ಜನವರಿ ತಿಂಗಳು ಬಂದ್ರೆ ಸಾಕು ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸಂಭ್ರಮೋತ್ಸಾಹ. ಅದಕ್ಕೆ ಕಾರಣ, ಹೊಸವರ್ಷಕ್ಕೆ ಕಾಲಿಟ್ಟ ಮೊದಲ ವಾರದಲ್ಲಿ ಅಂದರೆ
 ಜನವರಿ ಎಂಟರಂದು ಯಶ್ ಜನ್ಮದಿನ. ಹತ್ತರಂದು ಯಶ್ ತಂದೆಯ ಜನ್ಮದಿನ. ಹನ್ನೆರಡರಂದು ತಂಗಿಯ ಬರ್ತ್ ಡೇ ಆಗಿದ್ದರೆ, ಯಶ್ ತಾಯಿ ಕೂಡ ಜನವರಿಯಲ್ಲೇ ಜನಿಸಿದವರು. ಮಂಗಳವಾರವಷ್ಟೇ ಜನ್ಮದಿನಾಚರಣೆ ಮಾಡಿಕೊಂಡ ತಂಗಿಯನ್ನು ಭೇಟಿಯಾಗಲು ಯಶ್ ಗೆ ಬರಲಾಗಿಲ್ಲ. ಆದರೆ ಫೋನ್ ಮಾಡಿ ಶುಭ ಕೋರುವುದರ ಜೊತೆಗೆ ಒಂದು ಆಕರ್ಷಕ ಉಡುಗೊರೆಯನ್ನು ಕಳಿಸಿಕೊಟ್ಟಿದ್ದಾರೆ. ಅವೆಲ್ಲದರ ಬಗ್ಗೆ ಇಲ್ಲಿ ನಂದಿನಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

- ಶಶಿಕರ ಪಾತೂರು

ಈ ಬಾರಿಯ ಜನ್ಮದಿನಾಚರಣೆ ಹೇಗಾಯಿತು?
ಈ ಬಾರಿ ನನಗೆ ಒಂದಷ್ಟು ಕಾರಣಗಳಿಗಾಗಿ ವಿಶೇಷ. ಮುಖ್ಯವಾಗಿ ನನಗೆ ಎರಡನೇ ಮಗು ಆಗಿದೆ. ಇಬ್ಬರು ಮಕ್ಕಳು, ತಂದೆ, ತಾಯಿ ಮತ್ತು ಪತಿಯೊಂದಿಗೆ ಸೇರಿ ಹೀಗೆ ಫ್ಯಾಮಿಲಿಯ ಜೊತೆಗಷ್ಟೇ ಆಚರಿಸಿಕೊಂಡೆ. ಮಧ್ಯಾಹ್ನ ಫ್ರೆಂಡ್ಸ್ ಸಿಕ್ಕಿದ್ದರು. ಹೀಗೆ ನನ್ನ ಜನ್ಮ ದಿನಾಚರಣೆ ತೀರ ಸರಳವಾಗಿರುತ್ತದೆ. ಯಶ್ ತಂಗಿ ಎನ್ನುವ ಕಾರಣಕ್ಕೆ ಈಗ ಹೆಚ್ಚು ಗುರುತಿಸಲ್ಪಡುತ್ತೇನೆ ಎಂದಷ್ಟೇ ಹೇಳಬಹುದು.

ಮಜಾಭಾರತದಿಂದ ತೆಲುಗಿಗೆ ಹೋದ ಭೂಮಿಶೆಟ್ಟಿ!

ಯಶ್ ನಿಮಗೆ ನೀಡಿದ ಉಡುಗೊರೆ ಏನು?
ನನಗೆ ಅವನ ಪ್ರೀತಿಯೇ ದೊಡ್ಡ ಉಡುಗೊರೆ. ಯಾಕೆಂದರೆ ಸಂತೋಷದ ದಿನಗಳಲ್ಲಿ ಎಲ್ಲರೂ ಜೊತೆ ಸೇರುವುದಕ್ಕಿಂತಲೂ ಕಷ್ಟದ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಇರುವುದು ಮುಖ್ಯ ಎನ್ನುವುದು ನಾವು ಮನೆಯಿಂದ ಕಲಿತ ಪಾಠ. ಹಾಗಾಗಿ ಅವರವರ ಕೆಲಸದಲ್ಲಿ ನಿರತರಾಗಿರುವುದರ ನಡುವೆ ಜನ್ಮದಿನಕ್ಕೆ ಶುಭ ಹಾರೈಸಬೇಕು ಎನ್ನುವುದನ್ನು ನಾವು ನಿರೀಕ್ಷಿಸುವುದಿಲ್ಲ. ಆದರೆ ಅಣ್ಣ ಯಾವತ್ತಿದ್ದರೂ ಮರೆಯದೇ ಫೋನ್ ಮಾಡುತ್ತಾನೆ, ಬರುತ್ತಾನೆ ಅಥವಾ ಉಡುಗೊರೆ ಕಳಿಸುತ್ತಾನೆ. ಈ ಬಾರಿ ಫೋನ್ ಮಾಡಿ ಶುಭಾಶಯ ಕೋರಿ ಸ್ಯಾಮ್ಸಂಗ್ ಫೋಲ್ಡ್ ಮೊಬೈಲ್ ಫೋನ್ ಕಳಿಸಿರುವುದಾಗಿ ಹೇಳಿದ್ದಾನೆ.

ಚಿತ್ಕಳಾ ಈಗ `ಕನ್ನಡತಿ'ಯ ರತ್ನಮಾಲ

`ಕೆ.ಜಿ.ಎಫ್ ಚಾಪ್ಟರ್‌ ಎರಡರ ಟೀಸರ್' ನೋಡಿದಾಗ ನಿಮಗೆ ಅನಿಸಿದ್ದೇನು?
ಟೀಸರ್ ಬಿಡುಗಡೆಯಾದಂದು ಮಧ್ಯರಾತ್ರಿ ಹನ್ನೆರಡು ಗಂಟೆಗೆ ನಾನು ಅವನಿಗೆ ಫೋನ್ ಮಾಡಿದ್ದೆ, ಬರ್ತ್ ಡೇ ಶುಭ ಕೋರೋದಕ್ಕಾಗಿ. ಆಗ ಅವನು ಸ್ವಲ್ಪ ಬೇಸರದಲ್ಲಿದ್ದ. ಅದಕ್ಕೆ ಕಾರಣ ಬಿಡುಗಡೆಗೂ ಮೊದಲೇ ಯಾರೋ ಟೀಸರ್ ಹರಡಿದ್ದಾರೆ ಅಂತ ಒಂದಷ್ಟು ತಲೆ ಕೆಡಿಸಿಕೊಂಡಿದ್ದ. ಆದರೆ ಮತ್ತೆ ಬೆಳಿಗ್ಗೆ ಮಾತನಾಡಿದಾಗ ತುಂಬ ಖುಷಿಯಾಗಿ ಹೇಳಿದ, 'ಹಾಗಾದ್ರೂ ಏನೂ ತೊಂದರೆ ಆಗಿಲ್ಲ, ನಮ್ಮ ಟೀಸರ್ ಎಲ್ಲ ರೆಕಾರ್ಡ್ ಬ್ರೇಕ್ ಮಾಡಿದೆ' ಎಂದು. ನನಗೆ ಆಶ್ಚರ್ಯ ಅನಿಸಲಿಲ್ಲ. ಯಾಕೆಂದರೆ ಟೀಸರ್ ನೋಡಿದಾಗಲೇ ನನಗೂ ತುಂಬe ಇಷ್ಟವಾಗಿತ್ತು. ಕೆಜಿಎಫ್ ಚಾಪ್ಟರ್‌ ಒನ್‌ ಟೀಸರ್‌ಗಿಂತಲೂ ಇದು ಅದ್ಭುತವಾಗಿತ್ತು.  

`ಮಲ್ಲ' ಸಿನಿಮಾ ಮರೆಯೋಕಾಗಲ್ಲ ಅಂತಾರೆ ಪ್ರಿಯಾಂಕಾ

ನಿಮಗೆ ಯಶ್ `ಕೆಜಿಎಫ್' ಕತೆ ಎಲ್ಲ ಹೇಳಿದ್ದಾರ?
ಖಂಡಿತವಾಗಿಯೂ ಇಲ್ಲ! ಆಕ್ಚುಯಲಿ ನಾಲ್ಕೈದು ಸಿನಿಮಾಗಳ ಹಿಂದೆಯೇ ನನಗೆ ಕತೆ ಹೇಳುವುದನ್ನು ನಿಲ್ಲಿಸಿದ್ದಾನೆ. ಯಾಕೆಂದರೆ ಸಹಜವಾಗಿ ನಮಗೆ ಈಗ ಅಷ್ಟೆಲ್ಲ ಟೈಮ್ ಸಿಗುವುದಿಲ್ಲ. ಮೊದಲೆಲ್ಲ ನಮ್ಮನೇಲಿ ನಮ್ಮಿಬ್ಬರದು ಎದುರು ಬದುರು ಕೋಣೆಯಾಗಿತ್ತು. ಬಂದು ಹೊಸ ಸಿನಿಮಾ ಕತೆ ಎಲ್ಲ ಮೊದಲೇ ನನಗೆ ಹೇಳಿರುತ್ತಿದ್ದ. ಈಗ ಅವನು ತಾಜ್ ವೆಸ್ಟಂಡ್ ಹೋಟೆಲ್‌ನಲ್ಲಿರುತ್ತಾನೆ. ನನಗೂ ಮದುವೆಯಾಗಿದೆ. ಹಾಗಾಗಿ ನಾವು ಭೇಟಿಯಾದಾಗಲೂ ಸಿನಿಮಾ ಕತೆ ಬಗ್ಗೆ ಮಾತನಾಡೋದಕ್ಕಿಂತ ಫ್ಯಾಮಿಲಿ ಬಗ್ಗೇನೇ ಮಾತನಾಡೋದು ಹೆಚ್ಚು. ನನಗೂ ಹಿಂದಿನಂತೆ ಸಿನಿಮಾ ಕತೆ ಚರ್ಚೆ ಮಾಡಲು ಉತ್ಸಾಹ ಇಲ್ಲ. ಅಲ್ಲದೆ ಅವನು ಪ್ರತಿ ಬಾರಿ ಭೇಟಿಯಾಗುವುದು ಕೂಡ ಸರ್ಪ್ರೈಸ್ ಆಗಿರುತ್ತದೆ. ಸಿಗುವ ಗಂಟೆಗಳ ಮೊದಲಷ್ಟೇ ನಮಗೆ ಹೇಳುತ್ತಾನೆ. ನಮ್ಮ ಐರಾ ಬರ್ತ್‌ ಡೇಗೆ ಸಿಕ್ಕ ಮೇಲೆ ನಾವಿಬ್ಬರೂ ಸಿಕ್ಕೇ ಇಲ್ಲ!