ಪಂತುಲು ಬಳಿ ನಿಜ ವಯಸ್ಸು ಬಚ್ಚಿಟ್ಟಿದ್ದೆ: ಎಂ.ಎಸ್‌.ಉಮೇಶ್‌

ಹಿರಿಯ ನಟ ಎಂ.ಎಸ್‌.ಉಮೇಶ್‌ ನಟನೆಯ ಮೊದಲ ಚಿತ್ರ ‘ಮಕ್ಕಳ ರಾಜ್ಯ’ ತೆರೆಕಂಡು ಆ.12ಕ್ಕೆ 62 ವರ್ಷಗಳಾಗುತ್ತವೆ. ನಾಟಕ ಕಂಪನಿಯಲ್ಲಿದ್ದ ಉಮೇಶ್‌ ಅವರನ್ನು ಸಿನಿಮಾ ನಟನನ್ನಾಗಿ ಪರಿಚಯಿಸಿದ ಈ ಚಿತ್ರದ ನೆನಪುಗಳನ್ನು ಉಮೇಶ್‌ ಮೆಲುಕು ಹಾಕಿದ್ದಾರೆ.

veteran kannada actor ms umesh special interview gvd

ಪ್ರಿಯಾ ಕೆರ್ವಾಶೆ

ಹಿರಿಯ ನಟ ಎಂ.ಎಸ್‌.ಉಮೇಶ್‌ ನಟನೆಯ ಮೊದಲ ಚಿತ್ರ ‘ಮಕ್ಕಳ ರಾಜ್ಯ’ ತೆರೆಕಂಡು ಆ.12ಕ್ಕೆ 62 ವರ್ಷಗಳಾಗುತ್ತವೆ. ನಾಟಕ ಕಂಪನಿಯಲ್ಲಿದ್ದ ಉಮೇಶ್‌ ಅವರನ್ನು ಸಿನಿಮಾ ನಟನನ್ನಾಗಿ ಪರಿಚಯಿಸಿದ ಈ ಚಿತ್ರದ ನೆನಪುಗಳನ್ನು ಉಮೇಶ್‌ ಮೆಲುಕು ಹಾಕಿದ್ದಾರೆ.

* ಮಕ್ಕಳ ರಾಜ್ಯ ತೆರೆಕಂಡು ಆರು ದಶಕಗಳಾಗಿವೆ. ಚಿತ್ರದ ಬಗ್ಗೆ ನಿಮ್ಮ ನೆನಪು?
ಆಗ ನಾನು ಮಹಾದೇವ ಸ್ವಾಮಿ ಅವರ ನಾಟಕ ಕಂಪನಿಯಲ್ಲಿದ್ದೆ. ‘ಚಂದ್ರಹಾಸ’ ನಾಟಕದಲ್ಲಿ ಚಂದ್ರಹಾಸನ ಪಾತ್ರ ಮಾಡುತ್ತಿದ್ದೆ. ‘ಮಕ್ಕಳ ರಾಜ್ಯ’ ಸಿನಿಮಾದ ಮುಖ್ಯಪಾತ್ರಕ್ಕೆ ನಟನ ಶೋಧದಲ್ಲಿದ್ದ ಸಹ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರಿಗೆ ನನ್ನ ಬಗ್ಗೆ ಹೇಳಿದ್ದು ಹಿರಿಯ ಕಲಾವಿದೆ ಎಂ ವಿ ರಾಜಮ್ಮ. ಆಗ ನಾಟಕ ಕಂಪನಿಗಳಲ್ಲಿ ಕಲಾವಿದರ ಜೊತೆಗೆ ಅಗ್ರಿಮೆಂಟ್‌ಗಳಿದ್ದವು. ರಾಜಮ್ಮ ಅವರು ನೀಡಿದ ಪತ್ರದಿಂದ ನಾನು ಪುಟ್ಟಣ್ಣ ಜೊತೆಗೆ ಈ ಸಿನಿಮಾಕ್ಕಾಗಿ ಚೆನ್ನೈಗೆ ಹೋಗೋದು ಸಾಧ್ಯವಾಯಿತು.

* ಆಗ ನಿಮ್ಮ ವಯಸ್ಸು?
ಆಗ ನನಗೆ ಹದಿನಾಲ್ಕು ವರ್ಷ. ಆದರೆ ನಿರ್ದೇಶಕ ಪಂತುಲು ಅವರ ಬಳಿ ಹನ್ನೆರಡು ವರ್ಷ ಅಂತ ಸುಳ್ಳು ಹೇಳಿದ್ದೆ. ಪಾತ್ರ ತಪ್ಪಬಾರದು ಅನ್ನುವ ಕಾರಣಕ್ಕೆ. ಆ ಹೊತ್ತಿಗೆ ನಾಟಕ ಕಂಪನಿ ಹುಡುಗರಿಗೆಲ್ಲ ಹರಿದ ಬಟ್ಟೆಗಳೇ ಇದ್ದದ್ದು. ಪುಟ್ಟಣ್ಣ ಅವರು ಅವರ ಸಂಬಳದ ಹಣದಿಂದ ನನಗೆ ಬಟ್ಟೆಕೊಡಿಸಿ ಚೆನ್ನೈಗೆ ಕರೆದೊಯ್ದು ಪಂತುಲು ಮುಂದೆ ನಿಲ್ಲಿಸಿದರು.

ಅಪ್ಪು ಮಾಮನನ್ನು ಫಾಲೋ ಮಾಡುತ್ತೇನೆ: ಧನ್ಯಾ ರಾಮ್‌ಕುಮಾರ್‌

* ಪಂತುಲು ಅವರ ಪ್ರತಿಕ್ರಿಯೆ?
ಅವರು ಮೊದಲು ನನ್ನ ವಯಸ್ಸು ಕೇಳಿದರು. ಆಮೇಲೆ ಈ ಹುಡುಗನಿಗೆ 1 ತಿಂಗಳು ಚೆನ್ನಾಗಿ ಊಟ, ತಿಂಡಿ ಕೊಡಿಸಿ ಅಂದರು. ನಾಟಕ ಕಂಪನಿಯಲ್ಲಿದ್ದಾಗ ಹೊಟ್ಟೆಗೆ ಬಟ್ಟೆಗೆ ಇಲ್ಲದೇ ಸೊರಗಿದ್ದೆ. ಜೊತೆಗೆ ಹಾಡು, ಡಾನ್ಸು, ಫೈಟ್‌ ಮೊದಲಾದವುಗಳಲ್ಲಿ ತರಬೇತಿ ನೀಡಿದರು. ಹರಿಬಾಬು ಅಂತ ಎಂಜಿ ರಾಮಚಂದ್ರನ್‌ ಮೊದಲಾದ ಕಲಾವಿದರಿಗೆಲ್ಲ ಮೇಕಪ್‌ ಮಾಡಿದ್ದ ಮೇಕಪ್‌ ಮ್ಯಾನ್‌. ಅವರು ನನಗೆ ಮೇಕಪ್‌ ಮಾಡಿದರು. ಆಗೆಲ್ಲ ಮೇಕಪ್‌ ಟೆಸ್ಟ್‌ನಲ್ಲಿ ಓಕೆ ಆದ ಮೇಲೆ ಪಾತ್ರಕ್ಕೆ ಸೆಲೆಕ್ಷನ್‌ ಆಗುತ್ತಿದ್ದದ್ದು. ಪಂತುಲು ಅವರಿಗೆ ಲೀಡ್‌ ಪಾತ್ರಕ್ಕೆ ಬೇರೆ ಹುಡುಗನನ್ನು ಹಾಕುವ ಇರಾದೆ ಇತ್ತು. ಆದರೆ ಅಲ್ಲಿ ನನ್ನ ನಡತೆ, ವರ್ತನೆ ಬಗ್ಗೆ ಅವರಿಗೆ ಮೆಚ್ಚುಗೆ ಇತ್ತು. ಹೀಗಾಗಿ ಕೊನೆಗೂ ಆ ಪಾತ್ರ ನನಗೆ ಸಿಕ್ಕಿತು.

* ಹೇಗಿತ್ತು ಮೊದಲ ಸಿನಿಮಾದ ಅನುಭವ?
ಬಹಳ ಚೆನ್ನಾಗಿತ್ತು. ಆರಂಭದಲ್ಲಿ ಕ್ಯಾಮರ ಮುಂದೆ ನಟಿಸೋಕೆ ಭಯ ಆಗಿತ್ತು. ಆಗ ಛಾಯಾಗ್ರಾಹಕ ಡಬ್ಲ್ಯೂ ಆರ್‌ ಸುಬ್ಬಾರಾವ್‌ ಧೈರ್ಯ ತುಂಬುತ್ತಿದ್ದರು. ಪಂತುಲು ಅವರ ಪ್ರೋತ್ಸಾಹ, ಮಾರ್ಗದರ್ಶನ, ಪುಟ್ಟಣ್ಣ ಅವರ ಸಹಕಾರದಿಂದ ಈ ಚಿತ್ರದಲ್ಲಿ ನಟಿಸಿದೆ. ರಾಜಮ್ಮ ಸೇರಿದಂತೆ ಹಲವು ಕಲಾವಿದರ ಬೆಂಬಲವೂ ಸಿಕ್ಕಿತು. ಚಿತ್ರ ಬಿಡುಗಡೆಯಾದ ಬಳಿಕ ಉತ್ತಮ ಪ್ರತಿಕ್ರಿಯೆ ಹರಿದುಬಂತು.

ಶ್ರೀನಿಧಿ ಶೆಟ್ಟಿ ಹೊಟ್ಟೆಗೆ ಏನು ತಿಂತಾರಂತೆ? ಫಿಟ್ನೆಸ್ ಸೀಕ್ರೇಟ್ಸ್ ಏನು?

* ಮತ್ತೆ ಸಿನಿಮಾಗಳಲ್ಲಿ ಬೆಳೆಯುವುದು ಸಾಧ್ಯವಾಯಿತಾ?
ಇಲ್ಲ. ಕಂಪನಿ ಜೊತೆಗೆ ಅಗ್ರಿಮೆಂಟ್‌ ಇತ್ತಲ್ವಾ. ಪಂತುಲು ಅವರು ಆಗ 250 ರು. ಕೊಡ್ತೀನಿ, ನಮ್ಮ ತಂಡದ ಜೊತೆಗಿರು ಅಂತ ಹೇಳಿದರು. ಆದರೆ ಅಗ್ರಿಮೆಂಟ್‌ ಕಾರಣಕ್ಕೆ ಮತ್ತೆ ಕಂಪನಿಗೆ ಮರಳಿದೆ. ಅಷ್ಟರಲ್ಲಿ ವಯಸ್ಸು ಬಲಿತಿತ್ತು. ಆದರೆ ಲೀಡ್‌ ಪಾತ್ರಕ್ಕೆ ಬೇಕಾದ ಎತ್ತರ ಇರಲಿಲ್ಲ. ಹೀಗಾಗಿ ಸಹ ಕಲಾವಿದ, ಹಾರ್ಮೋನಿಯಂ ವಾದಕ, ಸೈನ್‌ ಬೋರ್ಡ್‌ ಕಲಾವಿದನಾಗಿ ಕೆಲಸ ಮಾಡಬೇಕಾಯ್ತು. ಮುಂದೆ ಪುಟ್ಟಣ್ಣ ಅವರು ‘ಕಥಾ ಸಂಗಮ’ ಸಿನಿಮಾ ಮಾಡುವ ಹೊತ್ತಿಗೆ ನಾನು ‘ಮಕ್ಕಳ ರಾಜ್ಯ’ದಲ್ಲಿ ನಟಿಸಿ 16 ವರ್ಷಗಳಾಗಿದ್ದವು. ಪುಟ್ಟಣ್ಣ ನನ್ನನ್ನು ಹುಡುಕಿ ಕರೆಸಿಕೊಂಡರು. ಆ ಬಳಿಕ ಸಿನಿಮಾ ರಂಗದಲ್ಲಿ ಬೆಳೆಯುವುದು ಸಾಧ್ಯವಾಯ್ತು.

Latest Videos
Follow Us:
Download App:
  • android
  • ios