ತಮಿಳು, ತೆಲುಗಿನಂತೆ ನಟಿಸಲು ಬಂದ ಪರಭಾಷಾ ಕಲಾವಿದರನ್ನೆಲ್ಲ ಒಪ್ಪಿ ಅಪ್ಪುವ ಜಾಯಮಾನ ಕನ್ನಡಿಗರದ್ದಲ್ಲ. ಅಪರೂಪದಲ್ಲಿ ಒಬ್ಬ ಮಾಲಾಶ್ರೀಗಷ್ಟೇ ಸ್ಟಾರ್ ನಟಿಯ ಸ್ಥಾನ ನೀಡಿ ಗೌರವಿಸಿತು. ಈಗಿನ ಬೆಳವಣಿಗೆ ನೋಡಿದರೆ ಆನಂತರ ಬಂದವರಿಗೆ ಹುಟ್ಟಿಕೊಂಡಿದ್ದು ನಿಜವಾದ ಅಭಿಮಾನಿ ಸಂಘವಾ ಅಥವಾ ಇವರೇ ದುಡ್ಡು ಕೊಟ್ಟು ಕಟ್ಟಿಕೊಂಡರಾ ಎನ್ನುವ ಸಂದೇಹ ಸಹಜ. ಇಂಥ ಸಂದರ್ಭದಲ್ಲಿ ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರದಲ್ಲೇ ತಾರೆಯಾದ ಪೂಜಾ ಗಾಂಧಿ ನೆನಪಾಗಲೇ ಬೇಕು. ತಾನಾಯಿತು, ತನ್ನ ಸಿನಿಮಾಗಳಾಯಿತು ಎನ್ನುವಂತೆ ಇದ್ದ ಪೂಜಾ ಕೂಡ ಕೆಲವೊಂದು ವಿವಾದಗಳಿಗೆ ಗುರಿಯಾಗಿರುವುದೂ ಇದೆ. ಆದರೆ ಡ್ರಗ್ಸ್ ವಿಚಾರದಲ್ಲಿ ಮಾತ್ರ ಅವರು ಆ ಏರಿಯಾದಲ್ಲೇ ಇರಲಿಲ್ಲ. ಹಾಗಾದರೆ ಈ ಬಗ್ಗೆ ಪೂಜಾಗಾಂಧಿಗೆ ಅನಿಸಿದ್ದೇನು ಎನ್ನುವುದನ್ನು ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ.

- ಶಶಿಕರ ಪಾತೂರು

ಕನ್ನಡ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಪಾರ್ಟಿಗಳಲ್ಲಿ ಭಾಗಿಯಾಗಲು ಒತ್ತಡ ಇರುವುದು ನಿಜವೇ?
ನಮ್ಮ ಕನ್ನಡ ಚಿತ್ರರಂಗದಲ್ಲಿ ಪಾರ್ಟಿ ಕಲ್ಚರ್ ಎಲ್ಲಿದೆ? ನಾ ಕಂಡ ಹಾಗೆ, ಕೇಳಿದ ಹಾಗೆ ಕಾರಣಗಳೇ ಇಲ್ಲದೇ ಸಿಕ್ಕಿದ್ದಕ್ಕೆಲ್ಲ ಪಾರ್ಟಿ ಮಾಡುವ ಕಲ್ಚರ್ ನಮ್ಮಲ್ಲಿಲ್ಲ. ನಾನಂತು ಮೊದಲ ಚಿತ್ರದಲ್ಲೇ ದೊಡ್ಡ ಸಕ್ಸಸ್ ಪಡೆದ ಕಾರಣ ಮತ್ತೊಂದು ಅವಕಾಶಕ್ಕಾಗಿ ಕಾಯಬೇಕಾಗಿ ಬರಲಿಲ್ಲ. ಕನ್ನಡಕ್ಕೆ ಬರುವ ಮೊದಲು ಅಲ್ಲೊಂದು ಇಲ್ಲೊಂದು ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದೇನೆ. ಆಗ ಕೂಡ ಪಾತ್ರದ ಬಗ್ಗೆ ಮಾತುಕತೆಯಾಗಿದೆಯೇ ಹೊರತು, ಪಾರ್ಟಿ ಬಗ್ಗೆ ಮಾತನಾಡಿದವರು ಇಲ್ಲ! ಸಿನಿಮಾಗೆ ಸಂಬಂಧ ಇರದ ಲೇಟ್‌ನೈಟ್‌ ಪಾರ್ಟಿಗಳಾದರೆ ಹೆಣ್ಣುಮಕ್ಕಳು ಸ್ಟ್ರಾಂಗ್ ಆಗಿ ಹೇಳಬೇಕು, "ನಾನು ಬರುವುದಿಲ್ಲ" ಎಂದು. ಕೆಲಸ ಕೊಡುವುದಾದರೆ ನಮ್ಮ ಪ್ರತಿಭೆ ನೋಡಿ ಕೊಡಬೇಕೇ ಹೊರತು ಪಾರ್ಟಿಗಳಲ್ಲೇನು ಕೆಲಸ? ಬಹುಶಃ ಹೀಗೆ ಕರೆಯುವವರು ಕೂಡ ಪಾರ್ಟಿ ಬಯಸುವವರನ್ನೇ ಆಯ್ಕೆ ಮಾಡಿ ಕರೆದಿರಬಹುದೇನೋ. ನನಗಂತೂ ಇಲ್ಲಿಯವರೆಗೆ ಎಲ್ಲ ಚಿತ್ರತಂಡದವರು ಪ್ರೀತಿ, ಗೌರವದಿಂದಲೇ ಮಾತನಾಡಿಸಿದ್ದಾರೆ.

ಸಾಧಕರಿಗೆ ಸಂಗೀತವೇ ನಶೆ ಎಂದ ಅನುರಾಧ ಭಟ್..!

ಚಿತ್ರರಂಗದಲ್ಲಿ ಡ್ರಗ್ಸ್ ಚಟುವಟಿಕೆ ಇರುವ ಬಗ್ಗೆ ನಿಮ್ಮ ಅನಿಸಿಕೆ ಏನು?
ನನಗೆ ನೋವಾಗಿದೆ. ಯಾಕೆಂದರೆ ನಮ್ಮ ಕನ್ನಡ ಚಿತ್ರರಂಗ ಚಿಕ್ಕದಾಗಿದ್ದರೂ ಅದಕ್ಕೆ ಒಳ್ಳೆಯ ಹೆಸರಿದೆ. ಈ ರೀತಿಯ ವಿಚಾರಗಳನ್ನು ನಮ್ಮ ಇಂಡಸ್ಟ್ರಿಯಿಂದ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಯಾಕೆಂದರೆ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ಗಿರೀಶ್ ಕಾರ್ನಾಡ್, ಆರತಿ, ಕಲ್ಪನಾ ಹೀಗೆ ತುಂಬ ಮಂದಿ ಕಲಾವಿದರು ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದು ದೊಡ್ಡ ಸ್ಥಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಬಂದಾಗಿನಿಂದ ಕನ್ನಡ ಚಿತ್ರರಂಗ ಎನ್ನುವುದಕ್ಕಿಂತಲೂ ಇವರ ಹೆಸರುಗಳನ್ನು ಹೇಳಿದರೆ ಉತ್ತರ ಭಾರತದಲ್ಲಿಯೂ ಹೆಚ್ಚಿನರಿಗೆ ಗೊತ್ತಾಗುತ್ತಿತ್ತು. ಒಬ್ಬ ವಿದ್ಯಾವಂತೆಯಾಗಿ ನನಗೆ ಡ್ರಗ್ಸ್  ಬಗ್ಗೆ ಗೊತ್ತೇ ಇಲ್ಲ ಎಂದರೆ ಅದು ಸುಳ್ಳಾಗುತ್ತದೆ. ನನ್ನದೇ `ಆಪ್ತ' ಎನ್ನುವ ಸಿನಿಮಾದಲ್ಲಿ ಕಾಲೇಜ್ ಹುಡುಗರು ಡ್ರಗ್ಸ್ ಮೂಲಕ ಹೇಗೆ ದಾರಿ ತಪ್ಪುತ್ತಾರೆ ಎನ್ನುವುದನ್ನು ತೋರಿಸಲಾಗಿತ್ತು. ನಾವು ಎಜುಕೇಟೆಡ್ ಎಂದ ಮೇಲೆ ಡ್ರಗ್ಸ್ ಎಷ್ಟು ಅಪಾಯಕಾರಿ ಎಂದು ತಿಳಿದೇ ಇರುತ್ತೇವೆ. ಸಾಮಾನ್ಯರಲ್ಲೇ ಅದರ ಬಗ್ಗೆ ಅರಿವು ಇರಬೇಕಾದರೆ, ಕಲಾವಿದರಿಗೂ ಅದನ್ನು ಬಳಸದಿರುವ ಜವಾಬ್ದಾರಿ ಇರುತ್ತದೆ ಎಂದುಕೊಂಡಿದ್ದೇನೆ.

ಡ್ರಗ್ಸ್ ಮಾದಕತೆಯ ಬಗ್ಗೆ ದುನಿಯಾ ಸೂರಿ ಮಾತುಕತೆ

ಒಟ್ಟಿನಲ್ಲಿ ಈ ಬಾರಿ ನೀವು ಕಾಂಟ್ರವರ್ಸಿಗೆ ಸಿಗದಿರುವುದು ನೆಮ್ಮದಿ ನೀಡಿರಬಹುದಲ್ಲವೇ?
ಇದುವರೆಗೆ ನನ್ನ ಏನೇ ಕಾಂಟ್ರವರ್ಸಿ ಆಗಿರಬಹುದು. ಆದರೆ ಅವನ್ನೆಲ್ಲ ನೋಡಿದರೆ ಪ್ರತಿಯೊಂದು ಕೂಡ ನನ್ನ ಇನೊಸೆನ್ಸ್‌ನಿಂದಾಗಿಯೇ ಆಗಿದೆ ಎನ್ನುವುದು ನಿಮಗೆ ಅರ್ಥವಾಗಬಹುದು. ನಾನು ನಂಬಿದ್ದು ಪ್ರೀತಿಯನ್ನು, ಸ್ಥಾನವನ್ನು, ಅಭಿಮಾನವನ್ನೇ ಹೊರತು ಯಾವತ್ತೂ ದುಡ್ಡು ಮಾಡಬೇಕು ಎನ್ನುವುದನ್ನೇ ಗುರಿ ಮಾಡಿದವಳೇ ಅಲ್ಲ. ಡ್ರಗ್ಸ್ ಮೂಲಕ ಸಿಗುವ ಹಣ ಕೆಟ್ಟದ್ದು ಎನ್ನುವುದು ಅರಿವಾಗಲು ತುಂಬ ಬುದ್ಧಿವಂತಿಕೆ ಬೇಕಾಗಿಲ್ಲ ತಾನೇ? ದುಡ್ಡೇ ಮಾಡಬೇಕು ಎನ್ನುವವರು ಬೇರೆ ಕೆಲಸ ಹುಡುಕಬಹುದು. ಆದರೆ ನಾನು ಕಲೆಗೆ ಭಕ್ತಿ, ಗೌರವ ಕೊಟ್ಟು ಕೆಲಸ ಮಾಡುವವಳು. ನಾನು ಡಾ.ರಾಜ್ ಕುಮಾರ್ ಅವರನ್ನು ಭೇಟಿಯಾಗಿಲ್ಲ. ಆದರೆ ನಾನು ಕನ್ನಡಕ್ಕೆ ಬಂದ ಆರಂಭದಲ್ಲಿ ನಮ್ಮ ಸಿನಿಮಾಗಳ ಸೆಟ್‌ನಲ್ಲಿ ಯಾರಾದರೊಬ್ಬರು ಡಾ.ರಾಜ್ ಅವರ ಮಹಾಗುಣಗಳ ಬಗ್ಗೆ ಹೇಳುವವರು ಇದ್ದರು. ಯಾರೆಲ್ಲ ಕೆಲಸವನ್ನು ದೇವರಾಗಿ ಕಾಣುತ್ತಾರೋ ಗೊತ್ತಿಲ್ಲ. ನಾವು ಕಲಾವಿದರಂತೂ ಏನೇ ಪಾತ್ರ ಮಾಡಿದರೂ, ಮನಸಾರೆ ಕೈಮುಗಿದೇ ಬಣ್ಣ ಹಚ್ಚುತ್ತೇವೆ. ಬಣ್ಣ ತೆಗೆಯುವಾಗಲೂ ಕೈ ಮುಗಿಯುತ್ತೇವೆ. ಹಾಗೆ ಶ್ರದ್ಧೆಯಿಂದ ಕಷ್ಟಪಟ್ಟು ದುಡಿದಾಗ ಗೌರವದಿಂದ ಸಿಗುವುದೇ ಸಂಭಾವನೆ. ಅದರಾಚೆ ಸುಮ್ಮನಿದ್ದರೂ ಹೆಚ್ಚು ದುಡ್ಡು ಸಿಗುತ್ತದೆ ಎಂದಾಗಲೇ ನಮಗೆ ನಮ್ಮ ಕೆಲಸ ಸರಿಯಿಲ್ಲ ಎನ್ನುವುದು ಅರ್ಥವಾಗಬೇಕು. ಆಗ ಅರ್ಥವಾಗದಿದ್ದರೆ ಮುಂದೆ ಅನುಭವಿಸುವುದು ಖಚಿತ. ಅದು ನಂಬಿಕೆ. 

ಮತ್ತೊಮ್ಮೆ ಸ್ಟೇಷನ್ ಮೆಟ್ಟಿಲೇರುವೆ ಎಂದ ರಾಧಿಕಾ ಕುಮಾರಸ್ವಾಮಿ