ಬಿ.ಸಿ. ಪಾಟೀಲ್‌ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಎರಡು ಸಿನಿಮಾ ನಿರ್ಮಿಸಿದ್ದಾರೆ. ಯೋಗರಾಜ್‌ ಭಟ್‌ ನಿರ್ದೇಶನದ ಗರಡಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಸಂದರ್ಶನ.

ಆರ್‌.ಕೇಶವಮೂರ್ತಿ

ತುಂಬಾ ವರ್ಷಗಳ ನಂತರ ಮತ್ತೆ ನಟನೆಗೆ ಬಂದಿದ್ದೀರಿ ಹೇಗನಿಸುತ್ತಿದೆ?

ಆರಂಭದ ದಿನಗಳು ನೆನಪಾಗುತ್ತಿವೆ. ‘ಗರಡಿ’ ಸಿನಿಮಾ ನನ್ನ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಿಸಿದೆ. ಒಬ್ಬ ಕಲಾವಿದನಾಗಿ ಹೇಳುವುದಾದರೆ ಮರಳಿ ಮನೆಗೆ ಬಂದ ಖುಷಿ ಇದೆ.

ನೀವು ‘ಗರಡಿ’ ಚಿತ್ರದ ಪಾತ್ರಧಾರಿ ಆಗಿದ್ದು ಹೇಗೆ?

ನಿಜ ಹೇಳಬೇಕು ಅಂದರೆ ಗರಡಿಯಲ್ಲಿ ನಾನು ಮಾಡಿದ ಪಾತ್ರಕ್ಕೆ ಮೊದಲು ಅಂದುಕೊಂಡಿದ್ದು ಬಾಲಿವುಡ್‌ನ ಅನುಪಮ್‌ ಖೇರ್‌ ಹಾಗೂ ಪ್ರಕಾಶ್‌ ರೈ ಅವರನ್ನ. ಆದರೆ, ಅವರ ಡೇಟ್ಸ್‌ ಸಿಗದೆ ಹೋಗಿದ್ದಕ್ಕೆ ನಿರ್ದೇಶಕ ಯೋಗರಾಜ್‌ ಭಟ್‌ ನನ್ನಿಂದಲೇ ಆ ಪಾತ್ರ ಮಾಡಿಸಿದರು. ತುಂಬಾ ವೈರುಧ್ಯಗಳು ಇರುವ ಪಾತ್ರ ಅದು. ಈಗಾಗಲೇ ಸಿನಿಮಾ ನೋಡಿದವರು ನೀವೇ ಚಿತ್ರದ ಹೀರೋ ಎನ್ನುತ್ತಿದ್ದಾರೆ.

ಮಹಿಳಾ ನಿರ್ದೇಶಕರಿಗೆ ಆದ್ಯತೆ ನೀಡುತ್ತೇವೆ: ಅಶ್ವಿನಿ ಪುನೀತ್‌ ರಾಜ್‌ಕುಮಾರ್

ಗರಡಿ ಮನೆ ಕತೆಯನ್ನು ಸಿನಿಮಾ ಮಾಡಬೇಕು ಅನಿಸಿದ್ದು ಯಾಕೆ?

ದೇಸೀ ಕಲೆಯನ್ನು ದೊಡ್ಡ ಮಟ್ಟದಲ್ಲಿ ತೋರಿಸಬೇಕು. ಕ್ರಿಕೆಟ್‌ ಬಗ್ಗೆ ಬಂದಂತೆ ಗರಡಿ ಮನೆಗಳ ಬಗ್ಗೆ ಸಿನಿಮಾಗಳು ಬಂದಿಲ್ಲ. ಅದರಲ್ಲೂ ಕನ್ನಡದಲ್ಲಿ ಇಲ್ಲ. ಗಡಿಯಲ್ಲಿ ಕೆಲಸ ಮಾಡುವವರನ್ನು ಊರು ಕಾಯೋ ಮಕ್ಕಳು ಅಂತಿದ್ರು. ಗರಡಿ ಮನೆಗಳು ಒಂದು ಕಾಲದಲ್ಲಿ ಪೊಲೀಸ್‌ ಠಾಣೆಗಳಂತೆ ಕೆಲಸ ಮಾಡುತ್ತಿದ್ದವು. ದೇಸಿ ಕಲೆಗೆ ಇರುವ ಇಂಥ ಮಹತ್ವದ ವಿಚಾರಗಳನ್ನು ಹೇಳಬೇಕು ಅನಿಸಿ ‘ಗರಡಿ’ ಸಿನಿಮಾ ಮಾಡಿದೆ.

ನೀವು ಬೇರೆ ನಿರ್ಮಾಣ ಸಂಸ್ಥೆಯ ಚಿತ್ರಗಳಲ್ಲೂ ನಟಿಸುತ್ತೀರಾ?

ಖಂಡಿತವಾಗಿಯೂ ಮಾಡುತ್ತೇನೆ. ಕಲೆ ಅನ್ನೋದು ನನ್ನ ಜತೆಗೇ ಬಂದಿರುವ ದಾರಿ. ಆ ದಾರಿಯಲ್ಲಿ ಪಯಣಿಸಲಿಕ್ಕೆ ನನಗೇ ಯಾವುದೇ ಅಭ್ಯಂತರ ಇಲ್ಲ.

ರಾಜಕೀಯ ಮತ್ತು ಸಿನಿಮಾ ಎರಡನ್ನೂ ಹೇಗೆ ನಿಭಾಯಿಸುತ್ತೀರಿ?

ಪೊಲೀಸ್‌ ಆಗಿದ್ದಾಗಲೇ ಸಿನಿಮಾ ಮಾಡುತ್ತಿದ್ದೆ. ಆಗಲೇ ಇದೇ ರೀತಿ ಪ್ರಶ್ನೆಗಳು ಬಂದವು. ಉದ್ಯೋಗ ಮತ್ತು ಸಿನಿಮಾ ಎರಡೂ ತೋಗಿಸಿಕೊಂಡು ಬಂದೆ. ಕಲೆಗಾಗಿ ಪೊಲೀಸ್‌ ಉದ್ಯೋಗ ಬಿಟ್ಟೆ. ಈಗ ರಾಜಕಾರಣಿ. 24 ಗಂಟೆಯೂ ರಾಜಕೀಯನೇ ಮಾಡಿಕೊಂಡು ಇರಲ್ವಲ್ಲ, ಸಿನಿಮಾ ಮಾಡುವುದಕ್ಕೆ ಕಷ್ಟ ಆಗಲ್ಲ.

ಕತೆನೇ ಹೀರೋ, ನಾವೆಲ್ಲ ಪ್ರೇಕ್ಷಕರು: 'ಪರಂವಃ' ನಿರ್ದೇಶಕ ಸಂತೋಷ್ ಕೈದಾಳ

ನಿಮ್ಮ ಸಂಸ್ಥೆಯಲ್ಲಿ ಯಾವ ರೀತಿ ಸಿನಿಮಾಗಳು ಬರಬಹುದು?

ಪ್ರೆಸೆಂಟ್‌ ಟ್ರೆಂಡಿಂಗ್‌ ಕತೆಗಳು ಬರಲಿವೆ. ಐತಿಹಾಸಿಕ ಸಿನಿಮಾ ಮಾಡುವ ಆಸೆ ಇದೆ. ಮದಕರಿ ನಾಯಕನ ಕತೆ ಓದುತ್ತಿದ್ದೇನೆ. ನೋಡೋಣ ಮುಂದೆ. ನಾಯಕಿ, ಹಾಡುಗಳೇ ಇಲ್ಲದೆ ‘ನಿಷ್ಕರ್ಷ’ ಸಿನಿಮಾ ನಿರ್ಮಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಕಿದ್ವಿ. ಅದೇ ರೀತಿ ಹೊಸತನದ ಸಿನಿಮಾಗಳು ನಮ್ಮ ಸಂಸ್ಥೆಯಿಂದ ಬರಲಿವೆ.

ಕತೆಗಳ ಆಯ್ಕೆಯಲ್ಲಿ ನಿಮ್ಮ ಮನೆಯಲ್ಲಿ ಯಾರ ಮಾತು ಹೆಚ್ಚು ನಡೆಯುತ್ತದೆ?

ನನ್ನ ಮಗಳು, ನಾನು ಮತ್ತು ನನ್ನ ಪತ್ನಿ ಕತೆ ಕೇಳುತ್ತೇವೆ. ಮಗಳು ಪ್ರಸೆಂಟ್‌ಗೆ ತಕ್ಕಂತೆ ನೋಡುತ್ತಾನೆ. ನಾನು ಮನರಂಜನೆ ಜತೆಗೆ ಸಂದೇಶ ಇರುವಂತೆ ನೋಡುತ್ತೇನೆ.

ನಿಮ್ಮ ನಿರ್ಮಾಣ ಸಂಸ್ಥೆ ಗುರಿ ಏನು, ನಿಮ್ಮ ಬ್ಯಾನರ್‌ನಲ್ಲಿ ಸಿನಿಮಾ ಮಾಡಬೇಕು ಎಂದುಕೊಳ್ಳುವವರಿಗೆ ಏನು ಹೇಳುತ್ತೀರಿ?

ಹೊಸ ಹೊಸ ಕತೆಗ‍ಳನ್ನು ತೆರೆ ಮೇಲೆ ತರಬೇಕು, ಹೊಸ ನಿರ್ದೇಶಕರನ್ನು ಚಿತ್ರರಂಗದಲ್ಲಿ ಬೆಳಸಬೇಕು ಎಂಬುದು ಗುರಿ. ಪ್ರತಿಭಾವಂತರಿಗೆ, ಹೊಸ ಕತೆಗಾರರಿಗೆ ಯಾವತ್ತಿಗೂ ನಮ್ಮ ಬ್ಯಾನರ್‌ನಲ್ಲಿ ಜಾಗ ಇರುತ್ತದೆ.

ನೀವು ನಿರ್ಮಾಣಕ್ಕೆ ಜತೆಯಾಗಿರುವ ಕೌಸಲ್ಯ ಸುಪ್ರಜಾ ರಾಮ ಚಿತ್ರದ ಕುರಿತು ಹೇಳುವುದಾದರೆ?

ಕತೆ ತುಂಬಾ ಚೆನ್ನಾಗಿದೆ. ನಿರ್ದೇಶಕ ಶಶಾಂಕ್ ಅವರ ಯೋಚನೆ ಅದ್ಭುತ, ಕ್ಲಾಸ್‌ ಮತ್ತು ಮಾಸ್‌ ಸಿನಿಮಾ. ಡಾರ್ಲಿಂಗ್‌ ಕೃಷ್ಣ ತುಂಬಾ ಚೆನ್ನಾಗಿ ನಟಿಸಿದ್ದಾರೆ.