ಇನ್ನು ಸಂಗೀತ ಸಾಧನೆಯೇ ನನ್ನ ಗುರಿ: ಸಂದೇಶ್ ನೀರ್‌ಮಾರ್ಗ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ `ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಹಲವಾರು ಕಾರಣಗಳಿಂದ ಖ್ಯಾತಿ ಪಡೆದಿದೆ. ಆ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಜನಪ್ರಿಯತೆ ಪಡೆದವರಲ್ಲಿ ಯುವ ಗಾಯಕ ಸಂದೇಶ್ ನೀರ್‌ಮಾರ್ಗ ಕೂಡ ಒಬ್ಬರು. ತಮ್ಮ ಅನುಭವದ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ.
ಮಂಗಳೂರಿ (Mangalore)ನ ನೀರ್‌ಮಾರ್ಗ ಎನ್ನುವಲ್ಲಿ ಆರ್ಕೆಸ್ಟ್ರಾ ಗಾಯಕರಾಗಿದ್ದವರು ಸಂದೇಶ್. ಆದರೆ ಅವರನ್ನು ಗಾಯಕರನ್ನಾಗಿ ಗುರುತಿಸಿದ್ದಕ್ಕಿಂತ ಜನ ರಿಕ್ಷಾ ಚಾಲಕರಾಗಿ ಗುರುತಿಸಿದ್ದೇ ಹೆಚ್ಚು. ಯಾಕೆಂದರೆ ಬಿಎ ಕಲಿತು ಕೊರಿಯರ್ ಸಂಸ್ಥೆಯಲ್ಲಿ ವೃತ್ತಿ ಸಿಕ್ಕಿದ್ದರೂ, ಆ ಸಂಬಳದಿಂದ ಜೀವನ ಸಾಗಿಸುವುದು ಕಷ್ಟವಾಗಿತ್ತು. ಮಾತ್ರವಲ್ಲ, ಉಪವೃತ್ತಿಯಾಗಿ ಬೆಳೆದಿದ್ದ ಆರ್ಕೆಸ್ಟ್ರಾ ಹಾಡುಗಾರಿಕೆಗೆ ಸಮಯ ನೀಡುವುದೂ ಸಾಧ್ಯವಾಗಿರಲಿಲ್ಲ. ಆಗ ಕೊರಿಯರ್ ವೃತ್ತಿಗೆ ರಾಜೀನಾಮೆ ನೀಡಿ ರಿಕ್ಷಾ ಚಾಲಕರಾಗಿ, ಮೀನು ಮಾರಾಟಗಾರರಾಗಿ, ಫುಡ್ ಡೆಲಿವರಿ ಬಾಯ್ (Food Delivery Boy) ಆಗಿ ಬದುಕು ಕಟ್ಟಿಕೊಳ್ಳಲು ಹೆಣಗಾಡಿದ್ದ ವ್ಯಕ್ತಿ ಈ ಸಂದೇಶ್. ಆದರೆ ಈಗ ಕಲೆಯ ಮೇಲೆ ಶ್ರದ್ಧೆ ಇಟ್ಟರೆ, ಇನ್ನಷ್ಟು ಮಂದಿಗೆ ಬದುಕು ಕಟ್ಟಿಕೊಡಬಹುದೆನ್ನುವ ಸಂದೇಶ ನೀಡುವಂತೆ ಬೆಳೆದಿದ್ದಾರೆ. ಒಂದೇ ತಿಂಗಳೊಳಗೆ ಈ ಜಾದೂ ಮಾಡಿರುವ ರಿಯಾಲಿಟಿ ಶೋ (Reality Show) ಒಳಗಿನಿಂದಲೇ ಒಮ್ಮೆ ರಿಯಲ್ ಲೈಫ್ (Real Life) ಬಗ್ಗೆ ಕಣ್ಣಾಡಿಸುವಂಥ ಪ್ರಶ್ನೆಗಳನ್ನು ಏಷ್ಯಾನೆಟ್ ಸುವರ್ಣ.ಕಾಮ್ ಅವರ ಮುಂದಿಟ್ಟಾಗ ನೀಡಿರುವ ಉತ್ತರಗಳು ಇಲ್ಲಿವೆ.
- ಶಶಿಕರ ಪಾತೂರು
ನಿಮ್ಮ ಸಂಗೀತಾಸಕ್ತಿಗೆ ಮನೆಯಿಂದ ಸಿಕ್ಕ ಪ್ರೋತ್ಸಾಹದ ಬಗ್ಗೆ ಹೇಳಿ
ನನ್ನ ಮನೆಯಿಂದ ಉತ್ತಮ ಪ್ರೋತ್ಸಾಹ ದೊರಕಿದ ಕಾರಣವೇ ಆರನೇ ವರ್ಷದಿಂದಲೇ ದೇವಸ್ಥಾನದಲ್ಲಿ ಭಜನೆ ಹಾಡಲು ಸಾಧ್ಯವಾಯಿತು. ನಿಜ ಹೇಳಬೇಕೆಂದರೆ ನನ್ನ ಕುಟುಂಬದಲ್ಲಿ ಯಾರೂ ಕಲಾವಿದರಿಲ್ಲ. ಚಿಕ್ಕಪ್ಪ ರಂಗಭೂಮಿಯಲ್ಲಿ (Theatre) ಗುರುತಿಸಿಕೊಂಡಿದ್ದಾರೆ ಎನ್ನುವುದನ್ನು ಬಿಟ್ಟರೆ ಗಾಯನ ಕ್ಷೇತ್ರದಲ್ಲಿ ಹೆಸರಾದವರಿಲ್ಲ. ಆದರೆ ಮದುವೆಯ ಬಳಿಕ ನನ್ನ ಪತ್ನಿ ಮನೀಶಾಳಂತೂ ಹಾಡುವುದನ್ನು ವಿಪರೀತ ಇಷ್ಟಪಡುತ್ತಿದ್ದಾಳೆ. ಶಾಸ್ತ್ರೀಯವಾಗಿ ಸಂಗೀತ ಕಲಿಯುವಂತೆ ಒತ್ತಾಯಿಸಿದ್ದ ಆಕೆಯಿಂದಾಗಿಯೇ ನಾವಿಬ್ಬರೂ ಹಿಂದೂಸ್ತಾನಿ ಸಂಗೀತ ತರಬೇತಿ ಪಡೆಯಲು ಅಮಿತ್ ಬೆಂಗ್ರೆಯವರ ಬಳಿ ಸೇರಿಕೊಂಡಿದ್ದೆವು. ಒಂದೇ ತಿಂಗಳಲ್ಲಿ ಲಾಕ್ಡೌನ್ (Lockdown) ಘೋಷಣೆಯಾದ ಬಳಿಕ ಆ ಕಡೆ ಗಮನ ಹರಿಸಲು ಸಾಧ್ಯವಾಗಲಿಲ್ಲ.
ಮುಂದಿನ ಚಿತ್ರದಲ್ಲಿ ನನಗೂ ಪ್ರಶಸ್ತಿ ಬರಬಹುದು- ಇಳಾ ವಿಟ್ಲ
ಸರಿಯಾದ ಶಾಸ್ತ್ರೀಯ ಸಂಗೀತದ ಹಿನ್ನೆಲೆ ಇಲ್ಲದಿರುವುದು ನಿಮಗೆ ಮುಂದಿನ ದಿನಗಳ ಸ್ಪರ್ಧೆಯನ್ನು ಕಠಿಣವಾಗಿಸಬಹುದೇ?
ಈಗಾಗಲೇ ನನ್ನೊಂದಿಗೆ ಆಯ್ಕೆಯಾಗಿರುವ ಎಲ್ಲರೂ ಶಾಸ್ತ್ರೀಯವಾಗಿ ಅದ್ಭುತವಾಗಿ ಹಾಡಿದ್ದಾರೆ. ಸದ್ಯಕ್ಕೆ ನಾನು ಅವರ ನಡುವೆ ಗುರುತಿಸಿಕೊಂಡಿರುವುದೇ ಅದೃಷ್ಟ (Lucky) ಎಂದುಕೊಂಡಿದ್ದೇನೆ. ಇಪ್ಪತ್ತೊಂದು ವರ್ಷಗಳ ಕಾಲ ಭಜನೆ ಮಾಡಿರುವ ಅಭ್ಯಾಸದಿಂದಾಗಿ ಶಾಸ್ತ್ರೀಯ ಸ್ವರಗಳಿಗೂ ನನ್ನ ಕಂಠ ಬೇಗ ಹೊಂದಿಕೊಳ್ಳುತ್ತಿದೆ ಎಂದು ಕಲಿತವರು ಹೇಳುತ್ತಾರೆ. ಇವೆಲ್ಲವೂ ನನಗೆ ಸ್ಪರ್ಧೆಯಲ್ಲಿ ಇನ್ನಷ್ಟು ಮುಂದುವರಿಯುವ ಅವಕಾಶ ತಂದುಕೊಡಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ಇನ್ನು ಅವಕಾಶ ಸಿಕ್ಕಿದೊಡನೆ ಶಾಸ್ತ್ರೀಯ ಅಭ್ಯಾಸ ಮಾಡುವುದನ್ನೇ ಗುರಿಯಾಗಿಸಿದ್ದೇನೆ.
ಕೆಟ್ಟ ಸರ್ಪ್ರೈಸ್ ಕೊಟ್ಟ ದೇವ್ರು- ರಮೇಶ್ ಅರವಿಂದ್
ರಿಯಾಲಿಟಿ ಶೋ ಎಷ್ಟೇ ಜನಪ್ರಿಯತೆ ನೀಡಿದರೂ ಅದು ಕ್ಷಣಿಕ. ನಿಮಗೆ ಸಿಕ್ಕಿರುವ ಈ ಬಹುದೊಡ್ಡ ಜನಪ್ರಿಯತೆಯನ್ನು ಮುಂದೆ ಹೇಗೆ ನಿಭಾಯಿಸುತ್ತೀರಿ?
ಹೌದು; ರಿಕ್ಷಾಚಾಲಕನಾಗಿ, ಮೀನು ಮಾರಿ ಕುಟುಂಬಕ್ಕಾಗಿ ದುಡಿಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸಿದ್ದ ನನಗೆ ಇದು ನಿಜಕ್ಕೂ ದೊಡ್ಡ ವೇದಿಕೆ (Stage). ನನ್ನ ಮೆಚ್ಚಿನ ಗಾಯಕರಾದ ಎಸ್‌ಪಿ ಬಾಲಸುಬ್ರಹ್ಮಣ್ಯಂ (SP Balasubramaniam) ಸರ್ ಅವರ ಹೆಸರಿರುವ ಈ ವೇದಿಕೆಯಲ್ಲಿ ಗಾಯಕನಾಗಿ ಗುರುತಿಸಿಕೊಂಡಿದ್ದೇನೆ. ಈಗ ಅನಿವಾರ್ಯವಾಗಿ ಮಾಡುತ್ತಿದ್ದ ವೃತ್ತಿಗಳಿಗಿಂತ ಸಂಗೀತದಲ್ಲಿರುವ ಆತ್ಮತೃಪ್ತಿಯ ಅರಿವಾಗಿದೆ. ಅದನ್ನೇ ಪ್ರಮುಖ ಆದಾಯ ಮಾರ್ಗವನ್ನಾಗಿಸುವತ್ತ ಗಮನ ಹರಿಸಲಿದ್ದೇನೆ. ಅಂದರೆ ಈಗಾಗಲೇ `ಯೂತ್ ಮೆಲೊಡೀಸ್ ಕುಡ್ಲ’ ಎನ್ನುವ ಆರ್ಕೆಸ್ಟ್ರಾ ತಂಡವನ್ನು ಮಂಗಳೂರಿನಲ್ಲಿ ಹೊಂದಿರುವ ನನಗೆ ಈಗ ದೊರಕಿರುವ ಜನಪ್ರಿಯತೆ ಆ ತಂಡವನ್ನು ಇನ್ನಷ್ಟು ಉತ್ತಮಗೊಳಿಸಲು ಸಹಾಯಕವಾದೀತು ಎಂದುಕೊಂಡಿದ್ದೇನೆ.