Asianet Suvarna News Asianet Suvarna News

Interview: ನನ್ನ ಮಾವ ಖರ್ಗೆ ಸಾಧನೆಯೇ ನನಗೆ ಶ್ರೀರಕ್ಷೆ - ರಾಧಾಕೃಷ್ಣ ದೊಡ್ಮನಿ

2019ರಲ್ಲಿ ಡಾ.ಖರ್ಗೆಯವರು ಇಲ್ಲಿಂದ ಸೋತ ಮೇಲೆ ಕಲಬುರಗಿ ಕ್ಷೇತ್ರದ ಅಭಿವೃದ್ಧಿಗೆ ಭಾರಿ ಹಿನ್ನಡೆಯಾಗಿದೆ. ಈ ಕ್ಷೇತ್ರ ಅಭಿವೃದ್ಧಿಯಲ್ಲಿ 20 ವರ್ಷ ಹಿಂದೆ ಹೋಗಿದೆ. ಕಲಬುರಗಿಗೆ ಕೇಂದ್ರ ಚೊಂಬು ಕೊಟ್ಟಿದೆ. 20 ವರ್ಷ ಹಿಂದೆ ಹೋಗಲು ಕೇಂದ್ರದ ಅನೇಕ ಧೋರಣೆಯೇ ಕಾರಣ. ಕಲಬುರಗಿ ಅಭಿವೃದ್ಧಿಗೆ ಮುಂಚಿನ ವೇಗ ಬರಬೇಕಾದಲ್ಲಿ ಇಲ್ಲಿಂದ ಮತ್ತೆ ಕಾಂಗೆಸ್‌ ಪಕ್ಷ ಗೆಲ್ಲಬೇಕು, ಜನ ನನ್ನನ್ನು ಹರಸುವ ಮೂಲಕ ಖರ್ಗೆಯವರ ಕೈ ಬಲಪಡಿಸಬೇಕು.

Lok sabha election 2024 in Karnataka interview with Radhakrishna dodmani congress candidate from kalaburagi Lok sabha rav
Author
First Published May 2, 2024, 6:13 AM IST

ರಾಧಾಕೃಷ್ಣ ದೊಡ್ಮನಿ, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

- ಸಂದರ್ಶನ- ಶೇಷಮೂರ್ತಿ ಅವಧಾನಿ

ರಾಜಕೀಯ ಜಿದ್ದಾಜಿದ್ದಿಯ ಅಖಾಡವಾಗಿರುವ ಕಲಬುರಗಿ (ಮೀಸಲು) ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಖರ್ಗೆಯವರು ತಮ್ಮ ಅಳಿಯ ರಾಧಾಕೃಷ್ಣ ದೊಡ್ಮನಿಯವರನ್ನೇ ಕಣಕ್ಕಿಳಿಸಿ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದಾರೆ. ಆ ಮೂಲಕ 2019ರಲ್ಲಿ ತಮಗಾದ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕಲಬುರಗಿಯಲ್ಲಿ ಕಮಲ ಅರಳಿಸಿದ್ದಲ್ಲದೆ, ಖರ್ಗೆಯವರಿಗೆ ಮೊದಲ ಸೋಲಿನ ರುಚಿ ಉಣಿಸಿರುವ ಡಾ.ಉಮೇಶ ಜಾಧವ್‌ ಇದೀಗ ಪುನರಾಯ್ಕೆ ಬಯಸಿ ಕಣದಲ್ಲಿದ್ದಾರೆ. ಇಲ್ಲಿ ನಡೆಯುತ್ತಿರೋದು ರಾಧಾಕೃಷ್ಣ ಹಾಗೂ ಡಾ.ಜಾಧವ್‌ ನಡುವಿನ ಚುನಾವಣೆಯಲ್ಲ, ಅದೇನಿದ್ದರೂ ಪ್ರಧಾನಿ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ಡಾ. ಖರ್ಗೆ ನಡುವಿನ ಹಣಾಹಣಿ ಎಂದು ಹೇಳಲಾಗುತ್ತಿದೆ. ಇಂತಹ ಜಂಗಿ ಕುಸ್ತಿ ಅಖಾಡದಲ್ಲಿರುವ ರಾಧಾಕೃಷ್ಣ ತಮ್ಮ ಬಿರುಸಿನ ಪ್ರಚಾರದಲ್ಲಿಯೂ ಬಿಡುವು ಮಾಡಿಕೊಂಡು ‘ಕನ್ನಡಪ್ರಭ’ ಜೊತೆ ಮುಖಾಮುಖಿಯಾಗಿದ್ದು ಹೀಗೆ...

ನೀವು ಉದ್ಯಮಿ, ಶಿಕ್ಷಣ ರಂಗದಲ್ಲಿ ಕೆಲಸ ಮಾಡಿದವರು, ರಾಜಕೀಯ ಪ್ರವೇಶ ಮಾಡುವ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ?

- ನಾನೆಂದೂ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಚನೆ ಮಾಡಿದವನಲ್ಲ, ಬದಲಾದ ಸನ್ನಿವೇಶದಲ್ಲಿ ನಾನು ಅಭ್ಯರ್ಥಿಯಾಗಿದ್ದೇನೆ, ನಮ್ಮ ಮಾವನವರಾದ ಡಾ.ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ನಂತರ ಅವರಿಗೆ ಜವಾಬ್ದಾರಿಗಳು ಸಹಜವಾಗಿಯೇ ಹೆಚ್ಚಿದವು. ಹೀಗಾಗಿ ಅವರು ಕಲಬುರಗಿ ಅಖಾಡಕ್ಕಿಳಿಯೋದು ಅಸಾಧ್ಯ ಅಂತಾದಾಗ, ಇಲ್ಲಿನ ಶಾಸಕರು, ಮಂತ್ರಿಗಳು, ಪಕ್ಷದಲ್ಲಿರುವ ಹಿತೈಷಿಗಳು ಎಲ್ಲರೂ ಕಣಕ್ಕಿಳಿಯುವಂತೆ ನನ್ನನ್ನು ಆಗ್ರಹಿಸಿದರು. ರಾಜಕೀಯ ನನಗೇನು ಹೊಸತಲ್ಲ, ಹೀಗಾಗಿ ನನ್ನ ಹಿತೈಷಿಗಳೆಲ್ಲರ ಸದಭಿಪ್ರಾಯವೇ ನನ್ನನ್ನು ಕಲಬುರಗಿ ಲೋಕಸಭೆ ಅಖಾಡಕ್ಕಿಳಿಯುವಂತೆ ಮಾಡಿದೆ.

ಗ್ಯಾರಂಟಿ, ಮೋದಿ ವೈಫಲ್ಯ ಕಾಂಗ್ರೆಸ್‌ ಅಸ್ತ್ರ: ಮುಖಾಮುಖಿ ಸಂದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ

ಚಿತ್ತಾಪುರದ ಗುಂಡಗುರ್ತಿಯವರಾದರೂ ಹೆಚ್ಚಾಗಿ ಬೆಂಗಳೂರು ವಾಸಿ, ಅದರೂ ಕಲಬುರಗಿ ಲೋಕಸಭೆ ಕಣದ ಹುರಿಯಾಳಾಗಬಹುದು ಎಂಬ ನಿರೀಕ್ಷೆ ನಿಮಗಿತ್ತಾ?

- ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಸ್ವಾಮಿ ರಮಾನಂದರು, ವೀರೇಂದ್ರ ಪಾಟೀಲರು, ಧರಂಸಿಂಗ್‌, ಡಾ.ಖರ್ಗೆಯವರು, ಸಿಎಂ ಸ್ಟಿಫನ್‌ರಂತಹ ಘಟಾನುಘಟಿಗಳು ಗೆದ್ದು ಲೋಕಸಭೆಗೆ ಹೋದವರು. ಇಂತಹ ಕ್ಷೇತ್ರಕ್ಕೆ ನಾನು ಅಭ್ಯರ್ಥಿಯಾಗುವೆನೆಂದು ಅಂದುಕೊಂಡಿರಲಿಲ್ಲ, ಆದಾಗ್ಯೂ ಉತ್ತಮ ಅವಕಾಶವೊಂದು ತಾನಾಗಿಯೇ ನನ್ನನ್ನು ಅರಸಿಕೊಂಡು ಬಂದಿದ್ದಕ್ಕೆ ನಾನೇ ಭಾಗ್ಯವಂತ ಅಂದುಕೊಂಡಿದ್ದೇನೆ.

ನೀವು ಸಂಸದರಾಗಿ ಗೆದ್ದರೆ ಕಲಬುರಗಿ ಲೋಕಸಭೆ ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲಾ ಯೋಚನೆ, ಯೋಜನೆಗಳನ್ನು ಇಟ್ಟುಕೊಂಡಿದ್ದೀರಿ?

- ಕಲಬುರಗಿಯ ಸರ್ವತೋಮುಖ ಪ್ರಗತಿಗೆ ನನ್ನದೇ ಆದಂತಹ ನೀಲನಕ್ಷೆ ಇದೆ. ಅದನ್ನು ನಾನು ಈಗಾಗಲೇ ಮನದಲ್ಲಿ ಸಿದ್ಧಪಡಿಸಿಕೊಂಡಿದ್ದೇನೆ. ದೂರದೃಷ್ಟಿಯ, ಯುವಕರಿಗೆ ಉದ್ಯೋಗ ನೀಡುವ, ಉದ್ಯಮಶೀಲತೆ ಪ್ರೋತ್ಸಾಹಿಸುವ ಯೋಜನೆಗಳನ್ನು ಕಲಬುರಗಿಗೆ ತರಬೇಕೆಂಬುದು ನನ್ನ ಮನದಾಸೆ. ರಾಜ್ಯ, ರಾಷ್ಟ್ರದಲ್ಲಿಯೂ ನನ್ನ ಈ ವಿಚಾರಗಳಿಗೆ ಪುಷ್ಟಿ ಸಿಗುವ ಭರವಸೆ ಇದೆ. ಬಂಡವಾಳ ಹೂಡಿಕೆಗೆ, ಉದ್ಯೋಗ ಸೃಷ್ಟಿಗೆ ವಿಫುಲ ಅವಕಾಶವಿರುವ ಯೋಜನೆಗಳನ್ನು ಕಲಬುರಗಿಗೆ ಕೊಡುವೆ. ಇದುವರೆಗೂ ಯಾವ ರಂಗದತ್ತ ಯಾರೂ ಗಮನ ಹರಿಸಿಲ್ಲವೋ ಅಂತಹ ರಂಗಗಳನ್ನು ಗುರುತಿಸಿ ಅಲ್ಲಿ ಹೊಸ ಯೋಜನೆ ತರುವ ಪ್ರಯತ್ನ ಮಾಡುವೆ. ರಾಜ್ಯದಲ್ಲಿ ನಮ್ಮದೆ ಸರಕಾರವಿದೆ, ರಾಷ್ಟ್ರದಲ್ಲಿಯೂ ಕಾಂಗ್ರೆಸ್‌ ಸರಕಾರವೇ ಬರಲಿರೋದರಿಂದ ಕಲುಬರಗಿ ಪ್ರಗತಿ ವೇಗ ಹೆಚ್ಚಿಸುವ ಹೊಣೆಗಾರಿಕೆಯನ್ನು ಜನರ ನಿರೀಕ್ಷೆಯಂತೆ ನಿಭಾಯಿಸುವೆ.

ಖರ್ಗೆ ಕುಟುಂಬದ ತಾವು 4 ದಶಕಗಳ ಕಾಲ ತೆರೆಮರೆಯಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡಿದರೂ ನಿಮ್ಮನ್ನು ನಾಯಕರು ಯಾವತ್ತೂ ರಾಜಕೀಯಕ್ಕೆ ಕರೆಯಲೇ ಇಲ್ಲವೆ?

- ಹಾಗೇನಿಲ್ಲ, ನನ್ನನ್ನು 20 ವರ್ಷಗಳ ಹಿಂದೆಯೇ ಬೀದರ್ ಲೋಕಸಭೆ ಕಣಕ್ಕಿಳಿಸುವ ಚಿಂತನೆ ನಡೆದಿತ್ತು. ಅದಕ್ಕೆ ನಾನೇ ಆಸಕ್ತಿ ತೋರಲಿಲ್ಲ. ಈಗಿನ ಡಿಸಿಎಂ ಅವರು ಈ ಪ್ರಸ್ತಾವನೆಯೊಂದಿಗೆ ನನ್ನ ಬಳಿ, ಮಾವನವರ ಬಳಿ ಬಂದಾಗ ನಾನೇ ಸುಮ್ಮನಾಗಿದ್ದೆ. ಬೀದರ್‌ ನಮ್ಮ ಕ್ಷೇತ್ರವಲ್ಲ, ಇನ್ನೂ ರಾಜಕೀಯ ಪ್ರವೇಶಕ್ಕೆ ಕಾಲ ಪಕ್ವವಾಗಿಲ್ಲವೆಂದು ನಾನು ಚುನಾವಣಾ ರಾಜಕಾರಣದಿಂದ ದೂರ ಉಳಿದಿದ್ದೆ. ಆದರೂ ತೆರೆಮರೆಯಲ್ಲಿದ್ದು ಎಲ್ಲಾ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.

ರಾಧಾಕೃಷ್ಣ ಶಿಸ್ತಿನ ವ್ಯಕ್ತಿತ್ವದವರು, ಸಮಯ ಪಾಲಕರೆಂಬ ಛಾಪಿದೆ, ರಾಜಕೀಯದಲ್ಲಿಯೂ ನೀವು ನಂಬಿಕೊಡು ಬಂದ ಶಿಸ್ತು, ಸಮಯ ಪಾಲನೆ ಸಾಧ್ಯವೆಂದು ಅನ್ನಿಸುತ್ತದೆಯೆ?

- ರಾಜಕೀಯ ಇರಲಿ, ಬೇರಾವುದೇ ರಂಗವಿರಲಿ, ಸಮಯ ಪಾಲನೆ, ಶಿಸ್ತನ್ನು ಎಲ್ಲರೂ ರೂಢಿಸಿಕೊಂಡಿರಬೇಕು ಎಂದು ಪ್ರತಿಪಾದಿಸುವವ ನಾನು. ಹೀಗಾಗಿ ನಾನು ನಂಬಿಕೊಂಡು ಬಂದಿರುವ ಸಮಯ ಪಾಲನೆ, ಶಿಸ್ತನ್ನು ರಾಜಕೀಯದಲ್ಲಿಯೂ ಕಾಪಾಡಿಕೊಂಡು ಹೋಗುವೆ.

ಉದ್ದಿಮೆ, ವ್ಯವಹಾರ, ಶಿಕ್ಷಣ ರಂಗದಲ್ಲಿ ಸಕ್ರೀಯರಾಗಿದ್ದ ನಿಮಗೆ ಸಮಾಜ ಸೇವೆಗೆ ಅಲ್ಲೇ ವಿಫುಲ ಅವಕಾಶವಿತ್ತು, ರಾಜಕೀಯಕ್ಕೆ ಪ್ರವೇಶಿಸುವುದರ ಹಿಂದೆ ಮತ್ತೇನಾದರೂ ಬಲವಾದ ಸೆಳೆತ, ಆಕರ್ಷಣೆ ಇದೆಯಾ?

- ರಾಜಕೀಯಕ್ಕೆ ಬರೋದರ ಹಿಂದೆ ನನಗೆ ಸೇವೆ ಮಾಡುವ ವಿಶಾಲವಾದ ಅವಕಾಶ ಸಿಗುತ್ತದೆಂಬುದೇ ನನಗಿರುವ ಸೆಳೆತ, ಅದು ಬಿಟ್ರೆ ಬೇರೇನೂ ಇಲ್ಲ, ನಾವಿರುವಲ್ಲೇ ಇದ್ಕೊಂಡು ಕೆಲಸ ಮಾಡಬಹುದು, ಅದಕ್ಕೆ ಇತಿಮಿತಿ ಇರುತ್ತದೆ, ಇಲ್ಲಿ ಅವಕಾಶಗಳು ಹೆಚ್ಚಿರುತ್ತವೆ. ಎಲ್ಲಾ ವರ್ಗದವರನ್ನೂ ಒಳಗೊಂಡು ಸೇವೆ ಮಾಡಬಹುದು. ಸರಕಾರದ ನೀತಿ ನಿರೂಪಣೆಯಲ್ಲಿಯೂ ಪಾತ್ರ ನಿಭಾಯಿಸಬಹುದು. ಇವೆಲ್ಲ ಕಾರಣಕ್ಕಾಗಿ ನಾನು ರಾಜಕೀಯಕ್ಕೆ ಬರಲು ಬಯಸಿದೆ.

ಅಳಿಯಂದಿರಿಗೆ ಟಿಕೆಟ್‌ ಕೊಟ್ಟು ಖರ್ಗೆಯವರು ಕಲಬುರಗಿಯಲ್ಲಿ, ರಾಜ್ಯದಲ್ಲಿ ಕುಟುಂಬ ರಾಜಕೀಯದ ಸೆಕೆಂಡ್‌ ಇನ್ನಿಂಗ್ಸ್‌ಗೆ ಶ್ರೀಕಾರ ಹಾಕಿದ್ದಾರೆಂಬ ಆರೋಪಗಳು ಚರ್ಚೆಯಲ್ಲಿವೆ, ಇದಕ್ಕೇನಂತೀರಿ?

- ಪ್ರಸ್ತುತ ಸಂದರ್ಭದಲ್ಲಿ ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ಹೀಗಾಗಿ ಕುಟುಂಬ ರಾಜಕಾರಣ ಬಗ್ಗೆ ಮಾತನಾಡೋದೇ ಸರಿಯಲ್ಲ. ಎಲ್ಲಾ ಪಕ್ಷಗಳಲ್ಲೂ ಅದು ಬೇರೂರಿ ಬಿಟ್ಟಿದೆ. ಖರ್ಗೆಯವರು ಅಳಿಯನಿಗೇ ಟಿಕೆಟ್‌ ಕೊಟ್ರು ಅನ್ನೋ ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲವೆ? ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್‌ನಲ್ಲಿ ಕುಟುಂಬ ರಾಜಕೀಯ ಇಲ್ಲವೆ? ಡಾ. ಉಮೇಶ ಜಾಧವ್‌ ಸಂಸದರಾಗಿದ್ದರು, ಅವರ ಪುತ್ರ ಶಾಸಕರು, ಅವರ ಸಹೋದರಿ ಪುತ್ರ ಕೂಡಾ ಶಾಸಕರು. ಬಿ.ಎಸ್‌. ಯಡಿಯೂರಪ್ಪ ಪರಿವಾರದಲ್ಲೂ ಏನಿದೆ ಅಂತ ಹೇಳಬೇಕಾ? ಶಿಕ್ಷಕರ ಮಗ ಶಿಕ್ಷಕ, ಡಾಕ್ಟರ್‌ ಮಗ ಡಾಕ್ಟರ್‌ ಆಗಬೇಕಂತಾರೆ. ಪಾಲಿಟಿಕ್ಸ್‌ಗೆ ಬಂದಾಗ ಈ ಸೂತ್ರಕ್ಕೇ ಟೀಕೆ- ಟಿಪ್ಪಣಿ ಮಾಡ್ತಾರೆ, ಪರಿವಾರ ಪಾಲಿಟಿಕ್ಸ್‌ ಅಂತ ಆರೋಪ ಮಾಡ್ತಾರೆ. ಯಾಕೆ ಹೀಗೆ? ಬಿಜೆಪಿಯಲ್ಲಿ ಈ ಬಾರಿ ಶೇ.31 ರಷ್ಟು ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡಿದ್ದಾರೆ.

 ಅಳಿಯನನ್ನು ಕಣಕ್ಕಿಳಿಸಿ ಖರ್ಗೆ ಕಣದಿಂದ ದೂರ ಇರೋದರ ಹಿಂದೆ ಅವರನ್ನಾವರಿಸಿರೋ ಸೋಲಿನ ಭೀತಿ ಇನ್ನೂ ತೊಲಗಿಲ್ಲ ಎಂಬುದಕ್ಕೆ ಕನ್ನಡಿ ಎಂದು ಬಿಜೆಪಿ ರಾಷ್ಟ, ರಾಜ್ಯ ಮುಖಂಡರು ಆರೋಪಿಸುತ್ತಿದ್ದಾರಲ್ಲ, ನೀವೇನಂತೀರಿ?

- ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆಯವರಿಗೆ ಕಲಬುರಗಿಗಿಂತ ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಮುನ್ನಡೆಸಿ ಹೆಚ್ಚಿನ ಸ್ಥಾನ ಗೆಲ್ಲುವ ಬಹು ದೊಡ್ಡ ಜವಾಬ್ದಾರಿ ಇದೆ. ಅವರೀಗ ರಾಷ್ಟ್ರಮಟ್ಟದಲ್ಲಿ ರಾಜಕಾರಣ ಮಾಡುವಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆಂಬುದು ಆರೋಪ ಮಾಡುವ ಮುನ್ನ ಬಿಜೆಪಿಯವರು ಅರಿಯಲಿ. ಚುನಾವಣೆಯಲ್ಲಿ ಸೋಲು- ಗೆಲುವು ಇದ್ದದ್ದೆ, ಹಾಗಂತ ಅದನ್ನೇ ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡೋದು ಎಷ್ಟು ಸರಿ? ಜನತಾ ಜನಾರ್ಧನನ ತೀರ್ಪು ಇಲ್ಲಿ ಅಂತಿಮ ಅನ್ನೋದನ್ನು ನಾವ್ಯಾರೂ ಮರೆಯಬಾರದು.

ನೀವು ತುಂಬ ಸೌಮ್ಯ ಸ್ವಭಾವದವರು, ಮಿತಭಾಷಿಗಳು, ರಾಜಕೀಯದಲ್ಲಿರುವವರು ಕಲ್ಲನ್ನೂ ಮಾತನಾಡಿಸಬೇಕು ಅನ್ನೋ ಮಾತಿದೆ, ಹೀಗಿರೋವಾಗ ನೀವು ಮುಂದಿನ ದಿನಗಳಲ್ಲಿ ನಿಮ್ಮ ಜೀವನ ಶೈಲಿ, ಮಾತಿನ ವರಸೆ ಬದಲಿಸಿಕೊಳ್ಳುವ ಮನಸ್ಸು ಮಾಡುತ್ತೀರಾ?

- ರಾಜಕಾರಣದಲ್ಲಿ ಮಾತಿಗಿಂತ ಕೆಲಸ ಮಾಡಿ ತೋರಿಸುವವರು ಹೆಚ್ಚು ಬೇಕಾಗಿದೆ. ಎಲ್ಲರೂ ಮಾತನಾಡುವವರೇ ಆದರೆ ಕೆಲಸ ಮಾಡುವವರು ಯಾರು? ಮಾತುಗಾರರು ಬೇಕು, ಕೆಲಸಗಾರರೂ ಬೇಕಲ್ಲವೆ? ನಮ್ಮ ಮಾವನವರಾದ ಡಾ. ಖರ್ಗೆಯವರು ಮಾತಿಗಿಂತ ಕೆಲಸದಲ್ಲಿ ನಂಬಿ ಅದನ್ನೇ 5 ದಶಕದ ತಮ್ಮ ಸುದೀರ್ಘ ರಾಜಕೀಯದಲ್ಲಿ ಮಾಡುತ್ತ ಬಂದವರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ನಾನು ಮಾತು ಕಮ್ಮಿ, ಕೆಲಸ ಹೆಚ್ಚು ಅನ್ನೋ ಸೂತ್ರ ನಂಬಿದವ. ಮಾತಿಗಂತ ಕೃತಿ ಮೇಲು ಎಂಬುದು ಎಲ್ಲಾ ಕಾಲಕ್ಕೂ ಸಾಬೀತಾದ ಮಾತಲ್ಲವೆ?

ಡಾ. ಖರ್ಗೆಯವರು ಸಾರ್ವಜನಿಕ ಬದುಕಲ್ಲಿ 50 ವರ್ಷವಿದ್ದು ದಾಖಲೆ ಬರೆದವರು, ಈ ಸಂಗತಿಯನ್ನು ನಿಮ್ಮ ಗೆಲುವಿನ ದಾರಿಯಲ್ಲಿ ಹೇಗೆ ಬಳಸಿಕೊಳ್ಳುತ್ತೀರಿ?

- ನಮ್ಮ ಮಾವನವರಾದ ಡಾ.ಖರ್ಗೆಯವರು ಸುದೀರ್ಘ ಐದೂವರೆ ದಶಕಗಳ ರಾಜಕೀಯ ಬದುಕಲ್ಲಿ ಸಾಕಷ್ಟು ಕೆಲಸ ಕಾರ್ಯ ಮಾಡಿ ತಮ್ಮದೇ ಆದಂತಹ ಗುರುತು, ಛಾಪು ಮೂಡಿಸಿದ್ದಾರೆ. ಮಾವನರ ಸಾರ್ವಜನಿಕ ಬದುಕಿನ ಸಾಧನೆ ನನ್ನ ಗೆಲುವಿಗೆ ಶ್ರೀರಕ್ಷೆಯಾಗೋದರಲ್ಲಿ ಎರಡು ಮಾತಿಲ್ಲ. ನಮ್ಮ ರಾಜ್ಯದಲ್ಲಿ ಪಕ್ಷ ನೀಡಿರುವ ಪಂಚ ಗ್ಯಾರಂಟಿಗಳು ಅನುಷ್ಠಾನಕ್ಕೆ ಬಂದು ಜನರಿಗೆ ತಲುಪುತ್ತಿವೆ. ಯಾವುದೇ ಯೋಜನೆ ಘೋಷಣೆಯಾದರೆ ಸಾಲದು, ಜನರಿಗೆ ತಲುಪಬೇಕು, ಆ ಕೆಲಸವನ್ನು ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಮಾಡಿದೆ. ಇವೆಲ್ಲವನ್ನು ನಾನು ನನ್ನ ಪ್ರಚಾರದ ಸಾಮಗ್ರಿಯಾಗಿಸಿಕೊಂಡಿರುವೆ.

ಕಲಬುರಗಿ ಮೀಸಲು ಲೋಕಸಭೆ ಕ್ಷೇತ್ರದ ಜನರನ್ನು ಕಂಡು ಯಾವ ಸಂಗತಿಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೀರಿ?

- 2019ರ ಚುನಾವಣೆಯಲ್ಲಿ ಖರ್ಗೆಯವರನ್ನು ಸೋಲಿಸಿ ಸಂಸತ್ ಪ್ರವೇಶಿಸಿರುವ ಬಿಜೆಪಿಯ ಡಾ. ಜಾಧವ್‌ ಈ ಭಾಗದ ಪ್ರಗತಿಗೆ ಯಾವದೇ ಕೆಲಸ ಮಾಡಲಿಲ್ಲ. ಹೊಸ ಯೋಜನೆ ತರೋದು ಇರಲಿ, ಖರ್ಗೆಯವರು ಮಂಜೂರು ಮಾಡಿದ್ದ ಅನೇಕ ಯೋಜನೆಗಳು ಕೈ ಬಿಟ್ಟು ಹೋಗೋದನ್ನೂ ತಪ್ಪಿಸಲಾಗಲಿಲ್ಲ. ಬರೀ ಮನವಿ ಕೊಟ್ಟು ಕೈಕಟ್ಟಿ ಕುಳಿತರೇ ಹೊರತು ವಾಸ್ತವದಲ್ಲಿ ಕಲಬುರಗಿ ಜನರನ್ನು ಸಂಸತ್‌ನಲ್ಲಿ ನಿಜವಾಗಿ ಪ್ರತಿನಿಧಿಸಲೇ ಇಲ್ಲ. ಹೀಗಾಗಿ, ನಾನು ಗೆದ್ದರೆ ನ್ಯಾಯ ಕೊಡಿಸುವೆ ಎಂದು ಜನರ ಮುಂದೆ ಹೋಗುತ್ತಿರುವೆ.

 ರಾಧಾಕೃಷ್ಣ ಅವ.ರು ತೆರೆಮರೆಯಲ್ಲಿದ್ದು ಕೆಲಸ ಮಾಡಿದವರೇ ಹೊರತು ಜನರೊಂದಿಗೆ ಬೆರೆತವರಲ್ಲ, ಇಲೆಕ್ಷನ್‌ ಅನುಭವ ಹೊಸತು ಅನ್ನೋ ಮಾತುಗಳಿವೆ, ಇದನ್ನು ಹೇಗೆ ತಾವು ನಿಭಾಯಿಸುತ್ತೀರಿ?

- ನಾನು ತೆರೆಮರೆಯಲ್ಲಿದ್ದರೂ ಕೂಡಾ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವ ಎಲ್ಲಾ ನಾಯಕರೊಂದಿಗೂ ಸ್ನೇಹ- ಸಂಬಂಧ ಹೊಂದಿದವ. ಹೀಗಾಗಿ ರಾಜಕಾರಣದಲ್ಲಿ ಅನುಭವ ನನಗೆ ಇದ್ದೇ ಇದೆ. ನಾವೇ ಖುದ್ದು ಮುಂಚೂಣಿಯಲ್ಲಿದ್ದರೆ ಮಾತ್ರ ರಾಜಕಾರಣ ಅನುಭವ ಬರುತ್ತದೆ ಅಂತೇನಿಲ್ಲ. ನಮ್ಮ ವ್ಯಕ್ತಿತ್ವ, ನಮ್ಮ ಚಿಂತನೆಗಳಿಂದಲೇ ನಾವು ಪಕ್ವವಾಗಿ ಹೊರಹೊಮ್ಮಿದರೆ ಉತ್ತಮ ಜನ ಸೇವಕರಾಗಬಹುದು ಎಂದು ನಂಬಿರುವೆ.

ನೀವು ನಂಬಿರುವ ಕೆಲಸದ ಕ್ಷೇತ್ರಗಳನ್ನು ತುಸು ಬದಿಗೆ ಸರಿಸಿ, ಹೊಸ ತಿರುವು ಪಡೆದು, ರಾಜಕೀಯದಲ್ಲಿ ಬಂದು ಸಮಾಜವನ್ನು ತಕ್ಕಮಟ್ಟಿಗೆ ಸುಧಾರಿಸಬಹುದು ಎಂದು ನಿಮಗೆ ಅನಿಸಿದೆಯೆ?

- ನಾನಿರುವ ಕ್ಷೇತ್ರದಿಂದ ತುಸು ಬದಲಾವಣೆ ಬಯಸಿರೋದೇ ಇದೇ ಕಾರಣಕ್ಕಾಗಿ, ರಾಜಕೀಯದಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಹೆಚ್ಚು ಸ್ತರದಲ್ಲಿ ಜನರ ಸೇವೆ ಮಾಡಬಹುದು ಎಂದುಕೊಂಡಿದ್ದೇನೆ. ಸೇವೆ ಮಾಡುತ್ತಲೇ ಸಮಾಜದಲ್ಲಿ ಉತ್ತಮ, ಧನಾತ್ಮಕವಾದಂತಹ ಬದಲಾವಣೆ ತರಬಹುದು, ಬದಲಾವಣೆ ಜಗದ ನಿಯಮ ತಾನೆ?

ಜೆಡಿಎಸ್‌ ಮೂರಕ್ಕೆ ಮೂರೂ ಸ್ಥಾನ ಗೆಲ್ಲೋದು ಖಚಿತ! ಡಾ। ಮಂಜುನಾಥ್‌ ಸ್ಪರ್ಧೆ ಹಿಂದೆ ಇದೆ ತಂತ್ರಗಾರಿಕೆ!

ಕಲಬುರಗಿ ಮತದಾರರಿಗೆ ನಿಮ್ಮ ಮನವಿ?

- 2019ರಲ್ಲಿ ಡಾ.ಖರ್ಗೆಯವರು ಇಲ್ಲಿಂದ ಸೋತ ಮೇಲೆ ಕಲಬುರಗಿ ಕ್ಷೇತ್ರದ ಅಭಿವೃದ್ಧಿಗೆ ಭಾರಿ ಹಿನ್ನಡೆಯಾಗಿದೆ. ಈ ಕ್ಷೇತ್ರ ಅಭಿವೃದ್ಧಿಯಲ್ಲಿ 20 ವರ್ಷ ಹಿಂದೆ ಹೋಗಿದೆ. ಕಲಬುರಗಿಗೆ ಕೇಂದ್ರ ಚೊಂಬು ಕೊಟ್ಟಿದೆ. 20 ವರ್ಷ ಹಿಂದೆ ಹೋಗಲು ಕೇಂದ್ರದ ಅನೇಕ ಧೋರಣೆಯೇ ಕಾರಣ. ಕಲಬುರಗಿ ಅಭಿವೃದ್ಧಿಗೆ ಮುಂಚಿನ ವೇಗ ಬರಬೇಕಾದಲ್ಲಿ ಇಲ್ಲಿಂದ ಮತ್ತೆ ಕಾಂಗೆಸ್‌ ಪಕ್ಷ ಗೆಲ್ಲಬೇಕು, ಜನ ನನ್ನನ್ನು ಹರಸುವ ಮೂಲಕ ಖರ್ಗೆಯವರ ಕೈ ಬಲಪಡಿಸಬೇಕು.

Follow Us:
Download App:
  • android
  • ios