ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದ ನಟ ಆಮೀರ್​ ಖಾನ್​ ಈಗ ನೇಪಾಳಕ್ಕೆ ಹೋಗಿ ಸುದ್ದಿಯಾಗಿದ್ದಾರೆ. ಅಸಲಿ ವಿಷಯ ಏನು? 

ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಎರಡು ವರ್ಷಗಳ ಹಿಂದೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದವರು ನಟ ಆಮೀರ್​ ಖಾನ್​. ಅಸಹಿಷ್ಣುತೆ ವಾತಾವರಣದಿಂದ ದೇಶ ತೊರೆಯಲು ಪತ್ನಿ ಸಲಹೆ ನೀಡಿದ್ದಳು ಎಂಬ ಹೇಳಿಕೆ ಕೊಟ್ಟು ಒಂದು ವರ್ಗವನ್ನಷ್ಟೇ ಖುಷಿಪಡಿಸಿದ್ದ ನಟ, ಭಾರಿ ಪ್ರಮಾಣದಲ್ಲಿ ಟ್ರೋಲ್​ಗೆ ಒಳಗಾದರು. ಇವರ ಈ ಹೇಳಿಕೆಯಿಂದ ಒಂದು ರೀತಿಯಲ್ಲಿ ವೃತ್ತಿ ಜೀವನವೇ ಕುಸಿದುಹೋಯಿತು. ಭಾರತದಿಂದ ತೊಲಗಿ ಹಾಗೂ ಬೈಕಾಟ್​ ಆಮೀರ್​ ಖಾನ್​ ಎನ್ನುವ ಟ್ರೆಂಡ್​ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿ ಪರಬಾರದ ಕಷ್ಟಪಟ್ಟಿದ್ದರು ನಟ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೀಗೆ ಸಮಯ ಸಿಕ್ಕಾಗಲೆಲ್ಲ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ನಟ ಆಮೀರ್​ (Aamir Khan) ಈಗ ಏಕಾಏಕಿಯಾಗಿ ಕಳೆದ ವಾರ ಪ್ರಧಾನಿಯವರ ಮನ್​ ಕೀ ಬಾತ್​ನ 100ನೇ ಸರಣಿಯಲ್ಲಿ ಪ್ರಧಾನಿಯನ್ನು ಹಾಡಿ ಹೊಗಳಿಬಿಟ್ಟು ಎಲ್ಲರ ಹುಬ್ಬೇರಿಸಿದ್ದರು! ಮನ್​ ಕೀ ಬಾತ್​ ಕುರಿತ ಕಾರ್ಯಕ್ರಮದಲ್ಲಿ ನಟಿ ರವೀನಾ ಟಂಡನ್​ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಜೊತೆ ಭಾಗಿಯಾಗಿದ್ದ ಆಮೀರ್​ ಖಾನ್​, ಪ್ರಧಾನಿ ಮತ್ತು 'ಮನ್ ಕಿ ಬಾತ್' (Mann ki Baath) ಅನ್ನು ಕೊಂಡಾಡಿದ್ದರು. ಆಮೀರ್ ಅವರ ವಿಡಿಯೋ ಸಕತ್​ ಸುದ್ದಿ ಮಾಡಿತ್ತು. 'ಮನ್ ಕಿ ಬಾತ್ ಭಾರತದ ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ, ಅದರ ಪರಿಣಾಮವೂ ಕಂಡುಬರುತ್ತಿದೆ. ಇದು ಸಂವಹನದ ಉತ್ತಮ ಮಾರ್ಗವಾಗಿದೆ. ಇದು ಪ್ರಮುಖ ವಿಷಯಗಳ ಬಗ್ಗೆ ಮಾತನಾಡುತ್ತದೆ' ಎಂದಿದ್ದರು ನಟ. ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಅವರು, 'ನೀವು ಏನನ್ನು ಹುಡುಕುತ್ತಿದ್ದೀರಿ, ನಿಮ್ಮ ಭವಿಷ್ಯದ ಯೋಜನೆ ಏನು, ಸಾರ್ವಜನಿಕರಿಂದ ನೀವು ಯಾವ ರೀತಿಯ ಬೆಂಬಲವನ್ನು ಬಯಸುತ್ತೀರಿ ಎಂಬುದನ್ನು ಜನರಿಗೆ ಮನ್​ ಕೀ ಬಾತ್​ ಮೂಲಕ ತಿಳಿಸಿರುವ ಪ್ರಧಾನಿ, ಉತ್ತಮ ಕಾರ್ಯ ಮಾಡುತ್ತಿದ್ದಾರೆ' ಎಂದಿದ್ದರು.

ಹಿಂದೊಮ್ಮೆ ಸ್ಟಾರ್​ ನಟ ಎನಿಸಿಕೊಂಡವರು ಈಗ ಒಂದರ ಮೇಲೊಂದರಂತೆ ಫ್ಲಾಪ್​ ಸಿನಿಮಾ ಕೊಡುತ್ತ ಬಂದ್ದಾರೆ. ಅವರ ಕೊನೆಯ ಸಿನಿಮಾ ಲಾಲ್ ಸಿಂಗ್ ಚಡ್ಡಾ (Lal Singh Chadda) ಫ್ಲಾಪ್ ಆಯಿತು. ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ 2018ರಲ್ಲಿ ರಿಲೀಸ್ ಆಗಿ ಅದೂ ಕೂಡಾ ಫ್ಲಾಪ್ ಆಯಿತು. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲು ಆಮೀರ್ ಖಾನ್ ಅವರನ್ನು ಭಾರೀ ನಿದ್ದೆಗೆಡಿಸಿದೆಯಂತೆ. ಈ ಸಿನಿಮಾದ ಬಗ್ಗೆ ಅವರಿಗೆ ಅಪಾರ ನಂಬಿಕೆಯಿತ್ತು. ಈ ಸಿನಿಮಾ ಅದ್ಭುತ ಯಶಸ್ಸು ಗಳಿಸುತ್ತದೆ ಎಂದೇ ನಂಬಲಾಗಿತ್ತು. ಬಾಕ್ಸ್ ಆಫೀಸು ತುಂಬುವುದರ ಜೊತೆಗೆ ವಿಮರ್ಶಕರು ಕೂಡ ಮೆಚ್ಚಿ ಮಾತನಾಡುತ್ತಾರೆ ಎಂದು ಆಮೀರ್ ಬಲವಾಗಿ ನಂಬಿದ್ದರು. ಆದರೆ ಆ ನಂಬಿಕೆ ಸುಳ್ಳಾಯಿತು. ಅಂದುಕೊಂಡಷ್ಟು ಸಿನಿಮಾ ಗೆಲ್ಲಲಿಲ್ಲ. ಬಾಕ್ಸ್ ಆಫೀಸ್ ನಲ್ಲೂ ಕಮಾಯಿ ಮಾಡಲಿಲ್ಲ. ಹಾಗಾಗಿ ಆಮೀರ್ ಅವರಿಗೆ ಹಿನ್ನೆಡೆ ಆಯಿತು. ಈಗ ಹೊಸದೊಂದು ವಿಷಯದಲ್ಲಿ ಆಮೀರ್​ ಸುದ್ದಿಯಾಗಿದ್ದಾರೆ. ಅದೇನೆಂದರೆ ನಟ, ಈಗ ದಿಢೀರನೆ ಭಾರತ ಬಿಟ್ಟು ನೇಪಾಳಕ್ಕೆ ಹೋಗಿದ್ದಾರೆ. ಹೌದು. ನಟ ನೇಪಾಳಕ್ಕೆ ಹಾರಿದ್ದಾರೆ. ಅಷ್ಟಕ್ಕೂ ಅವರು ಅಲ್ಲಿಗೆ ಹೋದದ್ದು ಧ್ಯಾನ ಮಾಡಲು ಅಂತೆ!

ಮೋದಿಯನ್ನು ಹಾಡಿ ಹೊಗಳಿದ ಆಮೀರ್​: ಬಿಡ್ತಾರಾ ನೆಟ್ಟಿಗರು! ಕಮೆಂಟ್​ಗಳ ಸುರಿಮಳೆ...

ಲಾಲ್ ಸಿಂಗ್ ಚಡ್ಡಾ ಸೋಲು, ಆಮೀರ್ ಅವರಿಗೆ ನೋವು ತಂದಿದೆ. ಇಂಥದ್ದೊಂದು ಸಿನಿಮಾ ಮಾಡಿದಾಗ ಜನ ಸ್ವೀಕರಿಸಲಿಲ್ಲ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡಿದ್ದಾಗಿದೆ. ಈ ಎಲ್ಲ ಕಾರಣದಿಂದಾಗಿ ಆಮೀರ್ ಖಾನ್ ಸ್ವಲ್ಪ ದಿನ ಸಿನಿಮಾ ರಂಗದಿಂದಲೇ ದೂರ ಉಳಿಯುವಂತಹ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ನಟನೆಯಿಂದಲೇ ದೂರ ಸರಿಯುವುದಾಗಿ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದರು. ಇದು ನಿಜನೋ ಸುಳ್ಳೋ ಎನ್ನುವ ಕನ್​ಫ್ಯೂಷನ್​ನಲ್ಲಿ ಫ್ಯಾನ್ಸ್​ ಇರುವಾಗ, ಆಮೀರ್​ ಖಾನ್​, ಸಿನಿಮಾ, ಬ್ಯುಸಿನೆಸ್ ಎಲ್ಲದರಿಂದಲೂ ಬ್ರೇಕ್ (Break)ತೆಗೆದುಕೊಂಡಿರುವ ನಟ ನೇಪಾಳಕ್ಕೆ ತಲುಪಿದ್ದಾರೆ. 

ಅಷ್ಟಕ್ಕೂ ಅವರು ಹೋಗುತ್ತಿರುವುದು 10 ದಿನಗಳ ಧ್ಯಾನ ಕಾರ್ಯಕ್ರಮಕ್ಕೆ ಮಾತ್ರ ಎನ್ನಲಾಗಿದೆ. ಭಾನುವಾರ ಬೆಳಗ್ಗೆನೇ ನೇಪಾಳಕ್ಕೆ (Nepal) ತಲುಪಿರುವ ನಟ, ಧ್ಯಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನಟನೆಯಿಂದ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿಗೆ ಸಮಯ ಕೊಡುವುದಾಗಿ ಹೇಳಿದ್ದರು ಆಮೀರ್​ ಖಾನ್​. ಅದೇ ರೀತಿ, ನೇಪಾಳಕ್ಕೆ ಕುಟುಂಬ ಸಹಿತ ಹೋಗಿದ್ದಾರೋ, ಒಬ್ಬರೇ ಹೋಗಿದ್ದಾರೋ ಎನ್ನುವ ಬಗ್ಗೆ ಇನ್ನೂ ವರದಿ ಹೊರಬಂದಿಲ್ಲ.

ಸಲ್ಮಾನ್​ ಲಕ್ಕಿ ಬ್ರೇಸ್​ಲೈಟ್​ ಆಮೀರ್ ಕೈಯಲ್ಲಿ? ತಲೆ ಕೆಡಿಸಿಕೊಂಡ ಫ್ಯಾನ್ಸ್​

ಆಮೀರ್​ ಖಾನ್​ ಅವರು ನೇಪಾಳದಿಂದ ಬಂದ ಮೇಲೆ ಅವರ ಕನಸಿಕ ಸ್ಪಾನಿಷ್ ಸಿನಿಮಾದ ರಿಮೇಕ್, ಆರ್​ಎಸ್ ಪ್ರಸನ್ನ ಅವರ ಚಾಂಪಿಯನ್ಸ್ ಸಿನಿಮಾ ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ. ಅದೇ ರೀತಿ ಗಜನಿ ಸಿನಿಮಾದ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿ ಕೂಡ ಇದೆ. ಜೂನಿಯರ್ ಎನ್​ಟಿಆರ್ ಜೊತೆ ಕೆಲಸ ಮಾಡಲಿರುವ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರ ಜೊತೆಗೂ ಅಮೀರ್ ಖಾನ್ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅನೌನ್ಸ್​ಮೆಂಟ್ ಆಗಿಲ್ಲ.