ಶರಣ್, ಶ್ರುತಿ ಕೃಷ್ಣ ಆದ್ಮೇಲೆ ಸೋದರಿ ಪುತ್ರಿ ಕೀರ್ತಿ ಎಂಟ್ರಿ; ಡೊಡ್ಡಮ್ಮ, ಮಾವನೇ ಸ್ಫೂರ್ತಿ ಎಂದ ಸುಂದರಿ
ನಟ ಶರಣ್ ಸೋದರಿ ಉಷಾ ಕೃಷ್ಣ ಅವರ ಪುತ್ರಿ ಕೀರ್ತಿ ಕೃಷ್ಣ ‘ಧರಣಿ’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ಮನೋಜ್ ನಟನೆಯ, ಸುಧೀಂದ್ರ ಶಾನುಭೋಗ್ ನಿರ್ದೇಶನದ ಈ ಚಿತ್ರವನ್ನು ಜಿ ಕೆ ಉಮೇಶ್, ಕೆ ಗಣೇಶ್ ಐತಾಳ್ ನಿರ್ಮಿಸುತ್ತಿದ್ದಾರೆ. ಮೊದಲ ಹೆಜ್ಜೆ ಬಗ್ಗೆ ಕೀರ್ತಿ ಕೃಷ್ಣ ಜೊತೆ ಮಾತುಕತೆ.
ಆರ್. ಕೇಶವಮೂರ್ತಿ
ಇದ್ದಕ್ಕಿದ್ದಂತೆ ಚಿತ್ರರಂಗಕ್ಕೆ ಬಂದ್ರಲ್ಲ?
ಹಾಗೇನು ಇಲ್ಲ. ನಾನು ಬಾಲ ನಟಿಯಾಗಿಯೇ ದೊಡ್ಡಮ್ಮ ಶ್ರುತಿ ಚಿತ್ರದಲ್ಲಿ ನಟಿಸಿದ್ದೇನೆ. ಆಗಲೇ ನಾನು ನಟಿಯಾಗಬೇಕು ಎಂದು ಕನಸು ಕಂಡಿದ್ದೆ.
ಯಾವ ಚಿತ್ರ?
ಓಂಸಾಯಿ ಪ್ರಕಾಶ್ ನಿರ್ದೇಶನದ ‘ಶ್ರೀನಾಗಶಕ್ತಿ’. ರಾಮ್‌ಕುಮಾರ್ ಹಾಗೂ ಶ್ರುತಿ ಈ ಚಿತ್ರದ ಜೋಡಿ. ನಾನು ಅವರ ಮಗಳ ಪಾತ್ರ ಮಾಡಿರುವೆ. ಈ ಸಿನಿಮಾ 2010ರಲ್ಲಿ ಬಂದಿತ್ತು.
ನಟನೆಗೆ ಬೇರೆ ತಯಾರಿ ಮಾಡಿಕೊಂಡಿದ್ದೀರಾ?
ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಸಂಸ್ಥೆಯಲ್ಲಿ ನಟನಾ ತರಬೇತಿ ಮಾಡಿದ್ದೇನೆ. ಇಲ್ಲಿ ನೀನಾಸಂನಲ್ಲಿ ಮಾಸ್ಟರ್ ಆಗಿದ್ದ ಧನಂಜಯ್ ನನಗೆ ಅಭಿನಯ ಹೇಳಿಕೊಟ್ಟರು.
ಚಿತ್ರರಂಗವೇ ನಿಮ್ಮ ಆಯ್ಕೆ ಆಗಿದ್ದು ಯಾಕೆ?
ಮನೆ ತುಂಬಾ ಕಲಾವಿದರೇ ಇದ್ದಾರೆ. ಅವರನ್ನು ನೋಡಿಕೊಂಡು ಬೆಳೆದ ನನಗೆ ಸಹಜವಾಗಿ ನಟಿ ಆಗಬೇಕು ಅನಿಸಿತು. ನನ್ನ ತಾತ ಹಾಗೂ ದೊಡ್ಡಮ್ಮ ಶ್ರುತಿ, ಸೋದರ ಮಾವ ಶರಣ್ ಅವರ ಚಿತ್ರಗಳನ್ನು ನೋಡಿಕೊಂಡು ಬಂದವಳು. ಇವರೇ ನನಗೆ ಸ್ಫೂರ್ತಿ ಕೂಡ. ಅವರಂತೆಯೇ ನಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಹುಟ್ಟಿಕೊಂಡಿತು. ಕಾಲೇಜು (ಡಿಗ್ರಿ) ಮುಗಿದ ಕೂಡಲೇ ಚಿತ್ರರಂಗಕ್ಕೆ ಬಂದೆ.
ನಿಮ್ಮ ಕುಟುಂಬದ ಹಿನ್ನೆಲೆ ಏನು?
ನನ್ನ ತಾಯಿ ಉಷಾ ಕೃಷ್ಣ ಗೃಹಿಣಿ. ಅಪ್ಪ ಹೋಟೆಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಸೆಕೆಂಡ್ ಜನರೇಷನ್ : ಸ್ಟಾರ್ ಮಕ್ಕಳ ಎಂಟ್ರಿ
ಧರಣಿ ಚಿತ್ರತಂಡಕ್ಕೆ ನೀವು ಕನೆಕ್ಟ್ ಆಗಿದ್ದು ಹೇಗೆ?
ಚಿತ್ರತಂಡದವರು ನನ್ನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿ ಸಂಪರ್ಕ ಮಾಡಿದರು. ಹಳ್ಳಿ- ಹೋಮ್ಲಿ ಗೆಟಪ್‌ಗೆ ಸೂಕ್ತ ಎನಿಸುವ ನಟಿಗಾಗಿ ಅವರು ಹುಡುಕುತ್ತಿದ್ದರು. ನಾನು ಅದೇ ರೀತಿ ಫೋಟೋಗಳನ್ನು ಹಾಕಿದ್ದೆ.
ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?
ಹಳ್ಳಿ ಹುಡುಗಿ. ರಗಡ್ ಕ್ಯಾರೆಕ್ಟರ್. ಹಳ್ಳಿ ಹಿನ್ನೆಲೆಯಲ್ಲಿ ಮೂಡಿ ಬರುವ ಪಾತ್ರ.