ಅಂತರ್‌ಧರ್ಮೀಯ ಮದುವೆ, ಮತಾಂತರದ ಬಗ್ಗೆ ಪ್ರಿಯಾಮಣಿ ಹೇಳಿದ್ದಿಷ್ಟು
ಈ ವರ್ಷ ಲಾಕ್ಡೌನ್ ಕಾರಣದಿಂದ ಡಿಪ್ರೆಶನ್‌ಗೆ ಹೋದವರೇ ಹೆಚ್ಚು. ಆದರೆ ನಟಿ ಪ್ರಿಯಾಮಣಿಗೆ ಮಾತ್ರ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರುವ ಹುಚ್ಚು.ಡ್ರಗ್ಸ್ ವಿಚಾರದಲ್ಲಿ ಅಭಿಪ್ರಾಯ ಹೇಳದಿದ್ದರೂ ತಮ್ಮ ಜೀವನದ ಪ್ರಮುಖ ವಿಚಾರಗಳನ್ನು ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ನಟನೆಯ ಆರಂಭದ ದಿನಗಳಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತೆ ಪ್ರಿಯಾಮಣಿ. ಬರಿಯ ಕಣ್ಣೋಟದಲ್ಲೇ ನವರಸಗಳನ್ನು ವ್ಯಕ್ತಪಡಿಸಬಲ್ಲ ಅದ್ಭುತ ಕಲಾವಿದೆ. ಹಾಗಂತ ಗ್ಲಾಮರಸ್ ಪಾತ್ರಗಳಿಗೂ ಅಂಜದ ನಟಿ. ಕತೆ ಕೇಳಿಯೇ ಪಾತ್ರ ಒಪ್ಪುವ ಗಟ್ಟಿಗಿತ್ತಿ. ಈ ವರ್ಷ ಲಾಕ್ಡೌನ್ ಕಾರಣದಿಂದ ಡಿಪ್ರೆಶನ್‌ಗೆ ಹೋದವರೇ ಹೆಚ್ಚು. ಆದರೆ ಪ್ರಿಯಾಮಣಿಗೆ ಮಾತ್ರ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರುವ ಹುಚ್ಚು. ಹಾಗಾಗಿ ಮನೆಯ ನಾಲ್ಕು ಗೋಡೆಗಳು ಕೂಡ ಅವರ ಕ್ರಿಯಾಶೀಲ ಮನಸ್ಸಿಗೆ ಭಂಗ ತಂದಿಲ್ಲ. ಲಾಕ್ಡೌನ್ ಸಂದರ್ಭ ಮುಂಬೈನಲ್ಲಿರುವ ಪತಿ ಮುಸ್ತಫಾ ರಾಜನ ಮನೆಯಲ್ಲಿ ರಾಣಿಯಂತಿದ್ದರು. ಆದರೆ ಅನಿವಾರ್ಯವಾಗಿ ಮನೆಕೆಲಸ ಮಾಡಿದ್ದು ಕೂಡ ಕಷ್ಟವೆನಿಸಿಲ್ಲ ಎನ್ನುವ ಪ್ರಿಯಾ ಪ್ರಸ್ತುತ ಕನ್ನಡ ಚಿತ್ರರಂಗದ ಹೊಸ ಸುದ್ದಿ ಡ್ರಗ್ಸ್ ಸಮಸ್ಯೆ ಬಗ್ಗೆ ಮಾತ್ರ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ. ಇದು ಸುವರ್ಣ ನ್ಯೂಸ್.ಕಾಮ್ ವಿಶೇಷ ಸಂದರ್ಶನ.
= ಶಶಿಕರ ಪಾತೂರು
ನಮ್ಮ ಸಿನಿಮಾ ಕಲಾವಿದರು ಡ್ರಗ್ಸ್ ವಿಚಾರದಲ್ಲಿ ವಿಚಾರಣೆಗೊಳಪಡುತ್ತಿರುವ ಬಗ್ಗೆ ಏನು ಹೇಳುತ್ತೀರಿ?
ದಯವಿಟ್ಟು ಡ್ರಗ್ಸ್ ವಿಚಾರ ಬಿಟ್ಟು ಬೇರೆ ಏನಾದರೂ ಕೇಳಿ, ನಾನು ಉತ್ತರಿಸುತ್ತೇನೆ. ಆದರೆ ಡ್ರಗ್ಸ್ ವಿಚಾರ ಬೇಡ. ಎಲ್ಲರೂ ಹೇಳುತ್ತಿದ್ದಾರೆ, "ಡ್ರಗ್ಸ್ ಸಿಸ್ಟಮ್ ಇದೆ; ತನಿಖೆಯ ಮೂಲಕ ಪೂರ್ತಿ ಜಾಲ ಹೊರಗೆ ಬರುತ್ತೆ" ಎಂದು. ಅದಕ್ಕಾಗಿ ನಾವೆಲ್ಲ ಕಾಯೋಣ.
ನಾಗಿಣಿ ನಮ್ರತಾ ನಾಗಜಡೆಯ ರಹಸ್ಯ..!
ಸದ್ಯಕ್ಕೆ ನೀವು ಹೆಚ್ಚು ಗಮನ ನೀಡಿರುವ ವಿಚಾರ ಯಾವುದು?
ಖಂಡಿತವಾಗಿ ವೃತ್ತಿ ಬದುಕು! ನಾನು ಜೂನ್ ತಿಂಗಳಿನಿಂದಲೇ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ತೆಲುಗಿನಲ್ಲಿ `ಢೀ' ಹೆಸರಿನ ಡಾನ್ಸ್ ರಿಯಾಲಿಟಿ ಶೋ ತೀರ್ಪುಗಾರಳಾಗಿದ್ದೇನೆ. ಮುಂದಿನ ತಿಂಗಳಿನಿಂದ ಸಿನಿಮಾ ಶೂಟಿಂಗ್ ಕೂಡ ಶುರುವಾಗುವ ಸಾಧ್ಯತೆ ಇದೆ. ಈಗಾಗಲೇ ಚಿತ್ರೀಕರಣ ಶುರುವಾಗಿರುವ ತೆಲುಗಿನ `ನಾರಪ್ಪ' ಮತ್ತು `ವಿರಾಟ ಪರ್ವಂ' ಮೊದಲಾದ ಚಿತ್ರಗಳಲ್ಲಿ ಭಾಗಿಯಾಗಿದ್ದೇನೆ. ನಾರಪ್ಪ ತಮಿಳಿನ `ರಾಚಸನ್' ರಿಮೇಕ್ ಆಗಿದ್ದು ವೆಂಕಟೇಶ್ ನಾಯಕರು. ವಿರಾಟ ಪರ್ವಂನಲ್ಲಿ ರಾಣಾ ದಗ್ಗುಬಾಟಿ ಜತೆಗೆ ನಟಿಸುತ್ತಿದ್ದೇನೆ. ಅದರಲ್ಲಿ ನನ್ನದು ಡಿಗ್ಲಾಮರೈಸ್ಡ್ ಆಗಿ ಕಾಣಿಸಿಕೊಳ್ಳುವ ನಕ್ಸಲೈಟ್ ಪಾತ್ರ. ಇವಲ್ಲದೆ ಹಿಂದಿಯ ಮೈದಾನ್ ಸೇರಿದಂತೆ ಇನ್ನೊಂದಷ್ಟು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದೇನೆ. ಆದರೆ ನಿರ್ಮಾಣ ಸಂಸ್ಥೆಗಳು ಅನುಮತಿ ನೀಡುವ ತನಕ ಆ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನಾನು ಹಂಚಿಕೊಳ್ಳುವಂತಿಲ್ಲ.
ಡ್ರಗ್ಸ್ ಬಗ್ಗೆ ಮಳೆ ಹುಡುಗಿ ಪೂಜಾಗಾಂಧಿ ಹೇಳಿದ್ದೇನು ಗೊತ್ತೇ..?
ಹಾಗಾದರೆ ಲಾಕ್ಡೌನ್ ಸಂದರ್ಭದಲ್ಲಿ ಈ ಸಿನಿಮಾಗಳ ತಯಾರಿಯಲ್ಲೇ ಮುಳುಗಿದ್ದೀರ?
ಹಾಗೇನಿಲ್ಲ. ನಾನು ಸಾಮಾನ್ಯ ಮಹಿಳೆಯೊಬ್ಬಳು ಕಳೆಯುವ ರೀತಿಯಲ್ಲೇ ಮನೆ ಕೆಲಸ ಮಾಡುತ್ತಾ, ಟಿವಿ ನೋಡುತ್ತಾ ನನ್ನ ದಿನಗಳನ್ನು ಕಳೆದಿದ್ದೇನೆ! ಮನೆಯೊಳಗಿರುವುದು ಎಂದರೆ ನನಗೆ ಮುಂಚಿನಿಂದಲೂ ಕಷ್ಟದ ವಿಚಾರವೇನಲ್ಲ. ಲಾಕ್ಡೌನ್ ಆದಾಗ ನಾನು ಮುಂಬೈನ ಗಂಡನ ಮನೆಯಲ್ಲಿದ್ದೆ. ಮೂರು ತಿಂಗಳ ಕಾಲ ಅಲ್ಲಿ ಹೊರಗಿನಿಂದ ಬರುವ ಮನೆಕೆಲಸದವರನ್ನು ಕೂಡ ಇರಿಸಿಕೊಳ್ಳುವಂತೆ ಇರಲಿಲ್ಲ. ಆದ ಕಾರಣ ಮನೆಯ ಕೆಲಸಗಳನ್ನು ಕೂಡ ಗಂಡನ ಜತೆ ಸೇರಿಕೊಂಡು ನಾನೇ ಮಾಡುತ್ತಿದ್ದೆ. ಮದುವೆಗಿಂತ ಮೊದಲೇ ನಾನು ಕಸಹೊಡೆಯುವ ಮೂಲಕ ಅಮ್ಮನಿಗೆ ನೆರವಾಗುತ್ತಿದ್ದ ಕಾರಣ ಇವೆಲ್ಲ ನನಗೆ ಹೊಸ ಅನುಭವ ಏನೂ ಆಗಿರಲಿಲ್ಲ. ದಿನಸಿ ತರುವುದಕ್ಕೆ ನಾನೇ ಮಾರ್ಕೆಟ್‌ಗೆ ಹೋಗಿದ್ದೆ. ಮುಂಬೈನಲ್ಲಿ ನನ್ನನ್ನು ಅಷ್ಟಾಗಿ ಯಾರೂ ಗುರುತು ಹಿಡಿಯಲೂ ಇಲ್ಲ. ಆದರೆ ಅಡುಗೆ ವಿಚಾರದಲ್ಲಿ ಮಾತ್ರ ಅತ್ತೆಯೇ ನೇತೃತ್ವ ವಹಿಸಿದ್ದರು. ನಾನು ಆ ಕಡೆಗೆ ತಲೆ ಹಾಕಲೇ ಇಲ್ಲ.
ಮತ್ತೊಂದು ಕಂಪ್ಲೇಂಟ್‌ಗೆ ರಾಧಿಕಾ ಕುಮಾರ ಸ್ವಾಮಿ ರೆಡಿ..!
ಗಂಡನ ಮನೆಯ ಆಹಾರ ರೀತಿಗೆ ಹೊಂದಿಕೊಳ್ಳಲು ಸಾಧ್ಯವಾಗಿದೆಯೇ?
ಮದುವೆಯಾದ ಮೇಲೆ ಅಷ್ಟು ಕೂಡ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಹೇಗೆ ಹೇಳಿ. ಆಹಾರ ರೀತಿ ಬೇರೆ ಎನ್ನುವುದನ್ನು ಬಿಟ್ಟರೆ ಅವರು ಪ್ರಾಮುಖ್ಯತೆ ನೀಡುವುದು ಕೂಡ ಒಳ್ಳೆಯ ಹೆಲ್ತೀಫುಡ್ ಬಗ್ಗೆಯೇ. ಹಾಗಾಗಿ ಅದನ್ನು ಅಭ್ಯಾಸ ಮಾಡಿಕೊಂಡರೆ ನನಗೆ ತೊಂದರೆ ಏನೂ ಇಲ್ಲವಲ್ಲ. ಜಂಕ್ ಫುಡ್ ತಿನ್ನಬಾರದು, ಯಾವಾಗಲೂ ಚೆನ್ನಾಗಿರುವುದನ್ನೇ ಸೇವಿಸಬೇಕು ಎನ್ನುವುದು ಚಾಲೆಂಜ್ ಎನಿಸಬಹುದು; ಆದರೆ ಎಲ್ಲರ ಆರೋಗ್ಯಕ್ಕೂ ಅದೇ ಮುಖ್ಯ. ನನ್ನ ಪತಿಯ ತಂದೆ ತಾಯಿ ವರ್ಷದ ಒಂದಷ್ಟು ಸಮಯ ದುಬೈನಲ್ಲಿರುತ್ತಾರೆ. ಅವರು ಮನೆಗೆ ಬಂದ ಸಮಯದಲ್ಲೇ ಲಾಕ್ಡೌನ್ ಆಯಿತು. ಅವರು ಬೊಹ್ರ ಮುಸಲ್ಮಾನರು. ಕೂಲ್ ಆಗಿಯೇ ಇರುತ್ತಾರೆ ಆದರೂ ಸಂಪ್ರದಾಯವಾದಿಗಳು. ಹಾಗಿದ್ದರೂ ನಾನು ಕೂಡ ಅವರೊಂದಿಗೆ ಒಂದೇ ಕುಟುಂಬವಾಗಿ ಖುಷಿಯಿಂದ ಕಾಲ ಕಳೆದಿದ್ದೇನೆ. ಇದಕ್ಕಿಂತ ಹೊಂದಾಣಿಕೆ ಇನ್ನೇನು ಬೇಕಿದೆ?
ಸಂಪ್ರದಾಯವಾದಿಗಳಾದ ಕಾರಣ ಅವರ ಸಂಪ್ರದಾಯದ ಅನುಕರಣೆಗೆ ಒತ್ತಡ ಉಂಟಾಗಿಲ್ಲವೇ?
ಸಂಪ್ರದಾಯವಾದಿಗಳು ಅಂದರೆ ಅದು ಅವರಿಗಷ್ಟೇ ಅನ್ವಯವಾಗುತ್ತದೆ. ಯಾಕೆಂದರೆ ನಾನು ಅಂತರ್ಧರ್ಮೀಯ ವಿವಾಹವಾಗಿದ್ದೇನೆಯೇ ಹೊರತು, ನನ್ನ ಧರ್ಮವನ್ನು ಬದಲಾಯಿಸಿಲ್ಲ. ಇದನ್ನು ಮದುವೆಗೆ ಮೊದಲೇ ನಾನು ನನ್ನ ಪತಿಗೆ ಸ್ಪಷ್ಟಪಡಿಸಿದ್ದೆ ಕೂಡ. 'ಏನೇ ಆದರೂ ನಾನು ನಿಮಗಾಗಿ ಅಥವಾ ನಿಮ್ಮ ತಂದೆ ತಾಯಿಗಾಗಿ ಧರ್ಮ ಬದಲಾಯಿಸುವ ಪ್ರಯತ್ನ ಮಾಡುವುದಿಲ್ಲ. ಯಾಕೆಂದರೆ ನಾನು ಹುಟ್ಟಿರುವುದು ಹಿಂದೂ ಧರ್ಮದಲ್ಲಿ. ಅದನ್ನು ಬದಲಾಯಿಸುವುದು ನನ್ನ ವೈಯಕ್ತಿಕ ಆಯ್ಕೆಯಾಗಿರಬೇಕೇ ಹೊರತು ಯಾರದೋ ಒತ್ತಡಕ್ಕಾಗಿ ನಾನು ಬದಲಾಯಿಸಲಾರೆ,' ಎಂದು ಹೇಳಿದ್ದೆ. ಅವರ ಕಡೆಯಿಂದಲೂ ಯಾವುದೇ ಒತ್ತಡ ಇರಲಿಲ್ಲ. ಹಾಗಾಗಿಯೇ ನಮ್ಮೊಳಗೆ ಧರ್ಮದ ವಿಚಾರದಲ್ಲಿ ಇದುವರೆಗೆ ಯಾವುದೇ ಗೊಂದಲಗಳಾಗಿಲ್ಲ. ಮೊಹರಂ ಮತ್ತು ರಂಜಾನ್ ಉಪವಾಸದ ದಿನಗಳಲ್ಲಿ ನಾನು ಉಪವಾಸ ಹಿಡಿದಿರಲಿಲ್ಲ. ರಂಜಾನ್ ಮತ್ತು ಮೊಹರಂನ ಕೊನೆಯ ದಿನದಲ್ಲಿ ನಾನು ಕೂಡ ಉಪವಾಸ ಇದ್ದೆ. ಅದು ನಾನಾಗಿಯೇ ಸ್ವಂತ ಇಷ್ಟದ ಪ್ರಕಾರ ಹಿಡಿದಂಥ ವ್ರತ. ಅವರು ಕೂಡ ಖುಷಿ ಪಟ್ಟರು.
ನಿಮ್ಮ ಪ್ರಕಾರ ನಮ್ಮ ದೇಶದಲ್ಲಿ ಅಂತರ್ಧರ್ಮೀಯ ವಿವಾಹಗಳೆಂದರೆ ಹೆದರುವ ಕಾಲ ದಾಟಿದೆ ಎನ್ನಬಹುದೇ?
ನನ್ನ ವಿವಾಹವಾಗಿ ಮೂರು ವರ್ಷಗಳಾಗಿವೆ. ನನಗಂತೂ ಇದುವರೆಗೆ ಅಂಥ ಯಾವುದೇ ಸಮಸ್ಯೆ ಆಗಿಲ್ಲ. ಇಲ್ಲಿ ಧರ್ಮಗಳಿಂತ ಮನುಷ್ಯ ಸ್ನೇಹ ಮತ್ತು ಪ್ರೀತಿಯಿಂದ ಬೆರೆತಿದ್ದೇವೆ. ಉದಾಹರಣೆಗೆ ಗಂಡನ ತಂದೆ ಉಪವಾಸ ಹಿಡಿದಿರಲಿಲ್ಲ. ಯಾಕೆಂದರೆ ಅವರು ಸ್ವಲ್ಪ ಅನಾರೋಗ್ಯದಲ್ಲಿದ್ದ ಕಾರಣ ಉಪವಾಸ ಹಿಡಿಯದಿರುವುದೇ ಬೆಟರ್ ಎಂದು ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ಅವರಿಗೆ ಮತ್ತು ನನಗಾಗಿ ಅತ್ತೆಯೇ ಅಡುಗೆ ಮಾಡಿ ಕೊಡುತ್ತಿದ್ದರು. ಆದರೆ ನಿಜಕ್ಕೂ ಇಂಥ ಸಂದರ್ಭದಲ್ಲಿ ಉಪವಾಸ ಕುಳಿತುಕೊಳ್ಳುವ ಅವರ ಶ್ರದ್ಧೆಯನ್ನು ಖಂಡಿತವಾಗಿ ಮೆಚ್ಚಲೇಬೇಕು. ನಾನು ಅವರ ಆಚರಣೆಗಳಲ್ಲಿ ಭಾಗಿಯಾಗದಿದ್ದರೂ ಅವುಗಳನ್ನು ಗೌರವಿಸುತ್ತೇನೆ. ಅವರು ಕೂಡ ಅಷ್ಟೇ. ಇಷ್ಟು ಸೌಹಾರ್ದತೆ ಇರುವಾಗ ಬೇರೆ ಸಮಸ್ಯೆಗಳು ಬರಲಾರದು. ಆದರೆ ನನಗೆ ಒಂದಷ್ಟು ಹುಡುಗಿಯರು ತಾವು ಅಂತರ್ಧರ್ಮೀಯ ವಿವಾಹಕ್ಕೆ ಮನಸು ಮಾಡಿದ್ದರೂ ತಮ್ಮ ಕುಟುಂಬಗಳು ಒಪ್ಪಿಕೊಳ್ಳುತ್ತಿಲ್ಲ ಎಂದು ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು. ನಾನು ಎರಡು ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗುವಂತೆ ಸಲಹೆ ನೀಡುತ್ತಿದ್ದೆ. ಆಮೇಲೆ ಏನಾಯ್ತು ಎಂದು ನಾನು ಫಾಲೋ ಮಾಡಿಲ್ಲ. ನನ್ನ ಪ್ರಕಾರ ಅಂತಿಮವಾಗಿ ನಾವೆಲ್ಲ ಭಾರತೀಯರು. ಆಚರಣೆಗಳು ಬೇರೆಯಾದರೂ ಎಲ್ಲರೂ ಒಂದಾಗಿಯೇ ಇರಬೇಕಾದವರು.
"