ನಟ ಪ್ರಭಾಸ್ ಅಭಿಮಾನಿಗಳಿಗೆ ನಿರ್ದೇಶಕ ನಾಗ್ ಅಶ್ವಿನ್ ಒಂದು ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಒಂದೇ ವರ್ಷದಲ್ಲಿ ಪ್ರಭಾಸ್ ನಟನೆಯ ಮೂರು ಸಿನಿಮಾಗಳು ತೆರೆ ಕಾಣಲಿದ್ದು, ಅಭಿಮಾನಿಗಳಿಗೆ ಇದು ಸಿನಿ ಹಬ್ಬವಾಗಲಿದೆ.

ಪ್ರಭಾಸ್ ಈ ವರ್ಷ ಸಂಕ್ರಾಂತಿಗೆ 'ದಿ ರಾಜಾ ಸಾಬ್' ಚಿತ್ರದೊಂದಿಗೆ ಬಂದಿದ್ದರು. ಈ ಸಿನಿಮಾ ಪ್ರೇಕ್ಷಕರನ್ನು ನಿರಾಸೆಗೊಳಿಸಿತ್ತು. ಸದ್ಯ ಅವರು 'ಫೌಜಿ' ಮತ್ತು 'ಸ್ಪಿರಿಟ್' ಎಂಬ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದ 'ಫೌಜಿ' ಮತ್ತು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಎರಡೂ ಚಿತ್ರಗಳ ಶೂಟಿಂಗ್ ಒಟ್ಟೊಟ್ಟಿಗೆ ನಡೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ 'ಕಲ್ಕಿ 2' ಬಗ್ಗೆ ಅಪ್‌ಡೇಟ್ ಸಿಕ್ಕಿದೆ. 'ಕಲ್ಕಿ 2898 ಎಡಿ' ಮೊದಲ ಭಾಗ ಬಂದು ಎರಡು ವರ್ಷಗಳೇ ಕಳೆದಿವೆ. ಈಗ ನಿರ್ದೇಶಕ ನಾಗ್ ಅಶ್ವಿನ್ ಎರಡನೇ ಭಾಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಶುರುವಾಗಿದ್ದು, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಭಾಗದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಪ್ರಭಾಸ್ ಜುಲೈನಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಅಮಿತಾಭ್, ಕಮಲ್ ಮತ್ತು ಪ್ರಭಾಸ್ ಅವರ ಪ್ರಮುಖ ದೃಶ್ಯಗಳನ್ನು ಶೂಟ್ ಮಾಡಲಾಗುವುದು ಎಂದು ತಿಳಿದುಬಂದಿದೆ.

ಇದೇ ವೇಳೆ ನಿರ್ದೇಶಕ ನಾಗ್ ಅಶ್ವಿನ್ 'ಕಲ್ಕಿ 2' ಚಿತ್ರದ ರಿಲೀಸ್ ಡೇಟ್ ಕೂಡ ತಿಳಿಸಿದ್ದಾರೆ. ಮುಂದಿನ ವರ್ಷವೇ ಈ ಸಿನಿಮಾ ತೆರೆಗೆ ಬರಲಿದ್ದು, 2027ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ಡಿಸೆಂಬರ್ ಮೊದಲ ವಾರ ಅಥವಾ ಕ್ರಿಸ್‌ಮಸ್ ವಿಶೇಷವಾಗಿ ರಿಲೀಸ್ ಆಗಲಿದೆ. ಸದ್ಯ ಹೈದರಾಬಾದ್‌ನ ಸ್ಟುಡಿಯೋವೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ. 'ಸಿಂಗ್ ಗೀತಂ' ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಮಲ್ ಹಾಸನ್ ಈ ವಿಷಯ ತಿಳಿಸಿದ್ದರು. ಈ ಚಿತ್ರದಲ್ಲಿ ಕಮಲ್ 'ಯಾಸ್ಕಿನ್' ಎಂಬ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದು, ಮೊದಲ ಭಾಗದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದ ಅವರು, ಭಾಗ 2ರಲ್ಲಿ ವಿಶ್ವರೂಪ ತೋರಲಿದ್ದಾರೆ.

ಫ್ಯಾನ್ಸ್‌ಗೆ ಹಬ್ಬವೋ ಹಬ್ಬ

'ಕಲ್ಕಿ 2' ಮುಂದಿನ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡರೆ, ಪ್ರಭಾಸ್ ಒಂದೇ ವರ್ಷದಲ್ಲಿ ಮೂರು ಸಿನಿಮಾಗಳನ್ನು ನೀಡಿದಂತಾಗುತ್ತದೆ. 'ಫೌಜಿ' ಚಿತ್ರವನ್ನು ಈ ವರ್ಷದ ಡಿಸೆಂಬರ್‌ನಲ್ಲಿ ರಿಲೀಸ್ ಮಾಡುವ ಯೋಚನೆ ಇತ್ತು. ಆದರೆ ಶೂಟಿಂಗ್ ಪ್ರಗತಿ ನೋಡಿದರೆ ಅದು ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಹಾಗಾದರೆ, 2027ರ ಮಧ್ಯದಲ್ಲಿ ಬರಬಹುದು. ಇನ್ನು 'ಸ್ಪಿರಿಟ್' ಸಿನಿಮಾ ಮಾರ್ಚ್ 5ಕ್ಕೆ ರಿಲೀಸ್ ಆಗುವುದಾಗಿ ಸಂದೀಪ್ ರೆಡ್ಡಿ ವಂಗಾ ಖಚಿತಪಡಿಸಿದ್ದಾರೆ. ಈಗ 'ಕಲ್ಕಿ 2' ಕೂಡ ಅದೇ ವರ್ಷದ ಕೊನೆಯಲ್ಲಿ ಬರಲಿದ್ದು, ಅಭಿಮಾನಿಗಳಿಗೆ ಇದು ಸಿನಿಮಾಗಳ ಹಬ್ಬವಾಗಲಿದೆ.