Asianet Suvarna News Asianet Suvarna News

ಕನ್ನಡತಿ ಧಾರವಾಹಿ ನಿರ್ದೇಶಕ ಕೇರಳದ ಯಶವಂತ್: ಸೀರಿಯಲ್ ಕುರಿತ ಮನದಾಳದ ಮಾತುಗಳಿವು

ಕನ್ನಡದ ಕಿರುತೆರೆಯಲ್ಲಿ ಸದ್ಯದ ಮಟ್ಟಿಗೆ ಜನಪ್ರಿಯ ಧಾರಾವಾಹಿ `ಕನ್ನಡತಿ'. ಇತ್ತೀಚೆಗೆ ಕಲರ್ಸ್ ವಾಹನಿ ಏರ್ಪಪಡಿಸಿದ್ದ `ಅನುಬಂಧ' ಅವಾರ್ಡ್‌ ಸಮಾರಂಭದಲ್ಲಿ ಅತಿಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು ಕೂಡ ಇದೇ ಧಾರಾವಾಹಿ. ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡೆದ ಧಾರಾವಾಹಿಯ ನಿರ್ದೇಶಕ ಯಶವಂತ್ ಅವರೊಂದಿಗೆ ನಡೆಸಿರುವ ಮಾತುಕತೆ ಇದು.

Kannadathi serial director Yashawanth interview
Author
Bengaluru, First Published Jan 29, 2021, 5:50 PM IST

ಶಶಿಕರ ಪಾತೂರು

ಟಿ.ಎನ್ ಸೀತಾರಾಮ್ ಅವರ ತಂಡದ ಮೂಲಕ ರಂಗ ಪ್ರವೇಶ ಮಾಡಿ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಜೊತೆಗೆ `ಮುಕ್ತ ಮುಕ್ತ' ಧಾರಾವಾಹಿಯ `ಪಾಂಡು ಪಾಟೀಲ'ನಾಗಿ ಹೆಸರು ಮಾಡಿದವರು ಯಶವಂತ. ಪ್ರಸ್ತುತ ಅವರು ನಟರಾಗಿ ಮಾತ್ರವಲ್ಲದೆ, ನಿರ್ದೇಶಕರಾಗಿಯೂ ಜನಪ್ರಿಯರು.

ಈ ಹಿಂದೆ `ಗಂಗಾ', `ಮಾಂಗಲ್ಯಂ ತಂತು ನಾನೇನ' ಮತ್ತು `ದೇವಯಾನಿ' ಇವರೇ ನಿರ್ದೇಶಿಸಿದ ಧಾರಾವಾಹಿಗಳು. ಇದೀಗ ಅವೆಲ್ಲದರ ಜನಪ್ರಿಯತೆ ಮೀರಿಸುವಷ್ಟು ಖ್ಯಾತಿ ಪಡೆದಿರುವುದು `ಕನ್ನಡತಿ ಧಾರಾವಾಹಿ'. ಅದರ ಅನುಭವ ಮತ್ತು ಪ್ರಶಸ್ತಿ ಪಡೆದಿರುವ ಬಗ್ಗೆ ಯಶವಂತ್ ಇಲ್ಲಿ ಮಾತನಾಡಿದ್ದಾರೆ.

`ಶ್ರೇಷ್ಠ ನಿರ್ದೇಶಕ ಪ್ರಶಸ್ತಿ' ಪಡೆದಿರುವ ಖುಷಿಯ ಅನುಭವ ಹೇಗಿದೆ?

ಪ್ರಶಸ್ತಿ ದೊರಕಿದಾಗ ಖಂಡಿತವಾಗಿ ಖುಷಿಯಾಗುತ್ತದೆ. ನಾವು ಕೆಲಸ ಮಾಡುವಾಗ ಪ್ರಶಸ್ತಿಗಾಗಿ ಎಂದು ಗುರಿ ಇರಿಸಿರುವುದಿಲ್ಲ. ಧಾರಾವಾಹಿ ಚೆನ್ನಾಗಿ ಬರಬೇಕು ಎಂದು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿರುತ್ತೇವೆ. ಅದೇ ಸಂದರ್ಭದಲ್ಲಿ ಪ್ರಶಸ್ತಿಯೂ ಬಂದಾಗ ನಮ್ಮ ಪರಿಶ್ರಮ ಕೂಡ ಗುರುತಿಸಿದರಲ್ಲ ಎನ್ನುವುದು ತುಂಬಾ ಖುಷಿ ನೀಡುತ್ತದೆ. ಮಾತ್ರವಲ್ಲ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಎಪಿಸೋಡ್ ಡೈರೆಕ್ಟರ್ ಆಗಿ, ಪ್ರಸ್ತುತ ನಿರ್ದೇಶಕನಾಗಿ ಒಂದಷ್ಟು ವರ್ಷಗಳು ಕಳೆದ ಮೇಲೆ ಸಿಕ್ಕಂಥ ಮೊದಲ ಪ್ರಶಸ್ತಿ ಇದಾದ ಕಾರಣ, ಖುಷಿಯನ್ನು ಹೆಚ್ಚು ಮಾಡಿದೆ.

ಪುತ್ರನ ಶುಭಲಗ್ನದ ವೇಳೆ ಕಲಾವಿದರನ್ನು ಸೇರಿಸಿದ ಕಾಸರಗೋಡು ಚಿನ್ನ

ಆದರೆ ನಿರ್ದೇಶಕನಾಗಿ ನನಗೆ ಪ್ರಶಸ್ತಿ ಬರುವಲ್ಲಿ ಖಂಡಿತವಾಗಿ ಪ್ರಾಜೆಕ್ಟ್‌ ಹಿಂದೆ ಕೆಲಸ ಮಾಡಿದ ಒಟ್ಟು ತಂಡದ ಪರಿಶ್ರಮ ಕೂಡ ಸೇರಿದೆ ಎಂದು ನಂಬಿದ್ದೇನೆ. ವಿಕಾಸ್ ನೇಗಿಲೋಣಿಯವರ ಚಿತ್ರಕತೆ, ಮಂಜುನಾಥ್ ಭಟ್ ಸಂಭಾಷಣೆ, ಯೋಗಿಯವರ ಛಾಯಾಗ್ರಹಣದಿಂದ ಹಿಡಿದು ಕಲಾವಿದರ ನಟನೆಯ ತನಕ ಪ್ರತಿಯೊಂದು ಪ್ರಮುಖವೇ. ಅದಕ್ಕೆ ತಕ್ಕಂತೆ ಅವರೆಲ್ಲರಿಗೂ ಪ್ರಶಸ್ತಿ ಬಂದಿದೆ.

ಪ್ರಶಸ್ತಿ ಪಡೆದುಕೊಂಡ ವೇದಿಕೆಯಲ್ಲಿ ನೀವು ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೆನಪಿಸಿಕೊಳ್ಳಲು ಕಾರಣವೇನು?

ನಾನು ಗಡಿನಾಡು ಕಾಸರಗೋಡು ಜಿಲ್ಲೆಯವನು. ಅಲ್ಲಿ ಕೇರಳ ಸರ್ಕಾರದ ಅನುದಾನಿತ ಬಾಕ್ರಬೈಲು ಎ.ಯು.ಪಿ ಶಾಲೆಯಲ್ಲಿ ಕನ್ನಡದ ವಿದ್ಯಾರ್ಥಿಯಾಗಿ ಬೆಳೆದೆ. ನಾವೆಲ್ಲ ಸರ್ಕಾರಿ ಪ್ರಾಯೋಜಿತ `ಬಾಲಕಲೋತ್ಸವ ಸ್ಪರ್ಧೆ'ಯಲ್ಲಿ ಪಾಲ್ಗೊಳ್ಳುತ್ತಿದ್ದೆವು. ಅದು ಬೇರೆ ಬೇರೆ ಶಾಲೆಗಳ ನಡುವೆ ನಡೆಯುವ ಸ್ಪರ್ಧೆ. ಅದಕ್ಕಾಗಿ ಎಲ್ಲವನ್ನು ಶಿಕ್ಷಕರೇ ಸೇರಿ ಕಲಿಸುತ್ತಿದ್ದರು. ತಿಂಗಳುಗಟ್ಟಲೆ ಆ ಸ್ಪರ್ಧೆಗಾಗಿ ಸಮಯ ವಿನಿಯೋಗಿಸುತ್ತಿದ್ದರು.

ತಂಗಿಯ ಜನ್ಮದಿನಕ್ಕೆ ರಾಕಿಭಾಯ್ ನೀಡಿದ್ದೇನು ಗೊತ್ತೇ?

ಆ ಸ್ಪರ್ಧೆಗಳಲ್ಲಿ ನಾನು ಕೂಡ ಭಾಗಿಯಾಗುತ್ತಿದ್ದ ಕಾರಣ, ಸಹಜವಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿತು. ಸ್ಪರ್ಧೆಯಲ್ಲಿ ಗೆದ್ದು ಪ್ರಶಸ್ತಿ ಪಡೆಯುತ್ತೇನೆ ಎನ್ನುವ ನಿರೀಕ್ಷೆಇರಲಿಲ್ಲ. ರಾತ್ರಿಯೆಲ್ಲ ನಾಟಕ ಇತ್ತು. ಹಲವಾರು ಸ್ಪರ್ಧೆಗಳು ನಡೆದವು. ಹೆಚ್ಚಿನದರಲ್ಲಿ ನಾನು ಭಾಗಿಯಾಗಿದ್ದೆ. ಐದಾರು ಸ್ಪರ್ಧೆಗಳಲ್ಲಿ ನನಗೇನೇ ಪ್ರಶಸ್ತಿ ಬಂತು. ಕೊನೆಗೆ ಹೆಚ್ಚು ಪ್ರಶಸ್ತಿ ಪಡೆದ ಕಾರಣಕ್ಕಾಗಿ `ಕಲಾ ತಿಲಕ' ಎನ್ನುವ ವಿಶೇಷ ಗೌರವವೂ  ದೊರಕಿತು. ಹಾಗಾಗಿ ವೇದಿಕೆಯಲ್ಲಿ ಮೊದಲ ಬಾರಿ ಪ್ರಶಸ್ತಿ ಪಡೆಯುವ ಖುಷಿ ಏನೆನ್ನುವುದರ ಅರಿವು ಮೂಡಿಸಿದ ಶಾಲೆ ಮತ್ತು ಶಿಕ್ಷಕರನ್ನು ಕೂಡ ನೆನಪಿಸಿಕೊಂಡೆ.

ನಿಮ್ಮ ವೃತ್ತಿ ಬದುಕಿನಲ್ಲಿ ಡಾ.ರಾಜ್ ಕುಮಾರ್ ಅವರ ಪ್ರಭಾವವೂ ಇದೆಯಂತೆ?

ಖಂಡಿತವಾಗಿ ಹೌದು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಏನೇ ಕೆಲಸ ಮಾಡುವುದಿದ್ದರೂ ಅವರನ್ನು ಮಾದರಿಯಾಗಿಸುವವರು ಸಾಕಷ್ಟು ಮಂದಿ ಇದ್ದಾರೆ. ಅವರಲ್ಲಿ ನಾನು ಕೂಡ ಒಬ್ಬ. ಅದಕ್ಕೆ ಮುಖ್ಯ ಕಾರಣ ನಮ್ಮಪ್ಪ ಗಣಪತಿ ಆಚಾರ್ಯ ಅವರು ಎನ್ನಬಹುದು. ಯಾಕೆಂದರೆ ಅವರೊಬ್ಬರು ಕಟ್ಟಾ ರಾಜ್ ಕುಮಾರ್ ಅಭಿಮಾನಿ. ಅವರು ತೋರಿಸುತ್ತಿದ್ದ ರಾಜ್ ಕುಮಾರ್ ಸಿನಿಮಾಗಳನ್ನು ನೋಡಿಯೇ ಸಿನಿಮಾರಂಗದ ಮೇಲೆ ಅಭಿಮಾನ ಮೂಡಿಸಿಕೊಂಡೆ. ಸಭ್ಯರು ನೋಡಬಹುದಾದ ಸಿನಿಮಾ ಹೇಗಿರುತ್ತದೆ, ಸಂಬಂಧದ ಮೌಲ್ಯಗಳನ್ನು ಎಷ್ಟೊಂದು ಆದರ್ಶವಾಗಿ ಚಿತ್ರಿಸಲಾಗುತ್ತದೆ ಎನ್ನುವುದೆಲ್ಲ ಅಲ್ಲಿಂದಲೇ ನನಗೆ ಅರಿವಾಗಲು ಶುರುವಾಯಿತು.

ನಟನೆಯಲ್ಲೇ ಸುಖ ಎನ್ನುತ್ತಾರೆ ನಿಮಿಕಾ

`ಆಕಸ್ಮಿಕ' ಬಿಡುಗಡೆಯ ವೇಳೆ ಚಿತ್ರ ನೋಡಲು ಹೋಗುವಾಗ ನಾನಿನ್ನು ಚಿಕ್ಕ ಮಗುವಾಗಿದ್ದೆ ಎಂದು ನಮ್ಮಪ್ಪ ಹೇಳುತ್ತಿದ್ದ ನೆನಪು.  ಆನಂತರ ನನಗೆ ಚಿತ್ರಮಂದಿರದಲ್ಲಿ ರಾಜ್ ಕುಮಾರ್ ಸಿನಿಮಾ ನೋಡುವ ಅವಕಾಶ ಸಿಕ್ಕಿದ್ದು ಕಡಿಮೆ. ಆದರೆ ಅವರ ಹೆಚ್ಚಿನ ಎಲ್ಲ ಸಿನಿಮಾಗಳನ್ನು ಟಿವಿಯಲ್ಲೇ ನೋಡಿದ್ದೇನೆ. ಸಾಕಷ್ಟು ಬಾರಿ ನೋಡಿ ಮೆಚ್ಚಿದ್ದಂಥ `ಆಕಸ್ಮಿಕ'  ಚಿತ್ರದ ನಿರ್ದೇಶಕ ಟಿ.ಎಸ್ ನಾಗಾಭರಣ ಅವರ ಕೈಗಳಿಂದಲೇ ಪ್ರಶಸ್ತಿ ಪಡೆಯಲು ಸಾಧ್ಯವಾಗಿದ್ದು ನನ್ನ ಅದೃಷ್ಟ. 

ನಿಮ್ಮ ಪ್ರಕಾರ `ಕನ್ನಡತಿ' ಧಾರಾವಾಹಿ ಇಷ್ಟೊಂದು ಜನ ಮೆಚ್ಚುಗೆ ಪಡೆಯಲು ಕಾರಣ ಏನಿರಬಹುದು?

ಎಲ್ಲರಿಗೂ ಮೊದಲು ಇಷ್ಟವಾಗುವುದೇ ಧಾರಾವಾಹಿಯಲ್ಲಿನ ಸಹಜತೆ. ಅದರ ಕತೆ ಮತ್ತು ಕತೆಯಲ್ಲಿನ ಕನ್ನಡ ಇಷ್ಟ. ಇವೆಲ್ಲ ವಿಶೇಷಗಳಿಂದಾಗಿಯೇ ಜನತೆ ಒಟ್ಟು ಧಾರಾವಾಹಿಯನ್ನು ಮೆಚ್ಚಿದ್ದಾರೆ ಎನ್ನಬಹುದು. ಕತೆ, ಕತೆಯಲ್ಲಿ ಬರುವ ಪ್ರತಿಯೊಂದು ಸನ್ನಿವೇಶಗಳು, ಆ ಸನ್ನಿವೇಶಕ್ಕೆ ತಕ್ಕಂಥ ಸಂಭಾಷಣೆಗಳು ಮತ್ತು ಒಟ್ಟು ಕಲಾವಿದರ ನಟನೆಯಲ್ಲಿನ ನೈಜತೆ ಮತ್ತು ಇವೆಲ್ಲವನ್ನು ಬೆಸೆಯುವಂಥ ನಮ್ಮ ಕನ್ನಡ ಇವೇ ವೀಕ್ಷಕರಿಗೆ ಪ್ರಥಮ ಆಕರ್ಷಣೆ ಎನ್ನಬಹುದು. ಈ ಅಂಶಗಳು ಬೇರೆ ಧಾರಾವಾಹಿಗಳಿಗಿಂತ `ಕನ್ನಡತಿ'ಯನ್ನು ವಿಭಿನ್ನವಾಗಿಸಿದೆ ಹಾಗೆಯೇ ಜನಮೆಚ್ಚುಗೆಗೆ ಪಾತ್ರವಾಗಿಸಿದೆ.

Follow Us:
Download App:
  • android
  • ios