ನಮ್ಮ ಇಂಡಸ್ಟ್ರಿಯ ಬಹುತೇಕ ನಿರ್ಮಾಪಕರು ಪ್ರತಿಭೆಯನ್ನು ಗುರುತಿಸುವಲ್ಲಿ ಸೋಲುತ್ತಿದ್ದಾರೆ. ಇದು ಕೇವಲ ನನ್ನೊಬ್ಬನ ಮಾತಲ್ಲ, ಕಲಾವಿದರ ಪ್ರತಿನಿಧಿಯಾಗಿ ನಾನು ಈ ಮಾತು ಹೇಳುತ್ತಿದ್ದೇನೆ. ಅದೇ ಮಲಯಾಳಂನಲ್ಲೇನಾದರೂ ಹೀಗೆ ಅಭಿನಯ ಮೆರೆದಿದ್ದರೆ ನೆಕ್ಸ್ಟ್ ಲೆವೆಲ್‌ಗೆ ಹೋಗಬಹುದಿತ್ತು ಎಂದರು ನಟ ನಾಗಭೂಷಣ್.
ಪ್ರಿಯಾ ಕೆರ್ವಾಶೆ
* ವಿದ್ಯಾಪತಿಯ ಪಾತ್ರ ನಿಮ್ಮದಾಗಿಸಿಕೊಂಡದ್ದು ಹೇಗೆ?
ಈ ಪಾತ್ರ ಬಹಳ ಚಾಲೆಂಜಿಂಗ್ ಆಗಿತ್ತು. ಈ ಪಾತ್ರಕ್ಕೂ ರಿಯಲ್ ಆಗಿ ನನಗೂ ಅಜಗಜಾಂತರ. ನಮ್ಮಲ್ಲಿಲ್ಲದ ಗುಣವನ್ನು ಆವಾಹಿಸಿಕೊಂಡು ನಟಿಸೋದು ಸುಲಭ ಅಲ್ಲ. ಅದಕ್ಕೆ ಹೆಚ್ಚೇ ಪರಿಶ್ರಮ ಬೇಕು. ಇದರಲ್ಲಿ ಇಪ್ಪತ್ತಿಪ್ಪತ್ತು ನಿಮಿಷಕ್ಕೂ ಪಾತ್ರದ ಟೆಕ್ಸ್ಚರ್ ಬದಲಾಗುತ್ತೆ. ಹಾಸ್ಯ, ಆ್ಯಕ್ಷನ್, ಎಮೋಶನ್ ಇತ್ಯಾದಿಗಳನ್ನು ಏಕಕಾಲಕ್ಕೆ ಪಾತ್ರದೊಳಗೆ ತರಬೇಕು. ಈ ಪಾತ್ರ ನನ್ನೊಳಗಿರುವ ಅಭಿನಯ ಚತುರತೆಯನ್ನೆಲ್ಲ ಹುಡುಕಿ ತೆಗೆದಿದೆ ಎನ್ನಬಹುದು.
* ವಿದ್ಯಾಪತಿ ನಿಮ್ಮನ್ನು ಟ್ರಿಗರ್ ಮಾಡಿದ್ದು ಯಾಕೆ?
ನಿರ್ದೇಶಕರು ನಮ್ಮನೆಗೆ ಬಂದು ಕತೆ ಹೇಳಿದ್ದೇ ನನ್ನೊಳಗಿನ ನಟನನ್ನು ಟ್ರಿಗರ್ ಮಾಡಿತು. ‘ಫೇಮಸ್ ನಟಿಯೊಬ್ಬಳ ಗಂಡ ನೀವು. ಇಂಡಸ್ಟ್ರಿಯಲ್ಲಿ ಯಾರಿಂದಲೋ ಆಕೆಗೆ ಭಾರೀ ಅವಮಾನ ಆಗುತ್ತದೆ. ಹಾಗೆ ಅವಮಾನ ಮಾಡಿದವರಿಗೆ ನಾಲ್ಕೇಟು ಬಾರಿಸಿ ಬರಬೇಕು ಅಂತ ಅವಳು ನಿಮ್ಮನ್ನು ಮನೆಯಿಂದ ಆಚೆ ಹಾಕ್ತಾಳೆ. ಬಹಳ ಅಮಾಯಕರಾದ ನೀವು ಹೇಗೆ ಪವರ್‌ಫುಲ್ ಆಗಿ ಪರಿವರ್ತನೆ ಆಗುತ್ತೀರಿ ಅನ್ನೋದೇ ಒನ್‌ಲೈನ್’ ಅಂದಿದ್ದರು ನಮ್ಮ ನಿರ್ದೇಶಕರಾದ ಇಶಾಂ ಹಾಗೂ ಹಸೀಮ್.
* ಈ ಸಿನಿಮಾದಿಂದ ಪ್ರೇಕ್ಷಕ ಏನು ನಿರೀಕ್ಷೆ ಮಾಡಬಹುದು?
ಭರಪೂರ ಮನರಂಜನೆ. ಭಾಷಣ, ಫಿಲಾಸಫಿಗಳ ತಲೆನೋವಿಲ್ಲದೇ ಮನಃಪೂರ್ವಕವಾಗಿ ನಗಬಹುದು, ಕುತೂಹಲದಿಂದ ಕುರ್ಚಿ ತುದಿಯಲ್ಲಿ ಕೂರಬಹುದು. ಪಾತ್ರದ ಬೆಳವಣಿಗೆಯನ್ನು ಗಮನಿಸಬಹುದು. ಹೊಸ ಬಗೆಯ ನಿರೂಪಣೆಯೊಂದಕ್ಕೆ ಮಾರುಹೋಗಬಹುದು.
ಡಾಲಿ ಧನಂಜಯ ಅವರಿಗೆ ಒಳ್ಳೆಯದಾಗಬೇಕು: ಹೀಗ್ಯಾಕಂದ್ರು ನಟ ಧ್ರುವ ಸರ್ಜಾ
* ಧನಂಜಯ ಅವರನ್ನು ಬಿಟ್ಟರೆ ಬೇರೆ ನಿರ್ಮಾಪಕರು ಯಾಕೆ ನಾಯಕನಾಗಿ ನಿಮ್ಮನ್ನು ಗುರುತಿಸುತ್ತಿಲ್ಲ?
ನಮ್ಮ ಇಂಡಸ್ಟ್ರಿಯ ಬಹುತೇಕ ನಿರ್ಮಾಪಕರು ಪ್ರತಿಭೆಯನ್ನು ಗುರುತಿಸುವಲ್ಲಿ ಸೋಲುತ್ತಿದ್ದಾರೆ. ಇದು ಕೇವಲ ನನ್ನೊಬ್ಬನ ಮಾತಲ್ಲ, ಕಲಾವಿದರ ಪ್ರತಿನಿಧಿಯಾಗಿ ನಾನು ಈ ಮಾತು ಹೇಳುತ್ತಿದ್ದೇನೆ. ಅದೇ ಮಲಯಾಳಂನಲ್ಲೇನಾದರೂ ಹೀಗೆ ಅಭಿನಯ ಮೆರೆದಿದ್ದರೆ ನೆಕ್ಸ್ಟ್ ಲೆವೆಲ್‌ಗೆ ಹೋಗಬಹುದಿತ್ತು. ನಾನು ಕೋವಿಡ್ ಸಮಯದಲ್ಲಿ ‘ಇಕ್ಕಟ್’ ಸಿನಿಮಾ ಮಾಡಿದೆ. ಇದರಲ್ಲಿ ಎರಡೂವರೆ ಗಂಟೆ ಕಾಲ ಒಂದೇ ರೂಮ್‌ನಲ್ಲಿದ್ದು ಎಂಟರ್‌ಟೇನ್ ಮಾಡಬೇಕು. ಅದರಲ್ಲಿನ ನನ್ನ ನಟನೆ ಕಂಡು ಹೆಸರಾಂತ ಕಲಾವಿದರೇ ಅಚ್ಚರಿ ಸೂಚಿಸಿದ್ದರು. ಅಷ್ಟೆಲ್ಲ ಕಷ್ಟಪಟ್ಟರೂ ನನಗೆ ಒಬ್ಬನೇ ಒಬ್ಬ ನಿರ್ಮಾಪಕನೂ ಕರೆದು ಅವಕಾಶ ನೀಡಲಿಲ್ಲ. ಆದರೆ ಗೆಳೆಯ ಧನುಗೆ ನನ್ನ ಪ್ರತಿಭೆ ಗೊತ್ತಿತ್ತು. ಆತ ನನ್ನ ಮೇಲೆ ಬಂಡವಾಳ ಹಾಕಿದ. ಆತನ ನಿರೀಕ್ಷೆ ಹುಸಿ ಆಗಲಿಲ್ಲ. ‘ಟಗರು ಪಲ್ಯ’ ಒಳ್ಳೆ ಹೆಸರು ಮಾಡಿತು. ಈಗ ಈ ಸಿನಿಮಾಕ್ಕೆ ಕೈ ಬಿಚ್ಚಿ ಕಾಸು ಚೆಲ್ಲಿದ್ದಾನೆ. ಇಂಡಸ್ಟ್ರಿಯಲ್ಲಿ ನಮ್ಮ ಪ್ರತಿಭೆ ಮೇಲೆ ಫಸ್ಟ್ ಬೆಟ್ ಮಾಡೋರು ರಿಯಲ್ ಚೇಂಜ್ ಮೇಕರ್ಸ್. ನಾವು ಗೆದ್ದ ಮೇಲೆ ಬಂದು ಹಣ ಚೆಲ್ಲೋರಲ್ಲ.
