ಜನ ಗುರುತಿಸಲು ಕಾರಣ 'Love You Chinna..!’ : ಶ್ರುತಿ ವಿ ಎಸ್
`ಲವ್ ಮಾಕ್ಟೇಲ್’ ಚಿತ್ರದ `ಲವ್ಯೂ ಚಿನ್ನಾ..’ ಎನ್ನುವ ಒಂದು ಹಾಡು ಗಾಯಕಿ ಶ್ರುತಿ ವಿ ಎಸ್ ಅವರಿಗೆ ಇಂದು ಗುರುತಾಗಿದೆ. ತಮ್ಮ ಗಾಯನ ಪ್ರೀತಿ ಬೆಳೆದು ಬಂದ ರೀತಿಯ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ.
ಒಂದು ಹಾಡು (Song) ಜನಪ್ರಿಯತೆ (Popularity) ಪಡೆಯುವುದರೊಂದಿಗೆ ಮನರಂಜನಾ ಕ್ಷೇತ್ರದಲ್ಲಿ (Entertainment Sector) ಎಷ್ಟು ದೊಡ್ಡ ಬದಲಾವಣೆ ನಡೆಯುತ್ತದೆ ಎನ್ನುವುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಅದರ ಯಶಸ್ಸು ಆ ಹಾಡಿನ ಸಂಗೀತ ನಿರ್ದೇಶಕ ಮತ್ತು ಗಾಯಕರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸಂಗೀತ (music) ಕ್ಷೇತ್ರದಲ್ಲೇ ಒಂದು ಹೊಸ ಕ್ರಾಂತಿ ಸೃಷ್ಟಿಸುತ್ತದೆ. ಆ ಹೊತ್ತಿಗೆ ಮೂಲ ಗಾಯಕಿಯ ಬದುಕಿನಲ್ಲಿ ಏನೇನು ಬದಲಾವಣೆ ಆಗಿರಬಹುದು? ಈ ಕುತೂಹಲ ನಿಮಗಿದ್ದರೆ ಗಾಯಕಿ ಶ್ರುತಿ ವಿ ಎಸ್ ಅವರ ಗಾನ ಜೀವನದ ಬಗ್ಗೆ ಒಂದಷ್ಟು ತಿಳಿದುಕೊಳ್ಳಲೇಬೇಕು. ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಅವರು ಹಂಚಿಕೊಂಡಿರುವ ವಿಶೇಷ ಮಾಹಿತಿಗಳು ಇಲ್ಲಿವೆ.
- ಶಶಿಕರ ಪಾತೂರು
`ಲವ್ ಯು ಚಿನ್ನಾ..’ ಎಂದು ಹಾಡಬೇಕಾದರೆ ಗೀತೆ ಇಷ್ಟೊಂದು ಜನಪ್ರಿಯವಾಗುವ ನಿರೀಕ್ಷೆ ಇತ್ತೇ?
ಈ ಮಟ್ಟಕ್ಕೆ ಹೆಸರಾಗಬಹುದು ಎಂದು ನನಗೂ ಗೊತ್ತಿರಲಿಲ್ಲ. ಆದರೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಅವರು ಮಾತ್ರ ಖಂಡಿತವಾಗಿ ಈ ಹಾಡಿನಿಂದ ನೀವು ಜನಪ್ರಿಯರಾಗುತ್ತೀರಿ. ಮಾಧ್ಯಮಗಳು ಸಂದರ್ಶನಕ್ಕೆಂದು ಬಂದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಯಾರಾಗಿರಿ ಎಂದು ಮೊದಲೇ ಹೇಳಿದ್ದರು. ಈಗ ಅದೇ ನಡೆಯುತ್ತಿದೆ..!
ನಾನೇಕೆ ಯೂಟ್ಯೂಬ್ ಚಾನೆಲ್ ಮಾಡಿದೆ? - ಅದಿತಿ ಪ್ರಭುದೇವ ಮಾತು
ಗೀತೆ ಹಾಡಿದ ಅನುಭವ ಮತ್ತು ಬಳಿಕ ಬಂದ ಪ್ರತಿಕ್ರಿಯೆಗಳ ಬಗ್ಗೆ ಹೇಳಿ
`ಲವ್ ಯು ಚಿನ್ನಾ..’ ಗೀತೆಯ ಟ್ಯ್ರಾಕ್ ಹಾಡುವಾಗ ನಾನು ಗರ್ಭಿಣಿಯಾಗಿದ್ದೆ. ಆಮೇಲೆ ಅದರ ಲಿರಿಕ್ಸ್ (Lyrics) ಚೇಂಜ್ ಆದಾಗ ನಾನು ಮತ್ತೊಮ್ಮೆ ಹಾಡಬೇಕಿತ್ತು. ಆದರೆ ನನಗೆ ಆಗ ಎಂಟು ತಿಂಗಳು ತುಂಬಿತ್ತು. ಅವರು ನನ್ನ ಮೇಲೆ ಒತ್ತಡವೂ ಹಾಕಲಿಲ್ಲ, ಬೇರೆ ಗಾಯಕರಿಂದ ಹಾಡಿಸಲೂ ಇಲ್ಲ. ಡೆಲಿವರಿ ಆದಮೇಲೆ 20 ದಿನಗಳ ಬಳಿಕ ತುಮಕೂರಿಗೆ ಬಂದು ಅಲ್ಲೇ ಹಾಡಿಸಿದ್ರು. ಹಾಡು ಕೇಳಿ ಗುರುಕಿರಣ್ (Gurukiran) ಅವರು ಸೇರಿದಂತೆ ಬಹಳಷ್ಟು ಮಂದಿ ನನ್ನನ್ನು ಅಭಿನಂದಿಸಿದ್ದಾರೆ. ನನ್ನ ಜೀವನದಲ್ಲಿ ಅತಿ ಹೆಚ್ಚು ಪ್ರಶಂಸೆ ತಂದುಕೊಟ್ಟ ಹಾಡು ಇದಾಗಿದೆ.
ಇನ್ನು ಸಂಗೀತ ಸಾಧನೆಯೇ ನನ್ನ ಗುರಿ - ಸಂದೇಶ್ ನೀರ್ ಮಾರ್ಗ
ನಿಮ್ಮ ಇಲ್ಲಿಯವರೆಗಿನ ಸಂಗೀತ ಪಯಣವನ್ನು ಚಿಕ್ಕದಾಗಿ ಹೇಗೆ ವಿವರಿಸುತ್ತೀರಿ?
ನನ್ನ ತಾತ, ತಾಯಿ ಎಲ್ಲರೂ ದೇವರ ನಾಮ, ಕೀರ್ತನೆ ಹಾಡುತ್ತಿದ್ದರು. ಹಾಗಾಗಿ ಬಾಲ್ಯದಿಂದಲೇ ನನಗೆ ಸಂಗೀತಾಸಕ್ತಿ ಇತ್ತು. ಏಳನೇ ತರಗತಿಯಿದ್ದಾಗ ಕರ್ನಾಟಕ ಶಾಸ್ತ್ರೀಯ ಸಂಗೀತ (Classical Music) ಕಲಿಯಲು ಆರಂಭಿಸಿದೆ. ಅಮ್ಮನಿಂದ ಹಿಡಿದು ನಾರಾಯಣ ಅಯ್ಯಂಗಾರ್, ಮಂದಾಕಿನಿ, ವಿದ್ವಾನ್ ಪ್ರಸನ್ನ ಕುಮಾರ್, ಪ್ರವೀಣ್ ಡಿ ರಾವ್ ಮತ್ತು ಮ್ಯಾಂಡೊಲಿನ್ ಪ್ರಸಾದ್ ಅವರ ತನಕ ಸಂಗೀತದ ಶಿಕ್ಷಕರಾಗಿದ್ದಾರೆ. ನನ್ನ ಪತಿ ಮಹೇಶ್ ಪ್ರಿಯದರ್ಶನ್ ಅವರು ಸಂಗೀತ ನಿರ್ದೇಶನದಲ್ಲಿ ಆಲ್ಬಂ ಹಾಡುಗಳು ಬಂದಿವೆ. ನಾವಿಬ್ಬರೂ `ಜೀವಸ್ವರ ಸುಗಮ ಸಂಗೀತ ಅಕಾಡೆಮಿ’ಯ ಮೂಲಕ ಆಸಕ್ತರಿಗೆ ಕ್ಲಾಸಿಕಲ್ ಮತ್ತು ಸುಗಮ ಸಂಗೀತ ತರಬೇತಿ (Lifth Music Training) ನೀಡುತ್ತೇವೆ. ಈಗ ಆನ್ಲೈನ್ ಕ್ಲಾಸ್‌ಗೆ ವಿದೇಶದಿಂದಲೂ ವಿದ್ಯಾರ್ಥಿಗಳಿದ್ದಾರೆ. ಇದುವರೆಗೆ ಸುಮಾರು 30 ಸಿನಿಮಾಗಳಿಗೆ ಹಾಡಿದ್ದೇನೆ.
ಮುಂದಿನ ಚಿತ್ರದಲ್ಲಿ ನನಗೂ ಪ್ರಶಸ್ತಿ ಬರಬಹುದು - ಇಳಾ ವಿಟ್ಲ
ಸಿನಿಮಾ ಸಂಗೀತದಲ್ಲಿ ಇನ್ನಷ್ಟು ಹೆಸರು ಮಾಡುವುದೇ ನಿಮ್ಮ ಗುರಿಯೇ?
ಆರಂಭದಲ್ಲಿ ನನಗೆ ಅಂಥ ಉದ್ದೇಶಗಳಿರಲಿಲ್ಲ. ಶಾಸ್ತ್ರೀಯವಾಗಿ ಸಂಗೀತ ಕಲಿತು ಹಾಡುವುದಷ್ಟೇ ಗುರಿಯಾಗಿತ್ತು. ಎಸ್ಎಸ್ಎಲ್‌ಸಿಯಲ್ಲಿದ್ದಾಗ `ಎದೆ ತುಂಬಿ ಹಾಡುವೆನು’ ಸ್ಪರ್ಧೆಯಲ್ಲಿ ಹಾಡಿದ್ದೆ. ಬಳಿಕ ಜೀ ಕನ್ನಡದ (Zee Kannada) `ಸರೆಗಮಪ’ದಲ್ಲಿ ಸೆಮಿ ಫೈನಲ್ ತನಕ ಬಂದಿದ್ದೆ. ಅದೇ `ಸರೆಗಮಪ’ದಲ್ಲಿ ಮುಂದೆ ತೀರ್ಪುಗಾರಳಾಗುವ ಅವಕಾಶವೂ ಬಂತು. ಸುವರ್ಣ ವಾಹಿನಿಯ `ಸ್ಟಾರ್ ಸಿಂಗರ್’ನಲ್ಲಿ ಸ್ಪರ್ಧಿಯಾಗಿದ್ದಾಗ `ಜೀವ’ ಚಿತ್ರಕ್ಕಾಗಿ `ಸುಮ್ಮನೆ ಯಾಕೆ ಬಂದೇ’ ಎನ್ನುವ ಗೀತೆಯನ್ನು ಗುರುಕಿರಣ್ ಅವರು ನನ್ನಿಂದ ಹಾಡಿಸಿದ್ದರು. ಆಗ ಅದು ಜನಪ್ರಿಯವಾಗಿತ್ತು. ಮುಂದೆ ಚಿತ್ರರಂಗದ ನಂಟು ಬೆಳೆಯಿತು. ಸದ್ಯಕ್ಕೆ ರಾಜೇಶ್ ಕೃಷ್ಣನ್ (Rajesh Krishnan) ಅವರೊಂದಿಗೆ ಹಾಡಿರುವ ಎರಡು ವಿಭಿನ್ನ ಚಿತ್ರಗಳಲ್ಲಿನ ಡ್ಯೂಯೆಟ್ ಹಾಡುಗಳು ಬಿಡುಗಡೆಯಾಗಬೇಕಿದೆ. ಮುಂದೆ ಇನ್ನೊಂದಷ್ಟು ಸಂಗೀತ ನಿರ್ದೇಶಕರ ಜೊತೆಗೆ ಕೆಲಸ ಮಾಡಬೇಕು ಎನ್ನುವ ಆಕಾಂಕ್ಷೆ ಇದೆ.