ಭಾರತ ಉದಯೋನ್ಮುಖ ಸೂಪರ್‌ಪವರ್ : ನರೇಂದ್ರ ಮೋದಿ
ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಖ್ಯಾತ ನ್ಯೂಸ್‌ವೀಕ್ ಮ್ಯಾಗಜಿನ್‌ಗೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ನೆರೆ ಹೊರೆ ದೇಶಗಳ ಜೊತೆಗಿನ ಸಂಬಂಧ, ಲೋಕಸಭಾ ಚುನಾವಣೆ, ಭಾರತದಲ್ಲಿ ಪ್ರಜಾಪ್ರಭುತ್ವ, ಮುಕ್ತ ಪತ್ರಿಕಾ ಸ್ವಾತಂತ್ರ್ಯ, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಡಿಜಿಟಲ್ ಕ್ಷೇತ್ರ.. ಮುಕ್ತವಾಗಿ ತಿಳಿಸಿದ್ದಾರೆ.
ಅಮೆರಿಕದ ನ್ಯೂಸ್ ವೀಕ್ ಪತ್ರಿಕೆಗೆ ನರೇಂದ್ರ ಮೋದಿ ಸಂದರ್ಶನ
ಲೋಕಸಭೆ ಚುನಾವಣೆ ಆರಂಭವಾಗಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಖ್ಯಾತ ನ್ಯೂಸ್‌ವೀಕ್ ಮ್ಯಾಗಜಿನ್‌ಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನೆರೆ ಹೊರೆ ದೇಶಗಳ ಜೊತೆಗಿನ ಸಂಬಂಧ, ಲೋಕಸಭಾ ಚುನಾವಣೆ, ಭಾರತದಲ್ಲಿ ಪ್ರಜಾಪ್ರಭುತ್ವ, ಮುಕ್ತ ಪತ್ರಿಕಾ ಸ್ವಾತಂತ್ರ್ಯ, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಡಿಜಿಟಲ್ ಕ್ಷೇತ್ರದಲ್ಲಿನ ಭಾರತದ ಸಾಧನೆ ಸೇರಿ ಹಲವು ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದ ಕುರಿತು ಮ್ಯಾಗಜಿನ್ ತನ್ನ ಮುಖಪುಟದಲ್ಲಿ ‘ಪ್ರಧಾನಿ ನರೇಂದ್ರ ಮೋದಿ ಆ್ಯಂಡ್ ಅನ್‌ಸ್ಟಾಪಬಲ್ ರೈಸ್ ಆಫ್ ಇಂಡಿಯಾ’ ಎಂಬ ತಲೆ ಬರಹ ನೀಡಿದೆ. ಹೀಗೆ ಮ್ಯಾಗಜಿನ್ ಮುಖಪುಟ ಅಲಂಕರಿಸುವ ಮೂಲಕ ಇಂದಿರಾ ಗಾಂಧಿ ಬಳಿಕ ಮ್ಯಾಗಜಿನ್ ಮುಖಪುಟ ಅಲಂಕರಿಸಿದ ಭಾರತದ ಮೊದಲ ಪ್ರಧಾನಿ ಎಂಬ ದಾಖಲೆಗೂ ಮೋದಿ ಪಾತ್ರವಾಗಿದ್ದಾರೆ.
ಲೋಕಸಭಾ ಚುನಾವಣೆ : ನಮ್ಮ ದಶಕದ ಆಡಳಿತಾವಧಿಯಲ್ಲಿ ಜನರಿಗೆ ನೀಡಿದ ಭರವಸೆ ಈಡೇರಿಸಿದ್ದೇವೆ. ‘ಸಬ್ ಕಾ ಸಾಥ್ , ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್’ ಎನ್ನುವ ಮಾತಿನಂತೆ ದೇಶದ ಪ್ರತಿ ನಾಗರಿಕನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಯೋಜನೆ ಜಾರಿಗೆ ತಂದಿದ್ದೇವೆ. ಭಾರತವು11ನೇ ಅತಿದೊಡ್ಡ ಆರ್ಥಿಕತೆ ಹೊಂದಿದ್ದ ದೇಶವಾಗಿತ್ತು. ಆದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅದು 5ನೇ ಸ್ಥಾನ ತಲುಪಿದೆ. ಶೀಘ್ರದಲ್ಲಿಯೇ ಮೂರನೇ ಸ್ಥಾನಕ್ಕೆ ತಲುಪಬೇಕು ಎನ್ನುವ ಗುರಿ ಹೊಂದಿದೆ.
ಸಾಮಾನ್ಯವಾಗಿ ಸತತವಾಗಿ ಎರಡನೇ ಸಲ ದೇಶದಲ್ಲಿ ಒಂದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದರೆ ಆ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸಬೇಕಾಗುತ್ತದೆ. ಆದರೆ ಭಾರತ ಇದಕ್ಕೆ ಅಪವಾದ. ಮೂರನೇ ಬಾರಿಯೂ ದೇಶದ ಜನತೆ ನಮಗೆ ಆಶೀರ್ವಾದ ಮಾಡಲಿದ್ದಾರೆ.
ಭಾರತ-ಚೀನಾ ನಡುವಿನ ಶಾಂತಿ, ಎರಡು ದೇಶಗಳಿಗೆ ಮಾತ್ರವಲ್ಲ ಜಗತ್ತಿಗೆ ಮುಖ್ಯ: ಪ್ರಧಾನಿ ಮೋದಿ
ಪ್ರಜಾಪ್ರಭುತ್ವ, ಮುಕ್ತ ಪತ್ರಿಕಾ ಸ್ವಾತಂತ್ರ್ಯಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ನಮ್ಮ ದೇಶದ ಗಣತಂತ್ರ ವ್ಯವಸ್ಥೆ ಕೇವಲ ಮಾತಿಗೆ ಸಿಮೀತವಾಗಿಲ್ಲ. ರಕ್ತಗತವಾಗಿ ಬಂದಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ 60 ಕೋಟಿ ಮತದಾರರು ತಮ್ಮ ಮತ ಚಲಾಯಿಸಿದ್ದರು. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 95 ಕೋಟಿಗೂ ಅಧಿಕ ಜನ ಮತ ಚಲಾವಣೆ ಮಾಡಲಿದ್ದಾರೆ. ಇದಕ್ಕಾಗಿ 10 ಲಕ್ಷಕ್ಕೂ ಹೆಚ್ಚು ಮತಗಟ್ಟೆ ಸ್ಥಾಪಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಮತದಾರರ ಪ್ರಮಾಣ, ದೇಶದ ಜನತೆಗೆ ಪ್ರಜಾಪ್ರಭುತ್ವದ ಮೇಲಿರುವ ನಂಬಿಕೆ ತೋರಿಸುತ್ತದೆ.ಭಾರತದಲ್ಲಿ ಪ್ರಜಾಪ್ರಭುತ್ವ ಸುಸೂತ್ರವಾಗಿ ಕಾರ್ಯನಿರ್ವಹಿಸುವುದಕ್ಕೆ ಮಾಧ್ಯಮಗಳ ಪಾತ್ರ ಬಹುಮುಖ್ಯ. ನಮ್ಮ ದೇಶದಲ್ಲಿ 1.5 ಲಕ್ಷಕ್ಕೂ ಅಧಿಕ ನೋಂದಾಯಿತ ಮಾಧ್ಯಮ ಪ್ರಕಟಣೆಗಳು ಹಾಗೂ ನೂರಕ್ಕೂ ಹೆಚ್ಚು ಸುದ್ದಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಜನರ ಮಾತಿಗೆ ಧ್ವನಿಯಾಗುವ ಕೆಲಸವನ್ನು ಮಾಧ್ಯಮ ಸಂಸ್ಥೆಗಳು ನಿರ್ವಹಿಸುತ್ತಿವೆ .
ಮೂಲ ಸೌಕರ್ಯ ಮತ್ತು ಪರಿಸರಕಳೆದ 10 ವರ್ಷಗಳಲ್ಲಿ ನಮ್ಮ ದೇಶದ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ ಶೇ.60 ರಷ್ಟು ಹೆಚ್ಚಳವಾಗಿದೆ. 91,287 ಕಿ. ಮೀ.ಗಳಿಂದ 1,46,145 ಕಿ.ಮೀ.ಗಳಿಗೆ ಹೆಚ್ಚಿಸಿದ್ದೇವೆ. 2014ಕ್ಕಿಂತ 2024ರಲ್ಲಿ ದೇಶದಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಳಿಸಿದ್ದೇವೆ. ಸಾಗರಮಾಲಾ ಯೋಜನೆಯ ನೆರವಿನಿಂದ ದೇಶದ ಬಂದರು ಸಾಮರ್ಥ್ಯ ಹೆಚ್ಚಿಸಿದ್ದೇವೆ. ನಾಗರಿಕರ ನೆರವಿಗಾಗಿ ವಂದೇ ಭಾರತ್ , ಸಾಮಾನ್ಯ ಜನರು ಕೂಡ ಹಾರಾಟ ನಡೆಸಲು ಉಡಾನ್ ಯೋಜನೆ ಪ್ರಾರಂಭಿಸಿದ್ದೇವೆ.
ದೇಶದ ಪ್ರತಿ ರಸ್ತೆಗಳು ಪ್ರಗತಿಯ ಹಾದಿ, ವಿಮಾನ ನಿಲ್ದಾಣಗಳು ಅವಕಾಶಗಳ ಕಿಟಕಿ, ರೈಲ್ವೆ ನಿಲ್ದಾಣಗಳು ಸ್ಥಳೀಯ ಆರ್ಥಿಕತೆಗೆ ಬೆಂಬಲ ನೀಡಲಿದೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ವಿಮಾನಯಾನದ ಸೌಲಭ್ಯಗಳು ಮತ್ತಷ್ಟು ವೇಗ ಪಡೆಯಲಿದೆ.ಮೂಲಭೂತ ಯೋಜನೆಗಳು ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಮೂಲಭೂತ ಸೌಕರ್ಯಗಳನ್ನು ಜನತೆಗೆ ಕಲ್ಪಿಸುವುದರ ಜೊತೆಗೆ ಅದು ಪರಿಸರಕ್ಕೆ ಹೇಗೆ ಪೂರಕವಾಗಬಹುದು ಎನ್ನುವ ಸಾಧ್ಯತೆ ಕಂಡುಕೊಂಡಿದ್ದೇವೆ.
ಛಾವಣಿಯ ಸೌರ ಕಾರ್ಯಕ್ರಮದ ಮೂಲಕ 1 ಕೋಟಿ ಮನೆ ಬೆಳಗಿಸಿದ್ದೇವೆ. ಸೌರಶಕ್ತಿ ಚಾಲಿತ ಪಂಪ್‌ಗಳ ಮೂಲಕ ರೈತರಿಗೆ ನೆರವಾಗಿದ್ದೇವೆ. ಒಂದು ದಶಕದಲ್ಲಿ ಸೌರಶಕ್ತಿ ಬಳಕೆಯಲ್ಲಿಯೂ ಗಣನೀಯ ಏರಿಕೆ ದಾಖಲಾಗಿದೆ. ದೇಶದಲ್ಲಿ ಸೌರಶಕ್ತಿ ಸಾಮರ್ಥ್ಯವು 2014 ರಿಂದ 2024ರ ಅವಧಿಗೆ 2,820 ಮೆಗಾವ್ಯಾಟ್‌ನಿಂದ 72,000 ಮೆಗಾವ್ಯಾಟ್‌ಗೆ ತಲುಪಿದೆ. ಇನ್ನು ಭಾರತ ಕೈಗೊಂಡಿರುವ ಭವಿಷ್ಯದ ಯೋಜನೆಗಳು ಕೂಡ ಹವಾಮಾನ ಸುಧಾರಣೆಯ ವಿಚಾರದಲ್ಲಿ ದೇಶದ ಭದ್ರತೆ ತೋರಿಸುತ್ತದೆ.
ಚೀನಾದ ಜೊತೆಗೆ ಸ್ಪರ್ಧೆ ಭಾರತ ಇತ್ತೀಚಿನ ದಿನಗಳಲ್ಲಿ ಆರ್ಥಿಕ ವಲಯದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಅದು ಜಗತ್ತಿನ ಇತರ ದೇಶಗಳ ಜೊತೆಗೆ ಸ್ಪರ್ಧೆಗೆ ನೆರವಾಗಲಿದೆ. ಸರಕು ಮತ್ತು ಸೇವಾ ತೆರಿಗೆ, ಎಫ್‌ಡಿಎ ನಿಯಮಗಳಲ್ಲಿ ಸಡಿಲಿಕೆಯಂತಹ ಕಾನೂನಿನಿಂದ ವ್ಯಾಪಾರ ವಹಿವಾಟುಗಳಲ್ಲಿಯೂ ಗಣನೀಯವಾಗಿ ಏರಿಕೆ ಕಂಡಿದ್ದೇವೆ. ಇದರ ಪರಿಣಾಮವಾಗಿಯೇ ನಾವು ಮೂಲಭೂತ ಸೌಕರ್ಯಗಳ ವಿಚಾರದಲ್ಲಿಯೂ ಜಾಗತಿಕ ಮಟ್ಟದಲ್ಲಿ ಸುಧಾರಣೆ ಕಂಡಿದ್ದೇವೆ. ಒಂದು ದೇಶವು ವಿಶ್ವದ ಆರನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದ್ದರೆ ಅದು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಆ ದೇಶದ ಬಲವನ್ನು ಹೆಚ್ಚಿಸುತ್ತದೆ. ಆ ವಿಚಾರದಲ್ಲಿ ಭಾರತವೂ ಸಫಲತೆಯನ್ನು ಕಂಡಿದೆ. ಹಲವು ಉತ್ಪಾದನಾ ಘಟಕಗಳನ್ನು ಹೊಂದಿರುವ ಭಾರತವು ಸ್ಪರ್ಧಾತ್ಮಕವಾಗಿಯೂ ಇತರ ದೇಶಗಳಿಗೆ ಪೈಪೋಟಿ ನೀಡುತ್ತಿದೆ.
ಡಿಜಿಟಲ್ ಪಾವತಿ, ಯುಪಿಐ ದೇಶದಲ್ಲಿ ಯಪಿಐ ಎಲ್ಲ ಅಡೆತಡೆಗಳನ್ನು ದಾಟಿ ಯಶಸ್ಸು ಪಡೆದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಡಿಜಿಟಲ್ ಪಾವತೀಕರಣದ ಪ್ರಯೋಜನಗಳು ತಲುಪಿವೆ. ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ನಾಗರಿಕರು ಇತರ ದೇಶಗಳಲ್ಲಿ ಹೋಗಿ ನೆಲೆಸಿದ್ದಾರೆ. ಅಮೆರಿಕದೊಂದಿಗೆ ವಿಸ್ತಾರ ಆರ್ಥಿಕ ಸಂಬಂಧವನ್ನುಹೊಂದಿರುವ ಭಾರತವು ದ್ವಿಮುಖ ಪ್ರವಾಸೋದ್ಯಮದ ಒಳಹರಿವು ಹೊಂದಿದೆ. ನಮ್ಮ ದೇಶದ ಪ್ರತಿಭೆಗಳು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ. ಅವರೆಲ್ಲಾ ಕೌಶಲ್ಯದ ಅಂತರವನ್ನು ತುಂಬುತ್ತಿದ್ದು ರಾಯಭಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಆರ್ಥಿಕ ಸ್ಥಿರತೆ ಕಾಪಾಡುವ ಸವಾಲುಭಾರತವು ಯುವ ಸಮುದಾಯ ಹೊಂದಿರುವ ದೇಶ. 2047ರ ಹೊತ್ತಿಗೆ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವಾಗಿ ರೂಪುಗೊಳ್ಳಲು ಈ ಸಮುದಾಯವೇ ಬಹುದೊಡ್ಡ ಬಲ. ದೇಶದ ಉಳಿತಾಯದ ಸಂಸ್ಕೃತಿ ಇದಕ್ಕೆ ನೆರವಾಗಲಿದೆ. ಇತರ ದೇಶಗಳ ಆರ್ಥಿಕ ಸ್ಥಿತಿಯ ಜೊತೆಗೆ ನಮ್ಮ ದೇಶವನ್ನು ಹೋಲಿಕೆ ಮಾಡಿಕೊಳ್ಳುವುದಕ್ಕೆ ಇಚ್ಛಿಸುವುದಿಲ್ಲ. ದೇಶದ ಯುವಕರ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸುತ್ತಿದ್ದೇವೆ. ಭಾರತ ಬಾಹ್ಯಕಾಶ, ಹಸಿರು ಇಂಧನದಲ್ಲೂ ಹೊಸ ಪ್ರಯೋಗ ಮಾಡುತ್ತಿದೆ. ದೇಶದ ಸ್ಟಾರ್ಟಪ್‌ಗಳು ಅದ್ಭುತ ಬೆಳವಣಿಗೆ ಕಾಣುತ್ತಿದ್ದು, ಯುವಕರ ಕೌಶಲ್ಯ ಹೆಚ್ಚಿಸಿ ಉದ್ಯೋಗ ಸೃಷ್ಟಿಯಲ್ಲಿ ಏರಿಕೆ ಕಾಣುವ ಮೂಲಕ ಯುವಕರೇ ದೇಶ ಮುನ್ನಡೆಸಲಿದ್ದಾರೆ.
ಅನಿವಾಸಿ ಭಾರತೀಯ ಸಮುದಾಯ ಅನಿವಾಸಿ ಭಾರತೀಯರ ಜೊತೆಗಿನ ನನ್ನ ನಂಟು ಬಹು ಹಿಂದಿನದ್ದು. ರಾಜಕೀಯಕ್ಕೆ ಬರುವ ಮುನ್ನವೇ ಅವರ ಜೊತೆಗೆ ಸಂಪರ್ಕ ಹೊಂದಿದ್ದೆ. ಅವರೆಲ್ಲರೂ ಎರಡು ಮೂರು ತಲೆಮಾರುಗಳಿಂದ ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರ ಸಾಮರ್ಥ್ಯ ಇದೀಗ ಜಾಗತಿಕವಾಗಿಯೂ ಚರ್ಚೆಯಾಗುತ್ತಿದೆ. ಅವರೆಲ್ಲರೂ ಭಾರತದ ಜೊತೆಗೆ ಅದೇ ಬೇರು ಹೊಂದಬೇಕೆಂದು ಬಯಸುವುದು ಸಹಜ. ನಾವು ಕೂಡ ನಮ್ಮ ವಲಸಿಗರ ಬಗ್ಗೆ ಕಾಳಜಿ ವಹಿಸುತ್ತೇವೆ.
ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯಭಾರತದಲ್ಲಿ ಮಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನ್ , ಪಾರ್ಸಿಗಳಂತಹ ಸೂಕ್ಷ್ಮ ಅಲ್ಪಸಂಖ್ಯಾತರು ಸಂತೋಷದಿಂದಲೇ ಜೀವನ ನಡೆಸುತ್ತಿದ್ದಾರೆ. ಪ್ರತಿ ಯೋಜನೆಗಳನ್ನು ಯಾವುದೇ ಧರ್ಮಕ್ಕೂ ನಿರ್ಬಂಧವಿಲ್ಲದೇ, ಸಮಾನವಾಗಿಯೇ ರೂಪಿಸಲಾಗುತ್ತದೆ. ಸಮುದಾಯ, ಧರ್ಮವನ್ನೂ ಮೀರಿ ಪ್ರತಿ ನಾಗರಿಕನನ್ನು ಆ ಯೋಜನೆಗಳು ತಲುಪುತ್ತಿವೆ. ಅವುಗಳಲ್ಲಿ ಯಾವುದೇ ತಾರತಮ್ಯವಿಲ್ಲ.
ಮಹಿಳೆಯರ ಸ್ಥಿತಿಗತಿದೇಶದ ಅಭಿವೃದ್ಧಿಯಲ್ಲಿಂದು ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡಿದ್ದೇವೆ. ಈ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.15ರಷ್ಟು ಹೊಸ ಮಹಿಳಾ ಮತದಾರರು ಸೇರ್ಪಡೆಯಾಗಿದ್ದಾರೆ. ಸಶಸ್ತ್ರ ಪಡೆಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆಯೂ ಹೆಚ್ಚುತ್ತಿದೆ. ಮಹಿಳೆಯರಿಗಾಗಿಯೇ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಸಾಮಾಜಿಕ ಮತ್ತು ಆರ್ಥಿಕವಾಗಿಯೂ ಅವರನ್ನು ಬಲ ಪಡಿಸಲಾಗುತ್ತಿದೆ. ನಮೋ ಡ್ರೋನ್ ದೀದಿ, ಲಕ್ ಪತಿ ದೀದಿ, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಹಾಯ ನಾರಿಶಕ್ತಿ ಬಲ ಹೆಚ್ಚಿಸಿದೆ.
ಚೀನಾ , ಕ್ವಾಡ್ ಬಗ್ಗೆಅಮೆರಿಕ , ಆಸ್ಟ್ರೇಲಿಯಾ, ಜಪಾನ್, ಭಾರತ, ಚೀನಾ ಬೇರೆ ಬೇರೆ ಗುಂಪುಗಳ ಸದಸ್ಯತ್ವವನ್ನು ಹೊಂದಿವೆ. ಕ್ವಾಡ್ ಯಾವುದೇ ದೇಶದ ವಿರುದ್ಧವಾಗಿಲ್ಲ. ಎಸ್‌ಸಿಒ, ಬ್ರಿಕ್ಸ್ ರೀತಿಯಲ್ಲಿ ಕ್ವಾಡ್ ಸಹ ಸಮಾನ ಮನಸ್ಕ ರಾಷ್ಟ್ರಗಳ ಗುಂಪು ಧನಾತ್ಮಕ ಕಾರ್ಯವನ್ನು ನಿರ್ವಹಿಸುತ್ತದೆ. ಕ್ವಾಡ್ ರಾಷ್ಟ್ರಗಳು ವಿಪತ್ತು ನಿರ್ವಹಣೆ, ಆಡಳಿತ ಸುಧಾರಣೆ , ಕಡಲ ಭದ್ರತೆ, ಭಯೋತ್ಪಾದನಾ ನಿಗ್ರಹಗಳಂತಹ ವಿವಿಧ ವಲಯದಲ್ಲಿ ಮುಕ್ತ ದೃಷ್ಠಿಕೋನವನ್ನು ಪ್ರದರ್ಶಿಸುತ್ತದೆ.ಭಾರತ - ಚೀನಾ ಗಡಿ ವಿವಾದದ ಬಗ್ಗೆಭಾರತಕ್ಕೆ ಚೀನಾ ಜೊತೆಗಿನ ಸಂಬಂಧ ಮುಖ್ಯ ಮತ್ತು ಮಹತ್ವ. ಉಭಯ ದೇಶಗಳ ಗಡಿಗಳಲ್ಲಿ ದೀರ್ಘ ಕಾಲದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿದರೆ ಸಮಸ್ಯೆ ಕೂಡ ಪರಿಹಾರವಾಗುತ್ತದೆ. ಎರಡು ದೇಶಗಳ ನಡುವಿನ ಸ್ಥಿರ ಮತ್ತು ಶಾಂತಿ ಸಂಬಂಧ ಆ ದೇಶಗಳಿಗೆ ಮಾತ್ರವಲ್ಲ , ಇಡೀ ಜಗತ್ತಿಗೆ ಮುಖ್ಯವಾಗಿದೆ. ಹೀಗಾಗಿ ಈ ದೇಶಗಳಲ್ಲಿ ಶಾಂತಿ ಪುನರ್ ಸ್ಥಾಪನೆಯಾಗುತ್ತದೆ ಎಂದು ಭಾವಿಸುತ್ತೇನೆ.
ಪಾಕಿಸ್ತಾನದ ಜೊತೆಗಿನ ಸಂಬಂಧಇತ್ತೀಚಿಗೆ ಅಧಿಕಾರ ವಹಿಸಿಕೊಂಡ ಪಾಕಿಸ್ತಾನದ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಭ್ರಷ್ಟಚಾರ ಮತ್ತು ಹಿಂಸಾಚಾರ ತುಂಬಿರುವ ದೇಶದಲ್ಲಿ ಶಾಂತಿ, ಭದ್ರತೆ, ಸಮೃದ್ಧತೆ ತುಂಬಿರಲಿ ಎಂದು ಭಾರತ ಬಯಸುತ್ತದೆ. ಅಲ್ಲಿನ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದಕ್ಕೆ ಇಚ್ಛಿಸುವುದಿಲ್ಲ.
370ನೇ ವಿಧಿ ರದ್ದು
ಜಮ್ಮು ಕಾಶ್ಮೀರದ ವಾಸ್ತವ ಸ್ಥಿತಿಯ ಬಗ್ಗೆ ಕಣ್ಣಾರೆ ಕಾಣಬೇಕು . ಇತರರು ಹೇಳುವುದನ್ನು ಅನುಸರಿಸಬೇಡಿ. ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿದ್ದೆ. ಅಲ್ಲಿನ ಜನರು ಹೊಸ ಭರವಸೆಯನ್ನು ಕಾಣುತ್ತಿದ್ದಾರೆ. ಅಭಿವೃದ್ಧಿ , ಉತ್ತಮ ಆಡಳಿತವನ್ನು ಜನರು ನಂಬುತ್ತಿದ್ದಾರೆ. 370ನೇ ವಿಧಿ ರದ್ಧತಿಯ ನಂತರ ಆ ಪ್ರದೇಶ ಜಾಗತಿಕ ಕಾರ್ಯಕ್ರಮಗಳ ಸ್ವಾಗತಾರ್ಹ ತಾಣವಾಗಿದೆ.
ಅಯೋಧ್ಯೆ ರಾಮಮಂದಿರ: ನಮ್ಮ ದೇಶದಲ್ಲಿ ರಾಮನ ಹೆಸರು ಅಚ್ಚೊತ್ತಿದೆ. ಅವನ ಹೆಸರು ಪುಣ್ಯಭೂಮಿಯ ಉದ್ದಗಲಕ್ಕೂ ಪ್ರತಿಧ್ವನಿಸುತ್ತಿದೆ. ರಾಮನು ತನ್ನ ಜನ್ಮ ಸ್ಥಳಕ್ಕೆ ಹಿಂದಿರುಗಿರುವುದು ಐತಿಹಾಸಿಕ ಕ್ಷಣ. ಆ ಪವಿತ್ರ ಕಾರ್ಯಕ್ರಮದಲ್ಲಿ ನನಗೆ ಅವಕಾಶ ಸಿಕ್ಕಿರುವುದು ದೇವರ ಆಶೀರ್ವಾದವೆಂದು ಭಾವಿಸುತ್ತೇನೆ. ಪರಂಪರೆ ನನ್ನ ಕುಟುಂಬವೆಂದು ಪರಿಗಣಿಸುವ ಪ್ರತಿಯೊಬ್ಬ ಭಾರತೀಯನ ಜೀವನದಲ್ಲಿ ನಾನು ಮಾಡಬಹುದಾದ ಪ್ರಭಾವವೇ ಪ್ರೇರಣೆ. ಘನತೆಯ ಜೀವನವನ್ನು ನಡೆಸಲು, ಜನರ ಕನಸುಗಳನ್ನು ಸಾಧಿಸಲು ಸಾಧ್ಯವಾದರೆ ನನ್ನ ಕೆಲಸ ಪೂರ್ಣಗೊಳಿಸಿದೆ ಎನ್ನುವ ತೃಪ್ತಿ ಸಿಗುತ್ತದೆ. 1.4 ಬಿಲಿಯನ್ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ.
ತಾಕತ್ತಿದ್ರೆ 370ನೇ ವಿಧಿ ಮತ್ತೆ ಜಾರಿ ಮಾಡುತ್ತೇವೆಂದು ಘೋಷಿಸಿ: ಕಾಂಗ್ರೆಸ್‌ಗೆ ಮೋದಿ ಸವಾಲು
ನಾಯಕತ್ವದ ಗುಣ
ಆಲಿಸುವುದು ನಾಯಕತ್ವದ ಪ್ರಮುಖ ಗುಣ. ನನಗೆ ಆ ಗುಣ ದೇವರು ಕೊಟ್ಟಿದ್ದೇನೆ. ನಾನು ಬೆಳೆಸಿದ್ದೇನೆ. ಶ್ರದ್ಧೆಯಿಂದ ಕೆಲಸ ಮಾಡುವುದರಲ್ಲಿ ನಂಬಿಕೆ ಹೊಂದಿದ್ದೇನೆ. ಮುಖ್ಯ ವಿಚಾರದ ಬಗ್ಗೆ ಮಾಡುವುದಕ್ಕೆ ದೀರ್ಘಕಾಲದ ತನಕವೂ ಬೇಕಿದ್ದರೆ ಸಂವಹನ ನಡೆಸುತ್ತೇನೆ. ನಾನು ಸಂವಹನದಲ್ಲಿ ಉತ್ತಮ ಎಂದು ನನಗೆ ತಿಳಿದಿರಲಿಲ್ಲ. ಆದರೆ ಜನರು ಅದನ್ನು ಗುರುತಿಸಿದರು. ನಕರಾತ್ಮಕತೆ ಜೀವನವನ್ನು ಸಂಕುಚಿತಗೊಳಿಸುತ್ತದೆ ಎನ್ನುವುದು ನನ್ನ ನಂಬಿಕೆ. ಜನರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯಲು ನಕಾರಾತ್ಮಕತೆಯನ್ನು ಹೊರಹಾಕಿ ಸಕಾರಾತ್ಮಕ ಮನೋಭಾವನೆ ತುಂಬಿಕೊಳ್ಳಬೇಕು. ಅದನ್ನು ತುಂಬಿಕೊಳ್ಳಲು ‘ಮನ್ ಕೀ ಬಾತ್’ ನನಗೆ ಉತ್ತಮ ಮಾರ್ಗವಾಗಿತ್ತು.