ಕೊರೋನಾ ಅಂತ ಮನೇಲಿ ಕೂರೋಕಾಗಲ್ಲ: ಪ್ರಿಯಾಮಣಿ ಸಂದರ್ಶನ
ಬಹುಭಾಷಾ ನಟಿ ಪ್ರಿಯಾಮಣಿ ಸಿನಿಮಾ, ರಿಲಿಯಾಟಿ ಶೋಗಳಲ್ಲಿ ಸಾಕಷ್ಟುಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಐದು ಭಾಷೆಯಲ್ಲಿ ಸೆಟ್ಟೇರುತ್ತಿರುವ ಚಿತ್ರವನ್ನು ಒಪ್ಪಿದ್ದಾರೆ. ದಿನಕ್ಕೆ ಎರಡು ಕತೆ ಕೇಳುತ್ತಾ, ಒಳ್ಳೆಯ ಕತೆಗಳಿಗೆ ಓಕೆ ಎನ್ನುತ್ತಿರುವ ಪ್ರಿಯಾಮಣಿ ಅವರ ನೇರ ಮಾತುಗಳು ಇಲ್ಲಿವೆ.
ಆರ್ ಕೇಶವಮೂರ್ತಿ
ರಿಯಾಲಿಟಿ ಶೋಗಳು, ಸಿನಿಮಾ ಅಂತ ಸಾಕಷ್ಟುಬ್ಯುಸಿ ಆಗಿದ್ದೀರಲ್ಲ?
ಐದಾರು ತಿಂಗಳು ಏನೂ ಕೆಲಸ ಇಲ್ಲದೆ ಸುಮ್ಮನೆ ಕೂತಿದ್ದೆ. ಈಗ ಒಂದೊಂದಾಗಿ ಶುರು ಮಾಡಿದ್ದೇನೆ.
ಅಂತರ್‌ಧರ್ಮೀಯ ಮದುವೆ, ಮತಾಂತರದ ಬಗ್ಗೆ ಪ್ರಿಯಾಮಣಿ ಹೇಳಿದ್ದಿಷ್ಟು
ಲಾಕ್‌ಡೌನ್ ನಂತರ ಯಾವೆಲ್ಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದೀರಿ?
ಲಾಕ್‌ಡೌನ್‌ಗೂ ಮೊದಲು ಒಪ್ಪಿಕೊಂಡಿದ್ದ ಚಿತ್ರಗಳೇ ನಾಲ್ಕು ಇವೆ. ಈಗ ಹೊಸದಾಗಿ ‘ಸೈನೈಡ್’. ಇದು ಪ್ಯಾನ್ ಇಂಡಿಯಾ ಸಿನಿಮಾ. ಐದು ಭಾಷೆಗಳಲ್ಲಿ ಬರುತ್ತಿದೆ. ಸೈನೈಡ್ ಮೋಹನನ ಜೀವನ ಆಧರಿಸಿರುವ ಸಿನಿಮಾ.
ಸರಣಿ ಕೊಲೆಗಾರನ ಬಗ್ಗೆ ಸಿನಿಮಾ ಮಾಡುವ ಅಗತ್ಯ ಏನು?
ಆತನ ಕೃತ್ಯಗಳನ್ನು ವೈಭವೀಕರಣ ಮಾಡುವ ಸಿನಿಮಾ ಇದಲ್ಲ. ತುಂಬಾ ಜನಕ್ಕೆ ಆತನ ಪಾಪ ಕೃತ್ಯಗಳು ಗೊತ್ತಿಲ್ಲ. ಇಂಥವರ ಬಗ್ಗೆ ಸಿನಿಮಾ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಕೂಡ ಇದು. ಆತ ಯಾರು, ಏನಾಗಿದ್ದ, ಯಾಕೆ ಹೆಣ್ಣು ಮಕ್ಕಳನ್ನೇ ಸಾಯಿಸುತ್ತಿದ್ದ, ಇಂಥ ಕ್ರೂರಿಗಳು ನಮ್ಮ ನಡುವೆ ಇದ್ದರೆ ಅವರಿಗೆ ಹೇಗೆ ತಕ್ಕ ಶಿಕ್ಷೆ ಆಗುತ್ತದೆ ಎಂಬುದನ್ನು ಹೇಳಬೇಕಿದೆ. ಈಗಲೂ ಹೆಣ್ಣು ಮಕ್ಕಳ ಮೇಲೆ ದಾಳಿಗಳು ನಿಂತಿಲ್ಲ.
ನಾನು ಉಪವಾಸ ಮಾಡಲ್ಲ ಪತಿ ಮಾಡ್ತಾರೆ; ಪ್ರಿಯಾಮಣಿ ರಂಜಾನ್ ಕಥೆ!
ಇಬ್ಬರು ರಾಷ್ಟ್ರ ಪ್ರಶಸ್ತಿ ವಿಜೇತರು ಈ ಚಿತ್ರಕ್ಕೆ ಜತೆಯಾಗುತ್ತಿದ್ದೀರಿ?
ಹೌದು. ನಿರ್ದೇಶಕ ರಾಜೇಶ್ ಟಚ್‌ರಿವರ್ ಸೂಕ್ಷ್ಮ ನಿರ್ದೇಶಕರು. ಅವರ ಕತೆಗಳು ರಿಯಲಿಸ್ಟಿಕ್‌ನಿಂದ ಕೂಡಿರುತ್ತವೆ. ನಾನು ಮೊದಲ ಬಾರಿಗೆ ಅವರ ಜತೆ ಕೆಲಸ ಮಾಡುತ್ತಿದ್ದೇನೆ. ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ. ನಾನು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಎನ್ನುವುದಕ್ಕಿಂತ ಪಾತ್ರಕ್ಕೆ ಸೂಕ್ತವಾದ ನಟಿಯಾಗಿ ಈ ಚಿತ್ರ ಒಪ್ಪಿದ್ದೇನೆ. ಸಹಜವಾಗಿ ದೊಡ್ಡ ಭರವಸೆ ಇದೆ. ಹೀಗಾಗಿಯೇ ಎಲ್ಲ ಭಾಷೆಗಳಲ್ಲೂ ಈ ಚಿತ್ರವನ್ನು ತರುತ್ತಿದ್ದೇವೆ. ಮೇಕಿಂಗ್, ಕತೆ ಹೇಳುವ ರೀತಿಯಲ್ಲಿ ಹೊಸತನ ಇರುತ್ತದೆ. ಜನವರಿ ತಿಂಗಳಿಂದ ಶೂಟಿಂಗ್‌ಗೆ ಹೋಗುತ್ತಿದ್ದೇವೆ.
ಲಾಕ್‌ಡೌನ್‌ಗೂ ಮೊದಲು ಒಪ್ಪಿಕೊಂಡ ಚಿತ್ರಗಳು ಎಲ್ಲಿವರೆಗೂ ಬಂದಿವೆ?
ಕನ್ನಡದಲ್ಲಿ ‘ಡಾಕ್ಟರ್ 56’ ಹೆಸರಿನ ಸಿನಿಮಾ ಶೂಟಿಂಗ್ ಮುಗಿಸಿ, ಬಿಡುಗಡೆಗೆ ಸಿದ್ಧವಾಗಿದೆ. ತೆಲುಗಿನಲ್ಲಿ ವೆಂಕಟೇಶ್ ಜತೆ ‘ನಾರಪ್ಪ’ ಚಿತ್ರ ಮಾಡುತ್ತಿದ್ದೇನೆ. ಇದು ತಮಿಳಿನಲ್ಲಿ ವೆಟ್ರಿಮಾರನ್ ಹಾಗೂ ಧನುಷ್ ಕಾಂಬಿನೇಷನ್‌ನಲ್ಲಿ ಬಂದ ‘ಅಸುರನ್’ ಚಿತ್ರದ ರೀಮೇಕ್. ನನ್ನ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್‌ನಲ್ಲಿ ‘ವಿರಾಟ ಪರ್ವಂ’ ಚಿತ್ರ ಇದೆ. ಇದು ನಕ್ಸಲೈಟ್ ಹೋರಾಟವನ್ನು ಹೇಳುವ ಸಿನಿಮಾ. ತಮಿಳು ಹಾಗೂ ಹಿಂದಿಯಲ್ಲಿ ಎರಡು ಚಿತ್ರಗಳಿವೆ.
ಕನ್ನಡದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದೀರಲ್ಲ?
ಹಾಗೇನು ಇಲ್ಲ. ನಾನು ಎಲ್ಲ ಭಾಷೆಗಳಿಗೂ ಸಲ್ಲುವ ನಟಿ. ಕನ್ನಡದಲ್ಲೂ ಕತೆ ಕೇಳುತ್ತಿದ್ದೇನೆ. ದಿನಕ್ಕೆ ಎರಡು ಕತೆ ಕೇಳುತ್ತೇನೆ. ಈಗ ಕೊರೋನಾ, ಲಾಕ್‌ಡೌನ್‌ನಿಂದ ಹೊಸ ಚಿತ್ರಗಳನ್ನು ಘೋಷಣೆ ಮಾಡಿಲ್ಲ ಅಷ್ಟೆ. ಸದ್ಯದಲ್ಲೇ ಎರಡು ಹೊಸ ಚಿತ್ರಗಳು ಘೋಷಣೆ ಆಗಲಿವೆ.
ಇದರ ನಡುವೆ ರಿಯಾಲಿಟಿ ಶೋಗಳನ್ನು ಮಾಡುತ್ತಿದ್ದೀರಲ್ಲ?
ತೆಲುಗಿನಲ್ಲಿ ಡ್ಯಾನ್ಸ್ ರಿಲಿಯಾಟಿ ಶೋಗೆ ಜಡ್ಜ್ ಆಗಿದ್ದೇನೆ. ಕೊರೋನಾ ಅಂತ ಮನೆಯಲ್ಲಿ ಕೂರಕ್ಕೆ ಆಗಲ್ಲ. ಯಾವಾತ್ತಾದರೂ ಮನೆಯಿಂದ ಆಚೆ ಬರಬೇಕು. ರಿಯಾಲಿಟಿ ಶೋ, ಸಿನಿಮಾಗಳ ಕಡೆ ಗಮನ ಕೊಟ್ಟಿದ್ದೇನೆ.
"