ಮಲೆಯಾಳಂ ನಟಿ ಶ್ರೀವಿದ್ಯಾ ಮುಲ್ಲಚೇರಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೈಯಕ್ತಿಕ ನೋವನ್ನು ಹಂಚಿಕೊಂಡಿದ್ದಾರೆ. ಮನೆ ಕಟ್ಟುವುದು, ಹೊಸ ಶೋ ಸಿಗುವುದು ಸೇರಿದಂತೆ ಬಯಸಿದ್ದೆಲ್ಲಾ ಸಿಕ್ಕರೂ, ಮನಸ್ಸಿನಿಂದ ಖುಷಿ ಪಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅವರ ಪತಿ ರಾಹುಲ್ ರಾಮಚಂದ್ರನ್ ಸೇರಿದಂತೆ ಹಲವರು ಅವರಿಗೆ ಧೈರ್ಯ ತುಂಬಿದ್ದಾರೆ.
ನಟಿ ಶ್ರೀವಿದ್ಯಾ ಮುಲ್ಲಚೇರಿ ಅಲಿಯಾಸ್ ಶ್ರೀವಿದ್ಯಾ ನಾಯರ್ ಮಲೆಯಾಳಂ ಟಿವಿ ಲೋಕದಲ್ಲಿ ಚಿರಪರಿಚಿತ ಹೆಸರು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಇವರು, ತಮ್ಮ ಲೈಫ್‌ನ ಎಲ್ಲಾ ಅಪ್‌ಡೇಟ್‌ಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡ್ತಾರೆ. ಇವರ ಪೋಸ್ಟ್‌ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ನಿರ್ದೇಶಕ ರಾಹುಲ್ ರಾಮಚಂದ್ರನ್ ಜೊತೆ ಹಲವು ವರ್ಷಗಳ ಪ್ರೀತಿ ಬಳಿಕ 2024ರಲ್ಲಿ ಮದುವೆಯಾಗಿ ಈಗ ಎರಡು ವರ್ಷಗಳಾಗಿವೆ. ಇಬ್ಬರೂ ಒಟ್ಟಿಗಿರುವ ಫೋಟೋ, ವಿಡಿಯೋಗಳನ್ನು ಯೂಟ್ಯೂಬ್ ಮತ್ತು ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಪೋಸ್ಟ್ ಮಾಡುತ್ತಿರತ್ತಾರೆ.
ಆದರೆ, ಈಗ ಶ್ರೀವಿದ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಶೇರ್ ಮಾಡಿ, ತಮ್ಮ ವೈಯಕ್ತಿಕ ನೋವೊಂದನ್ನು ಹೇಳಿಕೊಂಡಿದ್ದಾರೆ. ತಾನು ಅಂದುಕೊಂಡಿದ್ದೆಲ್ಲಾ ಸಿಕ್ಕರೂ, ಮನಸ್ಸಿನಿಂದ ಖುಷಿ ಪಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಶ್ರೀವಿದ್ಯಾ ಹೇಳಿದ್ದೇನು?
ಜೀವನ ಯಾವಾಗಲೂ ಪರ್ಫೆಕ್ಟ್ ಆಗಿರಲ್ಲ. ನಾನೂ ಹಾಗೆ ಬಯಸಲ್ಲ. ಯಾರದ್ದಾದರೂ ಲೈಫ್ ಅಷ್ಟು ಪರ್ಫೆಕ್ಟ್ ಆಗಿರುತ್ತಾ ಅಂತಾನೂ ನನಗೆ ಗೊತ್ತಿಲ್ಲ. ನನ್ನನ್ನು ಬಲ್ಲವರೆಲ್ಲಾ ನಾನು ಯಾವಾಗಲೂ ಖುಷಿಯಾಗಿರ್ತೀನಿ ಅಂತ ಹೇಳ್ತಾರೆ. ಜಗತ್ತೇ ತಲೆಕೆಳಗಾದರೂ ನನಗೇನೂ ಆಗಲ್ಲ ಅಂತ ನಮ್ಮ ಅಮ್ಮ ಹೇಳ್ತಾರೆ. ಸಾಮಾನ್ಯವಾಗಿ ನನ್ನ ಬಗ್ಗೆ ಎಲ್ಲರಿಗೂ ಇದೇ ಅಭಿಪ್ರಾಯ ಇದೆ.
ಕಳೆದ ಕೆಲವು ದಿನಗಳಿಂದಂತೂ ನಾನು ತುಂಬಾನೇ ಖುಷಿಯಲ್ಲಿದ್ದೆ. ಒಬ್ಬ ಮನುಷ್ಯನ ಜೀವನದ ದೊಡ್ಡ ಖುಷಿಗಳಲ್ಲಿ ಒಂದು ಅಂದ್ರೆ ಮನೆ ಕಟ್ಟುವುದು. ಆ ಕನಸು ನನಸಾಗಿದೆ. ವರ್ಕ್ ಲೈಫ್ ಕೂಡ ಚೆನ್ನಾಗಿ ನಡೀತಿದೆ. ನಾನು ತುಂಬಾನೇ ಆಸೆಪಟ್ಟಿದ್ದ ಒಂದು ಹೊಸ ಶೋಗೆ ಜಾಯಿನ್ ಆಗ್ತಿದ್ದೀನಿ. ಈ ಬ್ಯುಸಿ ಶೆಡ್ಯೂಲ್ ಕೂಡ ನಾನು ಬಯಸಿದ್ದೇ. ಆದರೆ, ಇದ್ಯಾವುದನ್ನೂ ಎಂಜಾಯ್ ಮಾಡಲು ಆಗ್ತಿಲ್ಲ. ಬೇರೆ ಯಾರಿಗಾದರೂ ಹೀಗೆಲ್ಲಾ ಅನಿಸುತ್ತೋ ಇಲ್ವೋ ನನಗೆ ಗೊತ್ತಿಲ್ಲ. ನಾನು ಆಸೆಪಟ್ಟಿದ್ದೆಲ್ಲಾ ನನ್ನ ಹತ್ತಿರ ಇದೆ. ಆದರೆ, ನನ್ನ ದೇಹ ಮತ್ತು ಮನಸ್ಸು ಎರಡೂ ಇದನ್ನು ಸ್ವೀಕರಿಸುತ್ತಿಲ್ಲ. ಇದಕ್ಕೆ ಏನಾದ್ರೂ ಪರಿಹಾರ ಇದ್ದರೆ, ದಯವಿಟ್ಟು ಯಾರಾದ್ರೂ ಹೇಳಿ ಎಂದಿದ್ದಾರೆ.
ನಾವು ಸರಿ ಮಾಡಿಕೊಳ್ಳೋಣ ಚಿನ್ನಾ, ಗಂಡ ಕಮೆಂಟ್
ಶ್ರೀವಿದ್ಯಾ ಅವರ ಈ ಪೋಸ್ಟ್‌ಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ಅವರ ಪತಿ ರಾಹುಲ್ ರಾಮಚಂದ್ರನ್, 'ನಾವು ಸರಿ ಮಾಡಿಕೊಳ್ಳೋಣ ಚಿನ್ನಾ' (We'll set it right, baby) ಎಂದು ಕಾಮೆಂಟ್ ಮಾಡಿದ್ದಾರೆ. ನಟಿ, ನಿರೂಪಕಿ ಹಾಗೂ ಲೈಫ್ ಕೋಚ್ ಆಗಿರುವ ಅಶ್ವತಿ ಶ್ರೀಕಾಂತ್ ಕೂಡ ಪ್ರತಿಕ್ರಿಯಿಸಿದ್ದಾರೆ. 'ಜೀವನದಲ್ಲಿ ಬಹಳಷ್ಟು ಸಾಧಿಸಿದವರಿಗೆ ಈ ರೀತಿ ಆಗುವುದು ಸಹಜ. ಕೆಲವೊಮ್ಮೆ 'ಡೂಯಿಂಗ್' ಮೋಡ್‌ನಿಂದ 'ಸ್ಲೋ' ಮೋಡ್‌ಗೆ ಬದಲಾಗಬೇಕು. ಥೆರಪಿ ಕೂಡ ಸಹಾಯ ಮಾಡಬಹುದು' ಎಂದು ಅವರು ಸಲಹೆ ನೀಡಿದ್ದಾರೆ.


