ಗ್ಯಾರಂಟಿ, ಮೋದಿ ವೈಫಲ್ಯ ಕಾಂಗ್ರೆಸ್‌ ಅಸ್ತ್ರ: ಮುಖಾಮುಖಿ ಸಂದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದು ಏಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
 

CM Siddaramaiah Exclusive Interview Over Lok Sabha Elections 2024 and PM Narendra Modi gvd

ಎಸ್‌.ಗಿರೀಶ್‌ಬಾಬು

ಬೆಂಗಳೂರು (ಏ.29): ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳ ಚುನಾವಣೆ ಮುಗಿದು ಎರಡನೇ ಹಂತದ 14 ಕ್ಷೇತ್ರಗಳ ಚುನಾವಣೆಯ ಬಿರುಸು ಆರಂಭಗೊಂಡಿದೆ. ಈ ಹಂತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಖರಿ ಮೇಲೆ ವಾಗ್ದಾಳಿ ನಡೆಸುವುದನ್ನೇ ರಾಷ್ಟ್ರಮಟ್ಟದ ತಮ್ಮ ಪ್ರಚಾರದ ಪ್ರಮುಖ ಅಜೆಂಡಾ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಬಿಜೆಪಿಯ ಈ ಬದಲಾದ ಪ್ರಚಾರ ತಂತ್ರದ ಹಿಂದಿನ ಅಜೆಂಡಾ ಏನು? ನಿಜಕ್ಕೂ ಈ ಬಾರಿ ಮೋದಿ ಅಲೆ ರಾಜ್ಯದಲ್ಲಿ ಕೆಲಸ ಮಾಡುತ್ತಿದೆಯೇ? ಈ ಚುನಾವಣೆ ಗ್ಯಾರಂಟಿ ಯೋಜನೆಗಳಿಗೆ ದೊರೆಯುವ ಜನಾದೇಶವೇ? ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಪರಿಣಾಮವೇನು? ಹಲವಾರು ಸಚಿವರ ಮಕ್ಕಳು ಚುನಾವಣೆ ಕಣದಲ್ಲಿರುವಾಗ ತಮ್ಮ ಪುತ್ರ ಯತೀಂದ್ರ ಅವರ ನಿಲುವು ಏನಾಗಿತ್ತು, ಅವರ ರಾಜಕೀಯ ಭವಿಷ್ಯವೇನು? ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದು ಏಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

* ಮೊದಲ ಹಂತದ ಚುನಾವಣೆ ಮುಗೀತು. ಎಷ್ಟು ಗೆಲ್ತೀರಿ?
ಮೊದಲ ಹಂತದ 14 ಕ್ಷೇತ್ರಗಳ ಪೈಕಿ 9 ರಿಂದ 10 ಸೀಟು ಗೆಲ್ಲುತ್ತೇವೆ.

ಬರ ಪರಿಹಾರ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

* ಈ ವಿಶ್ವಾಸಕ್ಕೆ ಕಾರಣ?
ಮೊದಲ ಕಾರಣ, ರಾಜ್ಯ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳು ಜನರಿಗೆ ಮುಟ್ಟಿವೆ. ಎರಡನೇ ಕಾರಣ- ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳು. ಮೂರನೇಯದ್ದು - ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಹಾಗೂ ತೋರುತ್ತಿರುವ ದ್ವೇಷ ಮತ್ತು ಮಲತಾಯಿ ಧೋರಣೆ. ಇದು ಜನರಿಗೆ ಬೇಸರ ತರಿಸಿದೆ. ಇದೇ ವೇಳೆ ಯಶಸ್ವಿಯಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದರಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಜನರಿಗೆ ವಿಶ್ವಾಸ ಬಂದಿದೆ. ಹೀಗಾಗಿ ಈ ಸಾಧನೆ ಸಾಧ್ಯವಾಗುತ್ತದೆ ಎಂಬ ವಿಶ್ವಾಸ ಮೂಡಿದೆ.

* ಗ್ಯಾರಂಟಿ ಪರಿಣಾಮ ಬೀರಲ್ಲ. ಏಕೆಂದರೆ, ಇದು ದೇಶಕ್ಕೆ ಸಂಬಂಧಿಸಿದ ಚುನಾವಣೆ ಅಂತಾರೆ ಬಿಜೆಪಿಯವರು?
ಈ ಚುನಾವಣೆ ದೇಶಕ್ಕೆ ಸಂಬಂಧಿಸಿದ್ದು, ನಿಜ. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ 10 ವರ್ಷದಲ್ಲಿ ಏನು ಮಾಡಿದೆ ಎಂಬದನ್ನೂ ಜನ ನೋಡಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬರುವಾಗ ಬಿಜೆಪಿ ನೀಡಿದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ಇದು ಜನರ ಮನಸ್ಸಿನಲ್ಲಿ ಇದೆ. ಅಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರೇ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ, ರೈತರ ಸಮಸ್ಯೆ ಬಗೆಹರಿಸುತ್ತೇವೆ, ರುಪಾಯಿಯ ಮೌಲ್ಯ ಉತ್ತಮವಾಗುವಂತೆ ಮಾಡುತ್ತೇವೆ ಎಂದಿದ್ದರು. ಆದರೆ, ಯಾವುದನ್ನೂ ಮಾಡಿಲ್ಲ. ಹೀಗಾಗಿ ಜನರು ನರೇಂದ್ರ ಮೋದಿ ಆಡಳಿತದ ಬಗ್ಗೆ ಭ್ರಮ ನಿರಸನಗೊಂಡಿದ್ದಾರೆ. ಇದು ಫಲಿತಾಂಶದಲ್ಲಿ ಪ್ರತಿಫಲಿಸಲಿದೆ.

* ಮೋದಿ ಅಲೆ ಇದೆ. ನಮಗೆ ಹೆಚ್ಚು ಸ್ಥಾನ ಅಂತ ಬಿಜೆಪಿಯವರ ನಂಬಿಕೆ?
ಇಲ್ಲ. 2014 ಹಾಗೂ 2019ರಲ್ಲಿ ಇದ್ದಂತಹ ಮೋದಿ ಅಲೆ 2024ರಲ್ಲಿ ಇಲ್ಲ. ಆದರೆ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೆಲಸ ಮಾಡಿವೆ. ಹೀಗಾಗಿ ಗ್ಯಾರಂಟಿ ಅಲೆ ಇದೆ. 

* ಹಾಗಿದ್ದರೆ, ಈ ಚುನಾವಣೆ ಫಲಿತಾಂಶ ಗ್ಯಾರಂಟಿ ಯೋಜನೆಗಳಿಗೆ ದೊರೆಯುವ ಜನಾದೇಶ ಎನ್ನಬಹುದೇ?
ಹೌದು, ಗ್ಯಾರಂಟಿ ಯೋಜನೆಯ ಯಶಸ್ವಿ ಅನುಷ್ಠಾನದ ಬಗ್ಗೆ ಜನರು ಸಂತೋಷಗೊಂಡಿದ್ದಾರೆ. ನಮ್ಮ ಸರ್ಕಾರದ ಆಡಳಿತ ಮೇಲೆ ವಿಶ್ವಾಸ ಮೂಡಿದೆ. ನಮ್ಮ ಪರವಾಗಿ ಮತ ಹಾಕುತ್ತಾರೆ ಎಂಬ ನಂಬಿಕೆ ಇದೆ.

* ಸಿದ್ದರಾಮಯ್ಯ ಸರ್ಕಾರದ ಮೇಲೆ ವಾಗ್ದಾಳಿ ಪ್ರಧಾನಿ ಮೋದಿ ಅವರಿಗೆ ರಾಷ್ಟ್ರವ್ಯಾಪಿ ಮುಖ್ಯ ಅಜೆಂಡಾ ಆಗಿಬಿಟ್ಟಿದೆಯಲ್ಲ?
ಮೋದಿ ಬರೇ ಸುಳ್ಳು ಹೇಳುತ್ತಿದ್ದಾರೆ. ದೇಶದ ಪ್ರಧಾನಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಈ ಪರಿ ಸುಳ್ಳು ಹೇಳುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ. 

* ಯಾವುದು ಸುಳ್ಳು?
ಈಗ ರಾಜ್ಯ ಸರ್ಕಾರ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದೆ ಅಂತ ಪ್ರಧಾನಿ ಹೇಳುತ್ತಿದ್ದಾರೆ. ವಾಸ್ತವವೆಂದರೆ, ಮುಸ್ಲಿಮರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.4ರಷ್ಟು ಮೀಸಲಾತಿ ನೀಡುವ ನೀತಿ ಜಾರಿಯಾಗಿದ್ದು 1994ರಲ್ಲಿ. ಅಂದರೆ ಕಳೆದ ಮೂವತ್ತು ವರ್ಷದಿಂದ ಈ ನೀತಿ ಜಾರಿಯಲ್ಲಿದೆ. ವೀರಪ್ಪ ಮೊಯ್ಲಿ ಅವರು ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧಾರದ ಮೇಲೆ ಈ ಮೀಸಲಾತಿ ನೀಡಲು ಮುಂದಾದರು. ಆದರೆ, ಆದೇಶ ಹೊರ ಬಿದ್ದಿದ್ದು ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ. ಆದರೆ, ಮೋದಿ ಮುಸ್ಲಿಂ ಮೀಸಲಾತಿಯನ್ನು ಈಗ ನೀಡಲಾಗಿದೆ ಅಂತ ಸುಳ್ಳು ಹೇಳುತ್ತಿದ್ದಾರೆ.

* ಕಾಂಗ್ರೆಸ್‌ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲು ನೀಡಿದೆ. ಅದನ್ನು ಬಿಜೆಪಿಯ ಬೊಮ್ಮಾಯಿ ತಡೆದರು ಅಂತಾರೆ?
ಮೂವತ್ತು ವರ್ಷದಿಂದ ಜಾರಿಯಲ್ಲಿದ್ದ ಮುಸ್ಲಿಮರ ಮೀಸಲಾತಿಯನ್ನು ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ರದ್ದು ಮಾಡಲಾಯಿತು. ಅದನ್ನು ಮುಸ್ಲಿಂ ನಾಯಕರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಆಗ ಬೊಮ್ಮಾಯಿ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಅಫಿಡವಿಟ್‌ ಸಲ್ಲಿಸಿ ಮುಸ್ಲಿಮರ ಮೀಸಲಾತಿ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುತ್ತೇವೆ ಎಂದು ಬರೆದುಕೊಟ್ಟಿದೆ. ಯಥಾಸ್ಥಿತಿ ಎಂದರೆ ಏನರ್ಥ, ಮುಸ್ಲಿಂ ಮೀಸಲಾತಿ ಮುಂದುವರೆಸುತ್ತೇವೆ ಎಂದು ಅರ್ಥವಲ್ಲವೇ? ಬೊಮ್ಮಾಯಿ ಸರ್ಕಾರ ಮುಸ್ಲಿಂ ಮೀಸಲಾತಿ ಮುಂದುವರೆಸಿದ್ದರೂ ಸಿದ್ದರಾಮಯ್ಯ ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿದ್ದಾರೆ ಎಂದು ನರೇಂದ್ರ ಮೋದಿ ಹೇಳುತ್ತಿರುವುದು ಸುಳ್ಳಲ್ಲವೇ? ಜನರಿಗೆ ಇದು ಅರ್ಥವಾಗುವುದಿಲ್ಲವೇ? ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಹೀಗಾಗಿ, ಕಾಂಗ್ರೆಸ್ಸೇ ಸಂವಿಧಾನಕ್ಕೆ ತಿದ್ದುಪಡಿ ತರುತ್ತದೆ ಅಂತಾರೆ ಮೋದಿ?

ಐ ಆ್ಯಮ್ ಸಾರಿ ಟು ಸೇ ದಿಸ್‌... ನರೇಂದ್ರ ಮೋದಿ ಅವರಿಗೆ ಭಾರತೀಯ ಸಂವಿಧಾನದ ಜ್ಞಾನ ಇಲ್ಲ ಅಂತ ಅನಿಸತ್ತೆ. ಯಾರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಮೀಸಲಾತಿ ನೀಡಬೇಕು ಎಂದು ನಮ್ಮ ಸಂವಿಧಾನದ ಆರ್ಟಿಕಲ್‌ 15 ಮತ್ತು 16 ಸ್ಪಷ್ಟವಾಗಿ ಹೇಳುತ್ತವೆ. ಇದರ ಆಧಾರದ ಮೇಲೆ ಚಿನ್ನಪ್ಪ ರೆಡ್ಡಿ ಆಯೋಗ ತನ್ನ ವರದಿಯಲ್ಲಿ ಮುಸ್ಲಿಮರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ತಿಳಿಸಿತ್ತು. ಅದರಂತೆ ಮೂವತ್ತು ವರ್ಷದ ಹಿಂದೆ ಶೇ.4ರಷ್ಟು ಮೀಸಲು ನೀಡಲಾಗಿತ್ತು. ಅದು ಧರ್ಮಾಧಾರಿತವಾಗಿ ನೀಡಿದ ಮೀಸಲಾತಿಯಲ್ಲ. ಬದಲಾಗಿ ಸಂವಿಧಾನದ ಆರ್ಟಿಕಲ್‌ 15 ಹಾಗೂ 16ರ ಅಡಿಯಲ್ಲಿ ನೀಡಿರುವುದು. ಈ ಸತ್ಯವನ್ನು ಮುಚ್ಚಿಟ್ಟು ನರೇಂದ್ರ ಮೋದಿ ಸುಳ್ಳು ಹೇಳಿ ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

* ಮೋದಿ ಹೇಳುತ್ತಿರುವುದು ಸುಳ್ಳೇ ಆಗಿದ್ದರೆ ಅದಕ್ಕೆ ಕಾರಣವೇನು?
ಮೋದಿ ಅವರಿಗೆ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಬಗ್ಗೆ ದ್ವೇಷವಿದೆ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬರ ಪರಿಹಾರ ನೀಡಿದ ನಂತರವೂ ಈ ವಿಚಾರದ ಬಗ್ಗೆ ಕೇಂದ್ರ ಹಾಗೂ ರಾಜ್ಯದ ನಡುವೆ ಜಟಾಪಟಿ ಮುಂದುವರೆದಿದೆ? ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ ಎಂಬ ಕಾರಣಕ್ಕೆ ಬರ ಪರಿಹಾರವನ್ನೇ ಕೇಂದ್ರ ನೀಡಲಿಲ್ಲ. ಹೀಗಾಗಿಯೇ ನಾವು ನ್ಯಾಯಾಲಯಕ್ಕೆ ಹೋದೆವು. ನ್ಯಾಯಾಲಯ ನಿರ್ದೇಶನ ನೀಡಿದ ನಂತರ ಪರಿಹಾರ ಕೊಟ್ಟಿದ್ದಾರೆ. ಅದೂ ನಾವು ಪರಿಹಾರವಾಗಿ ನೀಡುವಂತೆ ಕೋರಿದ ಮೊತ್ತದ ಶೇ. 19ರಷ್ಟು ಮಾತ್ರ. ಇದು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯವಲ್ಲವೇ?

* ಪರಿಹಾರ ಕಡಿಮೆ ಆಯ್ತು ಅಂತೀರಲ್ಲ. ಮುಂದೇನು ಮಾಡುವಿರಿ?
ಕೇಂದ್ರ ಸರ್ಕಾರದ ಈ ಅನ್ಯಾಯದ ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೇವೆ. ಅಲ್ಲದೆ, ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆದಿದೆ. ಹೀಗಾಗಿ ನಾವು ನ್ಯಾಯಾಲಯದ ಮುಂದೆ ಕೇಂದ್ರ ನಮಗೆ ಅತ್ಯಂತ ಕಡಿಮೆ ಪರಿಹಾರ ನೀಡಿದೆ ಅಂತ ಅಹವಾಲು ಸಲ್ಲಿಸುತ್ತೇವೆ.

* ಚುನಾವಣೆ ನಂತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಬದಲಿಸಿ ಡಿಸಿಎಂ ಅನ್ನು ಸಿಎಂ ಮಾಡುತ್ತಾರೆ ಅಂತಾನೂ ಮೋದಿ ಹೇಳಿದ್ದಾರೆ?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಎರಡೇ ವರ್ಷಕ್ಕೆ ಮುಖ್ಯಮಂತ್ರಿ ಬದಲಾಯಿಸಿ ಪಾಪ ಆ ಯಡಿಯೂರಪ್ಪ ಗೋಳೋ ಎಂದು ಅಳುವಂತೆ ಮಾಡಿದ್ದು ಯಾರು? ಪ್ರಧಾನಮಂತ್ರಿ ನರೇಂದ್ರ ಮೋದಿ ತಾನೆ. ಹೀಗೆ ತನ್ನ ಮುಖ್ಯಮಂತ್ರಿಯನ್ನು ಬದಲಾಯಿಸಿದ ನರೇಂದ್ರ ಮೋದಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ನಮ್ಮ ವಿಚಾರದ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ನಾವು ಪಾಲಿಸುತ್ತೇವೆ.

* ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ಗೆ ನಾಯಕತ್ವವೇ ಇಲ್ಲ ಅಂತಾರೆ ಮೋದಿ?
ದೇಶದಲ್ಲಿ ಬಿಜೆಪಿಗೆ ವಾಜಪೇಯಿ ಹಾಗೂ ಆಡ್ವಾಣಿ ಅವರು ನಾಯಕರಾಗಿದ್ದರು. ಆಗ ನರೇಂದ್ರ ಮೋದಿ ನಾಯಕನೇ ಆಗಿರಲಿಲ್ಲ. ಅಲ್ಲವೇ? ಅಂತಹ ನರೇಂದ್ರ ಮೋದಿ ಇದ್ದಕ್ಕಿದ್ದಂತೆ ನಾಯಕನಾಗಿ ಉದ್ಭವಿಸಿದ್ದು ಹೇಗೆ? ಈ ನರೇಂದ್ರ ಮೋದಿಗೆ ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಯಾವುದರಲ್ಲಿ ಕಡಿಮೆ ಇದ್ದಾರೆ? ಆದ್ದರಿಂದ ಕಾಂಗ್ರೆಸ್‌ನಲ್ಲಿ ಹಾಗೂ ಪ್ರತಿಪಕ್ಷಗಳಲ್ಲಿ ನಾಯಕತ್ವ ಇಲ್ಲ ಅನ್ನುವುದರಲ್ಲಿ ಅರ್ಥವಿಲ್ಲ. ನಮ್ಮ ಪಕ್ಷದಲ್ಲಿ ದೇಶ ಮುನ್ನೆಡೆಸುವ ಸಾಮರ್ಥ್ಯವಿರುವ ಹಲವಾರು ನಾಯಕರಿದ್ದಾರೆ.

* ಬಿಜೆಪಿ ಗೆದ್ದರೆ ನರೇಂದ್ರ ಮೋದಿ ಪ್ರಧಾನಿ. ಕಾಂಗ್ರೆಸ್‌ ಗೆದ್ದರೆ ಯಾರು?
ಬಿಜೆಪಿ ಹಾಗೂ ಎನ್‌ಡಿಎಯವರು ತಾವು ಗೆದ್ದರೆ... ಅವರು ಗೆಲ್ಲುವುದಿಲ್ಲ, ಆ ಮಾತು ಬೇರೆ. ಅಕಸ್ಮಾತ್‌ ಗೆದ್ದರೆ... ನರೇಂದ್ರ ಮೋದಿ ಪ್ರಧಾನಿ ಅಂತ ಘೋಷಿಸಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ ‘ಇಂಡಿಯಾ’ ಎಂಬ ಮೈತ್ರಿ ಕೂಟದಲ್ಲಿದೆ. ಈ ಮೈತ್ರಿ ಕೂಟ ಇರುವ ಕಾರಣಕ್ಕೆ ಇಂಥವರನ್ನೇ ಪ್ರಧಾನಿ ಎಂದು ಘೋಷಣೆ ಮಾಡಲು ಆಗುವುದಿಲ್ಲ. ಚುನಾವಣೆ ಫಲಿತಾಂಶ ಬಂದ ನಂತರ ಎಲ್ಲರೂ ಕುಳಿತು ಕಾಮನ್‌ ಮಿನಿಮಮ್‌ ಪ್ರೋಗ್ರಾಂ ಮಾಡಿಕೊಂಡು ನಾಯಕತ್ವವನ್ನು ಆಯ್ಕೆ ಮಾಡುತ್ತಾರೆ. ಆದರೆ, ನಿಮ್ಮ ‘ಇಂಡಿಯಾ’ ಮೈತ್ರಿ ನಿರೀಕ್ಷೆಯಷ್ಟು ಯಶಸ್ವಿಯಾಗಿಲ್ಲ?ನಿರೀಕ್ಷೆಯಷ್ಟು ಅಂದರೆ ಏನು? ಈಗ ಮಮತಾ ಬ್ಯಾನರ್ಜಿ ಸೀಟು ಹಂಚಿಕೆ ಮಾಡಿಕೊಂಡಿಲ್ಲ. ಆದರೆ, ಚುನಾವಣೆ ನಂತರ ಅವರೇನೂ ಬಿಜೆಪಿ ಜತೆಗೆ ಹೋಗುತ್ತಾರಾ? ಇಲ್ಲ. ಖಂಡಿತಾ ಅವರು ‘ಇಂಡಿಯಾ’ ಜತೆಗೆ ಬರುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ ಎಷ್ಟು ಗೆಲ್ಲಬಹುದು? ಇಷ್ಟೆ ಅಂತ ಹೇಳಲು ಆಗುವುದಿಲ್ಲ. ಆದರೆ ಬಿಜೆಪಿ ವಿರೋಧಿ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವಷ್ಟು ಮೆಜಾರಿಟಿ ಕಾಂಗ್ರೆಸ್‌ಗೆ ಬರುತ್ತದೆ.

* ರಾಜ್ಯದ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಪರಿಣಾಮ ಕಾಣುತ್ತಿದೆಯೇ?
ಏನೂ ಪರಿಣಾಮ ಕಾಣುತ್ತಿಲ್ಲ. ಇಲ್ಲಿಯವರೆಗೂ ಬಿಜೆಪಿ ಹಾಗೂ ಜೆಡಿಎಸ್‌ ಪರಸ್ಪರ ಬೈಯ್ದಾಡಿಕೊಂಡಿದ್ದರು. ಈಗ ಇದ್ದಕ್ಕಿದ್ದಂತೆ ಒಗ್ಗೂಡಿ ಬಿಟ್ಟರೆ ಜನರು ಅವರನ್ನು ನಂಬುತ್ತಾರೆಯೇ? ಸ್ವಾರ್ಥಕ್ಕಾಗಿ ಈ ಮೈತ್ರಿ. ಜೆಡಿಎಸ್‌ನವರು ಸಮಯಸಾಧಕ ರಾಜಕಾರಣ ಮಾಡುತ್ತಿದ್ದಾರೆ. ನಾವು ಬಿಜೆಪಿ ಜತೆ ಸೇರಿರದಿದ್ದರೆ ಕಾಂಗ್ರೆಸ್‌ ನಮ್ಮ ಪಕ್ಷವನ್ನು ಮುಗಿಸಿ ಬಿಡುತ್ತಿತ್ತು ಅಂತಾರೆ ಜೆಡಿಎಸ್‌ ನಾಯಕರು? ಮುಗಿಸಿಬಿಡೋದು ಅಂದರೆ ಏನು? ಪ್ರತಿಪಕ್ಷವನ್ನು ದುರ್ಬಲಗೊಳಿಸುವುದೇ ಆಡಳಿತ ಪಕ್ಷದ ಕರ್ತವ್ಯವಲ್ಲವೇ? ಬಿಜೆಪಿಯಾಗಲಿ ಅಥವಾ ಜೆಡಿಎಸ್‌ ಆಗಲಿ ಆ ಪಕ್ಷಗಳನ್ನು ದುರ್ಬಲ ಮಾಡುವುದು ನಮ್ಮ ಡ್ಯೂಟಿ!

* ಜೆಡಿಎಸ್‌ ಸಂಸದ ಪ್ರಜ್ವಲ್‌ ಪ್ರಕರಣ ಪ್ರಖರವಾಗಿ ಬಿಟ್ಟಿದೆ?
ಸಂತ್ರಸ್ತೆಯೊಬ್ಬರು ಮಾಜಿ ಸಚಿವ ರೇವಣ್ಣ ಹಾಗೂ ಜೆಡಿಎಸ್‌ ಸಂಸದ ಪ್ರಜ್ವಲ್‌ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಹೀಗಾಗಿ, ಮಹಿಳಾ ಆಯೋಗದ ಅಧ್ಯಕ್ಷರು ತನಿಖೆ ಮಾಡಿಸುವಂತೆ ನನಗೆ ಪತ್ರ ಬರೆದಿದ್ದರು. ಅದರಂತೆ ನಾವು ಎಸ್‌ಐಟಿ ರಚಿಸಿದ್ದೇವೆ. ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರು ಯಾರೇ ಇರಲಿ, ಅವರ ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳುತ್ತೇವೆ.

* ಮಾಜಿ ಸಚಿವ ರೇವಣ್ಣ ವಿರುದ್ಧವೂ ಕ್ರಮ ಜರುಗುತ್ತದೆಯೇ?
ಎಸ್‌ಐಟಿ ರಚನೆಯಾಗಿದೆ. ತನಿಖೆ ನಡೆಯುತ್ತದೆ. ಎಸ್‌ಐಟಿಯ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ. ತನಿಖೆಯಿಂದ ಏನು ಹೊರ ಬರುತ್ತದೆಯೋ ಅದರಂತೆ ತಪ್ಪಿತಸ್ಥರು ಯಾರೇ ಇದ್ದರೂ ಅವರ ಮೇಲೆ ಕ್ರಮ ಜರುಗಲಿದೆ.

* ಈ ಪ್ರಕರಣ ರಾಜ್ಯ ಚುನಾವಣೆ ಮೇಲೆ ಹಾಗೂ ಜೆಡಿಎಸ್‌ ಮೇಲೆ ಪರಿಣಾಮ ಬೀರಬಹುದೇ?
ಈ ಪ್ರಶ್ನೆಗೆ ಉತ್ತರ ನೀಡುವುದು ಪ್ರಿಮೆಚ್ಯೂರ್‌ ಆಗುತ್ತದೆ. ಈಗಷ್ಟೇ ಎಸ್‌ಐಟಿ ಸ್ಥಾಪಿಸಿದ್ದೇವೆ. ತನಿಖೆ ನಡೆಯುತ್ತದೆ.

* ಈ ಬಾರಿ ಚುನಾವಣೆಗೆ ಸಚಿವರ ಮಕ್ಕಳು, ಸಂಬಂಧಿಕರಿಗೆ ಬಾರಿ ಆದ್ಯತೆ ಸಿಕ್ಕಿದೆಯಲ್ಲ?
ಮೈಸೂರಿನಲ್ಲಿ ಟಿಕೆಟ್‌ ಪಡೆದ ಲಕ್ಷಣ್‌ ಯಾರು? ಗೌತಮ್‌ ಯಾರು? ಅವರೆಲ್ಲ ಕಾರ್ಯಕರ್ತರೇ ಅಲ್ಲವೇ? ಈ ಬಾರಿ ಟಿಕೆಟ್‌ ನೀಡುವಾಗ ಶಾಸಕರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿದ್ದವರು, ಜಿಲ್ಲಾಧ್ಯಕ್ಷರು, ಬ್ಲಾಕ್‌ ಅಧ್ಯಕ್ಷರು, ಉಸ್ತುವಾರಿ ಸಚಿವರು ಸೇರಿದಂತೆ ಸ್ಥಳೀಯರು ಯಾರಿಗೆ ಶಿಫಾರಸು ಮಾಡಿದ್ದರೋ ಅವರಿಗೆ ನೀಡಿದ್ದೇವೆ. ಸ್ಥಳೀಯರ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲವಲ್ಲ.ಹಲವು ಸಚಿವರ ಮಕ್ಕಳು ಚುನಾವಣೆಗೆ ನಿಂತರು. ನಿಮ್ಮ ಪುತ್ರ ಯತೀಂದ್ರ ಅವರು ಏಕೆ ಸ್ಪರ್ಧಿಸಲಿಲ್ಲ?ಯತೀಂದ್ರ ಚುನಾವಣೆಗೆ ನಿಲ್ಲುತ್ತೇನೆ ಎಂದಿರಲಿಲ್ಲ. ಟಿಕೆಟ್‌ ಕೂಡ ಕೇಳಿರಲಿಲ್ಲ.

* ಹಾಗಾದರೆ ಯತೀಂದ್ರ ಅವರ ರಾಜಕೀಯ ಭವಿಷ್ಯ?
ಯತೀಂದ್ರ ಅವರು ವರುಣ ಕ್ಷೇತ್ರದ ಶಾಸಕರಾಗಿದ್ದವರು. ನನಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟರು. ಅಲ್ಲದೆ, ಚುನಾವಣೆಯನ್ನು ಅವರೇ ನಡೆಸಿದ್ದರು. ಹೀಗಾಗಿ, ಕಾಂಗ್ರೆಸ್‌ ಹೈಕಮಾಂಡ್‌ ಅವರ ಬಗ್ಗೆ ಏನು ತೀರ್ಮಾನ ಮಾಡುತ್ತದೆ ಎಂಬುದನ್ನು ನೋಡೋಣ.ಫಲಿತಾಂಶ ಬಂದ ನಂತರ ಸಚಿವರ ಸಾಧನೆ ಬಗ್ಗೆ ಪರಾಮರ್ಶೆ ನಡೆಯುತ್ತದೆ ಅಂತ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಹೇಳಿದ್ದಾರೆ? ಸುರ್ಜೇವಾಲಾ ಅ‍‍ವರು ಈ ಬಗ್ಗೆ ನನ್ನ ಜತೆ ಚರ್ಚೆ ಮಾಡಿಲ್ಲ. ಆದರೆ, ನಾನು ಎಲ್ಲ ಉಸ್ತುವಾರಿ ಸಚಿವರಿಗೆ ಈ ಚುನಾವಣೆಯಲ್ಲಿ ಗಂಭೀರವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದೇವೆ. ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಚುನಾ‍ವಣೆಯಿದೆ. 

ಉಪ್ಪು ತಿಂದವ್ರು ನೀರು ಕುಡೀಬೇಕು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ಗೆ ಎಚ್‌ಡಿಕೆ ಪ್ರತಿಕ್ರಿಯೆ

* ಈ ನೇಹಾ ಪ್ರಕರಣ ಪರಿಣಾಮ ಬೀರುತ್ತೆ ಅಂತಾರೆ?
ನೇಹಾ ಪ್ರಕರಣ ದುರದೃಷ್ಟಕರ. ಆ ಘಟನೆಯನ್ನು ಖಂಡಿಸಿದ್ದೇವೆ. ಮತ್ತೆ, ತಕ್ಷಣ ಆರೋಪಿಯನ್ನು ಬಂಧಿಸಿದ್ದೇವೆ. ತನಿಖೆಯನ್ನು ಸಿಐಡಿಗೆ ನೀಡಿದ್ದೇವೆ. ವಿಶೇಷ ನ್ಯಾಯಾಲಯ ರಚಿಸಿದ್ದೇವೆ. ಕಾನೂನು ರೀತಿ ಏನೇನು ಕ್ರಮ ಕೈಗೊಳ್ಳಬೇಕೋ ಅದೆಲ್ಲ ಮಾಡಿದ್ದೇವೆ. ಆರೋಪಿಗೆ ಶಿಕ್ಷೆಯಾಗಲೂ ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. 

* ಎರಡು ಹಂತಗಳು ಸೇರಿ ಕಾಂಗ್ರೆಸ್‌ ಎಷ್ಟು ಗೆಲ್ಲಬಹುದು?
ಒಟ್ಟು 20 ಸ್ಥಾನ ಗೆಲ್ಲಬಹುದು ಎಂಬ ಮಾಹಿತಿಯಿದೆ.

Latest Videos
Follow Us:
Download App:
  • android
  • ios