ಶತಚಿತ್ರಗಳ ಸಾಹಸ ಸಂಯೋಜಕ ವಿಕ್ರಮ್ ವಿಶೇಷ

ಮಾಸ್ ಸಿನಿಮಾಗಳೆಂದರೆ ಆ್ಯಕ್ಷನ್ ಇರಲೇಬೇಕು ಎನ್ನುವ ಮನೋಭಾವ ನಮ್ಮ ಪ್ರೇಕ್ಷಕರಲ್ಲಿದೆ. ಕನ್ನಡದ ಮಟ್ಟಿಗೆ ಹಲವಾರು ಜನಪ್ರಿಯ ಸಾಹಸ ಸಂಯೋಜಕರಿದ್ದಾರೆ. ಅವರ ನಡುವೆ ಬಂದು ರಾಷ್ಟ್ರಪ್ರಶಸ್ತಿ ಪಡೆದಿರುವ ವಿಕ್ರಮ್ ಮೊರ್ ಇದೀಗ ತಮ್ಮ ನೂರನೇ ಚಿತ್ರದ ಹೊಸ್ತಿಲಲ್ಲಿದ್ದಾರೆ.  
 

stunt master Vikram Mor interview

ಕೆಜಿಎಫ್ ಚಿತ್ರದ ಸಾಹಸ ಸಂಯೋಜನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಾಗ ಸುದ್ದಿಯಾಗಿದ್ದು ಬಿಟ್ಟರೆ ಸ್ಟಂಟ್ ಮಾಸ್ಟರ್ ವಿಕ್ರಮ್ ಯಾವಾಗಲೂ ಸುದ್ದಿಗಳಿಂದ ದೂರ. ತಾವಾಯಿತು ತಮ್ಮ ಕೆಲಸವಾಯಿತು ಎನ್ನುವಂತಿರುವ ವಿಕ್ರಮ್ ಅವರ ಪರದೆಯ ಮೇಲಿನ ಸಾಹಸಗಳೇ ಹೆಚ್ಚು ಸದ್ದು ಮಾಡುತ್ತಿರುತ್ತವೆ. ಈ ಬಾರಿ ಅವರು ಬಹಳ ಅಲ್ಪಾವಧಿಯಲ್ಲೇ ನೂರು ಚಿತ್ರಗಳನ್ನು ಪೂರೈಸುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಹರಿಸಂತು ನಿರ್ದೇಶನದ ಹೊಸ ಚಿತ್ರದ ಮೂಲಕ ಶತಚಿತ್ರಗಳ ದಾಖಲೆ ಮಾಡುತ್ತಿದ್ದಾರೆ. ಈ ರೀತಿ ತಮಗೆ ಹೆಚ್ಚು ಅವಕಾಶಗಳು ದೊರಕಲು ಕಾರಣವಾಗಿರುವ ಅಂಶಗಳ ಬಗ್ಗೆ ಮತ್ತು ತಮ್ಮ ಸ್ಟಂಟ್ ಜೀವನದ ಅನುಭವಗಳ ಬಗ್ಗೆ ವಿಕ್ರಮ್ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

- ಶಶಿಕರ ಪಾತೂರು

ಬಹಳ ವೇಗದಲ್ಲಿ ನೂರು ಚಿತ್ರಗಳ ಗಡಿ ತಲುಪಿರುವ ಬಗ್ಗೆ ಏನು ಹೇಳುತ್ತೀರಿ?
ನನಗೆ ಸ್ಟಂಟ್ ಮಾಸ್ಟರ್ ಕಾರ್ಡ್ ದೊರಕಿ ಆರು ವರ್ಷಗಳಾಗಿದೆ. ಇಷ್ಟು ವರ್ಷದೊಳಗೆ ನೂರು ಸಿನಿಮಾ ಮಾಡಿರುವುದು ನಿಜಕ್ಕೂ ದಾಖಲೆಯ ಸಂಖ್ಯೆಯೇ ಎನ್ನುವ ಬಗ್ಗೆ ನನಗೂ ಗೊತ್ತಿಲ್ಲ. ಆದರೆ ಕಾರ್ಡ್ ಪಡೆದುಕೊಂಡ ವರ್ಷವೇ 24 ಸಿನಿಮಾಗಳಿಗೆ ಕೆಲಸ ಮಾಡುವ ಅವಕಾಶ ದೊರಕಿತ್ತು. ಅದನ್ನು ಒಂದು ರೀತಿ ದಾಖಲೆ ಎಂದೇ ಹೇಳಬಹುದು. ಯಾಕೆಂದರೆ ಆ ಸಂದರ್ಭದಲ್ಲಿ ನನ್ನಲ್ಲಿ ನನಗೇನೇ ಸಂದೇಹ ಇತ್ತು. ಸ್ಟಂಟ್ ಮಾಸ್ಟರ್ ಕಾರ್ಡ್ ಪಡೆದುಕೊಂಡು ಒಂದು ಚಿತ್ರ ಮಾಡಿದ ಬಳಿಕ ಬೇರೆ ಅವಕಾಶಗಳೇ ಸಿಗದಿದ್ದರೆ ನಾನು ವಾಪಾಸು ಅಸಿಸ್ಟೆಂಟ್ ಕೆಲಸ ಮಾಡಬೇಕಾಗಿ ಬರುತ್ತಿತ್ತು. ಅಂಥ ಸಂದರ್ಭ ಬಾರದಿರಲಿ ಎಂದೇ ಸ್ಟಂಟ್ ಮಾಸ್ಟರ್ ಆಗಲು ಅಂಜಿದ್ದೆ. ಅಂಥದ್ದರಲ್ಲಿ ನನಗೆ ಸಾಲುಸಾಲಾಗಿ ಉತ್ತಮ ಅವಕಾಶಗಳೇ ಸಿಕ್ಕವು ಎನ್ನಬಹುದು.

ಅಂತರ್ಧರ್ಮೀಯ ವಿವಾಹಗಳ ಬಗ್ಗೆ ಪ್ರಿಯಾಮಣಿ ಅನಿಸಿಕೆ


ಹೆಚ್ಚಿನ ನಿರ್ದೇಶಕರು ನಿಮ್ಮಲ್ಲಿ ಮೆಚ್ಚಿದ ಗುಣ ಏನು?
ಒಂದಷ್ಟು ನಿರ್ದೇಶಕರು ನನ್ನಲ್ಲಿ ಹೇಳಿರುವ ಪ್ರಕಾರ ನಾನು ಬಹಳ ಬೇಗ ಕೆಲಸ ಮಾಡಿಕೊಡುತ್ತೇನೆ ಎನ್ನುವುದೇ ಆಗಿದೆ. ಒಂದು ರೀತಿಯಲ್ಲಿ ಅದು ನಿಜ ಕೂಡ. ಸಿನಿಮಾ ಎಷ್ಟೇ ಬಜೆಟ್ ನದ್ದೇ ಆಗಿದ್ದರೂ ನಾನು ಚಿತ್ರದ ಲೊಕೇಶನ್‌ಗೆ ಹೋದ ಮೇಲೆ ಅಲ್ಲಿ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ಚಿತ್ರೀಕರಣಕ್ಕೆ ಮೊದಲು ಸ್ಟಂಟ್ ವಿಚಾರದಲ್ಲಿ ಎಷ್ಟೇ ಡಿಸ್ಕಶನ್ ಅಥವಾ ರಿಹರ್ಸಲ್ ಮಾಡಲು ಟೈಮ್ ತೆಗೆದುಕೊಳ್ಳಬಲ್ಲೆ. ಆದರೆ ಲೊಕೇಶನ್‌ಗೆ ಹೋದರೆ ಅಲ್ಲಿ ಶೂಟಿಂಗ್ ಆಗಲೇಬೇಕು. ಯಾಕೆಂದರೆ ಬೆಳಿಗ್ಗೆ ಒಂಬತ್ತರಿಂದ ಸಂಜೆ ಆರು ಗಂಟೆಯ ತನಕ ಚಿತ್ರೀಕರಣ ಎಂದೇ ಲೆಕ್ಕ ಹಾಕಿದರೂ ಸಹ ಅದರಲ್ಲಿ ಊಟ, ತಿಂಡಿ, ವಿರಾಮದ ಸಮಯವನ್ನು ಕಳೆದರೆ  ಉಳಿಯುವುದೇ  ಎಂಟು ಗಂಟೆಗಳು. ಸಾಮಾನ್ಯವಾಗಿ ಚಿತ್ರೀಕರಣದ ವೇಳೆ ಕಡಿಮೆ ಎಂದರೂ  ಪ್ರತಿ ಗಂಟೆಗೆ ಮೂವತ್ತು ಸಾವಿರದಷ್ಟು ಖರ್ಚಾಗುತ್ತಿರುತ್ತದೆ. ಹಾಗಾಗಿ ಶೂಟಿಂಗ್ ಸಮಯದಲ್ಲಿ ಚರ್ಚೆ ಮಾಡತೊಡಗಿದರೆ ನಿರ್ಮಾಪಕರಿಗೆ ನಷ್ಟ ಮಾಡಿದಂತೆ. ಹೀಗಾಗಿ ನಾನು ಮೊದಲೇ ಸಂಪೂರ್ಣ ತಯಾರಿ ಮಾಡಿಕೊಂಡು ಚಿತ್ರೀಕರಣ ಸ್ಥಳದಲ್ಲಿ ವೇಗವಾಗಿ ಮತ್ತು ಕಲಾವಿದರಿಗೆ ಆದಷ್ಟು ಕಂಫರ್ಟ್‌ ಆಗಿ ಸಾಹಸ ಸಂಯೋಜನೆ ಮಾಡುತ್ತೇನೆ.

ನಾಗಜಡೆಯ ಬಗ್ಗೆ ನಾಗಿಣಿ ನಮ್ರತಾ ಮಾತುಗಳು

ನೂರು ಚಿತ್ರಗಳ ಈ ಸಂದರ್ಭದಲ್ಲಿ ನೀವು ಯಾರನ್ನೆಲ್ಲ ನೆನಪಿಸಲು ಬಯಸುತ್ತೀರಿ?
ಹೆಸರು ಹೇಳತೊಡಗಿದರೆ ಅದೇ ಒಂದು ದೊಡ್ಡ ಪಟ್ಟಿಯಾದೀತು. ಯಾಕೆಂದರೆ ನಾನು ಸ್ಟಂಟ್ ಮಾಸ್ಟರ್ ಆಗುವುದಕ್ಕೂ ಮೊದಲು 468 ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಅವುಗಳಲ್ಲಿ 400 ಚಿತ್ರಗಳು ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದಂಥವು. ನನ್ನನ್ನು ಸ್ಟಂಟ್ ಮ್ಯಾನ್ ಆಗಲು ಕಾರಣವಾದ ಗುರುಗಳು ಕೆ.ಡಿ ವೆಂಕಟೇಶ್ ಮಾಸ್ಟರ್. ಅತ್ಯುತ್ತಮವಾಗಿ ತರಬೇತಿ ನೀಡಿದವರು ನಂಜುಂಡಿ ನಾಗರಾಜ್. ಆ ಬಳಿಕ ಸುಮಾರು 68 ಚಿತ್ರಗಳಿಗೆ ಸ್ಟಂಟ್‌ ಮಾಸ್ಟರ್ಸ್‌ಗೆ ಅಸಿಸ್ಟೆಂಟ್‌ ಆಗಿ ಕೆಲಸ ಮಾಡಿದ್ದೇನೆ. ರವಿವರ್ಮ, ಮಾಸ್‌ ಮಾದ ಮೊದಲಾದ ಮಾಸ್ಟರ್ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ಮಾತ್ರವಲ್ಲ, ಸಾಕಷ್ಟು ನಾಯಕ ನಾಯಕಿಯರಿಗೆ ಸ್ಟಂಟ್‌ನಲ್ಲಿ ಡ್ಯೂಪ್ ಆಗಿಯೂ ಕೆಲಸ ಮಾಡಿದ್ದೇನೆ. ಅವುಗಳಲ್ಲಿ ಗಣೇಶ್ ಅವರಿಗೆ `ಗಾಳಿಪಟ'ದಿಂದ ಹಿಡಿದು ಏಳೆಂಟು ಸಿನಿಮಾಗಳಲ್ಲಿ ಡ್ಯೂಪಾಗಿದ್ದೆ. ಶಿವಣ್ಣ, ಪುನೀತ್ ಸರ್, ದಿಗಂತ್, ಧ್ಯಾನ್ ಅವರಿಗೂ ಡ್ಯೂಪ್‌ ಆಗಿದ್ದೀನಿ. ನನ್ನಲ್ಲೊಬ್ಬ ಕಲಾವಿದ ಇದ್ದಾನೆಂದು ಮೊದಲ ಬಾರಿ ಪುಟ್ಟ ಪಾತ್ರ ನೀಡಿದವರು ನಿರ್ದೇಶಕ ದುನಿಯಾ ಸೂರಿಯವರು. ಇವರೆಲ್ಲರನ್ನು ಸೇರಿಸಿ ನಾನು ಸ್ಟಂಟ್ ಮಾಸ್ಟರ್ ಆಗುವಲ್ಲಿ ನಿರ್ದೇಶಕ ರಜತ್‌ಮಯಿ ಮತ್ತು ನಟ ಅನೀಶ್ ತೇಜೇಶ್ವರ್ ಅವರ ಪ್ರೋತ್ಸಾಹ ತುಂಬಾನೇ ಇತ್ತು. ಇನ್ನೊಂದಷ್ಟು ಹೆಸರುಗಳು ತಕ್ಷಣಕ್ಕೆ ನೆನಪಾಗದೇ ಇರಬಹುದು. ಆದರೆ ಅವರಿಗೆಲ್ಲ ಯಾವತ್ತಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸಲು ಬದ್ಧನಿದ್ದೇನೆ.

ಡ್ರಗ್ಸ್ ವಿಚಾರದಲ್ಲಿ ಮಳೆ ಹುಡುಗಿಯ ಮಾತುಗಳೇನು?

 

Latest Videos
Follow Us:
Download App:
  • android
  • ios