ಫ್ರೆಂಚ್ ಬಿರಿಯಾನಿ ನಂತರ ಕಾಮಿಡಿ ಪಾತ್ರದ ನಿರೀಕ್ಷೆಯಲ್ಲಿ ದಿಶಾ ಮದನ್!
ಮದುವೆ ಬಳಿಕ ತಮ್ಮ ವೃತ್ತಿ ಬದುಕು ಮುಗಿಯಿತು ಎಂದುಕೊಳ್ಳುವ ಸಾಕಷ್ಟು ನಟಿಯರು ನಮ್ಮಲ್ಲಿದ್ದಾರೆ. ಆದರೆ ಮದುವೆಯ ಬಳಿಕ ಸಿನಿಮಾ ನಾಯಕಿಯಾಗಿದ್ದಾರೆ ದಿಶಾ ಮದನ್. ಹಾಗಂತ ಇವರು ಮದುವೆ ಆಗಿರುವುದನ್ನಾಗಲೀ, ಮಗುವಿಗೆ ತಾಯಿಯಾಗಿರುವುದನ್ನಾಗಲೀ ಯಾವತ್ತೂ ಅಡಗಿಸಿದವರಲ್ಲ. ಆದರೆ ದಿಶಾ ನಟನಾ ಪ್ರತಿಭೆಯ ಮುಂದೆ ಅಭಿಮಾನಿಗಳಿಗೆ ಅವೆಲ್ಲ ಒಂದು ವಿಷಯವೆಂದೇ ಅನಿಸಿಲ್ಲ.
ದಿಶಾ ಮದನ್ ಇತ್ತೀಚೆಗಷ್ಟೇ ಬಿಡುಗಡೆಯಾದ `ಫ್ರೆಂಚ್ ಬಿರಿಯಾನಿ' ಚಿತ್ರದ ನಾಯಕಿ, ಪ್ರಸ್ತುತ `ಹಂಬಲ್ ಪೊಲಿಟಿಷಿಯನ್ ನೊಗ್ರಾಜ್' ವೆಬ್ ಸೀರೀಸ್ ಮೂಲಕವೂ ಜನಪ್ರಿಯ ನಟಿ. ಖಳನಾಯಕಿ, ನಾಯಕಿ ಹೀಗೆ ವಿಭಿನ್ನ ಪಾತ್ರಗಳನ್ನು ನಿಭಾಯಿಸಿರುವ ಈಕೆಗೆ ಪ್ರಸ್ತುತ ಹಾಸ್ಯ ಪಾತ್ರಗಳನ್ನು ನಿಭಾಯಿಸುವ ಹುಮ್ಮಸ್ಸು! ವರ್ಷ ತುಂಬಿದ ಮಗುವಿನ ತಾಯಿಯಾಗಿದ್ದರೂ ತುಂಬಿ ನಿಂತಿರುವ ವರ್ಚಸ್ಸು. ಸಂಸಾರದ ಜತೆಗೆ ನಟನಾ ಬದುಕನ್ನೂಯಶಸ್ವಿಯಾಗಿ ನಿರವಹಿಸುತ್ತಿರುವ ದಿಶಾ ಒಂದು ರೀತಿಯಲ್ಲಿ ಯುವ ಕಲಾವಿದೆಯರಿಗೆ ಮಾದರಿ. ದಿಶಾ ಮದನ್ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇಲ್ಲಿದೆ.
- ಶಶಿಕರ ಪಾತೂರು
ಮದುವೆ ಮತ್ತು ಮಗು ಎನ್ನುವುದು ನಾಯಕಿಯಾಗಲು ಸಮಸ್ಯೆ ಆಗಲಿಲ್ಲ ಯಾಕೆ?
ನಾನು ಮದುವೆಯ ಬಳಿಕ ಸಹಜವಾಗಿ ಅವಕಾಶಗಳ ಬಗ್ಗೆ ನಿರೀಕ್ಷೆ ಇರಿಸಿಕೊಂಡಿರಲಿಲ್ಲ. ಆದರೆ ಡಾ. ಶಿವರಾಜ್ ಕುಮಾರ್ ಅವರ ನಿರ್ಮಾಣದ ವೆಬ್ ಸೀರೀಸ್‌ನಲ್ಲೇ ನಟಿಸುವ ಅವಕಾಶ ದೊರಕಿತು! `ಹೇಟ್ ಯು ರೋಮಿಯೋ' ಎನ್ನುವ ಆ ವೆಬ್ ಸೀರೀಸ್ ಬಳಿಕ ಪುನೀತ್ ರಾಜ್ ಕುಮಾರ್ ಪ್ರೊಡಕ್ಷನಲ್ಲಿ `ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲೇ ಅವಕಾಶ ಸಿಕ್ಕಿತು. ಈಗ `ಹಂಬಲ್ ಪೊಲಿಟಿಷಿಯನ್ ನೊಗ್ರಾಜ್' ವೆಬ್ ಸೀರೀಸ್‌ನಲ್ಲಿ ಮಾಡುತ್ತಿದ್ದೇನೆ. ಯಾವುದನ್ನು ಕೂಡ ನಾನಾಗಿ ಹುಡುಕಿಕೊಂಡು ಹೋಗಿದ್ದಲ್ಲ. ನಮ್ಮಲ್ಲಿ ಪ್ರತಿಭೆ ಇದ್ದರೆ, ಒಂದಲ್ಲ ಒಂದು ದಿನ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎನ್ನುವುದು ನನ್ನ ನಂಬಿಕೆ. ಅದೃಷ್ಟವಶಾತ್ ಆ ನಂಬಿಕೆ ನನ್ನ ಪಾಲಿಗೆ ನಿಜವಾಗಿರುವುದಕ್ಕೆ ಖುಷಿಯಿದೆ.
ಧಿರೇನ್ ಗೆ ಮಾಸ್ಕ್ ಗಿಫ್ಟ್ ಕೊಟ್ಟ ಧನ್ಯಾ
ನಿಮ್ಮ ಮೊದಲ ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಂಡಿಲ್ಲ ಎಂದು ಬೇಸರವಾಗಿಲ್ಲವೇ?
ಇಲ್ಲ. ಯಾಕೆಂದರೆ ನನಗೆ ಸಿನಿಮಾ ಒಟಿಟಿಯಲ್ಲಿ ಬಂದಿದ್ದು ಖುಷಿಯನ್ನೇ ತಂದಿದೆ. ಒಂದು ರೀತಿ ಥಿಯೇಟರಲ್ಲಿ ಬಿಡುಗಡೆಯಾದಷ್ಟೇ ಉತ್ಸಾಹ ನನ್ನಲ್ಲಿತ್ತು. ಯಾಕೆಂದರೆ ಅಮೆಜಾನ್ ಪ್ರೈಮ್ ಎನ್ನುವುದು ಎಷ್ಟು ದೊಡ್ಡ ಫ್ಲಾಟ್ಫಾರ್ಮ್ ಅಂದರೆ, ಅದರ ಮೂಲಕ ನಮ್ಮ ಚಿತ್ರ ವಿಶ್ವಮಟ್ಟದಲ್ಲಿ ಪ್ರೀಮಿಯರ್ ಶೋ ಕಾಣುವಂತಾಯಿತು. ಒಂದು ವೇಳೆ ಸಿನಿಮಾ ಥಿಯೇಟರಲ್ಲೇ ಬಿಡುಗಡೆಯಾಗಿದ್ದರೂ, ಅಮೆರಿಕಾದಲ್ಲಿರುವವರು ಸೇರಿದಂತೆ ವಿದೇಶದಲ್ಲಿದ್ದವರೆಲ್ಲ ನೋಡುತ್ತಿದ್ದರಾ ಗೊತ್ತಿಲ್ಲ. ಆದರೆ ಅಮೆಜಾನ್ ಮೂಲಕ ನೋಡಿದ ನನ್ನ ಫಾರಿನಲ್ಲಿರೋ ಫ್ರೆಂಡ್ಸ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಚಿತ್ರವು ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿದೆ ಎಂದುಕೊಂಡಿದ್ದೇನೆ.
ಕಾರ್ಮಿಕರು ಚೆನ್ನಾಗಿದ್ದರೆ ಅದೇ ಹಬ್ಬ: ವಿನೋದ್ ರಾಜ್
ನೀವು `ಕುಲವಧು' ಧಾರಾವಾಹಿಯಿಂದ ಹೊರಗೆ ಬಂದಿದ್ದು ಯಾಕೆ?
ಕುಲವಧು ಧಾರಾಹಿಯಲ್ಲಿ ಒಂದೂವರೆ ವರ್ಷಗಳ ಕಾಲ ಅಭಿನಯಿಸಿದೆ. ಅದರಲ್ಲಿ ನಾನು ವಚನಾ ಎನ್ನುವ ನೆಗೆಟಿವ್ ಲೀಡ್ ಮಾಡುತ್ತಿದ್ದೆ. ಒಂದು ಹಂತದಲ್ಲಿ ಶೆಡ್ಯೂಲ್ ಹೆವಿ ಅನಿಸಿತ್ತು. ಬೆಳಿಗ್ಗೆ ಆರೂವರೆಗೆ ಎದ್ದೇಳುವುದು, ಸಾಯಂಕಾಲ ಎಂಟು ಗಂಟೆ ತನಕ ಚಿತ್ರೀಕರಣದಲ್ಲಿ ಭಾಗಿಯಾಗುವುದು; ಆಮೇಲೆ ಮನೆಗೆ ಬರುವುದು.. ಇದರಲ್ಲೇ ದಿನ ಮುಗಿಯುತ್ತಿತ್ತು. ವೈಯಕ್ತಿಕವಾಗಿ ನನಗೆ ಸಮಯವೇ ಸಿಗುತ್ತಿರಲಿಲ್ಲ. ರಾತ್ರಿ ಚಿತ್ರೀಕರಣ ಇದ್ದಾಗಲಂತೂ ಟೈಮೇ ಸಿಗುತ್ತಿರಲಿಲ್ಲ. ತುಂಬಾನೇ ಕಷ್ಟವಾಗುತ್ತಿತ್ತು. ನನ್ನಮ್ಮ ಬೇರೆ "ಮದುವೆಯ ವಯಸ್ಸಾಯ್ತು, ಮದುವೆಯಾಗು" ಅಂತ ಹೇಳ್ತಾನೇ ಇದ್ದರು. ನನಗೂ ಅನಿಸ್ತು; ಇನ್ನು ತಡ ಮಾಡದೆ ಸೆಟ್ಲಾಗಬೇಕು ಎಂದು. ಹಾಗೆ ಕುಲವಧು ದಾರಾವಾಹಿ ತಂಡದಿಂದ ಹೊರಗೆ ಬಂದು ಮನೆ ಸೇರಿಕೊಂಡೆ. ಆ ಸಮಯದಲ್ಲೇ ಶಶಾಂಕ್ ದೊರಕಿದ್ರು. ಮದುವೆಯೂ ಆಯಿತು.
ಅಣ್ಣನ ಗುಟ್ಟು ಹೇಳಿದ ರಾಕಿಂಗ್ ಸ್ಟಾರ್ ಯಶ್ ತಂಗಿ
ನೀವು ಇಂಥದೊಂದು ಪಾತ್ರ ಮಾಡಲೇ ಬೇಕು ಎನ್ನು ನಿರೀಕ್ಷೆಯಲ್ಲಿದ್ದೀರ?
ಆಗಲೇ ಹೇಳಿದಂತೆ ನಾನು ಹೆಚ್ಚು ಯೋಜನೆಗಳನ್ನು ಹಾಕದೆ, ಒಳ್ಳೆಯ ಅವಕಾಶಗಳು ನನಗೆ ದೊರಕಿವೆ. ಮಾತ್ರವಲ್ಲ, ಇದುವರೆಗಿನ ಪ್ರಾಜೆಕ್ಟ್‌ಗಳಿಗೆ ತುಂಬ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಆದರೆ ನಟಿಯಾಗಿ ಯೋಚಿಸುವಾಗ ಕಾಮಿಡಿ ಸ್ಕ್ರಿಪ್ಟ್ ನಲ್ಲಿ ಮಾಡಲು ನನಗೆ ತುಂಬ ಆಸೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟಿಯರು ಬಹಳ ಕಡಿಮೆ ಇದ್ದಾರೆ. ಇಂಥ ಸಂದರ್ಭದಲ್ಲಿ ಕನ್ನಡದ ಹಾಸ್ಯನಟಿಯಾಗಿ ಗುರುತಿಸಲ್ಪಡಲು ಇಷ್ಟಪಡುತ್ತಿದ್ದೇನೆ. ಆಕ್ಚುಯಲಿ ಈಗಾಗಲೇ ತುಂಬ ಜನ ಹೇಳ್ತಿದ್ದಾರೆ; "ನೀವು ಕಾಮಿಡಿ ಪಾತ್ರಗಳನ್ನೇ ಮಾಡಿ; ತುಂಬ ಸೂಟ್ ಆಗ್ತೀರಿ" ಅಂತ. ಅವಕಾಶ ಕೊಟ್ಟರೆ ಖಂಡಿತವಾಗಿ ಮಾಡುತ್ತೇನೆ.