ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ನಡೆದರೂ ಅದು ದೊಡ್ಡ ಪಾಪ; ಸಾಯಿ ಪಲ್ಲವಿ ಸ್ಪಷ್ಟನೆ
ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಯಿ ಪಲ್ಲವಿ, ಎರಡು ಘಟನೆ ನನ್ನನ್ನು ವಿಚಲಿತಗೊಳಿಸಿತ್ತು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದ ನಂತರ ನಾನು ಡಿಸ್ಟರ್ಬ್ ಆಗಿದ್ದೆ. ನಿರ್ದೇಶಕರ (ವಿವೇಕ್ ಅಗ್ನಿಹೋತ್ರಿ) ಜೊತೆ ಈ ಬಗ್ಗೆ ಮಾತನಾಡಿದ್ದೆ. ಅದೇ ರೀತಿ ಕೊವಿಡ್ ಸಂದರ್ಭದಲ್ಲಿ ಆದ ಗುಂಪು ಹಲ್ಲೆ ವಿಡಿಯೋ ನೋಡಿ ನಾನು ವಿಚಲಿತಗೊಂಡಿದ್ದೆ. ಹಿಂಸೆ ತಪ್ಪು. ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ಮಾಡುವುದು ಪಾಪ. ಗುಂಪು ಹಲ್ಲೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದರು. ನಿಜಕ್ಕೂ ಅದು ಬೇಸರದ ವಿಚಾರ ಎಂದಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi)‘ವಿರಾಟ ಪರ್ವಂ’(Virata Parvam) ಸಿನಿಮಾ ಪ್ರಚಾರದ ವೇಳೆ ನೀಡಿದ ಹೇಳಿಕೆ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು. ಸಾಯಿ ಪಲ್ಲವಿ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಪ್ರಾರಂಭವಾಗಿತ್ತು. ಕಾಶ್ಮೀರ ಪಂಡಿತರ ಹತ್ಯೆ ಮತ್ತು ಹಸು ಕಳ್ಳ ಸಾಗಣೆ ಮಾಡಿದ ಎಂದು ಅನುಮಾನಿಸಿ ಆತನನ್ನು ಹತ್ಯೆ ಮಾಡಿದ್ದು ಎರಡು ಒಂದೆ. ಎರಡರಲ್ಲಿ ಏನು ವ್ಯತ್ಯಾಸ ಇದೆ ಎಂದು ಸಾಯಿ ಪಲ್ಲವಿ ಹೇಳಿದ್ದರು. ಈ ಹೇಳಿಕೆ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಕೆಲವರು ಸಾಯಿ ಪಲ್ಲವಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ವಿವಾದ ದೊಡ್ಡದಾದ ಬಳಿಕ ನಟಿ ಸಾಯಿ ಪಲ್ಲವಿ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ಸಾಯಿ ಪಲ್ಲವಿ ಮೊದಲು ಮನುಷ್ಯರಾಗಬೇಕು, ಜಾತಿ, ಧರ್ಮಕ್ಕಿಂತ ಮನುಷತ್ವ ದೊಡ್ಡದು ಎಂದು ಹೇಳಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿರುವ ಸಾಯಿ ಪಲ್ಲವಿ, ‘ನಾನು ಇದೇ ಮೊದಲ ಬಾರಿಗೆ ಸ್ಪಷ್ಟನೆ ನೀಡಲು ನಿಮ್ಮ ಮುಂದೆ ಬರುತ್ತಿದ್ದೇನೆ. ನಾನು ಹೃದಯದಿಂದ ಮಾತನಾಡುವಾಗ ನಾನು ಎರಡು ಬಾರಿ ಯೋಚಿಸುತ್ತೇನೆ. ನಾನು ನನ್ನ ಪ್ರತಿಕ್ರಿಯೆ ನೀಡಲು ತಡಮಾಡಿದ್ದರೆ ಕ್ಷಮೆ ಇರಲಿ. ಇತ್ತೀಚಿನ ಸಂದರ್ಶನವೊಂದರಲ್ಲಿ ನಾನು ಎಡ ಅಥವಾ ಬಲನಾ ಎಂದು ಪ್ರಶ್ನೆ ಮಾಡಲಾಯಿತು. ಆಗ ನಾನು ತಟಸ್ಥ ಎನ್ನುವ ಉತ್ತರ ಕೊಟ್ಟೆ. ನಾವು ನಮ್ಮ ನಂಬಿಕೆಗಳೊಂದಿಗೆ ಗುರಿತಿಸಿಕೊಳ್ಳುವ ಮೊದಲು ಮನುಷ್ಯರಾಗಬೇಕು ಎಂದು ಸ್ಪಷ್ಟವಾಗಿ ಹೇಳಿದ್ದೆ' ಎಂದಿದ್ದಾರೆ.
‘ಎರಡು ಘಟನೆ ನನ್ನನ್ನು ವಿಚಲಿತಗೊಳಿಸಿತ್ತು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದ ನಂತರ ನಾನು ಡಿಸ್ಟರ್ಬ್ ಆಗಿದ್ದೆ. ನಿರ್ದೇಶಕರ (ವಿವೇಕ್ ಅಗ್ನಿಹೋತ್ರಿ) ಜೊತೆ ಈ ಬಗ್ಗೆ ಮಾತನಾಡಿದ್ದೆ. ಅದೇ ರೀತಿ ಕೊವಿಡ್ ಸಂದರ್ಭದಲ್ಲಿ ಆದ ಗುಂಪು ಹಲ್ಲೆ ವಿಡಿಯೋ ನೋಡಿ ನಾನು ವಿಚಲಿತಗೊಂಡಿದ್ದೆ. ಹಿಂಸೆ ತಪ್ಪು. ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ಮಾಡುವುದು ಪಾಪ. ಗುಂಪು ಹಲ್ಲೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದರು. ನಿಜಕ್ಕೂ ಅದು ಬೇಸರದ ವಿಚಾರ. ಬೇರೆಯವರ ಜೀವವನ್ನು ತೆಗೆದುಕೊಳ್ಳುವ ಹಕ್ಕು ನಮಗೆ ಇಲ್ಲ. ನಾನು ಎಂಬಿಬಿಎಸ್ ಪದವೀಧರೆಯಾಗಿ ಎಲ್ಲರ ಜೀವವೂ ಮುಖ್ಯ ಎಂದು ನಂಬಿದ್ದೇನೆ’ ಎಂದಿದ್ದಾರೆ ಸಾಯಿ ಪಲ್ಲವಿ.
ಕಾಶ್ಮೀರಿ ಪಂಡಿತರು, ಗೋ ಸಾಗಣೆಕಾರರ ಹತ್ಯೆ ಎರಡೂ ಒಂದೇ: ಚರ್ಚೆಗೆ ಕಾರಣವಾಯ್ತು ಸಾಯಿ ಪಲ್ಲವಿ ಹೇಳಿಕೆ
‘ಭಾರತೀಯರೆಲ್ಲ ಸಹೋದರರಿದ್ದಂತೆ ಎಂದು ಹೇಳುತ್ತಾ ಬೆಳೆದವರು ನಾವು. ನನ್ನ ಮನಸ್ಸಲ್ಲಿ ಅದು ಆಳವಾಗಿ ಕೂತಿದೆ. ನಾನು ಮಾತನಾಡುವಾಗ ತಟಸ್ಥವಾಗಿ ಮಾತನಾಡುತ್ತೇನೆ. ನಾನು ಮಾತನಾಡಿದ್ದನ್ನು ಬೇರೆಯ ರೀತಿ ಅರ್ಥೈಸಿದ್ದು ನಿಜಕ್ಕೂ ಬೇಸರ ತರಿಸುವಂತಹದ್ದು. ಪೂರ್ತಿ ಸಂದರ್ಶನ ನೋಡದೆ ಕೆಲವರು ಮಾತನಾಡಿದ್ದು ಬೇಸರದ ವಿಚಾರ. ನನ್ನ ಪರವಾಗಿ ನಿಂತವರಿಗೆ ಧನ್ಯವಾದ’ ಎಂದು ಸಾಯಿ ಪಲ್ಲವಿ ವಿಡಿಯೋ ಹೇಳಿಕೆ ನೀಡಿದ್ದಾರೆ.
ಸಾಯಿ ಪಲ್ಲವಿ ವಿರುದ್ಧ ಕೇಸ್, 'ವಿರಾಟಪರ್ವಂ' ಬಾಯ್ಕಾಟ್ ಮಾಡಲು ಒತ್ತಾಯ!
ಸಂದರ್ಶನದಲ್ಲಿ ಸಾಯಿ ಪಲ್ಲವಿ ಹೇಳಿದ್ದೇನು?
'ನಾನು ರಾಜಕೀಯ ವಿಚಾರದಲ್ಲಿ ತಟಸ್ಥೆ. ನಾನು ಬೆಳೆದ ವಾತಾವರಣ ಕೂಡ ಹಾಗೆ ಇತ್ತು. ನಾನು ಎಡ ಮತ್ತು ಬಲದ ಬಗ್ಗೆ ಕೇಳಿದ್ದೇನೆ. ಆದರೆ ನಾನು ಯಾವುದು ಸರಿ ಯಾವುದು ತಪ್ಪು ಎಂದು ಹೇಳಲ್ಲ. ಇತ್ತೀಚಿಗೆ ಬಂದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಸಾಯಿಸಲಾಯಿತು ಎಂದು ತೋರಿಸಲಾಗಿದೆ. ಹಾಗೆ ಇತ್ತೀಚಿಗಷ್ಟೆ ಹಸು ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಎಂದು ಆತನನ್ನು ಹತ್ಯೆಮಾಡಲಾಗಿದೆ. ಆ ವ್ಯಕ್ತಿಯನ್ನು ಹತ್ಯೆ ಮಾಡಿ ಜೈ ಶ್ರೀರಾಮ್ ಎಂದು ಘೋಷಣೆ ಹಾಕಿದ್ದಾರೆ. ಕಾಶ್ಮೀರ ಘಟನೆಗೂ ಈ ಘಟನೆಗೂ ವ್ಯತ್ಯಾಸ ಏನಿದೆ? ತನ್ನ ಕುಟುಂಬ ಉತ್ತಮ ವ್ಯಕ್ತಿಯಾಗಬೇಕೆಂದು ಹೇಳಿಕೊಟ್ಟಿದೆ. ತುಳಿತಕ್ಕೆ ಒಳಗಾದವರನ್ನು ರಕ್ಷಿಸಬೇಕು. ನಿಲುವು ಮುಖ್ಯವಲ್ಲ, ನೀವು ಮೊದಲು ಉತ್ತಮ ವ್ಯಕ್ತಿಯಾಗಬೇಕು' ಎಂದು ಸಾಯಿ ಸಂದರ್ಶನವೊಂದರಲ್ಲಿ ಹೇಳಿದ್ದರು.