Asianet Suvarna News Asianet Suvarna News

ಮುಂದಿನ ಚಿತ್ರದಲ್ಲಿ ನನಗೂ ಪ್ರಶಸ್ತಿ ಬರಬಹುದು!: ಇಳಾ ವಿಟ್ಲ

ಇಳಾ ವಿಟ್ಲ ಎನ್ನುವ ಹೆಸರನ್ನು ಧಾರಾವಾಹಿ ಪ್ರೇಕ್ಷಕರು ಖಂಡಿತವಾಗಿ ಕೇಳಿರುತ್ತಾರೆ. ಕಿರುತೆರೆ ಧಾರಾವಾಹಿಗಳಿಂದ ಹೆಸರು ಮಾಡಿರುವ ಅವರು ಇತ್ತೀಚೆಗೆ ಚಿತ್ರರಂಗದತ್ತ ಗಮನ ಹರಿಸಿದ್ದಾರೆ. ಪ್ರಶಸ್ತಿಗೆ ಅರ್ಹವಾಗುವಂಥ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ.

Actress Ila Vitla expects award reveals in interview
Author
Bengaluru, First Published Sep 23, 2021, 12:36 PM IST

ಕಳೆದ ಎರಡು ದಶಕಗಳಿಂದ ಕನ್ನಡ ಕಿರುತೆರೆ ಲೋಕದ ಖಳನಾಯಕಿಯಾಗಿ ಇಳಾ ವಿಟ್ಲ ಜನಪ್ರಿಯರು. ಒಂದಷ್ಟು ಮೆಗಾ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡ ಇಳಾ ವಿಟ್ಲ ಅವರು ಕಾದಂಬರಿ ಧಾರಾವಾಹಿಯಲ್ಲಿ ಮಾಡಿದ `ತಾರಾ’ ಎನ್ನುವ ಪಾತ್ರ ಸುಲಭದಲ್ಲಿ ಮರೆಯಲಾಗದು. ನೆಗೆಟಿವ್ ಪಾತ್ರಗಳ ಮೂಲಕ ಸುದ್ದಿ ಮಾಡಿದ್ದ ಇವರು ಪ್ರಸ್ತುತ `ಅಕ್ಷಿ’ ಎನ್ನುವ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದ ಮೂಲಕ ಅದರ ಬಿಡುಗಡೆಗೂ ಮುನ್ನವೇ ಸುದ್ದಿ ಮಾಡಿದ್ದಾರೆ. ಅದಷ್ಟೇ ಅಲ್ಲ ಸ್ವತಃ ಪ್ರಶಸ್ತಿ ಪಡೆಯುವಂಥ ಪಾತ್ರಗಳನ್ನು ಕೂಡ ನಿಭಾಯಿಸಿದ್ದೇನೆ ಎನ್ನುವ ಭರವಸೆಯ ನಟಿಯೊಂದಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.

ಶಶಿಕರ ಪಾತೂರು

`ಅಕ್ಷಿ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬರಬಹುದೆನ್ನುವ ನಿರೀಕ್ಷೆ ಇತ್ತೇ?
ರಾಷ್ಟ್ರೀಯ ಪ್ರಶಸ್ತಿ ಎನ್ನುವುದು ಚಿತ್ರರಂಗದಲ್ಲಿರುವ ಪ್ರತಿಯೊಬ್ಬರ ಕನಸು ಎನ್ನಬಹುದು. ಅಂಥದೊಂದು ಅವಾರ್ಡ್ ಬರಬಹುದೆನ್ನುವ ನಿರೀಕ್ಷೆಗಿಂತ ಚಿತ್ರ ನೋಡಿದವರು ಖಂಡಿತವಾಗಿ ಒಳ್ಳೆಯ ಮಾತುಗಳನ್ನೇ ಆಡುತ್ತಾರೆ ಎನ್ನುವ ಧೈರ್ಯವಿತ್ತು. ರಾಷ್ಟ್ರ ಪ್ರಶಸ್ತಿ ಎಂದಕೂಡಲೇ `ವಶೀಲಿಬಾಜಿ ಮಾಡಿ ತಂದಿದ್ದಾರೆ’ ಎಂದುಕೊಂಡವರು ನಮ್ಮ ಚಿತ್ರೋದ್ಯಮದಲ್ಲೇ ಇದ್ದಾರೆ. ಬಹುಶಃ ಅವರು ಹಾಗೆ ತಂದಿದ್ದರೆ ಮಾತ್ರ ಅವರಿಗೆ ಅಂಥ ಯೋಚನೆಗಳು ಬರಲು ಸಾಧ್ಯ.  ಆದರೆ ಸಿನಿಮಾ ನೋಡಿದರೆ ಎಲ್ಲರಿಗೂ ಕೂಡ ಇದೊಂದು ಪ್ರಶಸ್ತಿಗೆ ಅರ್ಹವಾದ ಚಿತ್ರವೇ ಎನ್ನುವುದು ಅರಿವಾಗಬಹುದು.

ಕೆಟ್ಟ ಸರ್ಪ್ರೈಸ್ ಕೊಟ್ಟ ದೇವರು- ರಮೇಶ್ ಅರವಿಂದ್

ಚಿತ್ರದಲ್ಲೊಂದು ಪ್ರಧಾನ ಪಾತ್ರವಾಗಿ ನಿಮ್ಮ ಅನುಭವ ಏನು?
ಮಕ್ಕಳು ಕಷ್ಟದಲ್ಲಿದ್ದಾಗ ಅದನ್ನು ಎದುರಿಸುವ ತಾಯಿಯ ಕಷ್ಟವೇನು ಎನ್ನುವುದನ್ನು ತೋರಿಸುವಂಥ ಹಳ್ಳಿಮಹಿಳೆಯ ಪಾತ್ರ ನನ್ನದು. ಜನಗಳಿಗೆ ನನ್ನ ಪಾತ್ರ ಏನು ಎನ್ನುವ ಬಗ್ಗೆ ಆರಂಭದಲ್ಲೇ ಒಂದು ಕುತೂಹಲವನ್ನು ಮೂಡಿಸುತ್ತದೆ. ಚಿತ್ರದ ಆರಂಭದಿಂದ ಕೊನೆಯವರೆಗೂ ಇದ್ದೇನೆ. ಸದ್ಯಕ್ಕೆ  ಚಿತ್ರ ಬಿಡುಗಡೆಯಾಗಿರದ ಕಾರಣ ಪಾತ್ರದ ಬಗ್ಗೆ ಇದಕ್ಕಿಂತ ಹೆಚ್ಚೇನೂ ನಾನು ಹೇಳಲಾರೆ. ಇದುವರೆಗೆ ನೆಗೆಟಿವ್ ಪಾತ್ರದಲ್ಲಿ ಜನಪ್ರಿಯತೆ ಪಡೆದ ಕಾರಣ ಹಾಗೆಯೇ ಗುರುತಿಸಿಕೊಂಡಿದ್ದೆ. ಆದರೆ ಅದೇ ರೀತಿ ಪಾಸಿಟಿವ್ ಪಾತ್ರ ಮಾಡುವ ಅವಕಾಶ ಸಿಕ್ಕಿದರೂ ಮಾಡಬಲ್ಲೆ ಎನ್ನುವ ಆತ್ಮವಿಶ್ವಾಸ ನನಗಿತ್ತು. ಸಂದರ್ಭ ಕೂಡಿ ಬಂದಿದ್ದು `ಅಕ್ಷಿ’ ಚಿತ್ರದ ಮೂಲಕ.

`ಮತ್ತೆ ಮನ್ವಂತರ'ದಲ್ಲಿ ಬರಲಿದ್ದಾರೆ ಮೇಧಾ ವಿದ್ಯಾಭೂಷಣ್

ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೇಳಿ
ಚೇತನ್ ಮುಂಡಾಡಿಯವರ ನಿರ್ದೇಶನದ `ಇದಂ ಭಾರತಂ’ ಚಿತ್ರದಲ್ಲಿ ನನ್ನದೂ ಕೂಡ ಒಂದು ಪ್ರಮುಖ ಪಾತ್ರವಿದೆ. ಚಿತ್ರ ಮೂಡಿ ಬಂದಿರುವ ರೀತಿ ಮತ್ತು ನನ್ನ ಪಾತ್ರವನ್ನು ನೋಡಿದಾಗ ನನಗೆ ಖಂಡಿತವಾಗಿ  ಪ್ರಶಸ್ತಿ ಬರಬಹುದೆನ್ನುವ ನಿರೀಕ್ಷೆ ಇದೆ. ಯಾಕೆಂದರೆ ನಾನು ಪಾತ್ರ ಮಾಡಿರುವುದನ್ನು ಗಮನಿಸಿದವರು ಕೊರಗಜ್ಜನ ದಯದಿಂದ ಪ್ರಶಸ್ತಿಗೆ ಅರ್ಹ ನಟನೆ ಎಂದುಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಯಾಕೆಂದರೆ ಆ ಪಾತ್ರ ಮಾಡುವುದು ಅಷ್ಟು ಕಷ್ಟವಿತ್ತು. ಅದೊಂದು ಊರಿನ ಕತೆ. ಅಲ್ಲಿ ಎಲ್ಲ ಜಾತಿಯವರು ಅವರವರ ಜಾತಿಯ ಭಾಷೆ ಮಾತನಾಡುತ್ತಿರುತ್ತಾರೆ. ಕೊರಗ ಜಾತಿಯವರು, ಮುಸಲ್ಮಾನರು, ಬ್ರಾಹ್ಮಣರು ಹೀಗೆ ಭಾಷೆ ಮತ್ತು ಆಚರಣೆಯಲ್ಲಿ ವೈವಿಧ್ಯತೆ ಇದ್ದರೂ ಹೊಂದಿಕೊಂಡು ಹೋಗುವವರ ಕುರಿತಾದ ಕತೆ ಚಿತ್ರದಲ್ಲಿದೆ.  ಇದಲ್ಲದೆ ನಾನು ನಾಯಕಿಯಾಗಿರುವ `ಕಚೋರಿ’ ಎನ್ನುವ ಚಿತ್ರ ಈಗಾಗಲೇ ಪೂರ್ತಿಯಾಗಿದೆ. ಚಿತ್ರಕ್ಕೆ ನನ್ನ ಪತಿ ಆರ್ಯನ್ ಅವರೇ ನಾಯಕರಾಗಿದ್ದು ನಿರ್ದೇಶನವನ್ನೂ ಅವರೇ ಮಾಡಿದ್ದಾರೆ. ಅದರಲ್ಲಿ ತುಂಬ ಮಾಡರ್ನ್ ಹುಡುಗಿಯ ಪಾತ್ರ ಮಾಡಿದ್ದೇನೆ.

`ಕನ್ನಡತಿ'ಯ ಬಿಂದು ವೃತ್ತಿ ಬದುಕಿಗೊಂದು ತಿರುವು- ಮೊಹಿರಾ ಆಚಾರ್ಯ

ನಿಜವಾದ ಪತಿಯೇ ಪರದೆ ಮೇಲೆ ಇರುವ ಕಾರಣ ನೀವು ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದೀರಾ?
ಸಾಮಾನ್ಯವಾಗಿ ಬೋಲ್ಡ್ ಆಗಿರುವ ಪಾತ್ರಗಳಿಗೆ ಬಟ್ಟೆ ಕಡಿಮೆ ಹಾಕಬೇಕಾಗುತ್ತದೆ ಎಂದರೆ ನಾನು ಒಪ್ಪುವುದಿಲ್ಲ. ಪಾತ್ರವನ್ನು ಬೇರೆ ರೀತಿಯಿಂದಲೂ ಬೋಲ್ಡ್ ಆಗಿ ತೋರಿಸಬಹುದು. ನಮ್ಮ `ಕಚೋರಿ’ ಚಿತ್ರದಲ್ಲಿಯೂ ಅಂಥ ದೃಶ್ಯಗಳಿಲ್ಲ. ಪತಿಯೇ ನಿರ್ದೇಶಕರಾದರೂ ಮೊದಲು ನನಗೆ ಕಾಸ್ಟ್ಯೂಮ್ಸ್  ಕಂಫರ್ಟ್ ಆಗಿರಬೇಕು ಎನ್ನುವುದು ಅವರ ನಿಲುವು. ಇದುವರೆಗೆ ನಾನು ಎಲ್ಲಿಯೂ ಎಕ್ಸ್‌ಪೋಸ್‌ ಆಗಿರುವ ದೃಶ್ಯ ಮಾಡಿಲ್ಲ. ಆದರೆ ಪಾತ್ರಕ್ಕೆ ಅಗತ್ಯ ಇದ್ದಾಗ ನನ್ನ ಮಿತಿಯಲ್ಲಿ ಬೋಲ್ಡ್ ಆಗಿರಲು ಸಿದ್ಧಳಿದ್ದೇನೆ.

ತುಳು ಚಿತ್ರರಂಗದ ಬಗ್ಗೆ  ಏನು ಹೇಳುತ್ತೀರಿ?
ನಾನು ಕರಾವಳಿಯಿಂದಲೇ ಬಂದಿರುವ ಕಾರಣ ನನಗೆ ತುಳು ಚಿತ್ರರಂಗ ಚೆನ್ನಾಗಿ ಗೊತ್ತು. ತುಳು ಸಿನಿಮಾಗಳಲ್ಲಿ ನಟಿಸಿದ್ದೇನೆ ಕೂಡ. ಅಲ್ಲಿ ಇಲ್ಲಿನ ಹಾಗೆ ಕಲಾವಿದರನ್ನು ಒಂದು ಪಾತ್ರಕ್ಕೆ ಬ್ರ್ಯಾಂಡ್ ಮಾಡುವುದಿಲ್ಲ ಎನ್ನುವುದು ನನ್ನ ಅನುಭವ. ಯಾಕೆಂದರೆ ನಾನು ಕನ್ನಡ ಧಾರಾವಾಹಿಯಲ್ಲಿ ಖಳನಾಯಕಿ ಇಮೇಜ್ ಹೊಂದಿದ್ದರೂ ಅಲ್ಲಿ ನನಗೆ ಕಾಮಿಡಿ ಪಾತ್ರವನ್ನು ನೀಡಿದ್ದರು. ಇದೀಗ ನನ್ನ ನಟನೆಯ `ಬಾಯೊ’ ಎನ್ನುವ ಕೊಂಕಣಿ ಸಿನಿಮಾ ಕೂಡ ತಯಾರಾಗಿದೆ. ಅದನ್ನು ಕನ್ನಡ ಮತ್ತು ಕೊಂಕಣಿ ಹೀಗೆ ಎರಡು ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ರಮಾನಂದ್ ನಾಯಕ್ ಅದರ ನಿರ್ದೇಶಕರು. ಸುನಾದ್ ಗೌತಮ್ ಅವರು ಛಾಯಾಗ್ರಾಹಕ ಮತ್ತು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

Follow Us:
Download App:
  • android
  • ios