ಈ ದಿನಗಳು `ಸಿನಿಮಾ ಭಾಷೆ' ಕಲಿಯಲು ಮೀಸಲು: ಸುಮನ್ ಮಂದಣ್ಣ
ರಶ್ಮಿಕಾ ಮಂದಣ್ಣ ಇದುವರೆಗೆ ನಟಿಸಿದ ಚಿತ್ರಗಳೆಲ್ಲ ಯಶಸ್ವಿ. ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಗೆ ಕಾದಿವೆ. ಆದರೂ ರಶ್ಮಿಕಾ ಸಿನಿಮಾ ಭಾಷೆ ಕಲಿಯುತ್ತಿದ್ದಾಳೆ ಅಂತಾರೆ ರಶ್ಮಿಕಾ ತಾಯಿ ಸುಮನ್ ಮಂದಣ್ಣ
ರಶ್ಮಿಕಾ ಮಂದಣ್ಣ ತಾರೆಯಾಗಿ ಬೆಳೆದ ರೀತಿಯೇ ಅನನ್ಯ. ಪ್ರಥಮ ಚಿತ್ರ `ಕಿರಿಕ್ ಪಾರ್ಟಿ' ಸೇರಿದಂತೆ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನ. ರಶ್ಮಿಕಾ ಪ್ರಸ್ತುತ ದಕ್ಷಿಣ ಭಾರತದ ನಂಬರ್ ಒನ್ ನಟಿ. ಬಹುಶಃ ಇದೇ ಕಾರಣ ಇರಬಹುದು; 'ಆಕೆಯ ಅದೃಷ್ಟವೇ ಇಂಥ ಯಶಸ್ಸು ತಂದು ಕೊಟ್ಟಿದೆ' ಎನ್ನುವ ಸಂದೇಹ ಹಲವರಿಗೆ. ಆದರೆ ಯಾರಿಗೂ ಕುಳಿತಲ್ಲಿಗೆ ಬಂದು ಯಶಸ್ಸು ಕೈ ಹಿಡಿಯುವುದಿಲ್ಲ. ಅದರ ಹಿಂದಿನ ಪರಿಶ್ರಮ, ಕಠಿಣವಾದ ದಾರಿ ಹೇಗಿರುತ್ತದೆಂದು ಸಾಗಿದವರಿಗೆ ಮಾತ್ರ ಗೊತ್ತು. ಅದನ್ನು ಬಿಡಿಸಿ ಹೇಳಲು ರಶ್ಮಿಕಾ ಸಿಗಲಿಲ್ಲ. ಆದರೆ ಅವರ ತಾಯಿ ಸುಮನ್ ಮಂದಣ್ಣ ಹೇಳದೇ ಇರಲಿಲ್ಲ. ಯಾಕೆಂದರೆ ಓರ್ವ ತಾಯಿಯಾಗಿ ಅವರು ಮಗಳಿಗಿಂತ ಹೆಚ್ಚಾಗಿಯೇ ಮಗಳ ಬಗ್ಗೆ ತಿಳಿದವರು. ಹಾಗಾಗಿ ಅವರ ಅನುಭವದ ಮಾತು ಕೂಡ `ಕರ್ನಾಟಕ ಕ್ರಶ್' ಅಭಿಮಾನಿಗಳಿಗೆ ಫ್ರೆಷ್ ಆಗಿರುತ್ತದೆ ಎನ್ನುವ ನಂಬಿಕೆಯೊಂದಿಗೆ ಸುವರ್ಣ ನ್ಯೂಸ್ .ಕಾಮ್ ಇಲ್ಲಿ ನೀಡುತ್ತಿದೆ.
- ಶಶಿಕರ ಪಾತೂರು
ರಾಮನಗರದಲ್ಲಿ ಮಗಳಿಗೆ ಗುಡಿಸಲು ಕಟ್ಟಿಕೊಟ್ಟ ಶ್ರುತಿ!
ಲಾಕ್ಡೌನ್ ಸಂದರ್ಭದಲ್ಲಿಯೂ ರಶ್ಮಿಕಾ ನಿಮ್ಮೊಡನಿರಲು ಬಂದಿಲ್ಲವೇ?
ಬಂದು ಹೋಗಿದ್ದಾಳೆ. ಅವಳಿಗೆ ಇಲ್ಲಿ ಮುಖ್ಯವಾಗಿ ನೆಟ್ವರ್ಕ್ ಪ್ರಾಬ್ಲಮ್ ಇತ್ತು. ಯಾಕೆಂದರೆ ಮೊಬೈಲಲ್ಲಿ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿದ್ದಳು. ಆದರೆ ನಮ್ಮಲ್ಲಿ ಮನೆ ತುಂಬ ಓಡಾಡಿದರೂ ಸರಿಯಾಗಿ ನೆಟ್ವರ್ಕ್ ಸಿಗೋದಿಲ್ಲ. ಹಾಗಾಗಿ ವಾಪಾಸು ಹೈದರಾಬಾದ್ ಗೆ ಹೋಗಿದ್ದಾಳೆ. ವ್ಯಾಯಾಮ, ನೃತ್ಯ ಮತ್ತು ಭಾಷೆಗಳ ಕುರಿತಾದ ಆನ್ಲೈನ್ ತರಬೇತಿ ಪಡದುಕೊಳ್ಳುತ್ತಿದ್ದಾಳೆ. ಸದ್ಯಕ್ಕೆ ಚಿತ್ರರಂಗಕ್ಕೆ ಬಿಡುವಾದರೂ ಆಕೆ ಹೆಚ್ಚು ತಯಾರಿ ಮಾಡಿಕೊಂಡಿರಲು ಬಯಸಿದ್ದಾಳೆ. ಅದೆಲ್ಲವೂ ಸದ್ಯದ ಮಟ್ಟಿಗೆ ಆನ್ಲೈನಲ್ಲೇ ಮಾಡಬೇಕಾದ ಕಾರಣ ಹೈದರಾಬಾದ್‌ಗೆ ಹೋಗುವುದೇ ಬೆಟರ್ ಎಂದು ಅಲ್ಲಿಗೆ ಹೋಗಿದ್ದಾಳೆ.
ಫ್ರೆಂಚ್ ಬಿರಿಯಾನಿ ನಂತರ ಕಾಮಿಡಿ ಪಾತ್ರದ ನಿರೀಕ್ಷೆಯಲ್ಲಿ ದಿಶಾ ಮದನ್
ಹಾಗಾದರೆ ಗ್ರೀನ್ ಚಾಲೆಂಜ್ ಮಾಡಿ ಗಿಡ ನೆಟ್ಟಿದ್ದು ಕೂಡ ಹೈದರಾಬಾದ್ ನಲ್ಲೇ?
ಹೌದು. ಹೈದರಾಬಾದ್ ಮನೆಯಲ್ಲಿ ಗಿಡ ನೆಟ್ಟ ಫೊಟೋಸ್ ಇನ್ಸ್ಟಾಗ್ರಾಮಲ್ಲಿ ಹಾಕಿಕೊಂಡಿದ್ದಳು. ನಮ್ಮನೆಗೆ ಬಂದರೆ ಅಂಥ ಫೊಟೋ ತೆಗೆಯುವ ಸೀನೆಲ್ಲ ಇಲ್ಲ. ನಾವು ದಿನವೂ ನೆಟ್ಟ ಉದಾಹರಣೆಯೂ ಇದೆ. ಅದು ಹವ್ಯಾಸ ಕೂಡ. ಲಾಕ್ಡೌನ್, ಕೊರೊನ ಸಮಸ್ಯೆ ಎಲ್ಲ ಮುಗಿದ ಮೇಲೆ ವಾಪಾಸು ಬರುವುದಾಗಿ ಹೇಳಿದ್ದಾಳೆ. ಈ ಸಂದರ್ಭದಲ್ಲಿ ಪ್ರಯಾಣ ಕೂಡ ಭಯವೇ ತಾನೇ? ಇಲ್ಲಿ ನಾವು ನಗರ ಹೊರವಲಯದಲ್ಲಿ ಪ್ರತ್ಯೇಕವಾಗಿ ಮನೆ ಮಾಡಿದ್ದೇವೆ. ಹಾಗಾಗಿ ಕೊರೊನಾ ಬಗ್ಗೆ ನಮಗಿಲ್ಲಿ ಅಂಥ ಭಯ ಏನೂ ಇಲ್ಲ. ಅಲ್ಲದೆ, ಅನಗತ್ಯವಾಗಿ ಗ್ಯಾದರಿಂಗ್ ಆಗುವ ಸಂದರ್ಭವೂ ಇಲ್ಲ. ಯಾಕೆಂದರೆ ಏನೂ ಫಂಕ್ಷನ್ಸ್ ಕೂಡ ನಡೆಯುತ್ತಾ ಇಲ್ಲ. ಆದರೆ ರಶ್ಮಿಕಾ ಈ ಮನೆಗೆ ಬಂದು ಇಲ್ಲೇ ಇದ್ದರೆ ಬೇಗ ದಪ್ಪಾಗಿ ಬಿಡ್ತಾಳೆ. ಬಹುಶಃ ಖುಷಿಯಲ್ಲೇ ಮೈ ತೂಕ ಹೆಚ್ಚುತ್ತೆ ಅನ್ಸುತ್ತೆ. ಮಾಮೂಲಿ ದೇಹದಲ್ಲಿದ್ದುಕೊಂಡೇ ಆಕೆ ಪರದೆಯ ಮೇಲೆ ಹೆಚ್ಚು ದಪ್ಪ ಕಾಣಿಸ್ತಾಳೆ. ಹಾಗಾಗಿ ಆದಷ್ಟು ಸಣ್ಣಗಾಗುವ ಬಗ್ಗೆ ಗಮನ ನೀಡಲೇಬೇಕಾಗುತ್ತದೆ. ಜತೆಗೆ ಆಗಲೇ ಹೇಳಿದಂತೆ ಭಾಷೆ ಕಲಿಯುವುದು ಕೂಡ ಸಿನಿಮಾಗೆ ಅಗತ್ಯವಲ್ಲವೇ?
ಕಾರ್ಮಿಕರು ಚೆನ್ನಾಗಿದ್ದರೆ ಅದೇ ಹಬ್ಬ: ವಿನೋದ್ ರಾಜ್
ಅವರು ಹಿಂದೆ ಹೇಳಿದಂತೆ ನಿಜಕ್ಕೂ ಅವರಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲವೇ?
ನೀವು ಕೇಳಿದ್ದು ಸರಿಯಾಗಿದೆ. ಅವಳಿಗೆ ಯಾವ ಭಾಷೆ ಕೂಡ ಸರಿಯಾಗಿ ಬರುವುದಿಲ್ಲ. ಅವಳು ಅಂದು ಸಂದರ್ಶನದ ವೇಳೆ ಹೇಳಿದ್ದು ಕೂಡ ಅದನ್ನೇ. ಆದರೆ ಚರ್ಚೆಯಾಗಿದ್ದು ಮಾತ್ರ `ರಶ್ಮಿಕಾ ಕನ್ನಡ ಗೊತ್ತಿಲ್ಲ' ಎಂದಿದ್ದಾಳೆ' ಎಂದು. ನಿಜ ಹೇಳಬೇಕೆಂದರೆ ಅವಳು ಮಾತೃಭಾಷೆ ಕೊಡವ ಕೂಡ ಸರಿಯಾಗಿ ಮಾತನಾಡಲಾರಳು. ಯಾಕೆಂದರೆ ನಾವು ಅವಳಲ್ಲಿ ಇಂಗ್ಲಿಷ್ ಮಾತನಾಡಿದ್ದೇ ಹೆಚ್ಚು. ನಾವು ಕರ್ನಾಟಕದಲ್ಲಿ ಹುಟ್ಟಿದರೂ ಕೊಡಗಿನವರಾದ ಕಾರಣ ನಮ್ಮ ಮಾತೃಭಾಷೆ ಕೊಡವ. ಆದರೆ ಕರ್ನಾಟಕದಲ್ಲಿ ಹುಟ್ಟಿರುವುದರಿಂದ ಕನ್ನಡದ ಮೇಲೆ, ಕನ್ನಡ ಭಾಷೆಯ ಬಗ್ಗೆ ಒಲವು, ಗೌರವ ನಮಗೆಲ್ಲರಿಗೂ ಬಂದೇ ಬರುತ್ತದೆ. ಆಂಗ್ಲ ಮಾಧ್ಯಮದಲ್ಲಿ ಕಲಿಯುವಾಗ ಸಹಜವಾಗಿ ಕನ್ನಡವನ್ನು ಥರ್ಡ್ ಲ್ಯಾಂಗ್ವೇಜ್ ಕಲಿಯುತ್ತೇವೆ. ಅದರ ಕುಂದು ಕೊರತೆಗಳು ಹಾಗೆಯೇ ಇರುತ್ತವೆ. ಹಾಗಾಗಿ ಗೊತ್ತಿಲ್ಲದಿರುವುದನ್ನು ಗೊತ್ತು ಎಂದು ತಪ್ಪು ಮಾತನಾಡುವ ಬದಲು ಸರಿಯಾಗಿ ಗೊತ್ತಿಲ್ಲ ಎಂದು ಆಕೆ ಹೇಳಿರುವುದೇ ಟ್ರೋಲ್ ಆಗಿತ್ತು. ನನಗೆ ಬೇಸರವಿಲ್ಲ. ಮುಂದೆ ಅವಳು ಹಠತೊಟ್ಟು ಸ್ಪಷ್ಟವಾಗಿ ಕಲಿತು ಮಾತನಾಡುತ್ತಾಳೆ ಎನ್ನುವ ಭರವಸೆ ಇದೆ.