ನೋಡಲು ನಟ ದರ್ಶನ್ ತರ: ನಿರ್ದೇಶಕನಾಗೋ ಕನಸು ಹೊತ್ತ ಪ್ರಮೋದ್!
`ಪ್ರೀಮಿಯರ್ ಪದ್ಮಿನಿ' ಚಿತ್ರ ನೋಡಿದವರು ಸಿನಿಮಾದ ಕತೆಯ ಜತೆಗೆ ಮರೆಯದ ಪಾತ್ರವೊಂದಿದ್ದರೆ ಅದು ಪ್ರಮೋದ್ ಅವರದ್ದು! ಅದಕ್ಕೆ ಕಾರಣ ಪ್ರಮೋದ್ ಅವರಲ್ಲಿನ ಅಭಿನಯ ಪ್ರತಿಭೆ ಎನ್ನುವುದನ್ನು ಒಪ್ಪಲೇಬೇಕು. ಇದೀಗ ಅವರು ತಮ್ಮ ಬಹುಮುಖ ಪ್ರತಿಭೆಯನ್ನು ತೋರಿಸುವ ಹಾದಿಯಲ್ಲಿದ್ದಾರೆ.
ಮೊದಲ ನೋಟದಲ್ಲೇ ಆಕರ್ಷಕ ಎನಿಸುವ ವ್ಯಕ್ತಿ. ಮಾತುಗಳಲ್ಲಿಯೂ ಸೆಳೆಯಬಲ್ಲ ಶಕ್ತಿ. ಒಬ್ಬ ಸಿನಿಮಾ ನಾಯಕನಿಗೆ ಇರಬೇಕು ಎಂದು ಬಯಸುವಂಥ ಹೈಟು, ವೈಟು ಎಲ್ಲ ಇದ್ದರೂ ರೈಟ್ ಟೈಮ್ ಬರೋದಕ್ಕೆ ಕಾಯಬೇಕಾಗುತ್ತದೆ ಎನ್ನುವುದಕ್ಕೆ ಪ್ರಮೋದ್ ಉದಾಹರಣೆ. ನಟಿಸಿದ ಪ್ರಥಮ ಚಿತ್ರ 'ಗೀತಾ ಬ್ಯಾಂಗಲ್ ಸ್ಟೋರ್'ನಲ್ಲೇ ನೈಜ ನಟನೆಯಿಂದ ಗಮನ ಸೆಳೆದಿದ್ದ ಪ್ರಮೋದ್ ಜನಪ್ರಿಯನಾಗಲು ಬರೋಬ್ಬರಿ ಐದು ವರ್ಷ ಕಾಯಬೇಕಾಯಿತು. ಆದರೆ ಇಲ್ಲಿ ಜನಪ್ರಿಯತೆಗಿಂತಲೂ ನಟಿಸಿದ ಚಿತ್ರ ಗೆದ್ದಾಗ ಮಾತ್ರ ಅದು ಚಿತ್ರೋದ್ಯಮದಿಂದ ಗರುತಿಸಲ್ಪಡುತ್ತದೆ ಎನ್ನುವುದನ್ನು ಅರಿತಿರುವ ಪ್ರಮೋದ್ ಇದೀಗ ಅಂಥ ಪ್ರಯತ್ನದಲ್ಲಿದ್ದಾರೆ. ಕಳೆದ ವರ್ಷ `ಪ್ರೀಮಿಯರ್ ಪದ್ಮಿನಿ' ಮತ್ತು `ಮತ್ತೆ ಉದ್ಭವ' ಚಿತ್ರಗಳ ವಿಭಿನ್ನ ಪಾತ್ರಗಳಿಂದ ಪ್ರೇಕ್ಷಕರ ಮನಗೆದ್ದ ಪ್ರಮೋದ್ ತಮ್ಮ ಹೊಸ ಯೋಜನೆಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ.
- ಶಶಿಕರ ಪಾತೂರು
ನೀವು ಮದ್ದೂರಿಗೆ ಹೋಗಿದ್ದೀರೆಂಬ ಸುದ್ದಿಯಿತ್ತು. ಈಗ ಎಲ್ಲಿದ್ದೀರ?
ಹೌದು, ಮದ್ದೂರಲ್ಲಿದ್ದೆ. ಎಂಟು ವರ್ಷಗಳ ಬಳಿಕ ಅಷ್ಟು ಸಮಯವನ್ನು ಮದ್ದೂರಲ್ಲಿ ಕಳೆದೆ. ಕಾರಣ ಇಲ್ಲಿ ಲಾಕ್ಡೌನ್ ಆಗಿದ್ದರಿಂದ ಮನೆಯಿಂದ ಹೊರಗೆ ಬರುವಂತಿರಲಿಲ್ಲ. ಆದರೆ ನಮ್ಮೂರು ಹಾಗಲ್ಲ, ಮೊದಲು ಹೇಗೆ ಕೃಷಿ, ಈಜು ಮೊದಲಾದ ಸಂಭ್ರಮದಲ್ಲಿ ಬದುಕು ಕಳೆಯುತ್ತಿದ್ದೆನೋ ಅದೇ ರೀತಿ ಕಳೆಯಲು ಸಾಧ್ಯವಾಯಿತು. ಹಾಗಂತ ಈ ಬಾರಿ ಒಂದಷ್ಟು ಜವಾಬ್ದಾರಿ ಇತ್ತು. ಮದ್ದೂರಲ್ಲಿದ್ದರೂ ಸಿನಿಮಾರಂಗ ಕಾಡುತ್ತಲೇ ಇತ್ತು. ಮನದಲ್ಲಿದ್ದ ಕತೆಗೆ ಚಿತ್ರಕತೆ ತಯಾರು ಮಾಡಿದೆ. ನಾಲ್ಕು ವರ್ಷಗಳ ಹಿಂದೆ ಅಂದುಕೊಂಡಿದ್ದಂಥ ಕತೆ ಅದು. ಲವ್ ಆಕ್ಷನ್, ಡ್ರಾಮ ಎಲ್ಲವೂ ಅದರಲ್ಲಿದೆ. ನನ್ನ ಸೇಹಿತರೇ ಆ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ನನ್ನದೇ ಕತೆ ಆಗಿರುವ ಕಾರಣ ನಾನೇ ನಿರ್ದೇಶಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದೇನೆ. ಪ್ರಧಾನ ಪಾತ್ರದಲ್ಲಿ ನಾನೇ ಕಾಣಿಸಿಕೊಳ್ಳಲಿದ್ದೇನೆ.
ಕಾಮಿಡಿ ಪಾತ್ರದ ನಿರೀಕ್ಷೆಯಲ್ಲಿ ಫ್ರೆಂಚ್ ಬಿರಿಯಾನಿ ದಿಶಾ
ಚಿತ್ರೀಕರಣ ಶುರುವಾದೊಡನೆ ನಿಮ್ಮ ನಿರ್ದೇಶನದ ಸಿನಿಮಾ ಆರಂಭವಾಗುವುದೇ?
ಹೇಯ್ ಇಲ್ಲ ಇಲ್ಲ. ಅದಕ್ಕೆ ಇನ್ನೂಸಮಯವಿದೆ. ಅದನ್ನುಮುಂದಿನ ವರ್ಷಾಂತ್ಯದೊಳಗೆ ತೆರೆಗೆ ತರುವಂಥ ದೀರ್ಘವಾದ ಯೋಜನೆಯಲ್ಲಿಟ್ಟಿದ್ದೇನೆ. ಸದ್ಯಕ್ಕೆ ನಾಯಕನಾಗಿ ನಟಿಸಲು ಒಳ್ಳೊಳ್ಳೆಯ ಆಫರ್ಸ್ ಬರುತ್ತಿವೆ. ಆದರೆ ಸ್ವಲ್ಪ ಹುಷಾರಾಗಿ ಆಯ್ಕೆ ಮಾಡಬೇಕು ಅನಿಸ್ತು. ಆಗ ಸಿಕ್ಕಿದ್ದೇ `ಇಂಗ್ಲಿಷ್ ಮಂಜ' ಎನ್ನುವ ಚಿತ್ರ. ಲೂಸ್ ಮಾದ ಯೋಗಿ ಅವರ `ಕೋಲಾರ' ಚಿತ್ರದ ನಿರ್ದೇಶಕ ಆರ್ಯ ಮಹೇಶ್ ಅವರು ನಿರ್ದೇಶಕರು. ಅವರೇ ಫೋನ್ ಮಾಡಿ, ಇಂಗ್ಲಿಷ್ ಮಂಜ ಎನ್ನುವ ಚಿತ್ರ ಮಾಡಿರುವುದಾಗಿ ಹೇಳಿದ್ರು. ಅವರು ಹೇಳಿದ ಕತೆಯ ಲೈನ್ ತುಂಬ ಇಷ್ಟವಾಯ್ತು. ಮೊದಲ ಬಾರಿ ಟೈಟಲ್ ರೋಲ್ ಮಾಡುತ್ತಿದ್ದೇನೆ ಎನ್ನುವ ಖುಷಿಯೂ ಇದೆ. ಫ್ರೆಂಡ್ಷಿಪ್, ಲವ್ ಎಲ್ಲವೂ ಬೆರೆತು ಒಂದು ರೀತಿ ತಮಿಳು ನೇಟಿವಿಟಿ ಇಟ್ಕೊಂಡ, ಆದರೆ ಕನ್ನಡ ಪ್ರೇಕ್ಷಕರು ಮೆಚ್ಚಬಹುದಾದ ಕತೆ. ಒಟ್ಟಿನಲ್ಲಿ ನಾನು ಹುಡುಕುತ್ತಿದ್ದ ಪಾತ್ರ ತಾನಾಗಿಯೇ ದೊರಕಿದಂತಾಗಿದೆ. ಇದೇ ತಿಂಗಳಾಂತ್ಯದಲ್ಲಿ ಚಿತ್ರೀಕರಣ ಮಾಡುವ ಯೋಜನೆ ಇದೆ.
ಪ್ರೀಮಿಯರ್ ಪದ್ಮಿನಿ ಪ್ರಮೋದ್ ಫೋಟೋ ಗ್ಯಾಲರಿ
ಕಾರ್ಮಿಕರು ಚೆನ್ನಾಗಿದ್ದರೆ ಅದೇ ಹಬ್ಬ: ವಿನೋದ್ ರಾಜ್
ಬೇರೆ ಹೊಸ ಸಿನಿಮಾಗಳ ಚರ್ಚೆ ನಡೆದಿದೆಯೇ?
ಎಲ್ಲವೂ ಚರ್ಚೆಯ ಹಂತದಲ್ಲೇ ಇದೆ. ನನಗೆ ಯೋಗರಾಜ್ ಭಟ್ ತಂಡದ ಕಡೆಯಿಂದ ಒಂದು ಚಿತ್ರ ಸಿಕ್ಕಿತ್ತು. ಅವರ ತಂಡದವರೇ ಸೇರಿ 'ಮಂಗಳವಾರ ರಜಾದಿನ' ಎನ್ನುವ ಸಿನಿಮಾ ಮಾಡಿದ್ದಾರೆ. ನಿರ್ಮಾಣವೂ ಅವರೇ ಮಾಡಬೇಕಿತ್ತು. ಆದರೆ ಅವರು ಮಂಗಳವಾರ ರಜಾದಿನ ಬಿಡುಗಡೆಯ ಬಳಿಕ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ನನಗೇಕೋ ಅದು ತಡವಾಗಬಹುದು ಅನಿಸಿತು. ಬೇರೆಯವರ ನಿರ್ಮಾಣದಲ್ಲಿ ಚಿತ್ರ ಮಾಡುವುದಾದರೆ ಸಹಕರಿಸಲು ತಂಡ ತಯಾರಿತ್ತು. ಹಾಗೆ `ಮತ್ತೆ ಉದ್ಭವ' ಚಿತ್ರದ ನಿರ್ಮಾಪಕ ನಿತ್ಯಾನಂದ ಭಟ್ ಅವರೇ ಈ ಹೊಸ ಚಿತ್ರಕ್ಕೂ ನಿರ್ಮಾಪಕರಾದರು. ಚಿತ್ರದ ಹೆಸರು `ಹಂಡ್ರೆಡ್ ಮಂಕೀಸ್'. ನನ್ನ ಮತ್ತು ಸ್ನೇಹಿತರ ಪ್ರಯಾಣದ ಕತೆ. `777 ಚಾರ್ಲಿ' ಚಿತ್ರದ ನಾಯಕಿ ಸಂಗೀತಾ ಶೃಂಗೇರಿ ನನಗೆ ಜೋಡಿಯಾಗಿದ್ದಾರೆ. ಅದರಲ್ಲಿ ಅಚ್ಯುತ್ ಕುಮಾರ್ ಕೂಡ ಇದ್ದಾರೆ. `ಚಿತ್ರಕಥಾ' ಸಿನಿಮಾದ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. `ಮೂರುಗಂಟು' ಧಾರಾವಾಹಿ ಮತ್ತು `99' ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿರುವ ಹುಡುಗಿಯೂ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ.