Asianet Suvarna News Asianet Suvarna News

Twenty One Hours Review; ಧನಂಜಯ್‌ ಇರುವಿಕೆಯೇ ಈ ಸಿನಿಮಾದ ಹೆಗ್ಗಳಿಕೆ

ಒಬ್ಬಳು ಹುಡುಗಿ ಕಾಣೆಯಾಗುತ್ತಾಳೆ ಮತ್ತು ಆ ಕೇಸ್‌ ಪತ್ತೆ ಹಚ್ಚಲು ಅಂಡರ್‌ ಕವರ್‌ ಪೊಲೀಸ್‌ ಧನಂಜಯ್‌ ಬರುತ್ತಾರೆ. ಅಲ್ಲಿಗೆ ಕತೆ ಶುರು. ಒಂದು ಪಕ್ಕಾ ಥ್ರಿಲ್ಲರ್‌ ಜಾನರ್‌ನ ಸಿನಿಮಾ. ಧನಂಜಯ್‌ ಅವರದು ತಾನು ನಟಿಸಿದ ಇತ್ತೀಚಿನ ಸಿನಿಮಾಗಳೆಲ್ಲಕ್ಕಿಂತ ತುಂಬಾ ವಿಭಿನ್ನವಾದ ಪಾತ್ರ.

Actor Dhananjay starrer Twenty One Hours Review sgk
Author
Bengaluru, First Published May 21, 2022, 10:48 AM IST

ಚಿತ್ರ: ಟ್ವೆಂಟಿ ಒನ್‌ ಅವರ್ಸ್‌

ನಿರ್ದೇಶನ: ಜೈಶಂಕರ್‌ ಪಂಡಿತ್‌

ತಾರಾಗಣ: ಧನಂಜಯ್‌, ದುರ್ಗಾ ಕೃಷ್ಣ, ಸುದೇವ್‌ ನಾಯರ್‌, ರಾಹುಲ್‌ ಮಹಾದೇವ್‌

ರೇಟಿಂಗ್‌- 3

ಒಬ್ಬಳು ಹುಡುಗಿ ಕಾಣೆಯಾಗುತ್ತಾಳೆ ಮತ್ತು ಆ ಕೇಸ್‌ ಪತ್ತೆ ಹಚ್ಚಲು ಅಂಡರ್‌ ಕವರ್‌ ಪೊಲೀಸ್‌ ಧನಂಜಯ್‌ ಬರುತ್ತಾರೆ. ಅಲ್ಲಿಗೆ ಕತೆ ಶುರು. ಒಂದು ಪಕ್ಕಾ ಥ್ರಿಲ್ಲರ್‌ ಜಾನರ್‌ನ ಸಿನಿಮಾ. ಧನಂಜಯ್‌ ಅವರದು ತಾನು ನಟಿಸಿದ ಇತ್ತೀಚಿನ ಸಿನಿಮಾಗಳೆಲ್ಲಕ್ಕಿಂತ ತುಂಬಾ ವಿಭಿನ್ನವಾದ ಪಾತ್ರ. ಪುಟ ತಿರುಗಿಸಿದಂತೆ ಕತೆ ಬೆಳೆಯುತ್ತಾ ಹೋದಂತೆ ಒಂದೊಂದು ದೃಶ್ಯಗಳ ಬಳಿಕವೂ ಒಂದೊಂದು ಥರ ಕಾಣಿಸುತ್ತಾರೆ. ಅಷ್ಟರ ಮಟ್ಟಿಗೆ ಅವರೊಳಗಿನ ನಟನಿಗೆ ಆರ್ಭಟಿಸಲು ಇಲ್ಲಿ ಅವಕಾಶ ಸಿಕ್ಕಿದೆ.

ಮೊದಲಾರ್ಧ ಪೂರ್ತಿ ವಿಚಾರಣೆಗೆ ಸಮರ್ಪಣೆ. ವಿಶಿಷ್ಟರೀತಿಯಲ್ಲಿ ಕೇಸ್‌ ನಿರ್ವಹಿಸುವ ಧನಂಜಯ್‌ ವಿಚಿತ್ರ ರೀತಿಯಲ್ಲಿ ಪ್ರಶ್ನೋತ್ತರ ನಡೆಸುತ್ತಾರೆ. ಮಾತಲ್ಲೇ ಒಬ್ಬೊಬ್ಬ ಆರೋಪಿಯ ವಿವಿಧ ಬಣ್ಣಗಳನ್ನು ತೋರಿಸುವುದು ನಿರ್ದೇಶಕನ ಜಾಣ್ಮೆ ತೋರಿಸುತ್ತದೆ. ಆದರೆ ಕೆಲವೊಮ್ಮೆ ಅನಗತ್ಯವಾಗಿ ದೃಶ್ಯಗಳನ್ನು ಎಳೆದೆಳೆದು ಇಡಲಾಗಿದೆ ಎಂದು ಭಾಸವಾದರೆ ಆ ಭಾವನೆ ಜಾಸ್ತಿ ಹೊತ್ತು ಇರುವುದಿಲ್ಲ. ದ್ವಿತೀಯಾರ್ಧದ ಕತೆಯಲ್ಲೇ ಸಿನಿಮಾದ ಹೂರಣ ಅಡಗಿರುವುದು ಮತ್ತು ದೊಡ್ಡದೊಂದು ತಿರುವು ಸಿಗುವುದು. ಅಲ್ಲಿಯವರೆಗೂ ಈ ಸಿನಿಮಾ ಕೈಗೆ ಸಿಗುವುದಿಲ್ಲ.

Sakutumba Sametha Film Review: ಹಿತವಾದ ಪಿಸುಮಾತಿನಂಥಾ ಗಾಢ ಸಣ್ಣಕಥೆ

ಸಿನಿಮಾ ಮುಗಿದ ಮೆಲೆ ಈ ಸಿನಿಮಾದ ಉದ್ದೇಶ ಏನು ಅಂತ ಹುಡುಕಿದರೆ ಸಿಗುವುದಿಲ್ಲ ಅನ್ನುವುದೇ ಈ ಸಿನಿಮಾದ ವಿಶೇಷತೆ. ಇದೊಂದು ಪ್ರಯಾಣದ ಥರ ಇದೆ. ಗುರಿ ಇಲ್ಲ. ಕೊನೆಯಲ್ಲಿ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆಯೊಂದು ಉಳಿದಿರುತ್ತದೆ. ಈ ಸಿನಿಮಾದ ಕತೆಯ ಪ್ರಮುಖ ಪಾತ್ರಧಾರಿಗಳು ಮಲಯಾಳಿಗಳು. ಹಾಗಾಗಿ ಬಹುತೇಕ ಸಿನಿಮಾದ ಭಾಷೆ ಮಲಯಾಳಿ ಆ್ಯಕ್ಸೆಂಟಿನ ಕನ್ನಡದಲ್ಲಿದೆ. ಅದನ್ನು ಸುದೀರ್ಘವಾಗಿ ಕೇಳುವುದು ತುಸು ಕಷ್ಟ. ಉಳಿದಂತೆ ಥ್ರಿಲ್ಲರ್‌ ಸಿನಿಮಾದ ವೇಗವೂ ಇದಕ್ಕೆ ದಕ್ಕಿಲ್ಲ. ಆದರೆ ಅವೆಲ್ಲವನ್ನೂ ಮರೆಸುವುದು ಧನಂಜಯ್‌. ಇಡೀ ಸಿನಿಮಾದಲ್ಲಿ ಅವರು ಬಹುತೇಕ ಪ್ರತೀ ಫ್ರೇಮ್‌ನಲ್ಲೂ ಇದ್ದಾರೆ. ಆರಂಭದಲ್ಲಿ ಸ್ವಲ್ಪ ವಿಚಿತ್ರ ಪಾತ್ರ ಅನ್ನಿಸಿದರೂ ಅದಕ್ಕೊಂದು ಉತ್ತರ ನಂತರದ ಭಾಗದಲ್ಲಿ ದೊರಕುತ್ತದೆ. ಪ್ರತಿಯೊಬ್ಬರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ ಎಂದು ಸಾರಲು ಅನೇಕ ಕತೆಗಳು ಇವೆ. ಆದರೆ ಈ ಸಿನಿಮಾ ಅದನ್ನು ಹೇಳಲು ಮತ್ತೊಂದು ಹಂತಕ್ಕೆ ಹೋಗಿದೆ. ಧನಂಜಯ್‌ ಎಲ್ಲಾ ಅಡೆತಡೆ ಮೀರುವ ರೀತಿಯಲ್ಲಿ ಇಡೀ ಸಿನಿಮಾ ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.ವಿಧಿ ಬರಹದಂತೆ ಇರುವ ಸಿನಿಮಾ ಇದು. ಯಾವುದೂ ಅಳತೆಗೆ ಸಿಗುವುದಿಲ್ಲ.

Follow Us:
Download App:
  • android
  • ios