Jogi Prem: ಪ್ರೀತಿ ಪ್ರೇಮದ ನೆರಳಲ್ಲಿ ವ್ಯವಸ್ಥೆಯ ಕ್ರೌರ್ಯ 'ಏಕ್ ಲವ್ ಯಾ'
ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್‌ಯಾ’ ಚಿತ್ರ ಬಿಡುಗಡೆ ಆಗಿದೆ. ಈ ಚಿತ್ರದ ಮೂಲಕ ನಟಿ, ನಿರ್ಮಾಪಕಿ ರಕ್ಷಿತಾ ಸೋದರ ರಾಣಾ ನಾಯಕನಾಗಿ ಪ್ರೇಕ್ಷಕರ ಮುಂದೆ ನಿಂತಿದ್ದಾರೆ. ಇವರನ್ನು ಲಾಂಚ್ ಮಾಡಿರುವ ಪ್ರೇಮ್ ತಮ್ಮ ಬಾಮೈದನ ಸಿನಿಮಾ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ.
ಆರ್. ಕೇಶವಮೂರ್ತಿ
ಜೋಗಿ ಪ್ರೇಮ್ (Jogi Prem) ನಿರ್ದೇಶನದ ‘ಏಕ್ ಲವ್‌ಯಾ’ (Ek Love Ya) ಚಿತ್ರ ಬಿಡುಗಡೆ ಆಗಿದೆ. ಈ ಚಿತ್ರದ ಮೂಲಕ ನಟಿ, ನಿರ್ಮಾಪಕಿ ರಕ್ಷಿತಾ (Rakshita) ಸೋದರ ರಾಣಾ (Raanna) ನಾಯಕನಾಗಿ ಪ್ರೇಕ್ಷಕರ ಮುಂದೆ ನಿಂತಿದ್ದಾರೆ. ಇವರನ್ನು ಲಾಂಚ್ ಮಾಡಿರುವ ಪ್ರೇಮ್ ತಮ್ಮ ಬಾಮೈದನ ಸಿನಿಮಾ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ.
* ನಿಮ್ಮ ಬಾಮೈದನನ್ನು ಹೀರೋ ಮಾಡಬೇಕು ಅನಿಸಿದ್ದು ಯಾಕೆ?
ರಾಣಾ ಇಂಜಿನಿಯರಿಂಗ್ ಓದು ಮುಗಿಸಿ, ಬ್ಯುಸಿನೆಸ್ ಅಥವಾ ಉದ್ಯೋಗ ಮಾಡಲಿ ಎಂಬುದು ಅವರ ಮನೆಯವರ ಆಸೆ ಆಗಿತ್ತು. ಆದರೆ, ರಾಣಾಗೆ ಸಿನಿಮಾಗಳಲ್ಲಿ ನಟನಾಗಬೇಕು ಎನ್ನುವ ಕನಸು ಇತ್ತು. ತನ್ನ ಕನಸಿಗೆ ಅವರ ತಂದೆ, ತಾಯಿ, ರಕ್ಷಿತಾ ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದಾಗ, ಅವನ ಆಸೆಯಂತೆ ನಟನಾಗಲಿ ಬಿಡಿ ಎಂದು ನಾನು ಹೇಳಿದೆ. ರಕ್ಷಿತಾ ಅವರೇ ನಟನೆಗೆ ಬೇಕಾದ ತರಬೇತಿ ಕೊಡಿಸಿದರು. ತರಬೇತಿ ಮುಗಿದ ಮೇಲೆ ಯಾರ ನಿರ್ದೇಶನದಲ್ಲಿ ಈತನನ್ನು ಲಾಂಚ್ ಮಾಡಿಸಬೇಕು ಎಂದು ಯೋಚಿಸುತ್ತಿದ್ದಾಗ, ‘ರಾಣಾ ಚಿತ್ರಗಳಲ್ಲಿ ನಟಿಸಲಿ ಅಂತ ಹೇಳಿದ್ದೇ ನೀವು. ಹೀಗಾಗಿ ನೀವೇ ಅವನನ್ನು ಚಿತ್ರರಂಗಕ್ಕೆ ಪರಿಚಯಿಸಿ’ ಎಂದು ರಕ್ಷಿತಾ ಹೇಳಿದರು. ಹೀಗೆ ಕುಟುಂಬದವರ ಪ್ರೀತಿಯ ಒತ್ತಾಯ, ರಾಣಾ ಆಸೆಯಂತೆ ಅವನನ್ನು ನಾನು ಚಿತ್ರರಂಗಕ್ಕೆ ಪರಿಚಯಿಸಿದ್ದೇನೆ.
* ಏಕ್ ಲವ್ ಯಾ ಚಿತ್ರ ನೋಡಕ್ಕೆ ಇರುವ ಬಹು ಮುಖ್ಯ ಕಾರಣ?
ನೈಜ ಘಟನೆಗಳಿಂದ ಸ್ಫೂರ್ತಿಗೊಂಡು ಮಾಡಿರುವ ಸಾಮಾಜಿಕ ಕಳಕಳಿ ಹೊಂದಿರುವ ಸಿನಿಮಾ ಇದು. ಹಾಗಂತ ಇಲ್ಲಿ ಯಾರಿಗೂ ನಾನು ಪಾಠ ಮಾಡಿಲ್ಲ. ನಮ್ಮ ಸುತ್ತಲಿನ ವ್ಯವಸ್ಥೆಯ ಒಂದು ಕ್ರೌರ್ಯವನ್ನು ಪ್ರೀತಿ- ಪ್ರೇಮದ ನೆರಳಿನಲ್ಲಿ ಹೇಳಿದ್ದೇನೆ. ಯುವ ಜನತೆ ಈ ಚಿತ್ರ ನೋಡಬೇಕು. ಈ ಚಿತ್ರದಲ್ಲಿ ಹೇಳಿರುವ ಘಟನೆ ಖಂಡಿತ ಎಲ್ಲರಿಗೂ ಕಾಡುತ್ತದೆ, ಕೋಪ ತರಿಸುತ್ತದೆ.
Ek Love Ya Trailer: ಜೋಗಿ ಪ್ರೇಮ್ ದೃಶ್ಯ ವೈಭವದಲ್ಲಿ ಮಿಂಚಿದ ರಾಣಾ-ರಚಿತಾ-ರೀಷ್ಮಾ!
* ಈ ಚಿತ್ರದ ಕತೆ ಹುಟ್ಟಿಕೊಂಡಿದ್ದು ಹೇಗೆ?
ನಮ್ಮ ರಾಜ್ಯದ ಮೈಸೂರು ಸೇರಿದಂತೆ ಹೊರ ರಾಜ್ಯದ ಹೈದರಾಬಾದ್, ದೆಹಲಿಯಲ್ಲಿ ನಡೆದ ಮೂರು ಪೈಶಾಚಿಕ ಘಟನೆಗಳು. ಇದು ಜನರಲ್ಲಿ ಹುಟ್ಟು ಹಾಕಿದ ಆತಂಕ ಮತ್ತು ಭಯವೇ ಈ ಕತೆ ಹುಟ್ಟಿಗೆ ಕಾರಣ. ಅದರಲ್ಲೂ ಮೈಸೂರಿನಲ್ಲಿ ನಡೆದ ಘಟನೆಯನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದರು. ನನಗೂ ಆ ಘಟನೆ ಕಾಡಿತು. ಹಾಗೆ ಕಾಡಿದ ಘಟನೆಗೆ ಸಿನಿಮಾ ರೂಪ ಕೊಟ್ಟಾಗ ಹುಟ್ಟಿಕೊಂಡಿದ್ದೇ ‘ಏಕ್ ಲವ್ ಯಾ’.
ಚಿತ್ರದ ಐದು ಹೈಲೈಟ್ಸ್‌ಗಳನ್ನು ಪಟ್ಟಿ ಮಾಡುವುದಾದರೆ..
1. ತಂತ್ರಜ್ಞರ ಶ್ರಮ ಮತ್ತು ಅವರ ಪ್ರೀತಿ.
2. ಈಗ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆಸುತ್ತಿರುವ ಸಂಗೀತ ಮತ್ತು ಸಾಹಿತ್ಯ.
3. ಮನಸ್ಸಿನಲ್ಲಿ ಉಳಿಯಂತೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿರುವ ಕಲಾವಿದರು.
4. ನನ್ನ ಕತೆಯನ್ನು ನಂಬಿದ ನಿರ್ಮಾಪಕಿ ರಕ್ಷಿತಾ ಅವರ ಕನಸು.
5. ನಿರ್ದೇಶಕನ ನಟನಂತೆ ತೆರೆ ಮೇಲೆ ಕಾಣಿಸಿಕೊಂಡಿರುವ ರಾಣಾ.
* ನೀವು ಕಂಡಂತೆ ಸ್ಕ್ರೀನ್ ಮೇಲೆ ರಾಣಾ ಪ್ಲಸ್‌ಗಳೇನು? ಅವರ ನಟನೆಗೆ ಎಷ್ಟು ಮಾರ್ಕ್ಸ್ ಕೊಡುತ್ತೀರಿ?
ಅವನ ಡೆಡಿಕೇಷನ್ ಅದ್ಭುತ. ಯಾರು ಏನೇ ಹೇಳಿದರೂ ತುಂಬಾ ಮುಗ್ಧತೆಯಿಂದ ಕೇಳಿ, ಸರಿ- ತಪ್ಪುಗಳನ್ನು ಅವಲೋಕಿಸುತ್ತಾನೆ. ಕೇಳಿಸಿಕೊಳ್ಳುವ ಗುಣ ಅವನಲ್ಲಿದೆ. ಅದೇ ಅವನನ್ನು ಬೆಳೆಸುತ್ತದೆ. ನಾನು ನೂರಕ್ಕೆ ನೂರು ಅಂಕ ಕೊಡುತ್ತೇನೆ. ಆದರೆ, ನಮ್ಮ ಮನೆಯ ಹುಡುಗನನ್ನು ನಾವೇ ಸೂಪರ್ ಎಂದು ಹೊಗಳುವುದಕ್ಕಿಂತ ಸಿನಿಮಾ ನೋಡಿದ ಜನ ಹೇಳಬೇಕು. ಅವರ ಅಭಿಪ್ರಾಯಕ್ಕೆ ನಾನು ಕಾಯುತ್ತಿದ್ದೇನೆ.
Ek love ya 2022 review : ಎದೆ ಬಡಿತ ಜೋರಾಗಿ ಎಂದ ರಾಣಾ
* ಹೀರೋ ಸಂಬಂಧಿ ಆಗಿ ಈ ಸಿನಿಮಾ ಮಾಡುವಾಗ ಎದುರಾದ ಸವಾಲುಗಳೇನು?
ರಾಣಾ ಹೊಸ ನಟ. ಹೊಸಬನಿಗೆ ಹೊಸದಾಗಿ ಕತೆ ಬರೆಯಬೇಕು ಎಂದುಕೊಂಡಾಗ ನಾನೂ ಸಹ ಹೊಸ ನಿರ್ದೇಶಕನಾದೆ. ಸ್ಟಾರ್‌ಡಮ್ ನೆರಳಿಂದ ಆಚೆ ನಿಂತು ಈ ಸಿನಿಮಾ ಮಾಡಿದ್ದೇವೆ. ಹೀಗಾಗಿ ಹೊಸಬರಿಗೆ ಯಾವುದೇ ಇಮೇಜ್‌ಗಳು ಇಲ್ಲದಿದ್ದರಿಂದ ನನಗೆ ಆ ರೀತಿಯ ಸವಾಲುಗಳು ಎದುರಾಗಲಿಲ್ಲ.
* ನಿಮ್ಮ ಸಂಗೀತ ಮತ್ತು ಹಾಡುಗಳ ಯಶಸ್ಸಿನ ಹಿಂದಿನ ಗುಟ್ಟೇನು?
ವಿಶೇಷ ಗುಟ್ಟೇನು ಇಲ್ಲ. ಮೊದಲನೇ ಚಿತ್ರದಿಂದಲೂ ನನಗೆ ಸಂಗೀತ ಕೈ ಹಿಡಿದಿದೆ. ಹಳ್ಳಿಯಲ್ಲಿ ದನ ಮೇಯಿಸಿಕೊಂಡು, ಕೆರೆಯಲ್ಲಿ ಈಜಾಡಿಕೊಂಡು, ಜಾನಪದ ಹಾಡುಗಳನ್ನು ಕೇಳುತ್ತಿದ್ದೆ. ಆ ನಂತರ ಹಂಸಲೇಖ ಹಾಡುಗಳಿಗೆ ಕಿವಿಯಾದೆ. ನನ್ನ ಹಳ್ಳಿ ಜೀವನ, ಹಂಸಲೇಖ ಹಾಡುಗಳು, ಜಾನಪದವೇ ನನ್ನ ಸಂಗೀತದ ಶಕ್ತಿಯ ಹಿಂದಿನ ಗುಟ್ಟು. ಹಂಸಲೇಖ ಅವರ ಹಾಡುಗಳೇ ನನಗೆ ಗುರು ಮತ್ತು ಪ್ರೇರಣೆ.