ನಟ ವಿಜಯ್ ಅವರ ರಾಜಕೀಯ ಯಶಸ್ಸಿನ ಬೆನ್ನಲ್ಲೇ, ತಮಿಳು ನಟ ಧನುಷ್ ಕೂಡ ರಾಜಕೀಯ ಪ್ರವೇಶಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವರದಿಗಳಿವೆ. ಸೂಪರ್‌ಸ್ಟಾರ್ ರಜನೀಕಾಂತ್ ಅವರ ಬೆಂಬಲದೊಂದಿಗೆ 2031ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ತಮ್ಮ ಅಭಿಮಾನಿ ಸಂಘಟನೆಗಳನ್ನು ಬಲಪಡಿಸುತ್ತಿದ್ದಾರೆ ಎನ್ನಲಾಗಿದೆ.

ಚೆನ್ನೈ: ತಮಿಳನಾಡಿನ ರಾಜಕೀಯದಲ್ಲಿ ಮತ್ತೊಬ್ಬ ನಟ ರಾಜಕೀಯ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಕಳೆದ ಚುನಾವಣೆಯಲ್ಲಿ ನಟ ವಿಜಯ್ ಅಭೂತಪೂರ್ವ ಯಶಸ್ಸು ಕಂಡ ನಂತರ ಇದೀಗ ತಮಿಳಿನ ಮತ್ತೊಬ್ಬ ನಟ ಧನುಷ್ ರಾಜಕೀಯಕ್ಕೆ ಪ್ರವೇಶಿಸಲು(Dhanush political entry) ಸಿದ್ಧತೆ ನಡೆಸುತ್ತಿರುವುದಾಗಿ ವರದಿಗಳು ಬಂದಿವೆ.

ನಟ ಧನುಷ್ ರಾಜಕೀಯ ಪ್ರವೇಶ? ಸೂಪರ್ ಸ್ಟಾರ್ ರಜನಿಕಾಂತ್ ಸುಳಿವು!

ಸೂಪರ್‌ಸ್ಟಾರ್ ರಜನೀಕಾಂತ್(Rajinikanth) ಧನುಷ್‌ ರಾಜಕೀಯ ಪ್ರವೇಶಕ್ಕೆ ಬೆಂಬಲ ನೀಡಿದ್ದಾರೆ. ಈ ಬಗ್ಗೆ ರಜನಿಕಾಂತ್ ಅವರೇ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. ಇದಕ್ಕೆ ಇಂಬು ಕೊಡುವಂತೆ ಧನುಷ್‌ ಜೊತೆಗೆ ರಜನಿಕಾಂತ್ ಫೋಟೋವೊಂದು ಗಮನ ಸೆಳೆದಿದೆ.

2031ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ನಟ ಧನುಷ್ ರಾಜಕೀಯ ಪ್ರವೇಶ?

ತಮಿಳು ಮಾಧ್ಯಮ ವರದಿಗಳ ಪ್ರಕಾರ ಧನುಷ್ ಮುಂಬರುವ ಚುನಾವಣೆ ಅಂದರೆ, 2031ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅವರ ಪಕ್ಷದ ಹೆಸರನ್ನು ಈಗಾಗಲೇ ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾಗಿದೆ ಎಂದು ವರದಿಗಳು ಬಂದಿವೆ. ಆದರೆ ಈ ಬಗ್ಗೆ ನಟ ಧನುಷ್ ಆಗಲಿ, ರಜನಿಕಾಂತ್ ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ.

ನಟ ವಿಜಯ್ ಬಳಿಕ ಧನುಷ್ ರಾಜಕೀಯ ಪ್ರವೇಶ ಫಿಕ್ಸ್?

ಈ ಹಿಂದೆಯೂ ರಜನೀಕಾಂತ್ ರಾಜಕೀಯಕ್ಕೆ ಬರುವುದಾಗಿ ಹೇಳಿದ್ದರು. ಆದರೆ ನಂತರ ಹಿಂದೆ ಸರಿದರು. ನಟ ವಿಜಯ್ 2024 ರಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪಿಸಿ ಕೆಲವೇ ವರ್ಷಗಳಲ್ಲಿ ದೊಡ್ಡ ಯಶಸ್ಸು ಸಾಧಿಸಿ ಈಗ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದರು.. ಈ ಯಶಸ್ಸಿನಿಂದಾಗಿ ಇದೀಗ ರಜನೀಕಾಂತ್ ಮತ್ತು ಅವರ ಅಭಿಮಾನಿಗಳು ನಿರಾಶರಾಗಿರಬಹುದು ಎಂದು ಹೇಳಲಾಗಿದೆ ಹೀಗಾಗಿ ರಜನೀಕಾಂತ್ ಧನುಷ್‌ಗೆ ಬೆಂಬಲ ನೀಡಿ ರಾಜಕೀಯ ಪ್ರವೇಶಕ್ಕೆ ಸಹಾಯ ಮಾಡಬಹುದು ಎಂದು ವರದಿಗಳು ಬಂದಿವೆ.

ಇದೇ ಕಾರಣಕ್ಕೆ ಧನುಷ್ ತಮ್ಮ ಅಭಿಮಾನಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುತ್ತಿರುವುದಾಗಿ ಹೇಳಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲೇ ವಿಭಾಗಿಸಿ ಅಧಿಕಾರಿಗಳನ್ನು ನೇಮಿಸುತ್ತಿದ್ದಾರೆ, ಸದಸ್ಯತ್ವ ವಿಸ್ತರಿಸುವಂತೆ ಸೂಚನೆ ನೀಡಿದ್ದಾರೆ. ಇವು ರಾಜಕೀಯ ಪ್ರವೇಶದ ಸಿದ್ಧತೆಗಳಾಗಿರಬಹುದು ಎನ್ನಲಾಗುತ್ತಿದೆ. ವಿಜಯ್‌ ರ ಯಶಸ್ಸಿನಿಂದ ಸೂರ್ಯ, ಶಿವಕಾರ್ತಿಕೇಯನ್, ವಿಜಯ್ ಸೇತುಪತಿ ಸೇರಿದಂತೆ ಇತರ ನಟರು ಕೂಡ ರಾಜಕೀಯಕ್ಕೆ ಬರುವ ವದಂತಿಗಳಿವೆ. ಆದರೆ ಬಂದವರೆಲ್ಲ ಯಶಸ್ವಿಯಾಗುತ್ತಾರಾ? ಕಾದು ನೋಡಬೇಕು.