ಸಂಭ್ರಮಕ್ಕಿಂತ ಭಯನೇ ಜಾಸ್ತಿ,6 ವರ್ಷಗಳ ನಂತರ ಜನರ ಬೆಂಬಲ ಸಿಗುತ್ತಾ: ಶ್ರೀನಗರ ಕಿಟ್ಟಿ
ರಘು ಸಿಂಗಮ್ ನಿರ್ಮಿಸಿ, ಸೂರ ನಿರ್ದೇಶನ ಮಾಡಿರುವ ‘ಗೌಳಿ’ ಸಿನಿಮಾ ಇಂದು (ಫೆ.24) ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರದ ನಾಯಕ ಶ್ರೀನಗರ ಕಿಟ್ಟಿಸಂದರ್ಶನ.
ಆರ್ ಕೇಶವಮೂರ್ತಿ
ಬಹು ದಿನಗಳ ನಂತರ ಪ್ರೇಕ್ಷಕರ ಮುಂದೆ ಬರುತ್ತಿದ್ದೀರಲ್ಲ?
ಸಂಭ್ರಮಕ್ಕಿಂತ ಭಯ ಇದೆ. ಆರೇಳು ವರ್ಷಗಳ ನಂತರ ನನ್ನ ನಟನೆಯ ಸಿನಿಮಾ ಬಿಡುಗಡೆ ಆಗುತ್ತಿದೆ. ಜನ ಹೇಗೆ ತೆಗೆದುಕೊಳ್ಳುತ್ತಾರೋ, ಈ ಹೊಸ ಪ್ರಯತ್ನಕ್ಕೆ ಯಾವ ರೀತಿ ಬೆಂಬಲ ಸಿಗುತ್ತದೋ ಎನ್ನುವ ಕಾತರ, ಕುತೂಹದಲ್ಲಿ ಹುಟ್ಟಿಕೊಳ್ಳುವ ಭಯ ಇದೆಯಲ್ಲ, ಅದನ್ನ ಹೇಳಕ್ಕೆ ಆಗಲ್ಲ.
ಟೀಸರ್, ಟ್ರೇಲರ್ ನೋಡಿದವರು ಸಿನಿಮಾ ಮೇಲೆ ನಿರೀಕ್ಷೆ ಬೆಳೆಸಿಕೊಂಡಿದ್ದಾರಲ್ಲ?
ಖಂಡಿತಾ, ಪ್ರೇಕ್ಷಕರ ನಿರೀಕ್ಷೆಗಳು ಹುಸಿಯಾಗಲ್ಲ. ಒಬ್ಬ ನಟನಾಗಿ ನನಗೂ ಈ ಸಿನಿಮಾ ಯಶಸ್ವಿ ಆಗುತ್ತದೆಂಬ ನಂಬಿಕೆ ಮೂಡಿಸುತ್ತಿದೆ. ಗೆಲುವಿನ ಸಂಭ್ರಮ ಹಾಗೂ ನಂಬಿಕೆಗಳು ಪ್ರೇಕ್ಷಕರ ಮೇಲೆ ನಿಂತಿರುತ್ತದೆಯಲ್ಲ.
6 ವರ್ಷಗಳ ನಂತರ ನನ್ನ ಚಿತ್ರ ಬಿಡುಗಡೆ ಆಗುತ್ತಿದೆ: ಶ್ರೀನಗರ ಕಿಟ್ಟಿ
ಆರೇಳು ವರ್ಷಗಳಲ್ಲಿ ನಿಮಗೆ ಬೇರೆ ಚಿತ್ರಗಳೇ ಬರಲಿಲ್ಲವೇ?
ಖಂಡಿತ ಬಂತು. ಆದರೆ, ಯಾಕೋ ಗೊತ್ತಿಲ್ಲ ‘ಗೌಳಿ’ ಸಿನಿಮಾ ಬರುವ ತನಕ ಕಾದುಬಿಡೋಣ ಎನ್ನುವ ಧೈರ್ಯ ಕೊಟ್ಟಿತು. ಎಕ್ಸೈಟ್‌ಮೆಂಟ್, ಥ್ರಿಲ್ಲಿಂಗ್ ಇರಲಿ. ಒಂದು ಚಿತ್ರಕ್ಕಾಗಿ ಎಷ್ಟುವರ್ಷ ಬೇಕಾದರೂ ತಮ್ಮನ್ನು ಕಲಾವಿದರು ಅರ್ಪಿಸಿಕೊಳ್ಳಬೇಕು ಎನ್ನುವ ಭಾವನೆ ಹುಟ್ಟಿಸಿದ್ದು ಈ ಗೌಳಿ ಸಿನಿಮಾ. ಹೀಗಾಗಿ ನಾನು ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳದೆ ಈ ಚಿತ್ರಕ್ಕಾಗಿ ಕಾದೆ.
ಅಂಥ ವಿಶೇಷತೆಗಳು ಈ ಚಿತ್ರದಲ್ಲಿ ಏನಿದೆ?
ಭಾಷೆ, ಮೇಕಿಂಗ್, ಕತೆ, ಸಿನಿಮಾ ಶೂಟಿಂಗ್ ಮಾಡಿದ ಪ್ರದೇಶಗಳು, ಒಂದು ಸಮುದಾಯದ ಕತೆ... ಇವೆಲ್ಲವನ್ನೂ ಅಚ್ಚುಕಟ್ಟಾಗಿ ತೆರೆ ಮೇಲೆ ಇಟ್ಟಾಗ ಅದು ನಿಮ್ಮ ನಿರೀಕ್ಷೆಗೂ ಮೀರಿ ದೃಶ್ಯ ರೂಪಗಳಾಗಿರುವುದನ್ನು ಕಂಡಾಗ ಅದು ವಿಶೇಷ ಸಿನಿಮಾ ಅನಿಸುತ್ತದೆ. ಗೌಳಿ ನನಗೆ ಆ ಕಾರಣಕ್ಕೆ ಸ್ಪೆಷಲ್. ಜತೆಗೆ ಇಲ್ಲಿನ ಪಾತ್ರ. ಇದುವರೆಗೂ ನಾನು ಇಂಥ ಪಾತ್ರದಲ್ಲಿ ಮಾಡಿಲ್ಲ. ಗಡ್ಡ ಬಿಟ್ಟೆ, ದಪ್ಪ ಆಗಬೇಕು ಅಂದರು, ಮೇಕಪ್ ಇಲ್ಲ, ಸಿಕ್ಕಾಪಟ್ಟೆರಫ್ ಪಾತ್ರ ಇದೆಲ್ಲವೂ ಈ ಚಿತ್ರದ ಹೊಸತನಗಳೇ.
ಗೌಳಿ ಚಿತ್ರದಲ್ಲಿನ ಪಾತ್ರದ ತಯಾರಿ ಹೇಗಿತ್ತು?
ನಾನು ಹೇಗಿದ್ದೀನೋ ಹಾಗೆ ಮಾಡಿಸಿದ್ದಾರೆ. ಶಿರಸಿ ಪ್ರದೇಶದ ಭಾಷೆ, ಅದಕ್ಕೆ ತಕ್ಕಂತೆ ಪಾತ್ರ ಪೋಷಣೆ ಮಾಡಿದ್ದೇನೆ. ತುಂಬಾ ಸವಾಲಿನ ಪಾತ್ರ. ನನ್ನ ಪಾತ್ರ ಮಾತ್ರವಲ್ಲ ರಂಗಾಯಣ ರಘು, ಕಾಕ್ರೊಚ್ ಸುಧಿ, ಪಾವನಾ, ಶರತ್ ಲೋಹಿತಾಶ್ವ... ಹೀಗೆ ಚಿತ್ರದ ಪ್ರತಿ ಪಾತ್ರವೂ ವಿಭಿನ್ನವಾಗಿಯೇ ತೆರೆ ಮೇಲೆ ಕಾಣುತ್ತದೆ.
ತೆರೆ ಮೇಲೆ ನಿಮ್ಮ ಪಾತ್ರ ಹೇಗಿರುತ್ತದೆ?
ಏನೇ ಸಮಸ್ಯೆ ಬಂದರೂ ಅಯ್ಯೋ ಹೋಗ್ಲಿ ಬಿಡಿ ಅಂದುಕೊಂಡು ಹೋಗುವ ವ್ಯಕ್ತಿ, ‘ಅಯ್ಯಾ... ನಿನ್...’ ಅಂತ ತಿರುಗಿ ನಿಂತರೆ ಏನಾಗುತ್ತದೆ, ಮಧ್ಯಮ ವರ್ಗದ ಕುಟುಂಬದ ಅಡ್ಜಸ್ಟ್‌ಮೆಂಟ್ ಜೀವನಕ್ಕೆ ಡಿಸ್ಟರ್ಬ್ ಆದ್ರೆ ಏನಾಗುತ್ತದೆ ಎಂಬುದನ್ನು ನನ್ನ ಪಾತ್ರ ತೋರುತ್ತದೆ.
Gowli Action Scenes: 35 ಲಕ್ಷ ವೆಚ್ಚದಲ್ಲಿ ಗೌಳಿ ಸಾಹಸ ದೃಶ್ಯ ಶೂಟಿಂಗ್
ಏನು ಈ ಚಿತ್ರದ ಕತೆ?
ಗೌಳಿ ಸಮುದಾಯದ ಕತೆ. ಒಂದು ಚಿಕ್ಕ ಕುಟುಂಬ. ಅದಕ್ಕೆ ತೊಂದರೆ ಆಗುವುದು, ಕುಟುಂಬವನ್ನು ರಕ್ಷಿಸಲು ಹೊರಡುವ ವ್ಯಕ್ತಿ, ಕೊನೆಗೆ ಇಡೀ ವ್ಯವಸ್ಥೆ ಆತನ ಮುಂದೆ ನಿಂತು ಹೆದರಿಸುವುದು, ಸಾವು- ಬದುಕು ಈ ಎರಡರಲ್ಲಿ ಯಾವುದು ಗೆಲ್ಲುತ್ತದೆ ಎಂಬುದನ್ನು ತುಂಬಾ ಚೆನ್ನಾಗಿ ನಿರ್ದೇಶಕ ಸೂರ ಹೇಳಿದ್ದಾರೆ.
ಟ್ರೇಲರ್ ಹಾಗೂ ಮೇಕಿಂಗ್ ನೋಡಿದಾಗ ಬರೀ ಆ್ಯಕ್ಷನ್ ಸಿನಿಮಾ ಅನಿಸುತ್ತದಲ್ಲ?
ಕೇವಲ ಆ್ಯಕ್ಷನ್ ಇದ್ದರೆ ಸಿನಿಮಾ ಆಗಲ್ಲ. ಆ್ಯಕ್ಷನ್‌ಗೆ ರಿಯಾಕ್ಷನ್ ಬೇಕು. ಇಲ್ಲಿ ರಿಯಾಕ್ಷನ್ ಏನು ಎಂಬುದೇ ಕತೆ. ಮೂರುವರೆ ವರ್ಷ ಸಮಯ ತೆಗೆದುಕೊಂಡು ಈ ಸಿನಿಮಾ ಮಾಡಿದ್ದಾರೆ. ಮುಗ್ಧತೆ, ಮೌನ, ಕುಟುಂಬ, ಕಿರುಚಾಟ, ಮನುಸುಗಳು ಸಂಘರ್ಷ ಇಲ್ಲಿದೆ.