ತಿಂಗಳ ಹಿಂದೆ ಖಾಸಗಿ ವಾಹಿನಿಯೊಂದು ಶ್ರೇಷ್ಠ ಖಳನಟನೆಂದು ಗುರುತಿಸಿದ ಕಲಾವಿದ ಶೋಭರಾಜ್ ಪಾವೂರು. ಪ್ರಸ್ತುತ ಅವರು`ಗೀತಾ' ಧಾರಾವಾಹಿಯಲ್ಲಿ ನಾಯಕನ ಮಾವನ ಪಾತ್ರವನ್ನು ನಿರ್ವಹಿಸಿ, ತಮ್ಮ ಮ್ಯಾನರಿಸಮ್ ಮೂಲಕ ಜನಪ್ರಿಯರಾಗಿದ್ದಾರೆ. ಈ ಹಿಂದೆ `ಮಜಾ ಟಾಕೀಸ್' ಮೂಲಕವೂ ಗುರುತಿಸಿಕೊಂಡವರು ಶೋಭರಾಜ್. ಆದರೆ ಎರಡು ದಿನಗಳ ಹಿಂದೆ ಫೇಸ್ಬುಕ್‌ನಲ್ಲಿ "ನಮೋ.. ನಮಗೆ ಮೋಸ.. ಪೆಟ್ರೋಲ್ ಧಗ ಧಗ.. ಡೀಸೆಲ್ ಭಗ ಭಗ.." ಎಂದು ಬರೆದಿದ್ದ ಸ್ಟೇಟಸ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಿಡುಗಡೆಯಾಗಲಿರುವ ಅವರ ನಿರ್ದೇಶನದ `ಪೆಪ್ಪೆರೆರೆ ಪೆರೆರೆರೆ' ಚಿತ್ರವನ್ನು ಬಹಿಷ್ಕರಿಸುವಂಥ ಹೇಳಿಕೆಗಳು ಹೊರಬಂದಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅದಕ್ಕೊಂದು ಸ್ಪಷ್ಟೀಕರಣ ನೀಡಿದ ನಟನನ್ನು ಮತ್ತೆ ಟ್ರೋಲ್ ಮಾಡಲಾಯಿತು. ಪ್ರಸ್ತುತ ಎರಡು ಸ್ಟೇಟಸ್ ಕೂಡ ಡಿಲಿಟ್ ಮಾಡಿರುವ ಕಲಾವಿದ ಶೋಭರಾಜ್ ಪಾವೂರು ಅದಕ್ಕೆ ಕಾರಣವಾದ ವಿಚಾರಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಮಾತನಾಡಿದ್ದಾರೆ. 

- ಶಶಿಕರ ಪಾತೂರು

ನಿಮ್ಮ ಸ್ಟೇಟಸ್ ಡಿಲಿಟ್ ಮಾಡಲು ಕಾರಣವಾದ ಒತ್ತಡಗಳೇನು?
ಬರೆದಿದ್ದು ಮನಸಿನಿಂದ. ಆದರೆ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದ ನನ್ನ ಆತ್ಮೀಯರು "ತುಂಬ ಕೆಟ್ಟ ಕಮೆಂಟ್ಸ್ ಬರುತ್ತಿವೆ. ಎಂದು ಅದರ ಸ್ಕ್ರೀನ್ ಶಾಟ್ ಕಳಿಸಿ, ದಯವಿಟ್ಟು ಈ ಬಾರಿ ನಮಗಾಗಿ ಒಂದು ಕ್ಲ್ಯಾರಿಟಿ ಕೊಡು" ಎಂದರು. ಕೊಟ್ಟೆ. ಆದರೆ ಅದಕ್ಕೂ ಕೆಟ್ಟ ಕಮೆಂಟ್ಸ್ ಬರುತ್ತಿವೆ ಎಂದು ಮತ್ತೆ ಫೋನ್ ಬಂತು. ಕಮೆಂಟ್ಸ್ ಕೆಟ್ಟದಾಗಿದ್ದರೆ ಅದನ್ನು ಓದಿ ಮನಸು ಹಾಳುಮಾಡಿಕೊಳ್ಳುವಷ್ಟು ಸಮಯ ನನಗೆ ಸದ್ಯಕ್ಕೆ ಇರಲಿಲ್ಲ. ಹಾಗಾಗಿ ಸದ್ಯಕ್ಕೆ ಹೈಡ್ ಮಾಡುವುದು ಬೆಟರ್ ಎಂದುಕೊಂಡೆ. ಡಿಲಿಟ್ ಮಾಡಿಲ್ಲ. ಸಮಯ ಸಿಕ್ಕರೆ ಮುಂದೊಮ್ಮೆ ಆ ಕಮೆಂಟ್‌ಗಳನ್ನು ಓದಬೇಕೆಂದುಕೊಂಡಿದ್ದೇನೆ. ಮುಖ್ಯವಾಗಿ ಈ ಸಮಸ್ಯೆಯನ್ನು ವೈಯಕ್ತಿಕವಾಗಿ ನಾನು ಎದುರಿಸಬಲ್ಲೆ. ಆದರೆ ನನ್ನನ್ನು ನಂಬಿ ಚಿತ್ರಕ್ಕೆ ದುಡ್ಡು ಹಾಕಿದವರ ಪತ್ನಿ ಮಕ್ಕಳಿಗೂ ಭಯ ಕಾಡತೊಡಗಿತು.  ಯಾಕೆಂದರೆ ಅವರಿಗೆಲ್ಲ ಸಾಮಾಜಿಕ ಜಾಲತಾಣದ ಜಗಳಗಳ ಬಗ್ಗೆ ಅಷ್ಟು ಅರಿವಿಲ್ಲ. ನನಗೆ ಅನ್ನ ನೀಡುವವರ ಅನ್ನಕ್ಕೆ ಆತಂಕ, ತೊಂದರೆಯಾಗುವುದಾದರೆ, ನಾನು ನನ್ನ 'ಇಗೋ' ಬದಿಗಿಡಲೇಬೇಕಿತ್ತು. ಹಾಗಾಗಿ ಹೈಡ್ ಮಾಡಿದೆ. ಡಿಲಿಟ್ ಮಾಡಿಲ್ಲ!!

`ಕನ್ನಡತಿ' ನಿರ್ದೇಶಕ ಕೇರಳದ ಯಶವಂತ್!

ಕಲಾವಿದನಾಗಿ ಸರ್ಕಾರದ ಬಗ್ಗೆ ಮಾತನಾಡಬಾರದು ಅನಿಸಿದೆಯೇ?
ನನಗೆ ಅನಿಸಿಲ್ಲ. ಆದರೆ ತುಂಬಾ ಜನ ಹೇಳುತ್ತಾರೆ "ನೀನೊಬ್ಬ ಕಲಾವಿದ. ನಿನಗೆ ಯಾಕೆ ಬೇಕಿತ್ತು ಇವೆಲ್ಲ?" ಎಂದು. ಸಮಾಜದಲ್ಲಿ ಏನೇ ಆದರೂ ಕಲಾವಿದ ಸುಮ್ಮನೆ ಇರಬೇಕು ಎಂದು ಎಲ್ಲಿ ಹೇಳಲಾಗಿದೆ ? ಯಾರು ಮಾಡಿದ ರೂಲ್ಸ್ ಇದು ಹೇಳಿ ? ಕೇವಲ ತನ್ನ ಅಂಗಳಕ್ಕೆ ಮಳೆ ಬಂದರೆ ಸಾಕು ಎನ್ನುವ ಮನಸ್ಥಿತಿ ಇರುವ ಮನುಷ್ಯರಿಂದ ಮಾತ್ರ ಇದು ಸಾಧ್ಯ. ಅಷ್ಟು ಸ್ವಾರ್ಥಿ ನಾನಲ್ಲ. ನಾನೊಬ್ಬ ಕಲಾವಿದ ಅಂದ ಮಾತ್ರಕ್ಕೆ ನನ್ನ ಮನೆಗೆ ತರುವ ರೇಷನ್, ಪೆಟ್ರೋಲ್, ಡೀಸೆಲ್ ನಂತಹ ವಸ್ತುಗಳು ನನಗೆ ಉಚಿತವಾಗಿಯಾಗಲೀ, ಕಮ್ಮಿ ದರದಲ್ಲಾಗಲೀ  ಸಿಗುವುದಿಲ್ಲ. ನಿಮಗೆ ಎಷ್ಟು ಬೆಲೆಗೆ ದೊರೆಯುತ್ತದೆಯೋ ಅಷ್ಟೇ ಬೆಲೆ ನಾನು ಕೂಡ ಕೊಡಬೇಕು. ಹಾಗಾದರೆ ಇನ್ನು ಯಾವ ಆಧಾರದಲ್ಲಿ ಕಲಾವಿದ ಏನೂ ಮಾತನಾಡಬಾರದು ಎಂದು ಹೇಳುತ್ತಾರೆ? ನೀವೇ ಹೇಳಿ! ಆದರೆ ಒಂದಂತೂ ನಿಜ; ಇದುವರೆಗೆ ಮೋದಿ ಸರ್ಕಾರಕ್ಕೆ ಮತ ಹಾಕಿದ ಕಾರಣಕ್ಕಾಗಿ ಪ್ರಶ್ನಿಸುವ ಅಧಿಕಾರ ಇದೆ ಎಂದುಕೊಂಡಿದ್ದೆ. ಇನ್ನು ಮುಂದೆ ಆ ಅಧಿಕಾರ ನನಗೆ ಇರುವುದಿಲ್ಲ. ಇದನ್ನು ನೀವು ಹೇಗೆ ಬೇಕಾದರೂ ಅರ್ಥಮಾಡಿಕೊಳ್ಳಬಹುದು.

ಬಹುಶಃ ಹೊಸದಾಗಿ ರಾಜಕೀಯದ ಹೇಳಿಕೆ ನೀಡುತ್ತಿರುವವರಿಗೆ ಈ ವಿರೋಧ ಇರಬಹುದೇ? 
ದಯವಿಟ್ಟು ನನ್ನ  ಫೇಸ್ ಬುಕ್ ವಾಲ್ ನೋಡಿ. ಆಗ ನಿಮಗೇ ತಿಳಿಯುತ್ತೆ.. ನಾನು ಈ ಮೊದಲು ಕೂಡ ಬೇರೆ ಸರ್ಕಾರಗಳ ಬೇರೆ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೆ. ಆಗ ಇಂಥ ಸಮಸ್ಯೆ ಆಗಿರಲಿಲ್ಲ. ಇನ್ನು ಪೆಟ್ರೋಲ್ ಬಗ್ಗೆ ಹೇಳುವುದಾದರೆ ನನಗೆ ಇಂಥ ಅನುಭವ ಆಗಿದ್ದಂತೂ ಇದೇ ಪ್ರಥಮ. ಯಾಕೆಂದರೆ ನಾನು ಸ್ಕೂಟರ್ ಕೊಂಡು ಎರಡೂವರೆ ವರ್ಷ ಆಯಿತಷ್ಟೇ. ಈ ಎರಡೂವರೆ ವರ್ಷದಲ್ಲಿ ನಾನು ಪೆಟ್ರೋಲ್‌ಗಾಗಿ ಹೆಚ್ಚು ವೆಚ್ಚಮಾಡಿರುವುದು ಈ ಬಾರಿಯೇ. ಹಾಗಾಗಿ ನನ್ನ ಅನುಭವ ಹೇಳಿಕೊಂಡೆ. ನನಗೆ ನಾನು   ದುಡಿದ ದುಡ್ಡು ನನ್ನ ಕೈಗೆ ಬಂದಾಗ ತೆರಿಗೆ ಕಡಿತಗೊಂಡೇ ಸಿಗುವುದು. ಪರವಾಗಿಲ್ಲ ಈ ದುಡ್ಡು ಪ್ರಧಾನಿ ನಮ್ಮ ಒಳ್ಳೆಯದಕ್ಕೆ ವಿನಿಯೋಗಿಸ್ತಾರೆ ಅಂತ ಸುಮ್ಮನಿರುತ್ತಿದ್ದೆ. ಇಂದು ಫೇಸ್ಬುಕ್‌ ಮಂದಿ ಗುರುತಿಸಿಕೊಳ್ಳುವಂತೆ ನಾನು ಎಡಪಂಥೀಯನೂ  ಅಲ್ಲ; ಬಲಪಂಥೀಯ ಕೂಡಾ ಅಲ್ಲ, ನಾನು ಮಧ್ಯದಲ್ಲಿ ಇರುವವನು. ಇಲ್ಲಿ ತನಕ ಕಾರಣವಿರದೆ ನಾನು ಯಾರನ್ನು ಕೂಡಾ ಖಂಡಿಸಿಲ್ಲ. ಯಾರನ್ನೂ  ಹೊಗಳಿದ್ದೂ ಇಲ್ಲ. ಪೆಟ್ರೋಲ್ ದರ ವಿರೋಧಿಸಿದೊಡನೆ ನನ್ನನ್ನು ಅದೇಕೆ ಹಿಂದೂ ವಿರೋಧಿ ಎನ್ನುತ್ತಾರೋ ಗೊತ್ತಿಲ್ಲ. ಯಾಕೆಂದರೆ ನಾನು ಒಬ್ಬ ಹಿಂದೂವಾಗಿಯೇ ಹುಟ್ಟಿದ್ದೇನೆ ಕಡೆ ತನಕ ಹಿಂದುವಾಗಿಯೇ ಇರುತ್ತೇನೆ. ನನ್ನಲ್ಲಿರುವ ಹಿಂದುತ್ವ ನನಗೆ ಯಾವುದೇ ರಾಜಕೀಯ ಪಕ್ಷ ಕಲಿಸಿದ್ದಲ್ಲ.

`ನಟನೆಯಲ್ಲೇ ಸುಖ' ಎನ್ನುತ್ತಾರೆ ನಿಮಿಕಾ..!

ನಿಮ್ಮನ್ನು ಕಮೆಂಟ್, ಟ್ರೋಲ್ ಮೂಲಕ ಕೆಣಕುವವರಿಗೆ ನಿಮ್ಮ ಉತ್ತರವೇನು?
ನಾನು ನನ್ನ ಸ್ಟೇಟಸ್‌ಗೆ ಕೆಟ್ಟದಾಗಿ ಕಮೆಂಟ್ಸ್ ಬರುತ್ತಿದೆ ಎಂದಾಗಲೇ ಅವುಗಳನ್ನು ನೋಡುವುದು ಬಿಟ್ಟೆ. ಯಾಕೆಂದರೆ ಗುದ್ದಾಡುವುದಿದ್ದರೂ ಗಂಧದ ಜೊತೆಗೇ ಗುದ್ದಾಡು ಎನ್ನುವ ಮಾತಿದೆ. ಅದು ಬಿಟ್ಟು ಸೆಗಣಿಯೊಂದಿಗೆ ಸೆಣಸಾಡಿದರೆ ಬರೀ ವಾಸನೆ. ಅದಕ್ಕೆ ಯಾವ ಕಮೆಂಟ್ ನೋಡೋದೂ ಇಲ್ಲ, ರಿಪ್ಲೈ  ಮಾಡುವುದೂ ಇಲ್ಲ. ಯಾಕೆ ಹಾಗೆ ಎಂದು ಕೇಳುವವರಿಗೆ ನಾನು ಇಷ್ಟೇ ಹೇಳುವುದು, "ತುಂಬಾ ವಿಷಯದಲ್ಲಿ ನಾನು ಮೋದಿ ಅವರ ಅನುಯಾಯಿ.  ಟೀಕೆ ಟಿಪ್ಪಣಿಗೆ ಅವರು ಕೂಡಾ ಉತ್ತರ ಕೊಡುವುದಿಲ್ಲ.  ಯಾಕೆಂದರೆ ಅವರಿಗೆ ಮಾಡಲಿಕ್ಕೆ ಬೇರೆ ಕೆಲಸಗಳಿರುತ್ತವೆ!" ಇನ್ನು ನನ್ನನ್ನು ಟ್ರೋಲ್ ಮಾಡುವವರು ಈಗ ನನ್ನ ಸಿನಿಮಾ ದೃಶ್ಯಗಳನ್ನೇ ಬಳಸುತ್ತಿದ್ದಾರೆ. ಆ ಬಗ್ಗೆ ಹೇಳುವುದಾದರೆ, ನಾನು ಸಿನಿಮಾ ಮಾಡುವುದೇ ಜನ ನೋಡಲಿ, ಮೆಚ್ಚಲಿ ಇನ್ನೊಬ್ಬರಲ್ಲಿ ಹೇಳಲಿ ಎಂದು! ಹಾಗೆಯೇ ಸಾಮಾಜಿಕ ಜಾಲತಾಣವೆನ್ನುವುದು ಟ್ರೋಲ್, ಲೈಕ್, ಕಮೆಂಟ್, ಶೇರ್ ಗೋಸ್ಕರವೇ ಇರುವುದು. ಹಾಗಾಗಿ ಅವರಿಗೆ ನನ್ನಿಂದ ಖುಷಿ ಸಿಕ್ಕರೆ ನನಗೂ ಖುಷಿಯೇ. ನಾನು ಅವರಿಗೆ ತಿಂಗಳಿಗೆ ಇಷ್ಟು ಎಂದು ದುಡ್ಡು ಕೊಡುತ್ತಿಲ್ಲವಾದ ಕಾರಣ ಅವರು  ಯಾವಾಗಲೂ ನನ್ನ ಪರವಾಗಿರಬೇಕು ಎಂದು ನಾನು ನಿರೀಕ್ಷಿಸುವುದಿಲ್ಲ! ನನ್ನನ್ನು ಯಾರೂ ಬೇಕಾದರೂ ಟ್ರೋಲ್ ಮಾಡಲಿ.  ಆದರೆ ಯಾರೂ ನನ್ನನ್ನು ರೂಲ್ ಮಾಡಬಾರದು.

ರಾಕಿಂಗ್ ಸ್ಟಾರ್ ಯಶ್ ತಂಗಿಗೆ ಕೊಟ್ಟ ಉಡುಗೊರೆ ಏನು ಗೊತ್ತೇ?


ನಿಮ್ಮ ಸಿನಿಮಾ ಟಿಕೆಟ್ ಖರೀದಿಸದೆ ವಿರೋಧಿಸಬೇಕು ಎನ್ನುವವರಿಗೆ ಏನು ಹೇಳುತ್ತೀರಿ?
ನನ್ನ ಯಾವುದೇ ಸಿನಿಮಾ ನೋಡುವುದಿಲ್ಲ ಎಂದಾದರೆ ಅದು ನಿಮ್ಮ ವೈಯಕ್ತಿಕ ನಿರ್ಧಾರ. ಆದರೆ ನನ್ನ ಕೆಲಸವೇ ಸಿನಿಮಾ ಆಗಿರುವುದರಿಂದ "ದಯವಿಟ್ಟು ನನ್ನ ಸಿನಿಮಾ ನೋಡಿ, ಬ್ರದರ್ ಹಾಗೆ ಮಾಡಬೇಡಿ ಪ್ಲೀಸ್ ನನ್ನ ಸಿನಿಮಾ ನೋಡಿ, ನನಗೆ ಸಪೋರ್ಟ್ ಮಾಡಿ" ಎಂದು ಕೇಳಿಕೊಳ್ಳುತ್ತೇನೆ. ಅದರ ಮೇಲೆ ನಿರ್ಧಾರ ಅವರಿಗೆ ಬಿಟ್ಟಿರುವಂಥದ್ದು. 

ಮೋದಿ ಬಗ್ಗೆ ವಿರೋಧದ ಮಾತನಾಡಿದರೆ ಸಿನಿಮಾ ಸೋಲಿಸುತ್ತೇನೆ ಎನ್ನುವವರಲ್ಲಿ ಒಂದು ಪ್ರಶ್ನೆ, ಬಾಲಿವುಡ್ ನಲ್ಲಿ ಮೋದಿಯನ್ನು ಬೆಂಬಲಿಸಿಕೊಂಡೇ ಒಂದು ಫಿಲ್ಮ್ ಬಂದಿತ್ತು. ಆದರೆ ಅದರ ನಿರ್ಮಾಪಕರಿಗೆ ಸಿಕ್ಕಾಪಟ್ಟೆ ನಷ್ಟ ಆಯಿತು! 'ನಮ್ಮ ಮೋದಿ ಬಗ್ಗೆ ಮಾತನಾಡಿದರೆ ಸಿನಿಮಾ ಸೋಲಿಸ್ತೀನಿ" ಎಂದು ಹೇಳುವವರು, ಯಾಕೆ ಆ ಸಿನಿಮಾ ನೋಡಿ ಗೆಲ್ಲಿಸಲಿಲ್ಲ? ಮೊದಲು ಸಿನಿಮಾ ಮಾಡಿದವನ ಅಭಿಪ್ರಾಯ ಏನು ಎನ್ನುವುದಕ್ಕಿಂತ ಚಿತ್ರದ ಕಂಟೆಂಟ್ ಅರ್ಥಮಾಡಿಕೊಂಡು ಸಿನಿಮಾ ನೋಡಲು ಕಲಿಯಿರಿ. ಅದಕ್ಕೂ ಮೊದಲು ನಾನು ಏನು ಹೇಳಿದ್ದೇನು? ಯಾಕೆ ಆ ಮಾತು ಹೇಳಿದೆ ಎಂದು ಯೋಚಿಸಿ ಬಳಿಕ ರಿಯಾಕ್ಟ್ ಮಾಡಿ. ಯಾರದೋ ಒಬ್ಬನ ರಾಜಕೀಯ ಜೀವನಕ್ಕೋಸ್ಕರ ನಾವು ಯಾಕೆ ವಿರೋಧಿಗಳಾಗಬೇಕು ಎಂದು ಅರ್ಥವಾಗುತ್ತಿಲ್ಲ! ಇನ್ನು ನನ್ನ ಸಿನಿಮಾಗೆ ಬೆಂಕಿ ಇಡುವುದಾಗಿ ಹೇಳುವವರಲ್ಲಿ ಒಂದು ಮಾತು; "ಸಾಯಿಸುವವನಿಗಿಂತ ಮೇಲೆ ಕಾಯುವವನು ಇದ್ದಾನೆ ಎಂಬುವುದರಲ್ಲಿ ನಂಬಿಕೆ ಇಟ್ಟವನು ನಾನು. ದೈವ ದೇವರು ಅಂತ ಹೇಳುವುದಕ್ಕಿಂತಲೂ ಭೂಮಿಯಲ್ಲಿ ಕರ್ಮ ಫಲ ಇದೆ ಎಂದು ನಂಬಿದ್ದೇನೆ.