ಆರ್‌ ಕೇಶವಮೂರ್ತಿ

ಹಲೋ ಮೇಡಮ್‌ ಹೇಗಿದ್ದೀರಿ?

ನಾನು ತುಂಬಾ ಚೆನ್ನಾಗಿದ್ದೇನೆ. ನನ್ನ ಸಂತೋಷಕ್ಕೆ, ಖುಷಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗಿಲ್ಲ. ಅಪ್ಪ- ಅಮ್ಮನ ಜತೆ ಹಿಂದೆಗಿಂತ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ.

ನಿಮ್ಮನ್ನು ಫ್ರೀ ಮಾಡ್ಕೊಳಿ: ರಾಗಿಣಿ ಜಾಲಿ ಮೂಡ್, ಇಲ್ನೋಡಿ ಫೋಟೋಸ್ 

ಅರೆಸ್ಟ್‌ ಆಗಿದ್ದು, ಆ ಕೇಸು ಇದನ್ನು ನೀವು ಹೇಗೆ ನೋಡುತ್ತೀರಿ?

ಆ ಕೇಸಿನ ಬಗ್ಗೆ ಹೆಚ್ಚು ಮಾತನಾಡಲ್ಲ. ಯಾಕೆಂದರೆ ಅದರ ಅಗತ್ಯವೂ ಇಲ್ಲ ಅಂದುಕೊಳ್ಳುತ್ತೇನೆ. ಅದು ಕಾನೂನಿನ ವಿಷಯ. ಅದಕ್ಕೆ ಅಲ್ಲೇ ಪರಿಹಾರ, ಉತ್ತರ ಸಿಗುತ್ತದೆ. ಮತ್ತೆ ಮತ್ತೆ ಅದೇ ಘಟನೆಯನ್ನು ನೆನಪಿಸಿಕೊಂಡು ಅನಗತ್ಯವಾಗಿ ಆ ಬಗ್ಗೆ ಮಾತನಾಡಲಾರೆ.

ನಾನು ಮನೆಗೆ ಬಂದಾಗ ನಗು ನಗುತ್ತ ಕಂಡ ಅಪ್ಪ ಅಮ್ಮನನ್ನು ನೋಡಿದೆ. ಅದೇ ನನ್ನ ಅತ್ಯುತ್ತಮ ಗಿಫ್ಟ್‌. ಹೆತ್ತವರನ್ನು ನೋಡುವ ಸಂಭ್ರಮಕ್ಕಿಂತ ಮತ್ತೊಂದು ಖುಷಿ ಸಂಗತಿ ಇಲ್ಲ. ಹೊಸ ವರ್ಷಕ್ಕೆ ಅವರು ನನಗಾಗಿ ಇಟ್ಟಿದ್ದ ಗ್ರೀಟಿಂಗ್ಸ್‌ ನೋಡಿದೆ. ಮನಸ್ಸಿಗೆ ತುಂಬಾ ಸಂತಸವಾಯಿತು.

ನಿಮ್ಮನ್ನ ಈ ಪ್ರಕರಣದಲ್ಲಿ ಅನಗತ್ಯವಾಗಿ ಸಿಕ್ಕಿಸಿದರು ಅನಿಸುತ್ತಿದೆಯೇ?

ನಾನು ಆ ಬಗ್ಗೆ ಏನೂ ಮಾತನಾಡಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ. ನ್ಯಾಯ ಸಿಗುತ್ತದೆ. ಇದು ಕಾನೂನಿನ ವಿಚಾರ. ಹೀಗಾಗಿ ಆ ಕುರಿತು ಮಾತನಾಡುವ ವೇದಿಕೆ ಇದಲ್ಲ.

"

ಈ ಪ್ರಕರಣದಿಂದ ನಿಮ್ಮನ್ನು ನೋಡುವ ರೀತಿ ಬದಲಾಗುತ್ತದೆಯೇ?

ನಾನು ಚಿತ್ರನಟಿ ರಾಗಿಣಿ. ಕಲಾವಿದೆಯಾಗಿ ಗುರುತಿಸಿಕೊಳ್ಳುವ ಜತೆಗೆ ನನ್ನದೇ ರಾಗಿಣಿ ದ್ವಿವೇದಿ ಫೌಂಡೇಷನ್‌ ಮೂಲಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದೇನೆ. ಸಾಮಾಜಿಕ ಸೇವೆ ಮತ್ತು ಸಿನಿಮಾ ಎರಡನ್ನೂ ಮುಂದುವರಿಸುತ್ತೇನೆ.

ನಿಮ್ಮ ಬಯೋಡೇಟಾ ಹೇಳುತ್ತಿದ್ದೀರಲ್ಲ?

ಅಂದರೆ ನಾನು ಬದಲಾಗಿಲ್ಲ. ಅದೇ ರಾಗಿಣಿ. ಬೇರೆಯವರ ನೋಡುವ ದೃಷ್ಟಿಕೋನದ ಬಗ್ಗೆ ನಾನು ಮಾತನಾಡಲಾರೆ. ಆಗಲೇ ಹೇಳಿದ್ನಲ್ಲಾ, ಆ ಪ್ರಕರಣದ ಕುರಿತು ನಾನು ಮತ್ತೆ ಮತ್ತೆ ಮಾನಾಡಲ್ಲ. ನಾನು ಏನೂ ಎಂಬುದು ನನ್ನ ಕುಟುಂಬಕ್ಕೆ ಗೊತ್ತು. ಹೆತ್ತವರ ಪ್ರೀತಿ ಎಂದಿನಂತೆ ಇದೆ. ಸ್ನೇಹಿತರು ಎಂದಿನಂತೆ ಮಾತನಾಡಿಸುತ್ತಿದ್ದಾರೆ.

ನಟಿ ರಾಗಿಣಿ ವಾಟ್ಸಪ್‌ ಡಿಪಿ ಬದಲು; ಅರ್ಥ ತಿಳಿಯದೆ ನೆಟ್ಟಿಗರು ಕಂಗಾಲು! 

ಆದರೆ, ಈ ಪ್ರಕರಣ ನಿಮ್ಮ ಮನೋಸ್ಥೈರ್ಯ, ಶಕ್ತಿಯನ್ನು ಕುಂದಿಸಿದೆಯೇ?

ಖಂಡಿತ ಇಲ್ಲ. ನನ್ನ ಶಕ್ತಿ ನನ್ನ ಕುಟುಂಬ. ಅವರು ನನ್ನ ಜತೆಗೆ ನಿಂತಿದ್ದಾರೆ. ಹೀಗಾಗಿ ನನ್ನ ಫ್ಯಾಮಿಲಿ ಶಕ್ತಿಯನ್ನು ಯಾವತ್ತೂ ಕಡಿಮೆ ಮಾಡಲಾಗದು. ಅದು ಸಾಧ್ಯವೂ ಇಲ್ಲ.

ಈ ಸಂಕಷ್ಟ ಸಂದರ್ಭವನ್ನು ನೀವು ಹೇಗೆ ನಿಭಾಯಿಸಿದ್ರಿ?

ನನ್ನ ಅಪ್ಪ- ಅಮ್ಮ ಒಳ್ಳೆಯ ರೀತಿಯಲ್ಲಿ ಬೆಳೆಸಿದ್ದಾರೆ. ಏನೇ ಕಷ್ಟಬಂದರೂ ಅದನ್ನು ಎದುರಿಸಿ ನಿಲ್ಲಬೇಕು ಎನ್ನುವ ಹೆತ್ತವರ ಮಾತುಗಳು ನನಗೆ ನೆನಪಾಗುತ್ತಿದ್ದವು. ಯಾಕೆಂದರೆ ಸ್ಟ್ರಗಲ್‌ ಇಲ್ಲದೆ ಜೀವನ ಇಲ್ಲ ಅನ್ನೋದು ಗೊತ್ತು. ಇದರಲ್ಲಿ ನಿಭಾಯಿಸೋ ಪ್ರಶ್ನೆಯೇ ಬರಲ್ಲ.

ಹೊಸ ವರ್ಷ ಈಗಷ್ಟೆ ಆರಂಭವಾಗಿದೆ. ನಿಮ್ಮ ಪ್ಲಾನ್‌ಗಳೇನು?

ಹೊಸ ವರ್ಷ ಬಂದಿದೆ. 2020 ನಮಗೆ ಅಷ್ಟೇನು ಒಳ್ಳೆಯದಾಗಿ ಕಾಣಲಿಲ್ಲ. ಕೊರೋನಾ ಎಲ್ಲರನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ. ಜೀವನದ ಪಾಠ ಕಲಿತಿದ್ದೇವೆ. ಮತ್ತಷ್ಟು ಉತ್ಸಾಹದಿಂದ ಒಳ್ಳೆಯ ಕೆಲಸಗಳನ್ನು ಮಾಡಬೇಕಿದೆ. ಯಾಕೆಂದರೆ ಒಳ್ಳೆಯದು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನನ್ನ ರಾಗಿಣಿ ದ್ವಿವೇದಿ ಫೌಂಡೇಷನ್‌ನಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಮುಂದುವರಿಸಬೇಕಿದೆ.

ಸಿನಿಮಾ ಯಾವಾಗ ಶುರುವಾಗಲಿದೆ?

ಈಗಷ್ಟೆ ನಾಲ್ಕು ಕತೆಗಳನ್ನು ಕೇಳಿದ್ದೇನೆ. ಈ ಪೈಕಿ ಒಳ್ಳೆಯ ಕತೆಯನ್ನು ಆಯ್ಕೆ ಮಾಡಿಕೊಂಡು ಮುಂದುವರಿಯುತ್ತೇನೆ. ಸದ್ಯದಲ್ಲೇ ನನ್ನ ಹೊಸ ಸಿನಿಮಾ ಘೋಷಣೆ ಆಗಲಿದೆ. ನಾನು ಕೇಳಿರುವ ಕತೆಗಳು ಕೂಡ ಚೆನ್ನಾಗಿವೆ. ಮಹಿಳಾ ಪ್ರಧಾನ ಕತೆಗಳು. ಹೀಗಾಗಿ ಅವರೇ ಘೋಷಣೆ ಮಾಡಲಿ ಎಂದು ಕಾಯುತ್ತಿದ್ದೇನೆ.

ಶೂಟಿಂಗ್‌ ಹಂತದಲ್ಲಿರುವ ನಿಮ್ಮ ನಟನೆಯ ಚಿತ್ರಕ್ಕೆ ಯಾವಾಗ ಜತೆಯಾಗುತ್ತೀರಿ?

ಜೋಗಿ ಪ್ರೇಮ್‌ ಅವರು ನಾಯಕನಾಗಿ ನಟಿಸಿರುವ ‘ಗಾಂಧಿಗಿರಿ’ ಚಿತ್ರದ ಶೂಟಿಂಗ್‌ ಬಾಕಿ ಇದೆ. 15 ರಿಂದ 20 ದಿನ ನನ್ನ ಪಾತ್ರದ ಚಿತ್ರೀಕರಣ ನಡೆಯಲಿದೆ. ಈಗ ಸದ್ಯಕ್ಕೆ ಆರೋಗ್ಯ ಸಮಸ್ಯೆ ಇದೆ. ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ಚಿತ್ರತಂಡದವರು ಯಾವಾಗ ಪ್ಲಾನ್‌ ಮಾಡುತ್ತಾರೋ ಆಗ ಚಿತ್ರೀಕರಣಕ್ಕೆ ಹಾಜರಾಗುತ್ತೇನೆ. ಈಗ ಆರೋಗ್ಯ ಕಡೆ ಹೆಚ್ಚು ಗಮನ ಕೊಟ್ಟಿದ್ದೇನೆ.