Adipurush ನೋಡಲು 5,500 ಕಿ.ಮೀ ಪ್ರಯಾಣಿಸಿದ ಲೇಡಿ ಫ್ಯಾನ್ ಹೀಗಂದ್ರು...
ಆದಿಪುರುಷ್ ಚಿತ್ರಕ್ಕೆ ನೆಗೆಟಿವ್ ಕಮೆಂಟ್ ಬರುತ್ತಿದ್ದರೂ ಆ ಚಿತ್ರವನ್ನು ನೋಡಲು ಮಹಿಳೆಯೊಬ್ಬರು 5500 ಕಿ.ಮೀ ಪ್ರಯಾಣ ಬೆಳೆಸಿದ್ದಾರೆ.
‘ಆದಿಪುರುಷ್’ (Adipurush) ಚಿತ್ರ ಬಿಡುಗಡೆಯಾದಾಗಿನಿಂದಲೂ ವಿವಾದದ ಸುಳಿಯಲ್ಲಿಯೇ ಸುತ್ತುತ್ತಿದೆ. ಇದರ ವೇಷಭೂಷಣದಿಂದ ಹಿಡಿದು ಪಾತ್ರಧಾರಿಗಳ ಮಾತು, ಕೃತ್ಯ, ಮೇಕಪ್, ಡೈಲಾಗ್ ಎಲ್ಲವನ್ನೂ ಟ್ರೋಲ್ ಮಾಡಲಾಗುತ್ತಿದೆ. ರಾಮನಾಗಿ ಕಾಣಿಸಿಕೊಂಡ ಪ್ರಭಾಸ್, ಸೈಫ್ ಅಲಿ ಖಾನ್ ಅವರ ರಾವಣನ ಪಾತ್ರ, ದೇವದತ್ತ ನಾಗೆ ಅವರ ಆಂಜನೇಯನ ಪಾತ್ರ ಸೇರಿದಂತೆ ಎಲ್ಲಾ ಪಾತ್ರಗಳಲ್ಲಿಯೂ ಪ್ರೇಕ್ಷಕರು ಹುಳುಕು ಎತ್ತಿ ತೋರಿಸಿದ್ದಾರೆ. ಕೆಲವರು ಈ ಚಿತ್ರವನ್ನು ಹೊಗಳುತ್ತಿದ್ದರೆ, ಇದು ಹೊಗಳಿಕೆಗಿಂತ ತೆಗಳಿಕೆಯೇ ದಿನೇ ದಿನೇ ಹೆಚ್ಚಾಗುತ್ತಿದೆ. ಒಟ್ಟಿನಲ್ಲಿ ಓಂ ರಾವತ್ (Om Raut) ನಿರ್ದೇಶನ ಆದಿಪುರುಷ್ ಮೊದಲಿನಿಂದಲೂ ವಿವಾದಗಳ ಕೇಂದ್ರಬಿಂದುವಾಗಿಯೇ ಹೊರಹೊಮ್ಮಿದೆ. ಈ ಸಿನಿಮಾದಲ್ಲಿ ಪ್ರಭಾಸ್ (Prabhas), ಕೃತಿ ಸನೋನ್, ದೇವದತ್ತ ನಾಗೆ, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮುಂತಾದವರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ. ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಆರಂಭದಲ್ಲಿ ಮುಗಿಬೀಳುತ್ತಿದ್ದರೆ ಈಗ ಸದ್ಯ ಎಲ್ಲವೂ ತಣ್ಣಗಾಗಿದೆ. ಚಿತ್ರದ ಹಲವು ದೃಶ್ಯಗಳಲ್ಲಿ ತಲೆಬುಡವಿಲ್ಲದ ಸಂಭಾಷಣೆಗಳಿದ್ದರೆ, ಹಲವೆಡೆ ಕಾಲ್ಪನಿಕ ದೃಶ್ಯಗಳನ್ನು ರಚಿಸಲಾಗಿದೆ ಎಂದು ಕೆಲವರು ಹೇಳಿದರೆ, ವಿಎಫ್‌ಎಕ್ಸ್ ಎಫೆಕ್ಟ್‌ಗಳು ಇಷ್ಟವಾಗುತ್ತವೆ ಎಂದಿದ್ದಾರೆ ಕೆಲವರು.
ಇನ್ನು ಪ್ರಭಾಸ್ ಅಭಿಮಾನಿಗಳು ತುಂಬಾ ನಿರಾಸೆ ಹೊಂದಲು ಕಾರಣವೂ ಇದೆ, ಅದೇನೆಂದರೆ, ಇಷ್ಟೆಲ್ಲಾ ಟ್ರೋಲ್ ಆಗುತ್ತಿರೋ ಚಿತ್ರದಲ್ಲಿ ತಮ್ಮ ನೆಚ್ಚಿನ ನಾಯಕ ಅಭಿನಯಿಸಿದ್ದಾರೆ ಎನ್ನುವುದು. ಪ್ರಭಾಸ್ ಅವರು ರಾಮನಾಗಿ ಪಾತ್ರ ಮಾಡಬಾರದಿತ್ತು ಎಂದು ಎಷ್ಟೋ ಜನ ಹೇಳುತ್ತಿದ್ದುದುಂಟು. ಅದೇನೇ ಇದ್ದರೂ ಅಭಿಮಾನ ಎಂದರೆ ಅಭಿಮಾನವೇ. ಎಷ್ಟೋ ಫ್ಲಾಪ್ ಎನಿಸಿರುವ ಚಿತ್ರಗಳು ಕೆಲವೊಮ್ಮೆ ಯಶಸ್ಸು ಕಾಣಲು ಕಾರಣವಾಗುವುದು ಆ ಚಿತ್ರದಲ್ಲಿನಟಿಸೋ ನಟ-ನಟಿಯರಿಂದಾಗಿ. ಇದು ಈ ಹಿಂದೆಯೂ ಆಗಿದೆ. ಏಕೆಂದರೆ ತಮ್ಮ ನೆಚ್ಚಿನ ನಾಯಕ ಏನು ಮಾಡಿದರೂ ಚೆನ್ನ ಎನ್ನುವಂಥ ಫ್ಯಾನ್ಸ್ ಇದ್ದಾರೆ.
ಆದಿಪುರುಷ್ ವಿವಾದದ ಬೆನ್ನಲ್ಲೇ ಪ್ರತ್ಯಕ್ಷಳಾದ ರಾಮಾಯಣದ ಸೀತೆ! ನಟಿ ಹೇಳಿದ್ದೇನು?
ಅದೀಗ ಇನ್ನೊಮ್ಮೆ ಸಾಬೀತಾಗಿದೆ. ಪ್ರಭಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ನೋಡಲು ಆದಿಪುರುಷ್ ನೋಡುತ್ತಿದ್ದಾರೆ. ಏಕೆಂದರೆ ‘ಬಾಹುಬಲಿ’ ಬಳಿಕ ಪ್ರಭಾಸ್ ಅವರ ಜನಪ್ರಿಯತೆ ಸಕತ್ ಹೆಚ್ಚಿದೆ. ಈ ಚಿತ್ರ ಬ್ಲಾಕ್ಬಸ್ಟರ್ ಆಗಿದ್ದರಿಂದ ಪ್ರಭಾಸ್‌ಗೆ ಸಕತ್ ಬೇಡಿಕೆ ಬರುತ್ತಿದೆ. ಆದಿಪುರುಷ್ನಲ್ಲಿಯೂ ಇವರ ನಟನೆ ಚೆನ್ನಾಗಿಯೇ ಇದೆ. ಆದರೆ ಇಡೀ ಚಿತ್ರ ಒಂದಿಲ್ಲೊಂದು ವಿವಾದಕ್ಕೆ ಸಿಲುಕಿ ಗಲಾಟೆ ಆಗುತ್ತಿದೆ. ಹೀಗಿದ್ದರೂ ಪ್ರಭಾಸ್ ಫ್ಯಾನ್ಸ್ ಚಿತ್ರ ನೋಡಲು ಮುಂದೆ ಬರುತ್ತಿದ್ದಾರೆ. ಅಭಿಮಾನ ಕೆಲವೊಮ್ಮೆ ಅತಿರೇಕ ಎನಿಸುವಷ್ಟೂ ಆಗುವುದುಂಟು. ಅಂಥದ್ದೇ ಒಬ್ಬ ಮಹಿಳಾ ಅಭಿಮಾನಿ ‘ಆದಿಪುರುಷ್’ ಚಿತ್ರ ನೋಡಲು ಅಭಿಮಾನಿಯೊಬ್ಬರು ಟೋಕಿಯೋದಿಂದ ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ! ಅವರ ವಿಷಯವೀಗ ಸಕತ್ ವೈರಲ್ ಆಗಿದೆ.
ಅಷ್ಟಕ್ಕೂ ಟೋಕಿಯೋದಿಂದ ಸಿಂಗಪುರಕ್ಕೆ ಬರೋಬ್ಬರಿ 5,500 ಕಿ.ಮೀ. ಆದರೂ ಈ ಲೇಡಿ ಫ್ಯಾನ್, (Lady fan) ಅಷ್ಟು ದೂರ ಸಿನಿಮಾಕ್ಕಾಗಿ ಪ್ರಯಾಣ ಬೆಳೆಸಿದ್ದಾರೆ. ಇವರು ತೆಲುಗುವಿನಲ್ಲಿ ಮಾತನಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ‘ನನ್ನ ಹೆಸರು ನುಡಿಕೋ. ನಾನು ಪ್ರಭಾಸ್ ಅಭಿಮಾನಿ. ಪ್ರಭಾಸ್ ಅಂದ್ರೆ ಇಷ್ಟ, ಅವರಿಗಾಗಿ ಸಿನಿಮಾ ನೋಡುತ್ತಿದ್ದೇನೆ’ ಎಂದಿದ್ದಾರೆ ಅವರು. ಅಂದಹಾಗೆ ಟೋಕಿಯೊ ಇರುವುದು ಜಪಾನ್‌ನಲ್ಲಿ. ಈ ಮೂಲಕ, ಭಾರತದಲ್ಲಿ ಮಾತ್ರವಲ್ಲದೇ ಪ್ರಭಾಸ್ ಅವರಿಗೆ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ ಎನ್ನುವುದು ಸಾಬೀತಾಗಿದೆ. ಅದರಲ್ಲಿಯೂ ಜಪಾನ್‌ನಲ್ಲಿ ಪ್ರಭಾಸ್‌ಗೆ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಇದು ‘ಬಾಹುಬಲಿ’ ಸಿನಿಮಾ ರಿಲೀಸ್ ವೇಳೆ ಸಾಬೀತಾಗಿತ್ತು. ಜಪಾನ್‌ನಲ್ಲಿ ಬಾಹುಲಿ ಪ್ರದರ್ಶನ ಕಂಡಾಗ ಸಿಕ್ಕಾಪಟ್ಟೆ ಜನರು ಅದನ್ನು ಇಷ್ಟಪಟ್ಟಿದ್ದರು, ಜೊತೆಗೆ ಅವರಿಗೆ ಅಭಿಮಾನಿಗಳ ಸಂಖ್ಯೆ ಕೂಡ ಅಲ್ಲಿ ಹೆಚ್ಚಿತ್ತು.
ಬಟ್ಟೆ ಬದಲಿಸಿದ ವಿಭೀಷಣನ ಪತ್ನಿ: ಆದಿಪುರುಷನೋ, ಕಾಮಸೂತ್ರವೋ ಇದು ಎಂದು ನೆಟ್ಟಿಗರು ಗರಂ!
ಈಗ ಈ ಮಹಿಳಾ ಫ್ಯಾನ್ ಮಾತಿಗೆ ಸಿಕ್ಕಾಪಟ್ಟೆ ಕಮೆಂಟ್ಗಳು ಬರುತ್ತಿವೆ. ಕೆಲವರು ಅಭಿಮಾನವನ್ನು ಹೊಗಳಿದರೆ, ಇಂಥ ಚಿತ್ರ ನೋಡಲು ಅಷ್ಟು ದೂರ ಯಾಕೆ ಬಂದ್ಯಮ್ಮಾ ಎನ್ನುತ್ತಿದ್ದಾರೆ ಇನ್ನು ಹಲವರು.