ಒಲೆ ಮೇಲಿಟ್ಟ ಹಾಲು ಉಕ್ಕುವ ಫಜೀತಿ: ನಟಿ ಕಂಗನಾ ರಣಾವತ್ ಅನುಭವ ಕೇಳಿ! ನಿಮಗೂ ಹೀಗಾಗಿದ್ಯಾ?
ಒಲೆ ಮೇಲೆ ಹಾಲಿಟ್ಟಾಗ ನೋಡನೋಡುತ್ತಿದ್ದಂತೆಯೇ ಉಕ್ಕಿ ಚೆಲ್ಲುವುದರ ಬಗ್ಗೆ ನಟಿ ಕಂಗನಾ ರಣಾವತ್ ಏನು ಹೇಳಿದ್ದಾರೆ ನೋಡಿ...

ಒಲೆ ಮೇಲೆ ಇಟ್ಟ ಹಾಲು ಉಕ್ಕುವುದನ್ನೇ ಕಾಯುತ್ತಿರುತ್ತೀರಿ. ಅದು ಉಕ್ಕುವುದೇ ಇಲ್ಲ. ಅರೆ ಕ್ಷಣ ಅತ್ತ ಕಡೆ ಗಮನ ಹೋದ್ರೆ ಸಾಕು, ಅದ್ಯಾವ ಮ್ಯಾಜಿಕ್ನಲ್ಲಿ ಹಾಲು ಉಕ್ಕಿ ಚೆಲ್ಲಿಯೇ ಬಿಡುತ್ತದೆ. ನಿಮಗೂ ಇಂಥ ಅನುಭವ ಆಗಿರಲಿಕ್ಕೆ ಸಾಕು ಅಲ್ಲವೆ? ಅದರಲ್ಲಿಯೂ ಮನೆಗೆಲಸದಲ್ಲಿ ಬಿಜಿ ಇರುವವರು, ಮುಖ್ಯವಾಗಿ ಹೆಚ್ಚಿನ ಮಹಿಳೆಯರಿಗೆ ಇದರ ಅನುಭವ ಆಗಿರಲು ಸಾಧ್ಯ. ಕೆಲವೊಮ್ಮೆ ಛೇ... ಹೀಗೆ ಯಾಕೆ ನನಗೇ ಆಗತ್ತೆ ಎಂದುಕೊಳ್ಳುವುದೂ ಉಂಟು. ಆದರೆ ಇಂಥ ಕೆಲವು ಅಡುಗೆ ಮನೆಯ ಫಜೀತಿಯ ಅನುಭವಗಳು ಬಹುತೇಕರಿಗೆ ಸಾಮಾನ್ಯವೇ ಹೌದು. ಒಲೆ ಮೇಲೆ ಏನೋ ಇಟ್ಟು ಮರೆಯುವುದು, ಅಡುಗೆ ಮಾಡುವಾಗ ಅರ್ಜೆಂಟ್ಗೆ ಏನೋ ಬೇಕು ಎಂದು ಫ್ರಿಜ್ ಬಾಗಿಲು ತೆರೆಯುವಷ್ಟರಲ್ಲಿಯೇ ಏನಕ್ಕೆ ಬಂದಿದ್ದೆ ಎನ್ನುವುದನ್ನೇ ಮರೆಯುವುದು. 2-3 ಅಡುಗೆಗಳನ್ನು ಒಟ್ಟಿಗೇ ಮಾಡುವಾಗ ಅದಕ್ಕೆ ಹಾಕುವ ಉಪ್ಪು ಇದಕ್ಕೆ ಹಾಕುವುದು, ಅದಕ್ಕೆ ಹಾಕುವ ಸಕ್ಕರೆ, ಇದಕ್ಕೆ ಹಾಕುವುದು... ಹೀಗೆ ಕೆಲವು ಫಜೀತಿಗಳು ಕಾಮನ್ ಬಿಡಿ.
ಈಗ ಅದೇ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ ನಟಿ, ಸಂಸದೆ ಕಂಗನಾ ರಣಾವತ್. ಅವರ ಅಡುಗೆ ಮನೆಯ ಸಮಸ್ಯೆ (kitchen disaster) ಏನು ಎಂಬ ಪ್ರಶ್ನೆಗೆ ನಟಿ, ಇದು ನನಗೆ ಬಾಲ್ಯದಲ್ಲಿ ಆಗುತ್ತಿದ್ದ ಅನುಭವ ಎಂದಿದ್ದಾರೆ. ನನ್ನಮ್ಮ ಒಲೆಯ ಮೇಲೆ ಹಾಲು ಇಟ್ಟಿದ್ದೇನೆ. ಉಕ್ಕುತ್ತದೆ, ಆಫ್ ಮಾಡು ಎಂದು ಹೇಳಿ ಹೋಗುತ್ತಿದ್ದರು. ನಾನು ಅದನ್ನು ತದೇಕ ಚಿತ್ತದಿಂದ ನೋಡುತ್ತಲೇ ಇರುತ್ತಿದ್ದೆ. ಆದರೆ ಅರೆ ಕ್ಷಣ ಗಮನ ಅತ್ತ ಹೋಗುತ್ತಿದ್ದಂತೆಯೇ ಹಾಲು ಉಕ್ಕಿ ಚೆಲ್ಲಿಯೇ ಹೋಗುತ್ತಿತ್ತು. ಇದರಿಂದ ಅಮ್ಮನ ಕೈಯಲ್ಲಿ ಹಲವು ಬಾರಿ ಬೈಸಿಕೊಂಡಿದ್ದೇನೆ ಎಂದಿದ್ದಾರೆ. ಇದರ ವಿಡಿಯೋ ಅನ್ನು ರಾಜೇಶ್ ಶ್ರೀವತ್ಸ ಎನ್ನುವವರು ಶೇರ್ ಮಾಡಿಕೊಂಡಿದ್ದಾರೆ.
ನಟಿ ಕಂಗನಾ ಹೊಸ ರೆಸ್ಟೋರೆಂಟ್ ಓಪನ್: ವೆಜ್-ನಾನ್ ವೆಜ್; ಎಷ್ಟೆಷ್ಟು ರೇಟ್? ಇಲ್ಲಿದೆ ಡಿಟೇಲ್ಸ್...
ಈ ವಿಡಿಯೋಗೆ ಹೆಚ್ಚಿನ ಮಂದಿ ಮಾಡಿರುವ ಕಮೆಂಟ್ಸ್ನಲ್ಲಿ ನನಗೂ ಇಂಥ ಅನುಭವ ಈಗಲೂ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಇಂಥ ಎಡವಟ್ಟು ನನಗೊಬ್ಬಳಿಗೇ ಆಗುವುದು ಎಂದುಕೊಂಡಿದ್ದೆ. ನಿಮಗೂ ಆಗಿತ್ತಾ ಎಂದು ಅಚ್ಚರಿಪಟ್ಟುಕೊಂಡಿದ್ದಾರೆ. ಇನ್ನು ಕಂಗನಾ ವಿಷಯಕ್ಕೆ ಬರುವುದಾದರೆ, ಹಿಮಾಚಲ ಪ್ರದೇಶದ ಸಂಸದೆಯೂ ಆಗಿರುವ ನಟಿ, ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮೊನ್ನೆ ಪ್ರೇಮಿಗಳ ದಿನದಂದು ಹಿಮಾಚಲ ಪ್ರದೇಶದ ಮನಾಲಿಯಲ್ಲಿ 'ದಿ ಮೌಂಟೇನ್ ಸ್ಟೋರಿ' ಎಂಬ ಕೆಫೆಯನ್ನು ಅವರು ಉದ್ಘಾಟಿಸಿದ್ದಾರೆ. ಕೆಫೆಯ ಸುಂದರ ದೃಶ್ಯಗಳನ್ನು ಹಾಗೂ ಒಳಾಂಗಣದ ಸೌಂದರ್ಯವನ್ನು, ತಾವು ಆಹಾರ ನೀಡುತ್ತಿರುವ ವಿಡಿಯೋಗಳನ್ನು ಹಿಮಾಚಲ ಪ್ರದೇಶದ ಕೆಲವು ಜನರ ಜೊತೆಗೂಡಿ ಇರುವ ದೃಶ್ಯಗಳನ್ನು ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಫೆ ಆರಂಭಿಸುವುದು ನನ್ನ ಬಾಲ್ಯದ ಆಸೆಯಾಗಿತ್ತು. ಬಹು ವರ್ಷಗಳ ಕನಸು ಈಡೇರಿದೆ ಎಂದು ನಟಿ, ಸಂಸದೆ ಹೇಳಿಕೊಂಡಿದ್ದಾರೆ. ವಿಡಿಯೋ ನೋಡಿ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ.
ಮೊದಲೇ ದಿನವೇ ಪ್ರವಾಸಿಗರ ಗುಂಪು ಹರಿದು ಬಂತು. ಯಾವುದೇ ರಿಬ್ಬನ್ ಕತ್ತರಿಸಲಾಗಿಲ್ಲ ಅಥವಾ ಯಾವುದೇ ಪೂಜೆಯನ್ನು ನಡೆಸಲಾಗಿಲ್ಲ. ಬದಲಿಗೆ ಪ್ರವಾಸಿಗರ ಆಗಮನದೊಂದಿಗೆ ಉದ್ಘಾಟನೆ ಮಾಡಿರುವುದು ವಿಶೇಷ. ದಿ ಮೌಂಟೇನ್ ಸ್ಟೋರಿ ಕೆಫೆಯ ಮೊದಲ ದಿನ, ಕಂಗನಾ ಅವರು ತಮ್ಮ ಕುಟುಂಬದೊಂದಿಗೆ ಸಂಜೆ ಕೆಫೆಯನ್ನು ತಲುಪಿದರು. ಕುಟುಂಬದ ಸದಸ್ಯರ ಜೊತೆಯಲ್ಲಿ ಕೆಲವು ಗಂಟೆಗಳ ಕಾಲ ಕಳೆದರು ಮತ್ತು ಅಲ್ಲಿಗೆ ಬಂದ ಪ್ರವಾಸಿಗರನ್ನು ಸಹ ಭೇಟಿಯಾದರು. ದಿ ಮೌಂಟೇನ್ ಸ್ಟೋರಿಯಲ್ಲಿ ಜನರು ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯಲಿದ್ದಾರೆ. ಇಲ್ಲಿ ಸಸ್ಯಾಹಾರಿ ಥಾಲಿಯ ಬೆಲೆ 780 ರೂ.ಗಳಾಗಿದ್ದರೆ, ಮಾಂಸಾಹಾರಿ ಥಾಲಿ 850 ರೂ.ಗಳಿಗೆ ಲಭ್ಯವಿರುತ್ತದೆ. ಮತ್ತು ಇಲ್ಲಿ ಚಹಾಕ್ಕೆ 30 ರೂಪಾಯಿ ನಿಗದಿದ ಮಾಡಲಾಗಿದೆ. ಈ ಕೆಫೆ ಮನಾಲಿಯಿಂದ 4 ಕಿ.ಮೀ ದೂರದಲ್ಲಿರುವ ಪರಿಣಿಯಲ್ಲಿದೆ.
ಕಂಗನಾ ಮದ್ವೆ ಯಾವಾಗ? ಸಂಸದ ಚಿರಾಗ್ ಪಾಸ್ವಾನ್ ಜೊತೆ ಏನು ನಡೀತಿದೆ? ಬಾಯ್ಬಿಟ್ಟ ನಟಿ