ಚಿತ್ರರಂಗದ ಖ್ಯಾತ ನಟಿ ಒಂಟಿತನದ ಭಯದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಈ ಹೇಳಿಕೆ ವೃದ್ಧರ ಸ್ಥಿತಿಗತಿಯ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ. ನಟಿ ಅಂಕಿತಾ ಲೋಖಂಡೆ ಉಷಾ ನಾಡಕರ್ಣಿ ಅವರಿಗೆ ಧೈರ್ಯ ತುಂಬಿದ್ದಾರೆ.
ಮುಂಬೈ: ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ಉಷಾ ನಾಡಕರ್ಣಿ ಇಂದು ಒಂಟಿತನದ ಭಯವನ್ನು ಎದುರಿಸುತ್ತಿದ್ದಾರೆ. ಸಂದರ್ಶನದಲ್ಲಿ ಅವರು ತಾವು ಒಬ್ಬಂಟಿಯಾಗಿ ವಾಸಿಸುತ್ತಿರುವುದಾಗಿ ಮತ್ತು ಕೆಲವೊಮ್ಮೆ ಈ ಒಂಟಿತನ ಭಯ ಹುಟ್ಟಿಸುತ್ತದೆ ಎಂದು ಹೇಳಿದ್ದಾರೆ. ಇತ್ತೀಚಿನ ಹಲವು ಸಂದರ್ಶನಗಳಲ್ಲಿ ಉಷಾ ನಾಡಕರ್ಣಿ ತಮ್ಮ ಖಾಸಗಿ ಜೀವನದ ಕುರಿತು ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮಗೆ ಜೊತೆಯಾಗಿದ್ದ ಸೋದರನ ನಿಧನ ದೊಡ್ಡ ಆಘಾತವನ್ನುಂಟು ಮಾಡಿತ್ತು. ಸೋದರನ ನಿಧನದಿಂದ ಮಾನಸಿಕವಾಗಿ ಕುಗ್ಗಿದ್ದ ವಿಷಯವನ್ನು ಉಷಾ ನಾಡಕರ್ ಹೇಳಿದ್ದಾರೆ. ಸಿನಿಮಾ ಅಂಗಳದಲ್ಲಿ ಉಷಾ ನಾಡಕರ್ಣಿ ಅವರನ್ನು ಉಷಾ ತಾಯಿ ಎಂದೇ ಕರೆಯಲಾಗುತ್ತದೆ.
ಒಂಟಿತನದ ಭಯ ಕೇವಲ ಒಬ್ಬ ನಟಿಯ ಭಾವನಾತ್ಮಕ ಅಭಿವ್ಯಕ್ತಿ ಎಂದು ನೋಡದೆ, ಇಂದಿನ ಸಮಾಜದಲ್ಲಿ ವೃದ್ಧರ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳಲು ಇದು ಒಂದು ಅವಕಾಶ. ಉಷಾ ನಾಡಕರ್ಣಿಯವರಂತಹ ಪ್ರಸಿದ್ಧ ಮತ್ತು ಯಶಸ್ವಿ ಮಹಿಳೆಯೇ ಒಂಟಿತನದಿಂದ ಬಳಲುತ್ತಿದ್ದರೆ, ಸಾಮಾನ್ಯ ವೃದ್ಧರ ಪರಿಸ್ಥಿತಿ ಎಷ್ಟು ಕಷ್ಟಕರವಾಗಿರುತ್ತದೆ ಎಂದು ಊಹಿಸಬಹುದು.
ಕುಟುಂಬ ಪದ್ಧತಿ ಕಣ್ಮರೆಯಾಗುತ್ತಿದೆ. ಮಕ್ಕಳು ವೃತ್ತಿಜೀವನದಲ್ಲಿ ಮುಳುಗಿರುತ್ತಾರೆ, ಮನೆ ಬದಲಾಯಿಸುತ್ತಾರೆ ಮತ್ತು ಹಿರಿಯರು ಒಂಟಿಯಾಗುತ್ತಾರೆ. ಉಷಾ ನಾಡಕರ್ಣಿ ಅವರು ತಮ್ಮ ಭಯವನ್ನು ಮುಕ್ತವಾಗಿ ಹೇಳಿರುವುದು ಸಮಾಜದಲ್ಲಿ ವೃದ್ಧರ ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ. ವೃದ್ಧರಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಎಂದು ಉಷಾ ಹೇಳುತ್ತಾರೆ.
ಧೈರ್ಯ ತುಂಬಿದ ಅಂಕಿತಾ ಲೋಖಂಡೆ
ಒಂದು ಕಾಲದಲ್ಲಿ ಕ್ಯಾಮೆರಾ, ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಂದ ಸುತ್ತುವರೆದಿದ್ದ ಕಲಾವಿದರು, ಕ್ಯಾಮೆರಾ ಆಫ್ ಆದಾಗ ಒಂಟಿತನ ಅನುಭವಿಸುವುದು ಸಾಮಾನ್ಯ. ಆದರೆ ಉಷಾ ನಾಡಕರ್ಣಿ ಅವರ ಉದಾಹರಣೆ, ಖ್ಯಾತಿ, ಹಣ, ಪರಿಚಯವಿದ್ದರೂ ಒಬ್ಬ ವ್ಯಕ್ತಿ ಒಂಟಿತನ ಅನುಭವಿಸಬಹುದು ಎಂದು ತೋರಿಸುತ್ತದೆ. ನಟಿ ಅಂಕಿತಾ ಲೋಖಂಡೆ ಅವರು ಉಷಾ ನಾಡಕರ್ಣಿ ಅವರಿಗೆ ಕರೆ ಮಾಡಿ "ನೀವು ಒಬ್ಬಂಟಿಯಾಗಿಲ್ಲ" ಎಂದು ಧೈರ್ಯ ತುಂಬುವುದು ಮಾನವೀಯತೆಯ ಉದಾಹರಣೆ. ಸಂಬಂಧಗಳಲ್ಲಿ ಪ್ರೀತಿ ಮತ್ತು ಸಹಾನುಭೂತಿ ಮುಖ್ಯ ಎಂಬುದನ್ನು ಇದು ತೋರಿಸುತ್ತದೆ.
ಮಾನಸಿಕ ತಜ್ಞರು ಸಲಹೆ ಏನು?
ಉಷಾ ನಾಡಕರ್ಣಿ ಅವರ ಭಾವನೆಗಳು ನಮಗೆಲ್ಲರಿಗೂ ಒಂದು ಎಚ್ಚರಿಕೆ. ವೃದ್ಧರ ಒಂಟಿತನ ಕೇವಲ ಅವರದ್ದಲ್ಲ, ನಮ್ಮೆಲ್ಲರ ಭವಿಷ್ಯದ ಸಾಧ್ಯತೆಯೂ ಹೌದು. ಅವರ ಭಾವನೆಗಳನ್ನು ಕೇಳಿ, ಅವರೊಂದಿಗೆ ಸಂವಹನ ನಡೆಸಿ, ಅವರಿಗೆ ಸಮಯ ಕೊಡಿ ಎಂದು ಮಾನಸಿಕ ತಜ್ಞರು ಸಲಹೆ ನೀಡುತ್ತಾರೆ.
ರಿಯಾಲಿಟಿ ಶೋಗಳಲ್ಲಿ ಉಷಾ ನಾಡಕರ್ಣಿ ಭಾಗಿ
ಉಷಾ ನಾಡಕರ್ಣಿ ಮರಾಠಿ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಪವಿತ್ರ ರಿಷ್ತಾ ಧಾರಾವಾಹಿಯ ಅತ್ತೆ ಪಾತ್ರ ಉಷಾ ನಾಡಕರ್ಣಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಈ ಧಾರಾವಾಹಿಯಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಂಡೆ ನಟಿಸಿದ್ದರು. ಇಂದಿಗೂ ಉಷಾ ಅವರ ಜೊತೆ ಅಂಕಿತಾ ಲೋಖಂಡೆ ಸಂಪರ್ಕದಲ್ಲಿದ್ದು, ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇದಾದ ಬಳಿಕ ಹಲವು ಸಿನಿಮಾ ಆಫರ್‌ಗಳು ಉಷಾ ಅವರನ್ನು ಹುಡುಕಿಕೊಂಡು ಬಂದಿದ್ದವು. ಇತ್ತೀಚೆಗಷ್ಟೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಮಸ್ಟರ್ ಶೆಫ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ವೀಕ್ಷಕರ ಗಮನ ಸೆಳೆದಿದ್ದರು. ಈ ವೇಳೆ ಉಷಾ ನಾಡಕರ್ಣಿ ಅಡುಗೆ ಮಾಡುವ ಶೈಲಿಗೆ ತೀರ್ಪುಗಾರರು ಸಹ ಫಿದಾ ಆಗಿದ್ದರು. 72ನೇ ವಯಸ್ಸಿನಲ್ಲಿಯೂ ಸ್ಪರ್ಧಿಗಳಿಗೆ ಸ್ಪರ್ಧೆ ನೀಡಿದ್ದರು.
