17 ವರ್ಷಗಳ ಕಾಯುವಿಕೆಯ ನಂತರ '3 ಇಡಿಯಟ್ಸ್' ಚಿತ್ರದ ಸೀಕ್ವೆಲ್ ನಿರ್ಮಾಣವಾಗುತ್ತಿರುವುದನ್ನು ನಟ ಅಮೀರ್ ಖಾನ್ ಖಚಿತಪಡಿಸಿದ್ದಾರೆ. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಚಿತ್ರಕಥೆ ಸಿದ್ಧಪಡಿಸುತ್ತಿದ್ದು, ಮೊದಲ ಭಾಗದ 10 ವರ್ಷಗಳ ನಂತರದ ಕಥೆಯನ್ನು ಇದು ಒಳಗೊಂಡಿರಲಿದೆ ಎಂದು ಅಮೀರ್ ತಿಳಿಸಿದ್ದಾರೆ.

ಮುಂಬೈ (ಏ.28): ಸುಮಾರು 17 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, 2009ರ ಸೂಪರ್ ಹಿಟ್ ಸಿನಿಮಾ '3 ಇಡಿಯಟ್ಸ್' ಭಾಗ-2 (Sequel) ನಿರ್ಮಾಣವಾಗುತ್ತಿರುವುದನ್ನು ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಬಾರಿ ಕಥೆಯು 10 ವರ್ಷಗಳ ನಂತರದ ಘಟನೆಯನ್ನು ಆಧರಿಸಿರಲಿದೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

'ಅಮರ್ ಉಜಾಲಾ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಮೀರ್ ಖಾನ್, "ಪ್ರಸ್ತುತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು '3 ಇಡಿಯಟ್ಸ್' ಎರಡನೇ ಭಾಗದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ನಾನು ಕಥೆಯನ್ನು ಕೇಳಿದ್ದೇನೆ, ಅದು ಅದ್ಭುತವಾಗಿ ಮೂಡಿಬಂದಿದೆ. ಸದ್ಯ ಚಿತ್ರಕಥೆಯ (Script) ಕೆಲಸಗಳು ಪ್ರಗತಿಯಲ್ಲಿವೆ," ಎಂದು ತಿಳಿಸಿದ್ದಾರೆ.

10 ವರ್ಷಗಳ ನಂತರದ ಕಥೆ

ತಮ್ಮ ಜನಪ್ರಿಯ ಪಾತ್ರ 'ಫುನ್ಸುಕ್ ವಾಂಗ್ಡು' ಮತ್ತೆ ತೆರೆಯ ಮೇಲೆ ಬರಲಿರುವುದನ್ನು ಖಚಿತಪಡಿಸಿದ ಅಮೀರ್, "ನೀವು ಮೊದಲ ಭಾಗದಲ್ಲಿ ನೋಡಿದ ಅದೇ ಪಾತ್ರಗಳ ಕಥೆ ಇದಾಗಿರಲಿದೆ. ಆದರೆ, ಈ ಬಾರಿ ಕಥೆಯು 10 ವರ್ಷಗಳ ನಂತರದ ಕಾಲಘಟ್ಟದಲ್ಲಿ ನಡೆಯಲಿದೆ. ರಾಜ್‌ಕುಮಾರ್ ಹಿರಾನಿ ಮತ್ತು ಅಭಿಜಾತ್ ಜೋಷಿ ಅವರು ಕಥೆಯನ್ನು ಅತ್ಯಂತ ಸುಂದರವಾಗಿ ರೂಪಿಸಿದ್ದಾರೆ. ಮತ್ತೊಮ್ಮೆ ನಾನು ಫುನ್ಸುಕ್ ವಾಂಗ್ಡು ಪಾತ್ರಕ್ಕೆ ಜೀವ ತುಂಬಲು ಸಿದ್ಧನಾಗಬೇಕಿದೆ," ಎಂದು ಹೇಳಿದ್ದಾರೆ.

ಫಾಲ್ಕೆ ಬಯೋಪಿಕ್ ಸದ್ಯಕ್ಕಿಲ್ಲ

ದಾದಾಸಾಹೇಬ್ ಫಾಲ್ಕೆ ಅವರ ಬಯೋಪಿಕ್ ಬಗ್ಗೆ ಮಾತನಾಡಿದ ಅಮೀರ್, ರಾಜ್‌ಕುಮಾರ್ ಹಿರಾನಿ ಅವರು ಈ ಚಿತ್ರಕ್ಕಾಗಿ ಮೂರು Drafts ಸಿದ್ಧಪಡಿಸಿದ್ದರು. ಆದರೆ ಅವರು ಯಾವುದಕ್ಕೂ ತೃಪ್ತರಾಗದ ಕಾರಣ ಆ ಪ್ರಾಜೆಕ್ಟ್ ಅನ್ನು ಸದ್ಯಕ್ಕೆ ಬದಿಗಿಟ್ಟು '3 ಇಡಿಯಟ್ಸ್' ಸೀಕ್ವೆಲ್ ಕೆಲಸ ಆರಂಭಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಗನ ಸಿನಿಮಾ ಪ್ರಚಾರದಲ್ಲಿ ಬ್ಯುಸಿ

ಅಮೀರ್ ಖಾನ್ ಪ್ರಸ್ತುತ ತಮ್ಮ ಪುತ್ರ ಜುನೈದ್ ಖಾನ್ ಅಭಿನಯದ ಮೂರನೇ ಸಿನಿಮಾ 'ಏಕ್ ದಿನ್' (Ek Din) ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ನಟಿ ಸಾಯಿ ಪಲ್ಲವಿ ಅವರ ಬಾಲಿವುಡ್ ಪದಾರ್ಪಣೆಯ ಚಿತ್ರವೂ ಹೌದು. ಅಮೀರ್ ಖಾನ್ ಪ್ರೊಡಕ್ಷನ್ಸ್ ನಿರ್ಮಿಸಿರುವ, ಸುನಿಲ್ ಪಾಂಡೆ ನಿರ್ದೇಶನದ ಈ ರೋಮ್ಯಾಂಟಿಕ್ ಡ್ರಾಮಾ ಮೇ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಮುಂಗಡ ಬುಕಿಂಗ್ ಅನ್ನು ಆರು ವಾರಗಳ ಮೊದಲೇ ಆರಂಭಿಸಿರುವುದು ಉತ್ತಮ ನಿರ್ಧಾರ ಎಂದು ಅಮೀರ್ ಅಭಿಪ್ರಾಯಪಟ್ಟಿದ್ದಾರೆ.