Asianet Suvarna News Asianet Suvarna News

ವಿಭಿನ್ನ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡ 'ರಂಗಿತರಂಗ' ನಟಿ ರಾಧಿಕಾ!

ಶಿವಾಜಿ ಸುರತ್ಕಲ್ ಚಿತ್ರದಲ್ಲಿನ ಅಪರಿಚಿತ ಘಟನೆ ಮತ್ತು ರಮೇಶ್ ಅವರೊಂದಿಗಿನ ನಟನೆ ಮತ್ತು ತಾವು ಅವರ ಫ್ಯಾನಾಗಲು ಕಾರಣವಾದ ಒಟ್ಟು ಅನುಭವಗಳ ಬಗ್ಗೆ ರಾಧಿಕಾ ನಾರಾಯಣ್ ಅವರು ಸುವರ್ಣನ್ಯೂಸ್.ಕಾಮ್ ಜೊತೆ ಜತೆಗೆ ಹಂಚಿಕೊಂಡಿರುವ ಸಂಗತಿಗಳು ಇಲ್ಲಿವೆ.

Shivaji Surathkal actress Radhika Narayans interview
Author
Bangalore, First Published Feb 20, 2020, 12:49 PM IST

- ಶಶಿಕರ ಪಾತೂರು

ರಾಧಿಕಾ ನಾರಾಯಣ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಅವರು ನಟಿಸಿರುವ `ಶಿವಾಜಿ ಸುರತ್ಕಲ್' ಚಿತ್ರ ಇದೇ ವಾರ ತೆರೆಕಾಣುತ್ತಿದೆ. 'ರಂಗಿ ತರಂಗ' ಚಿತ್ರದ ಬಳಿಕ ಮತ್ತೊಮ್ಮೆ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಚಿತ್ರಗರ್ಭದಲ್ಲಿ ಬೇರೆಯೇ ಒಂದಷ್ಟು ನಿಗೂಢತೆಗಳಿವೆ ಎನ್ನುತ್ತಾರೆ ರಾಧಿಕಾ. ಅದಕ್ಕೆ ಪೂರಕವೆನ್ನುವಂತೆ ರಮೇಶ್ ಅರವಿಂದ್ ಚಿತ್ರದ ನಾಯಕರು. ಸುರತ್ಕಲ್ ಎನ್ನುವುದು ರಾಧಿಕಾಗೂ ಪರಿಚಯದ ಊರು. ಆದರೆ ಚಿತ್ರದಲ್ಲಿನ ಅಪರಿಚಿತ ಘಟನೆ ಮತ್ತು ರಮೇಶ್ ಅವರೊಂದಿಗಿನ ನಟನೆ ಮತ್ತು ತಾವು ಅವರ ಫ್ಯಾನಾಗಲು ಕಾರಣವಾದ ಒಟ್ಟು ಅನುಭವಗಳ ಬಗ್ಗೆ ರಾಧಿಕಾ ನಾರಾಯಣ್ ಅವರು ಸುವರ್ಣ ಆನ್ಲೈನ್ ನ್ಯೂಸ್ ಜತೆಗೆ ಹಂಚಿಕೊಂಡಿರುವ ಸಂಗತಿಗಳು ಇಲ್ಲಿವೆ.

ಶಿವಾಜಿ ಸುರತ್ಕಲ್ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣವೇನು?

ಒಂದು ದಿನ ಚಿತ್ರದ  ನಿರ್ದೇಶಕ ಆಕಾಶ್  ಶ್ರೀವತ್ಸ ಕರೆ ಮಾಡಿ ಹೇಳಿದರು. ರಮೇಶ್ ಸರ್ ಹೀರೋ ಎಂದಕೂಡಲೇ ಮನದೊಳಗೆ ಒಪ್ಪಿಕೊಂಡಿದ್ದೆ. ಆದರೆ ನನ್ನ ಪಾತ್ರದ ಬಗ್ಗೆ ಕುತೂಹಲ ಇದ್ದ ಕಾರಣ ಅವರು ಕತೆ ಪೂರ್ತಿ ಹೇಳುವ  ತನಕ ಕಾದೆ. ಕಥಾಪಾತ್ರದ ಬಗ್ಗೆ ತಿಳಿದಾಗ ಇನ್ನಷ್ಟು ಇಂಪ್ರೆಸ್ ಆದೆ. ಯಾಕೆಂದರೆ ಫ್ಲ್ಯಾಶ್ ಬ್ಯಾಕ್ ಮತ್ತು ಈಗಿನ ಸಂದರ್ಭ ಎರಡನ್ನು ಕೂಡ ಬೆರೆಸಿಕೊಂಡು ಹೋಗುವಂಥ ಚಿತ್ರಕತೆ ಇದೆ. ನನ್ನದಷ್ಟೇ ಅಲ್ಲ ಚಿತ್ರದ ಪ್ರತಿಯೊಂದು ಪಾತ್ರಗಳು ಕೂಡ ಕತೆಯೊಳಗೆ ಪ್ರಾಮುಖ್ಯತೆ ಪಡೆದುಕೊಂಡಿವೆ.

ರೊಮ್ಯಾಂಟಿಕ್ ಸ್ಟೋರಿ, ಮಾಡರ್ನ್ ಲುಕ್ಕಲ್ಲಿ ರಾಧಿಕಾ

ಶೂಟಿಂಗ್‌ನಲ್ಲಿ ಮರೆಯಲಾಗದ ಘಟನೆಗಳೇನಾದರೂ ನಡೆದಿದೆಯೇ?

ನಮ್ಮ ಸಿನಿಮಾದ ಒಂದಷ್ಟು ಭಾಗದ ಶೂಟಿಂಗ್ ಮೈಸೂರಲ್ಲಿತ್ತು. ನಾನು ನನ್ನ ಕಾಲೇಜು ದಿನಗಳನ್ನೆಲ್ಲ ಕಳೆದಿರುವುದು ಮೈಸೂರಲ್ಲಿಯೇ. ವಿಶೇಷ ಏನೆಂದರೆ ನನಗೆ ಕಾಲೇಜು ದಿನಗಳಿಂದಲೇ ರಮೇಶ್ ಅರವಿಂದ್ ಅವರೆಂದರೆ ಫೇವರಿಟ್ ಆಕ್ಟರ್ ಆಗಿದ್ದರು. ಅಂಥ ಒಬ್ಬ ನಟನನ್ನು ಭೇಟಿಯಾಗುವುದೇ ಕನಸು ಎಂದುಕೊಂಡಿದ್ದವಳು ನಾನು. ಇದೀಗ ಅದೇ ಸ್ಟಾರ್ ಜತೆಗೆ ನಾನು, ಅದು ಕೂಡ ನಾಯಕಿಯಾಗಿ ನಟಿಸುತ್ತಿದ್ದೇನೆ ಎನ್ನುವುದೇ ದೊಡ್ಡ ಸಂಭ್ರಮ. ಅದರಲ್ಲಿಯೂ ನಾನು ಬೆಳೆದ ಪರಿಸರದಲ್ಲಿ ಹಿಂದೆ ಕನಸು ಕಂಡಿದ್ದ ನಟನೊಂದಿಗೆ ತಿರುಗಾಡಿದ್ದು ಇಂದಿಗೂ ಕನಸೇನೋ ಎನ್ನುವ ಹಾಗೆ ಇತ್ತು.

ನಟಿಯಾಗಿ ರಮೇಶ್ ಅರವಿಂದ್ ಅವರೊಂದಿಗಿನ ನಟನೆ ಹೇಗೆ ಅನಿಸಿತು?

ಫ್ಯಾನ್ ಮಾತ್ರ ಆಗಿದ್ದಾಗ ಅವರ ಅಮೆರಿಕಾ ಅಮೆರಿಕಾ, ಅಮೃತ ವರ್ಷಿಣಿ ಅಥವಾ ರಾಮ ಶ್ಯಾಮ ಭಾಮದಂಥ ವಿಭಿನ್ನ ಚಿತ್ರಗಳ ಆಯ್ಕೆಗಳೇ ಆಸಕ್ತಿ ಮೂಡಿಸುತ್ತಿದ್ದವು. ಕಂಟೆಂಟ್‌ಗೆ ತುಂಬಾನೇ ಮಹತ್ವ ನೀಡುವ ಕ್ಲಾಸ್ ಆಕ್ಟರ್ ಆಗಿ ಕಾಣಿಸಿದ್ದ ಅವರು ಸಿನಿಮಾಗಳಲ್ಲಿ ಸೆಟಲ್ ಆಗಿ ನಟಿಸುವ ರೀತಿ ಆಕರ್ಷಕವೆನಿಸಿತ್ತು. ಈಗ ರಮೇಶ್ ಸರ್ ಒಬ್ಬ ನಟ ಮಾತ್ರವಲ್ಲ, ನಿರ್ದೇಶಕರು ಕೂಡ ಹೌದು. ಬಹುಶಃ ಅದೇ ಕಾರಣದಿಂದಲೇ ಏನೋ, ನಮ್ಮ ನಿರ್ದೇಶಕರು ಸಿಚುಯೇಶನ್ ವಿವರಿಸಿದ ಮೇಲೆ ನಮ್ಮ ಕಾಂಬಿನೇಶನ್ ದೃಶ್ಯಗಳಿರುವಾಗ ರಮೇಶ್ ಸರ್ ನನ್ನಲ್ಲಿ `ಅದನ್ನು ಹೀಗೆ ಮಾಡಿದರೆ ಚೆನ್ನಾಗಿರುತ್ತಲ್ವಾ' ಎಂದು ಸಜೆಶನ್ ನೀಡುತ್ತಿದ್ದರು.  ಅವರ ಸಲಹೆಗಳು ಪರ್ಫೆಕ್ಟ್ ಆಗಿರುತ್ತಿದ್ದವು. ಅವರು ತಮ್ಮ ಫ್ಯಾನ್ಸ್ ಗಳು ಸೆಟ್ ಗೆ ಬಂದಾಗ ಅವರನ್ನು ಕೂಡ ಯಾವುದೇ ಭೇದ ಭಾವಗಳಿರದ ರೀತಿ ಮಾತನಾಡಿಸುತ್ತಿದ್ದುದನ್ನು ನೋಡಿದರೆ  ಸಾಕು; ಅವರೆಂಥ ಜಂಟಲ್ ಮ್ಯಾನ್ ಎಂದು ಅರ್ಥಮಾಡಿಕೊಳ್ಳಬಹುದು. ಫೇವರಿಟ್ ನಟ ಈಗ ನನಗೆ ಫೇವರಿಟ್ ಕೋ ಸ್ಟಾರ್ ಕೂಡ ಆಗಿದ್ದಾರೆ.

Shivaji Surathkal actress Radhika Narayans interview

ಶಿವಾಜಿ ಸುರತ್ಕಲ್ ಬಳಿಕ ಬೇರೆ ಯಾವ ಸಿನಿಮಾಗಳು ನಿಮ್ಮ ಕೈಯ್ಯಲ್ಲಿವೆ?

ನಾನು ನಟಿಸಿರುವ `ಚೇಸ್' ಬಿಡುಗಡೆಗೆ ತಯಾರಾಗುತ್ತಿರುವ ಮತ್ತೊಂದು ಚಿತ್ರ. ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ನಾನು ಆರಂಭದಿಂದಲೂ ನನ್ನ ಪಾತ್ರ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪುತ್ತಾ ಬಂದೆ. ಆ ಅಭ್ಯಾಸ ಇರುವುದರಿಂದಾಗಿ ನನಗೆ ಯಾವುದಾರೊಂದು ಅವಕಾಶ ಸಿಕ್ಕರೆ ಸಾಕು ಎನ್ನುವ ಮನೋಭಾವ ಈಗಲೂ ಇಲ್ಲ. ಒಳ್ಳೆಯ ಪಾತ್ರಗಳು ಸಿಕ್ಕರೆ ನಟಿಸಬೇಕು ಎನ್ನುವುದಷ್ಟೇ ನನ್ನ ಆಸೆ. ನಾನು ನಂಬರ್ ಒನ್ ಆಗಬೇಕು ಎನ್ನುವುದಾಗಲೀ ನನ್ನ ಸಿನಿಮಾಗಳ ನಂಬರ್ ಹೆಚ್ಚಾಗಬೇಕು ಎನ್ನುವುದಾಗಲೀ ನನ್ನ ಗುರಿಯಲ್ಲ. ಮುಂದಿನ ಜನರೇಶನ್ ಪ್ರೇಕ್ಷಕರಿಗೆ ಕನ್ನಡದಲ್ಲಿ ರಾಧಿಕಾ ನಾರಾಯಣ್ ಎನ್ನುವ ನಟಿ ಇದ್ದಳು. ಆಕೆ ನಟಿಸಿದ ಚಿತ್ರಗಳೆಲ್ಲ ಖಂಡಿತವಾಗಿ ಒಮ್ಮೆ ನೋಡಲೇಬೇಕಾದಂಥವು ಎನ್ನುವ ಭಾವ ಮೂಡಿಸಿದರೆ ಸಾಕು.

ಮುಂದಿನ ನಿಲ್ದಾಣಕ್ಕೆ ಯೂ ಟರ್ನ್ ತೆಗೆದುಕೊಂಡ ರಾಧಿಕಾ

ಹಾಗಾದರೆ ಶಿವಾಜಿ ಸುರತ್ಕಲ್ ಚಿತ್ರ ಯಾಕೆ ನೋಡಬೇಕು ಎನ್ನುತ್ತೀರಿ?

ಮೊದಲನೆಯದಾಗಿ ಇದು ರಮೇಶ್ ಅರವಿಂದ್ ಅವರು ಕನ್ನಡದಲ್ಲಿ ನಟಿಸುತ್ತಿರುವ 101ನೇ ಚಿತ್ರ. ಜಾಣ್ಮೆಯಿಂದ ಕೆಲಸ ಮಾಡುವ ಪೊಲೀಸ್ ಅಧಿಕಾರಿಯಾಗಿ ಅವರು ಪಾತ್ರ ಮಾಡಿರುವ ರೀತಿ ಅದ್ಭುತ. ಮಧ್ಯಂತರದ ಬಳಿಕ ಕತೆ ತೆಗೆದುಕೊಳ್ಳುವ ತಿರುವು ಚಿತ್ರದ ಹೈಲೈಟ್. ಅದೇ ಭಾಗದಲ್ಲಿ ನನ್ನ ಪಾತ್ರದ ಪ್ರವೇಶವೂ ಆಗುತ್ತದೆ. ನನಗೆ ಹೆಚ್ಚು ದೃಶ್ಯಗಳಿಲ್ಲವಾದರೂ ರಮೇಶ್ ಸರ್ ಅವರ ಪಾತ್ರದುದ್ದಕ್ಕೂ ನಾನಿರುತ್ತೇನೆ. ಜನನಿ ಎನ್ನುವ ಲಾಯರ್ ಕ್ಯಾರೆಕ್ಟರ್ ನನ್ನದು. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದರೂ ನನಗೂ ರಮೇಶ್ ಸರ್ ಗೂ ಒಂದು ಮೆಲೊಡಿ ಗೀತೆಯಿದೆ. ಒಟ್ಟಿನಲ್ಲಿ ಸಿನಿಮಾ ನೋಡಿದವರಿಗೆ ಸಂತೃಪ್ತಿ ನೀಡುವುದರಲ್ಲಿ ಸಂದೇಹವಿಲ್ಲ.

Follow Us:
Download App:
  • android
  • ios