ಆರ್‌ ಕೇಶವಮೂರ್ತಿ

ಸದ್ಯ ಕನ್ನಡದ ಬೇಡಿಕೆಯ ನಟಿ ಅನಿಸಿಕೊಂಡಿದ್ದೀರಿ ಅನಿಸುತ್ತದೆ?

ಅಯ್ಯೋ ಹಾಗೇನು ಇಲ್ಲ. ಬೇಡಿಕೆ ನಟಿ ಹೌದೋ ಅಲ್ವೋ ಗೊತ್ತಿಲ್ಲ. ಆದರೆ, ಒಳ್ಳೆಯ ಸಿನಿಮಾಗಳು ಸಿಗುತ್ತದೆ. ನನ್ನ ನಟನೆ ಮತ್ತು ನಿರೀಕ್ಷೆಗೆ ತಕ್ಕಂತಹ ಪಾತ್ರಗಳು ಇವೆ.

‘ಶಾನೇ ಟಾಪಗೌವ್ಳೆ..’ ಅದಿತಿ ಪ್ರಭುದೇವ್!

ತುಂಬಾ ಸಿನಿಮಾಗಳು ಒಪ್ಪಿಕೊಂಡಿದ್ದೀರಿ ಅಲ್ವಾ?

ಹೌದು. ಒಪ್ಪಿರುವ ಚಿತ್ರಗಳ ಪೈಕಿ ‘ತೋತಾಪುರಿ 1’, ‘ರಂಗನಾಯಕಿ’ ಹಾಗೂ ‘ಬ್ರಹ್ಮಚಾರಿ’ ಚಿತ್ರೀಕರಣ ಮುಗಿಸಿದ್ದೇನೆ. ಹೊಸಬರ ಜತೆ ನಟಿಸುತ್ತಿರುವ ‘ದಿಲ್‌ಮಾರ್‌’, ಯೋಗೀಶ್‌ ಜತೆ ಕಾಣಿಸಿಕೊಂಡಿರುವ ‘ಒಂಭತ್ತನೇ ದಿಕ್ಕು’ ಹಾಗೂ ‘ತೋತಾಪುರಿ 2’ ಚಿತ್ರೀಕರಣದಲ್ಲಿವೆ. ಇನ್ನೂ ಯೋಗರಾಜ್‌ ಭಟ್‌ ನಿರ್ದೇಶನದ ‘ಗಾಳಿಪಟ 2’ ಚಿತ್ರೀಕರಣಕ್ಕೆ ಹೊರಡಬೇಕಿದೆ.

ಈ ಚಿತ್ರಗಳಲ್ಲಿ ನಿಮ್ಮ ಪಾತ್ರ ಹೇಗಿದೆ?

ತುಂಬಾ ಚೆನ್ನಾಗಿದೆ. ಒಂದೊಂದು ಚಿತ್ರದಲ್ಲೂ ಒಂದೊಂದು ರೀತಿಯ ಪಾತ್ರ. ಮುಸ್ಲಿಂ ಹುಡುಗಿ, ಗೃಹಿಣಿ, ಅತ್ಯಾಚಾರಕ್ಕೆ ಗುರಿಯಾದ ಯುವತಿ, ನೋವಿನಲ್ಲೂ ಖುಷಿಯಾಗಿ ಜೀವನ ಸಾಗಿಸುವ ಮಧ್ಯಮ ವರ್ಗದ ಹೆಣ್ಣು... ಹಲವು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ.

ನಿಮಗೆ ವಿಶೇಷ ಅನಿಸುವ ಸಿನಿಮಾ ಅಥವಾ ಪಾತ್ರ ಯಾವುದು?

ಎಲ್ಲವೂ ನನ್ನದೇ ಚಿತ್ರಗಳು. ಹೀಗಾಗಿ ಎಲ್ಲವೂ ವಿಶೇಷವಾಗಿದೆ. ಅದರಲ್ಲೂ ನನ್ನ ನಟನೆಯ ಚಿತ್ರವೊಂದು ಎರಡು ಭಾಗಗಳಲ್ಲಿ ಬರುತ್ತಿದೆ. ಅಲ್ಲದೆ ನವರಸ ನಾಯಕ ಜಗ್ಗೇಶ್‌ ಅವರಂತಹ ನಟರ ಜತೆ ನಟಿಸುವಂತೆ ಮಾಡಿದ ‘ತೋತಾಪುರಿ’ ಸಿನಿಮಾ ತುಂಬಾ ಮನರಂಜನೆ ಇದೆ. ಇಲ್ಲಿ ಮುಸ್ಲಿಂ ಹುಡುಗಿ ಪಾತ್ರ ಮಾಡಿದ್ದು ಹೊಸ ಅನುಭವ. ಅದೇ ರೀತಿ ಬ್ರಹ್ಮಚಾರಿ ಚಿತ್ರದಲ್ಲಿ ತುಂಬಾ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವೆ. ಸಿಕ್ಕಾಪಟ್ಟೆಗ್ಲಾಮರ್‌ ಇದೆ.

ಒಟ್ಟೊಟ್ಟಿಗೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೀರಿ, ಒತ್ತಡ ಅನಿಸುತ್ತಿಲ್ಲವೇ?

ಖಂಡಿತ ಇಲ್ಲ. ಪ್ರತಿಯೊಂದು ಚಿತ್ರಕ್ಕೂ ಪ್ಲಾನ್‌ ಮಾಡಿಕೊಂಡೇ ಕತೆ ಕೇಳುತ್ತಿದ್ದೇನೆ. ಕೇಳಿದ ಕತೆ ಇಷ್ಟವಾದಾಗ ಒತ್ತಡ ಆದರೂ ಒಪ್ಪಿಕೊಂಡು ಕೆಲಸ ಮಾಡುವುದು ನನ್ನ ಗುರಿ. ಎಲ್ಲಕ್ಕಿಂತ ಮುಖ್ಯವಾಗಿ ಈಗಲೂ ನಾನು ಆಡಿಷನ್‌ ಕೊಟ್ಟಮೇಲೆಯೇ ಪಾತ್ರಕ್ಕೆ ಆಯ್ಕೆ ಆಗುತ್ತಿದೆ. ಇದು ಒಬ್ಬ ನಟಿಯಾಗಿ ನನಗೇ ಖುಷಿ ಕೊಡುವ ವಿಚಾರ.

ಮೊದಲ ಚಿತ್ರಕ್ಕೆ ನಾಯಕಿಯಾದಾಗ ಇದ್ದ ನಿಮ್ಮ ನಿರೀಕ್ಷೆಗಳು ಈಗ ಈಡೇರುತ್ತಿವೆಯೇ?

ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದೆ. ನಾನು ಬಯಸಿದಂತೆ ಅವಕಾಶಗಳು ಸಿಗುತ್ತಿವೆ. ಯಾರ ಶಿಫಾರಸ್ಸೂ ಇಲ್ಲ. ಪ್ರತಿಭೆಯಿಂದಲೇ ಸಿಗುತ್ತಿರುವ ಅವಕಾಶಗಳು. ಇದೊಂದು ರೀತಿಯಲ್ಲಿ ದೇವರ ಗಿಫ್ಟ್‌ ಎನ್ನಬಹುದು. ಸಿನಿಮಾ ಅನ್ನೋದು ಮಿರರ್‌ ಇದ್ದಂತೆ. ನಾವು ಹೇಗಿರುತ್ತೇವೋ ಹಾಗೆ ತೋರಿಸುವ ಮಾಧ್ಯಮ. ಈ ಮಿರರ್‌ನಲ್ಲಿ ನಾನು ಪ್ರಮಾಣಿಕವಾಗಿ ದುಡಿಯುತ್ತಿದ್ದೇನೆ.