ಬಹುಶಃ ಸ್ವಾತಿ ಎಂದರೆ ಇಂದಿನ ಪ್ರೇಕ್ಷಕರಿಗೆ ಗೊತ್ತಾಗಲಿಕ್ಕಿಲ್ಲ. ಆದರೆ ಹೊಸ ಸಿನಿಮಾ, ಧಾರಾವಾಹಿಗಳಲ್ಲಿ ಇವರ ಅಭಿನಯ ತೋರಿಸಿದರೆ ಆ ಪಾತ್ರವನ್ನು ಮರೆಯುವುದುಂಟೇ ಎನ್ನುತ್ತಾರೆ! ಅದಕ್ಕೆ ಕಾರಣ ಸ್ವಾತಿ ತಮ್ಮ ಹೆಸರಿಗಿಂತ ಕೃತಿಯಾಗಿ ಮಾತ್ರ ಉಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು. ಧಾರಾವಾಹಿಗಳ ಆರಂಭ ಕಾಲದಲ್ಲಿ ಅತಿ ಹೆಚ್ಚು ಸೀರಿಯಲ್ ಗಳಿಗೆ ನಾಯಕಿಯಾಗಿದ್ದವರು ಎಂದು ದಾಖಲೆ ಬರೆದ ನಟಿ ಇವರು. ಇದೀಗ ಜನಪ್ರಿಯ ಚಿತ್ರಗಳಲ್ಲಿ ತಾಯಿಯಾಗಿಯೂ ದಾಖಲೆ ಮಾಡುತ್ತಿದ್ದಾರೆ. ಆದರೆ ತಾವಾಯಿತು ತಮ್ಮ ಪಾತ್ರವಾಯಿತು ಎನ್ನುವಂತಿರುವ ಸ್ವಾತಿ ನಟನೆಯ ಹೊರತಾಗಿ ಕ್ಯಾಮೆರಾ ಮುಂದೆ ಬರುವುದೇ ಇಲ್ಲ. ಹಾಗಾಗಿಯೇ ವೈಯಕ್ತಿಕವಾಗಿ ಇಂದಿಗೂ ಅವರು ಹಲವರಿಗೆ ಅಪರಿಚಿತೆ. ಖ್ಯಾತ ನಟಿ ಮೈನಾವತಿಯವರ ಪುತ್ರ ಗುರುದತ್ ಜತೆಗೆ ವಿವಾಹಿತೆ. ಪುತ್ರ ಉದಿತ್ ಕೃಷ್ಣ ಒಂಬತ್ತನೇ ತರಗತಿಯ ವಿದ್ಯಾರ್ಥಿ. ತಾಯಿ ಪಾತ್ರದಲ್ಲಿಯೂ  `ಸಂತೂರ್ ಮಾತೆ'ಯಂತೆ ಮೈಕಾಂತಿ ಬೀರುವ ಸ್ವಾತಿಯವರ ಜತೆಗೆ ಸುವರ್ಣ ನ್ಯೂಸ್.ಕಾಮ್‌ನ ವಿಶೇಷ ಮಾತುಕತೆ ಇದು

ಬಣ್ಣದ ಲೋಕಕ್ಕೆ ನಿಮ್ಮ ಪ್ರವೇಶವಾಗಿ ಎಷ್ಟು ವರ್ಷಗಳಾಗಿರಬಹುದು?

ನಾನು ಚಿತ್ರರಂಗ ಪ್ರವೇಶಿಸಿದ್ದು 1996ರಲ್ಲಿ. ನಟ ಕರಿಬಸವಯ್ಯ ಅವರು ನಮ್ಮ ಕಾಲೇಜ್ ಲ್ಯಾಬ್ ಟೆಕ್ನಿಷಿಯನ್ ಆಗಿದ್ದರು.  ಅವರು ಸುನೀಲ್ ಪುರಾಣಿಕ್ ಅವರ `ಪೊಲೀಸ್ ಡೈರಿ' ಎನ್ನುವ ಧಾರಾವಾಹಿಗೆ ನನ್ನ ಎಂಟ್ರಿ  ಮಾಡಿಸಿದರು. ಆದರೆ ಮೊದಲು ಪ್ರಸಾರವಾದಂಥ ಧಾರಾವಾಹಿ ಮಾತ್ರ `ನೀ ಬರೆದ ಪಾತ್ರ ನಾನಲ್ಲ'. ಹಾಗೆ ಆರಂಭವಾದ ಪಯಣದಲ್ಲಿ ಇದುವರೆಗೆ ಸುಮಾರು 600ರಷ್ಟು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಆದರೆ ಮದುವೆಯ ಬಳಿಕ ಸುಮಾರು ಹನ್ನೆರಡು ವರ್ಷಗಳ ಗ್ಯಾಪ್ ಆಯಿತು. ಈಗ ನಾನು ನಿಜದಲ್ಲಿಯೂ ತಾಯಿ. ಸಿನಿಮಾ, ಧಾರಾವಾಹಿಗಳಲ್ಲಿಯೂ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ.

ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ ರಂಗಿತರಂಗ ನಟಿ

ನಿಮ್ಮ ಇದುವರೆಗಿನ ಜನಪ್ರಿಯ ಧಾರಾವಾಹಿಗಳ ಬಗ್ಗೆ ಹೇಳಿ

ಕನ್ನಡದ ಮೊದಲ ಮೆಗಾ ಧಾರಾವಾಹಿ ಎಂದು ಕರೆಸಿಕೊಳ್ಳುವ `ಮನೆತನ'ದಲ್ಲಿ ಪೂಜಾ ಎನ್ನುವ ನಾಯಕಿಯ ಪಾತ್ರ ನನ್ನದಾಗಿತ್ತು. ಅದೇ ವೇಳೆ ಪ್ರಸಾರವಾಗುತ್ತಿದ್ದಂಥ `ಜನನಿ' ಧಾರಾವಾಹಿಯಲ್ಲಿಯೂ ನಟಿಸಿದ್ದೆ. ಹುಲಿವಾನ್ ಚಂದ್ರಶೇಖರ ಅವರ ನಿರ್ದೇಶನದಲ್ಲಿ `ಮಲೆಗಳಲ್ಲಿ ಮದುಮಗಳು ' `ಧನಲಕ್ಷ್ಮೀ',  `ಸುಮಂಗಲಿ',  ಟಿ ಎನ್ ಸೀತಾರಾಮ್ ಅವರ `ಪತ್ತೇದಾರಿ ಪ್ರಭಾಕರ್', `ಮೋಹನ್ ಮಾಡಿದ ಮರ್ಡರ್', ಪಿ. ಶೇಷಾದ್ರಿ ಅವರ `ಪ್ರಿಯಾ' , ಭಾರ್ಗವ ಅವರ `ಉಯ್ಯಾಲೆ'ಯಲ್ಲಿಯೂ ನಟಿಸಿದ್ದೆ. ಇದೀಗ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ.

ಸಿನಿಮಾಗಳಲ್ಲಿಯೂ ತಾಯಿ ಪಾತ್ರಕ್ಕೆ ಭಡ್ತಿಯಾಗಿರುವ ಬಗ್ಗೆ?

1995ರಲ್ಲಿ ತೆರೆಕಂಡ ರಾಘವೇಂದ್ರ ರಾಜ್ ಕುಮಾರ್ ಅವರು ನಾಯಕರಾಗಿದ್ದ `ಆಟ ಹುಡುಗಾಟ' ಚಿತ್ರದಲ್ಲಿ ಕಾಲೇಜ್ ಹುಡುಗಿಯಾಗಿ ನಟಿಸಿದ್ದೆ. ಇಪ್ಪತ್ತು ವರ್ಷಗಳ ಬಳಿಕ ಪುನೀತ್ ರಾಜ್ ಕುಮಾರ್ ಅವರ `ಚಕ್ರವ್ಯೂಹ' ಚಿತ್ರದಲ್ಲಿ ನಾಯಕಿ ರಚಿತಾ ರಾಮ್ ಅವರ ತಾಯಿಯಾಗಿ ರೀ ಎಂಟ್ರಿಯಾದೆ.! ಎರಡು ವರ್ಷಗಳ ಹಿಂದೆ ರಾಘಣ್ಣನ ಮಗನ ಚಿತ್ರವಾದ `ಅನಂತು ವರ್ಸಸ್ ನುಸ್ರತ್' ನಲ್ಲಿ ನಾಯಕಿ ಲತಾ ಹೆಗ್ಡೆಯ ತಾಯಿಯ ಪಾತ್ರ ಮಾಡಿದ್ದೇನೆ. ಶರಣ್ ಅವರ `ರಾಜ್ ವಿಷ್ಣು', `ಹರಿಶ್ಚಂದ್ರ' ದರ್ಶನ್ ಅವರ 'ತಾರಕ್ ಚಿತ್ರದಲ್ಲಿಯೂ ತಾಯಿಯಾಗಿ ನಟಿಸಿದೆ.  ಗೀತಾದಲ್ಲಿ ಗಣೇಶ್ ತಾಯಿಯ ಪಾತ್ರ ಇತ್ತು. `ಪಡ್ಡೆ ಹುಲಿ'ಯಲ್ಲಿ ನಿಶ್ವಿಕಾಗೆ ತಾಯಿಯಾಗಿ ನಟಿಸಿದಾಗ ಎಲ್ಲರೂ ನಮ್ಮಿಬ್ಬರನ್ನು ತಾಯಿ ಮಗಳ ಹಾಗೆಯೇ ಕಾಣಿಸುವುದಾಗಿ ಹೇಳಿದ್ದರು. ತಾಯಿ ಪಾತ್ರದಲ್ಲಿ ನಟಿಸುವುದಕ್ಕೆ ನನಗೆ ಯಾವುದೇ ಬೇಜಾರಿಲ್ಲ. ಯಾಕೆಂದರೆ ಕ್ಯಾರೆಕ್ಟರ್ ಬಗ್ಗೆ ಹೆಚ್ಚು ವಿಚಾರಿಸದೆ ನಂಬಿಕೆಯಿಂದ ಒಪ್ಪಿಕೊಳ್ಳಬಹುದಾದ ಪಾತ್ರವೆಂದರೆ ತಾಯಿಯದು. ಚಿತ್ರದ ಕತೆ ಹೇಗೆಯೇ ಇದ್ದರೂ ತಾಯಿ ಯಾವಾಗಲೂ ಡೀಸೆಂಟ್ ಆಗಿರುತ್ತಾಳೆ.

ಕನ್ನಡದಲ್ಲಿಯೂ ಬರುತ್ತಿದೆ ಜೆಕೆ ನಟನೆಯ ಹಿಂದಿ ಮೂವಿ

ಬ್ಯುಸಿ ಶೆಡ್ಯೂಲ್ ನಿಮ್ಮ ಖಾಸಗಿ ಬದುಕಿಗೆ ತೊಂದರೆಯಾಗಿಲ್ಲವೇ?

ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯೆ ಅಲ್ಲ. ಅಬ್ಬಬ್ಬಾ ಎಂದರೆ ವಾಟ್ಸ್ಯಾಪ್ ಒಂದರಲ್ಲಿ ಇದ್ದೇನೆ. ಉಳಿದಂತೆ 1996ರಲ್ಲಿ ಒಬ್ಬ ಮನುಷ್ಯನಿಗೆ ಏನು ಥಾಟ್ ಇತ್ತೋ ಈಗಲೂ ನನ್ನಲ್ಲಿ ಅದೇ ಇದೆ! ಬೆಳಿಗ್ಗೆ ಎದ್ದು ಯೋಗ ಮಾಡುತ್ತೇನೆ. ಯಾರ ಬಗ್ಗೆಯೂ ಜಡ್ಜ್ ಮೆಂಟಲ್ ಆಗಿರುವುದಿಲ್ಲ. ಶೂಟಿಂಗ್ ಗೆ  ಹೋಗೋದು, ಕೆಲಸ ಮಾಡೋದು, ಬರೋದು ಅಷ್ಟಕ್ಕೇ ನನ್ನ ಮತ್ತು ಇಂಡಸ್ಟ್ರಿಯ ಸಂಬಂಧ ಮುಗಿಯುತ್ತದೆ. ಯಾಕೆಂದರೆ ಪ್ಯಾಕಪ್ ಹೇಳಿ ಗೇಟ್ ನಿಂದ ಆಚೆ ಬರುತ್ತಿದ್ದ ಹಾಗೆ ನನಗೆ ತಂಡದವರ ಜತೆಗೆ ಸಂಪರ್ಕ ಇರುವುದಿಲ್ಲ. ಮನೆಯಲ್ಲಿ ಗೃಹಿಣಿಯಾಗಿ ಮಾತ್ರ ಇರುತ್ತೇನೆ. ಹಾಗಾಗಿ ಎರಡಕ್ಕೂ ಯಾವುದೇ ತೊಂದರೆಗಳಾಗಿಲ್ಲ ಎನ್ನಬಹುದು.