದ ಅಮಿಷಾ, ತಮ್ಮ ಪೋಷಕರು ತಮಗೆ ಸೇರಿರುವ 12 ಕೋಟಿ ರೂಪಾಯಿಗಳನ್ನು ತಪ್ಪು ವಿಷಯಗಳಲ್ಲಿ ಬಳಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಕೆಲ ವರ್ಷ ನಡೆಯಿತು. ಅಂತಿಮವಾಗಿ ಅಮಿಷಾ ಗೆದ್ದರು. ಆಕೆ ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ವಯಸ್ಕಳಾಗಿರುವ ಕಾರಣ, ಅವರು ಬಯಸಿದರೆ ನಟನೆಯನ್ನು ಮುಂದುವರಿಸಬಹುದು ಎಂದು ಕೋರ್ಟ್ ತೀರ್ಪು ನೀಡಿತು.
DON-3 ಟೀಸರ್ ಔಟ್: ಬಿಗ್- ಬಿನೂ ಅಲ್ಲ, ಶಾರುಖ್ ಖಾನೂ ಅಲ್ಲ- ಬಾಯ್ಕಾಟ್ ಅಂತಿದ್ದಾರೆ ಫ್ಯಾನ್ಸ್!
ಕೋರ್ಟ್ ತೀರ್ಪು ತಮ್ಮ ಪರವಾಗಿ ಬಂದರೂ ಪಾಲಕರನ್ನು ಎದುರು ಹಾಕಿಕೊಂಡಿರುವ ಸಮಯ ಅಮಿಷಾ ಅವರಿಗೆ ಅತ್ಯಂತ ಕಷ್ಟಕರ ಸಮಯವಾಗಿತ್ತು. ತಮ್ಮ ಕುಟುಂಬದ ಮೇಲಿನ ಪ್ರೀತಿ ಮತ್ತು ನಟನೆಯ ಉತ್ಸಾಹದ ನಡುವೆ ಆಕೆ ನಲುಗಿ ಹೋಗಿದ್ದರು. ಆದರೆ ಪಾಲಕರಿಗಿಂತಲೂ ಕನಸೇ ಮುಖ್ಯವೆಂದುಕೊಂಡು ತಮ್ಮ ಕನಸುಗಳನ್ನು ಅನುಸರಿಸಲು ನಿರ್ಧರಿಸಿದರು. ಅವರು ಈಗ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದಾರೆ ಮತ್ತು ಅವರ ನಿರ್ಧಾರದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎನ್ನುತ್ತಾರೆ. ಕೆಲವೊಮ್ಮೆ, ಪೋಷಕರು ತಮ್ಮ ಮಕ್ಕಳಿಗೆ ಯಾವುದು ಉತ್ತಮ ಎಂಬುದರ ಕುರಿತು ವಿಭಿನ್ನ ಆಲೋಚನೆಗಳನ್ನು ಹೊಂದಿರಬಹುದು. ಆದರೆ ಮಕ್ಕಳು ಏನು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದೂ ಒಮ್ಮೆ ಸಂದರ್ಶನದಲ್ಲಿ ಅಮಿಷಾ ಹೇಳಿದ್ದರು. ಈಕೆಯ ನಿರ್ಧಾರ ಹಲ ಮಕ್ಕಳಿಗೆ ಅದರಲ್ಲಿಯೂ ಯುವತಿಯರಿಗೆ ಮಾದರಿ ಎನ್ನಲಾಗುತ್ತಿದೆ.
ಅಮಿಷಾ ಅವರ ಹಿಂದಿನ ಕಥೆಯ ವಿಡಿಯೋ ವೈರಲ್ (Vedio viral) ಆಗುತ್ತಿದ್ದಂತೆಯೇ, ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಪ್ಪ-ಅಮ್ಮನ ಮಾತನ್ನು ಮೀರಿ ಅಮಿಷಾ ಹೋಗಿ ಆಕೆ ಕಾನೂನಿನ ಸಮರದಲ್ಲಿ ಗೆದ್ದಿರಬಹುದು, ಜೀವನದಲ್ಲಿಯೂ ಯಶಸ್ಸು ಕಂಡಿರಬಹುದು. ಆದರೆ ಎಲ್ಲ ಸಂದರ್ಭಗಳೂ ಹೀಗಿರಲು ಸಾಧ್ಯವಿಲ್ಲ. ಅಪ್ಪ-ಅಮ್ಮನ ಪ್ರೀತಿಗಿಂತ ಮುಖ್ಯ ಯಾವುದೂ ಇಲ್ಲ. ಒಂದು ವೇಳೆ ಹೆಚ್ಚೂ-ಕಡಿಮೆ ಆದರೆ ಮನೆಯವರ ಬೆಂಬಲವೂ ಇಲ್ಲದೇ ಬೀದಿಪಾಲಾಗಬೇಕಾದ ಸ್ಥಿತಿಯೂ ಬರಬಹುದು ಎನ್ನುವ ವಾದವೂ ಇದೆ. ಅದೇ ವೇಳೆ ಪಾಲಕರಿಗೂ ಹಲವರು ಬುದ್ಧಿ ಮಾತು ಹೇಳಿದ್ದಾರೆ. ನಿಮ್ಮದೇ ನಿರ್ಧಾರವನ್ನು ಮಕ್ಕಳ ತಲೆಗೆ ತುಂಬ ಬೇಡಿ. ಅವರು ಏನು ಬಯಸುತ್ತಾರೋ ಅದನ್ನು ಮಾಡಲು ಅವರಿಗೆ ಬಿಡಿ ಎನ್ನುತ್ತಿದ್ದಾರೆ.
ಅಪ್ಪ ಶಾರುಖ್ ಜೊತೆ 120 ಕೋಟಿಯನ್ನೂ ರಿಜೆಕ್ಟ್ ಮಾಡಿದ ಪುತ್ರ ಆರ್ಯನ್ ಖಾನ್?