Asianet Suvarna News Asianet Suvarna News

ಸುಲಭಕ್ಕೆ ಚಿತ್ರಮಂದಿರ ಸಿಕ್ಕಿತು, ಇದೇ ನಮಗೆ ಒಳ್ಳೆ ಸಮಯ; ರಿವೈಂಡ್ ನಿರ್ದೇಶಕ ತೇಜಸ್‌ ಮಾತುಕತೆ

ಏ.16ರಂದು ತೆರೆಗೆ ಬರುತ್ತಿರುವ ಚಿತ್ರಗಳ ಪೈಕಿ ‘ರಿವೈಂಡ್‌’ ಕೂಡ ಒಂದು. ನಟನೆ, ನಿರ್ದೇಶನ, ನಿರ್ಮಾಣ ಹೀಗೆ ಮೂರು ವಿಭಾಗಗಳನ್ನು ತಾನೇ ನಿಭಾಯಿಸಿರುವ ತೇಜಸ್‌ ಅವರಿಗೆ ಇದು ಮೊದಲ ಸಿನಿಮಾ. ತಮ್ಮ ಮೊದಲ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರುವ ತೇಜಸ್‌ ಮಾತುಗಳು ಇಲ್ಲಿವೆ.

Rewind  Actor Director Thej exclusive interview vcs
Author
Bangalore, First Published Apr 16, 2021, 9:03 AM IST

ಆರ್‌ ಕೇಶವಮೂರ್ತಿ

1. ನಿಮ್ಮ ಹಿನ್ನೆಲೆ ಏನು?

ನಾನು ಹಿರಿಯ ನಟಿ ಪ್ರಮೀಳಾ ಜೋಷಾಯ್‌ ಅವರ ತಮ್ಮನ ಮಗ. ಮೇಘನಾ ರಾಜ್‌ ಹುಟ್ಟುವುದಕ್ಕೂ ಮೊದಲೇ ನಾನು ಸುಂದರ್‌ರಾಜ್‌ ಹಾಗೂ ಪ್ರಮೀಳಾ ಜೋಷಾಯ್‌ ಅವರ ಮನೆಯ ಮಗನಂತೆ ಇದ್ದವನು. ಸಿನಿಮಾ ವಾತಾವರಣ ನೋಡಿದ್ದು ಇಲ್ಲಿಂದಲೇ.

ಮೇಘನಾ ರಾಜ್‌ ಸೀಮಂತದಲ್ಲಿದ್ದ ಆ ಸ್ಟಾರ್ ನಟ ಯಾರು ಗೊತ್ತಾ? 

2. ಮೇಘನಾ ರಾಜ್‌ ಅವರ ಸೀಮಂತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ತುಂಬಾ ಗಾಸಿಪ್‌ಗಳು ಹಬ್ಬಿತ್ತಲ್ಲಾ?

ನೀವೇ ಹೇಳಿದಂತೆ ಅದು ಬರೀ ಗಾಸಿಪ್‌. ನಾನು ಮಲಯಾಳಂ ನಟ, ಮುಂದೆ ಮೇಘನಾ ರಾಜ್‌ ಅವರನ್ನು ಮದುವೆ ಆಗಲಿದ್ದೇನೆ ಇತ್ಯಾದಿ ಸುದ್ದಿಗಳು ಹಬ್ಬಿದ್ದವು. ಸುಳ್ಳು ಸುದ್ದಿಗಳನ್ನು ತಡೆಯುತ್ತಾ ಕೂರಕ್ಕೆ ಆಗಲ್ಲ. ಮೇಘನಾರಾಜ್‌ ನನಗೆ ತಂಗಿ. ಸುಂದರ್‌ರಾಜ್‌ ಹಾಗೂ ಪ್ರಮೀಳಾ ಜೋಷಾಯ್‌ ನನಗೆ ತಂದೆ, ತಾಯಿ ಥರಾ.

Rewind  Actor Director Thej exclusive interview vcs

3. ಚಿತ್ರರಂಗಕ್ಕೆ ಬರುವ ಮೊದಲು ಏನಾಗಿದ್ರಿ?

ಮೈಕ್ರೋಸಾಫ್ಟ್‌ ಕಂಪನಿಯಲ್ಲಿ ವಿಜ್ಞಾನಿ ಆಗಿದ್ದೆ. ಗೂಗಲ್‌ನಲ್ಲೂ ಕೆಲಸ ಮಾಡಿದ್ದೇನೆ. ಶಂಕರ್‌ನಾಗ್‌ ಅವರ ‘ಮಹೇಶ್ವರ’ ಚಿತ್ರದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದೇನೆ. ಇದಾದ ಮೇಲೆ ‘ಮೀಸೆ ಚಿಗುರಿದಾಗ’ ಚಿತ್ರದಲ್ಲಿ ಹೀರೋ ಆದೆ. ಆ ನಂತರ ವಿದ್ಯಾಭ್ಯಾಸಕ್ಕಾಗಿ ನಾನು ಚಿತ್ರರಂಗದಿಂದ ದೂರ ಆದೆ. ಆದರೆ, ಎಜುಕೇಷನ್‌ ನಡುವೆ ತಮಿಳಿನಲ್ಲಿ ನಾಲ್ಕು ಚಿತ್ರಗಳಲ್ಲಿ ನಟಿಸಿದೆ. ಒಂದು ಒಳ್ಳೆಯ ಕನ್ನಡ ಸಿನಿಮಾ ಮಾಡಬೇಕು ಎನ್ನುವ ಕನಸು ನನ್ನ ಕಾಡುತ್ತಿತ್ತು. ಅದರ ಫಲವೇ ‘ರಿವೈಂಡ್‌’. ನನ್ನ ಈ ಜರ್ನಿಯೇ ಸಿನಿಮಾ ತಯಾರಿಯೂ ಆಗಿತ್ತು.

Rewind  Actor Director Thej exclusive interview vcs

4. ರಿವೈಂಡ್‌ ಎಂದರೆ ಏನು? ಈ ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದೀರಿ?

ಇದೊಂದು ಫ್ಯಾಮಿಲಿ ಸೈಂಟಿಫಿಕ್‌ ಥ್ರಿಲ್ಲರ್‌ ಸಿನಿಮಾ. ಚಿತ್ರದ ನಾಯಕ ಪತ್ರಕರ್ತನಾಗಿರುತ್ತಾನೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ಬಯಲಿಗೆ ಎಳೆಯುವ ಮೂಲಕ ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಇದರಿಂದ ತನ್ನ ಫ್ಯಾಮಿಲಿಗೆ ತೊಂದರೆ ಆದಾಗ ಸೈನ್ಸ್‌ ಬಳಸಿಕೊಂಡು ಹೇಗೆ ಅಪಾಯದಿಂದ ನನ್ನ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳುತ್ತಾನೆ ಎಂಬುದು ಚಿತ್ರದ ಕತೆ. ಹಿಂದೆ ನಡೆದ ಘಟನೆಗಳನ್ನು ಮತ್ತೆ ರಿವೈಂಡ್‌ ಮಾಡಿಕೊಂಡಾಗ ಸಮಸ್ಯೆಗೆ ಪರಿಹಾರ ಸಿಗುತ್ತದೆ ಅದು ಹೇಗೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ‘ದೃಶ್ಯ’ ಹಾಗೂ ‘ಆಪ್ತಮಿತ್ರ’ ಚಿತ್ರಗಳಂತೆ ಸಾಗುತ್ತದೆ.

5. ಮೊದಲ ಚಿತ್ರದ ಅನುಭವ ಹೇಗಿದೆ?

ತಮಿಳಿನಲ್ಲಿ ಈ ಹಿಂದೆ ಒಂದು ಚಿತ್ರವನ್ನು ನಿರ್ಮಿಸಿದ್ದೆ. ಆದರೆ, ಕನ್ನಡದಲ್ಲಿ ಇದು ಮೊದಲ ಹೆಜ್ಜೆ. ಮನೆಯಲ್ಲಿ ಇಬ್ಬರು ಸೋದರು, ತಂಗಿಯರು ಇದ್ದರೆ ಯಾವುದೇ ಕಷ್ಟಇಲ್ಲದೆ ಅವರಿಗೆ ಮದುವೆ ಮಾಡಿಬಿಡಬಹುದು. ಆದರೆ, ಒಂದು ಸಿನಿಮಾ ನಿರ್ಮಾಣ ಮಾಡೋದಿದೆಯಲ್ಲ, ಅದರ ಕಷ್ಟಯಾರಿಗೂ ಬೇಡ. ಸಿನಿಮಾ ಮೇಲಿನ ಆಸಕ್ತಿ, ಪ್ರೀತಿ, ಚಿತ್ರರಂಗದಲ್ಲಿ ಏನಾದರೂ ಸಾಧಿಸಬಹುದು ಎನ್ನುವ ನಂಬಿಕೆ ಈ ಎಲ್ಲಾ ಕಷ್ಟಗಳನ್ನು ಮರೆಸುತ್ತದೆ.

ರಿವೈಂಡ್‌ ಟೀಸರ್‌ ಬಿಡುಗಡೆ! 

6. ಈಗ ಸಿನಿಮಾ ಬಿಡುಗಡೆಗೆ ಸೂಕ್ತ ಸಮಯ ಅನಿಸುತ್ತಿದೆಯೇ?

ನೈಟ್‌ ಕರ್ಫ್ಯೂ ಶೇ.50ರಷ್ಟುಪ್ರೇಕ್ಷಕರಿಗೆ ಅವಕಾಶ, ಕೊರೋನಾ ಸಂಕಷ್ಟಗಳ ನಡುವೆ ಯಾಕೆ ಸಿನಿಮಾ ಬಿಡುಗಡೆ ಮಾಡುತ್ತಿದ್ದಿಯಾ ಅಂತ ನನಗೆ ಸುಮಾರು ಜನ ಕೇಳಿದ್ದರು. ನಿಜ ಹೇಳಬೇಕು ಅಂದರೆ ಇದೇ ಸೂಕ್ತ ಸಮಯ. ಇದೇ ಏ.16ಕ್ಕೆ 7 ಚಿತ್ರಗಳು ಇದ್ದವು. ಆದರೆ, ಚಿತ್ರಮಂದಿರಗಳಲ್ಲಿ ಸೀಟು ಕಡಿತ, ನೈಟ್‌ ಕರ್ಫ್ಯೂ ಹಾಕಿದ ಕೂಡಲೇ ಎಲ್ಲ ಚಿತ್ರಗಳು ಹಿಂದಕ್ಕೆ ಹೋದವು. ಈಗ ನನಗೆ ಸುಲಭಕ್ಕೆ ಚಿತ್ರಮಂದಿರಗಳು ಸಿಗುತ್ತಿವೆ. ಸಿಟಿ ತುಂಬಾ ನನ್ನ ಚಿತ್ರದ ಪೋಸ್ಟರ್‌ಗಳೇ ಇವೆ. ಥಿಯೇಟರ್‌ನವರು ಅವರೇ ಕರೆದು ಶೋ ಕೊಡುತ್ತಿದ್ದಾರೆ. ಒಂದು ವೇಳೆ ಈ ಸಂಕಷ್ಟಗಳು ಇಲ್ಲದೆ ಹೋಗಿದ್ದರೆ 7 ಚಿತ್ರಗಳ ಜತೆ ಬರಬೇಕಿತ್ತು. ಥಿಯೇಟರ್‌ ಸಿಗೋದು ಇರಲಿ, ಪೋಸ್ಟರ್‌ ಅಂಟಿಸಕ್ಕೂ ಜಾಗ ಸಿಗುತ್ತಿರಲಿಲ್ಲ. ನನ್ನ ಪ್ರಕಾರ ಇದೇ ಸರಿಯಾದ ಸಮಯ.

7. ಮೂರು ವಿಭಾಗಗಳನ್ನು ನೀವೇ ನಿಭಾಯಿಸುವ ಸಂದರ್ಭ ಬಂದಿದ್ದು ಯಾಕೆ?

ಅಗತ್ಯ ಇತ್ತು. ಯಾಕೆಂದರೆ ದೊಡ್ಡ ಕಂಪನಿಯಲ್ಲಿ ವಿಜ್ಞಾನಿಯಾಗಿದ್ದವನು. ಕನ್ನಡದಲ್ಲಿ ಒಂದು ಸಿನಿಮಾ ಮಾಡುತ್ತೇನೆ ಎಂದಾಗ ಎಲ್ಲರೂ ಕುತೂಹಲದಿಂದ ನೋಡುತ್ತಾರೆ. ಅದು ನನ್ನ ಮೇಲೆ ಜವಾಬ್ದಾರಿ ಹೆಚ್ಚಿಸಿ ಒಳ್ಳೆಯ ಸಿನಿಮಾ ಕೊಡಬೇಕು ಎಂದು ಎಚ್ಚರಿಸುತ್ತದೆ. ನನಗೆ ಯಾರೂ ಒಳ್ಳೆಯ ಚಿತ್ರ ಕೊಡಲಿಲ್ಲ. ಹೀಗಾಗಿ ನನ್ನ ದಾರಿಯನ್ನು ನಾನೇ ನಿರ್ಮಿಸಿಕೊಳ್ಳಬೇಕಿತ್ತು. ನನ್ನ ಸಿನಿಮಾ ಯೋಚನೆಯನ್ನು ನಾನೇ ಜಾರಿಗೆ ತರಬೇಕಿತ್ತು. ನಾನು ಏನು ಅಂತ ಪ್ರೂವ್‌ ಮಾಡಬೇಕಿತ್ತು. ಇದೆಲ್ಲವೂ ಸೇರಿ ನನ್ನ ನಟ, ನಿರ್ದೇಶಕ, ನಿರ್ಮಾಪಕನನ್ನಾಗಿಸಿದವು.

8. ಕರ್ನಾಟದಲ್ಲಿ ಎಷ್ಟುಕಡೆ ಬಿಡುಗಡೆ ಆಗುತ್ತಿದೆ, ಬೇರೆ ಭಾಷೆಗಳಲ್ಲಿ ಯಾವಾಗ ರಿಲೀಸು?

ಕನ್ನಡದಲ್ಲಿ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಮಲಯಾಳಂನಲ್ಲಿ ಖಾದರ್‌ ಹಾಸನ್‌ ಎಂಬುವವರು ವಿತರಣೆ ಮಾಡುತ್ತಿದ್ದಾರೆ. ತಮಿಳಿನಲ್ಲಿ ಈ ತಿಂಗಳಲ್ಲಿ ಬಿಡುಗಡೆ ಆಗಲಿದೆ. ತೆಲುಗಿನಲ್ಲಿ ಮಾತುಕತೆ ನಡೆಯುತ್ತಿದೆ. ಮೂರು ಭಾಷೆಯಲ್ಲಿ ನನ್ನ ಸಿನಿಮಾ ಬರುವುದು ಪಕ್ಕಾ.

Follow Us:
Download App:
  • android
  • ios