ಕೆಂಡಪ್ರದಿ

ನೀವು ತೆಗೆದುಕೊಂಡ ಯಾವ ನಿರ್ಧಾರ ಇಲ್ಲಿಗೆ ತಂದು ನಿಲ್ಲಿಸಿದೆ?

ಒಂದು ಪಾತ್ರ ಸಿಕ್ಕರೆ ಅದು ಹೇಗೆ ಇರಲಿ ಅದನ್ನು ಶ್ರದ್ಧೆಯಿಂದ ಮಾಡಬೇಕು ಎಂದುಕೊಂಡಿದ್ದೆ. ಇದೇ ನಿರ್ಧಾರ ನನ್ನ ಕೈ ಹಿಡಿದದ್ದು. ಒಂದು ಪಾತ್ರಕ್ಕೆ ಸಿಕ್ಕ ಮೆಚ್ಚುಗೆ ಎರಡು ಅವಕಾಶಗಳನ್ನು ಹೊತ್ತು ತಂದವು. ಎರಡು ನಾಲ್ಕಾದವು. ಹೀಗೆ ಮೊದಲ ನಾಲ್ಕಾರು ವರ್ಷ ಧಾರಾವಾಹಿ, ಮಾದೇಶ, ಮನಸಾರೆ, ಪಂಚರಂಗಿ, ಲೈಫು ಇಷ್ಟೆನೆ ಸಿನಿಮಾ ಮಾಡಿದೆ. ಅವುಗಳೇ ನನಗೆ ಮುಂದೆ ಡ್ರಾಮಾ, ಲೂಸಿಯಾದಂತಹ ಅವಕಾಶ ತಂದುಕೊಟ್ಟವು. ಅಲ್ಲಿಂದ ನನ್ನ ಜರ್ನಿಯ ವೇಗ ಹೆಚ್ಚಾಗತೊಡಗಿತು.

'ಬ್ರಹ್ಮಚಾರಿ' ಆಯ್ತು ಈಗಾ 'ಗೋದ್ರಾ' ಇದು 6 ಪ್ಯಾಕ್ಸ್‌ 'ಅಯೋಗ್ಯ'ನ ಜರ್ನಿ! 

ಡ್ರಾಮಾ, ಲೂಸಿಯಾ ಸಿನಿ ಬದುಕಿನ ಟರ್ನಿಂಗ್‌ ಪಾಯಿಂಟ್‌ಗಳಾ?

ಖಂಡಿತ. ಅದರಲ್ಲಿ ಎರಡು ಮಾತೇ ಇಲ್ಲ. ಡ್ರಾಮಾ ನನ್ನ ಸಿನಿಮಾ ಜೀವನದ ಟರ್ನಿಂಗ್‌ ಪಾಯಿಂಟ್‌. ಅಲ್ಲಿ ನಾನು ಆಡಿದ ಮಂಡ್ಯ ಭಾಷೆ ನನಗೆ ಒಳ್ಳೆಯ ಇಮೇಜ್‌ ತಂದುಕೊಟ್ಟಿತು. ಅಭಿಮಾನಿಗಳ ಪಾಲಿಗೆ ನಾನು ಕ್ವಾಟ್ಲೆ ಸತೀಶ ಆದೆ. ಆಮೇಲೆ ನನಗಾಗಿಯೇ ಮಂಡ್ಯ ಭಾಗದ ಕತೆಗಳೇ ಬರಲು ಶುರುವಾದವು. ಒಬ್ಬ ನಟನಿಗಾಗಿಯೇ ಕತೆಗಳನ್ನು ಬರೆಯುತ್ತಾರೆ ಎಂದರೆ ಅದು ಅವನ ಪಾಲಿಗೆ ದೊಡ್ಡ ಸಂತೋಷ. ನನಗೆ ಆ ಸಂತೋಷ, ಗೆಲುವು ತಂದುಕೊಟ್ಟದ್ದು ಡ್ರಾಮಾ. ಆಮೇಲೆ ನಾನೇ ನಾಯಕನಾಗಿ ಮಾಡಿದ ಲೂಸಿಯಾ ನನ್ನ ಕೆರಿಯರ್‌ನ ಇನ್ನೊಂದು ತಿರುವು. ಅಲ್ಲಿಯವರೆಗೂ ನನಗೆ ಇದ್ದ ಹಣಕಾಸಿನ ತೊಂದರೆ, ಅವಕಾಶಗಳ ಕೊರತೆ ಎಲ್ಲವೂ ಲೂಸಿಯಾ ನಂತರ ಕಡಿಮೆಯಾಗುತ್ತಾ ಬಂತು. ನಾನು ಇಂಡಸ್ಟ್ರಿಯಲ್ಲಿ ನಾಯಕ ನಟನಾಗಿ ನಿಲ್ಲಲು ಸಹಾಯ ಆಯಿತು.

ಹನ್ನೆರಡು ವರ್ಷದ ಅನುಭವ ಹೇಗಿದೆ?

ಈ ವೇಳೆ ನಾನು ಸೋಲು, ಗೆಲುವು ಎರಡನ್ನೂ ಕಂಡಿದ್ದೇನೆ. ನನಗೆ ದೊಡ್ಡ ಹಿಟ್‌ ಆದ ಚಿತ್ರ, ಸಾಧಾರಣ ಯಶ ಕಂಡ ಚಿತ್ರ ಎಲ್ಲವೂ ಒಂದೇ. ನಾನು ಮಾಡಿದ ಪಾತ್ರಗಳು, ನನ್ನನ್ನೇ ಅರಸಿ ಬಂದ ಪಾತ್ರಗಳು, ಸಿಕ್ಕ ಗೆಲುವುಗಳು, ಅಭಿಮಾನ, ಪ್ರೀತಿ ಇವೆಲ್ಲದರಿಂದ ನನ್ನ ಜರ್ನಿ ಶ್ರೀಮಂತವಾಗಿದೆ. ಲೂಸಿಯಾ, ಅಯೋಗ್ಯ ಸೇರಿದಂತೆ ಹಲವು ಸಿನಿಮಾಗಳು ಅಷ್ಟುದೊಡ್ಡ ಹಿಟ್‌ ಆಗುತ್ತವೆ ಎಂದುಕೊಂಡಿರಲೇ ಇಲ್ಲ. ನನ್ನ ಚಿತ್ರ ಬಿಡುಗಡೆ ದಿನ ಥಿಯೇಟರ್‌ ಮುಂದೆ ಎರಡು ಮೂರು ಥಿಯೇಟರ್‌ ತುಂಬುವಷ್ಟುಜನ ಸೇರಿರುತ್ತಾರೆ. ಅದನ್ನು ನೋಡಿದರೆ ಮನಸ್ಸು ತುಂಬುತ್ತೆ. ಇಷ್ಟುಪ್ರೀತಿ, ಅಭಿಮಾನಕ್ಕೆ ನಾನು ಚಿರಋುಣಿ. ಈ ಹಂತದಲ್ಲಿ ಸಾಕಷ್ಟುನಿರ್ದೇಶಕರು, ಸಹ ನಟರು, ತಂತ್ರಜ್ಞರು ನನ್ನ ಜೊತೆ ಸೇರಿದ್ದಾರೆ. ಅವರೆಲ್ಲರ ಸಹಕಾರದ ಫಲವೇ ನನ್ನ ಹನ್ನೆರಡು ವರ್ಷದ ಜರ್ನಿ. ಅವೆಲ್ಲದರ ಅನುಭವ ದೊಡ್ಡದು.

ನೀನಾಸಂ ಸತೀಶ್‌ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!

ಈ ನಡುವಲ್ಲಿ ನಿರ್ಮಾಣಕ್ಕಿಳಿದ ಉದ್ದೇಶ?

ಕೆಲವು ಕತೆಗಳು ನನಗೆ ತುಂಬಾ ಇಷ್ಟವಾಗುತ್ತವೆ. ಆದರೆ ಅದಕ್ಕೆ ನಿರ್ಮಾಪಕರು ಸಿಕ್ಕದೇ ಇದ್ದಾಗ ನಾನೇ ನಿರ್ಮಾಣ ಮಾಡಿದರೆ ಹೇಗೆ ಎಂದು ನನ್ನದೇ ಪ್ರೊಡಕ್ಷನ್‌ ಹೌಸ್‌ ಕಟ್ಟಿದೆ. ಇದರ ಉದ್ದೇಶ ಹೊಸ ಪ್ರತಿಭಾವಂತ ನಟ, ನಿರ್ದೇಶಕರಿಗೆ ಅವಕಾಶ ನೀಡುವುದು. ಒಳ್ಳೆಯ ಕಂಟೆಂಟ್‌ಗಳಿಗೆ ಪ್ರೋತ್ಸಾಹ ನೀಡುವುದು. ಮುಂದೆ ಒಂದಷ್ಟುಯೋಜನೆ ಇಟ್ಟುಕೊಂಡಿದ್ದೇವೆ. ಅದನ್ನು ಹಂತ ಹಂತವಾಗಿ ಮಾಡುತ್ತೇನೆ.

ಮುಂದಿನ ಹಾದಿ ಹೇಗಿರಲಿದೆ?

ಈಗ ನನ್ನ ಮುಂದೆ ಏಳು ಸಿನಿಮಾಗಳು ಇವೆ. ಅವೆಲ್ಲವನ್ನೂ ಮುಗಿಸಬೇಕು. ಗೋಧ್ರಾ ಬಿಡುಗಡೆಯ ಹಂತಕ್ಕೆ ಬಂದಿದೆ. ಪರಿಮಳ ಲಾಡ್ಜ್‌, ದಸರಾ ಶೂಟಿಂಗ್‌ ಆಗಬೇಕು. ಇನ್ನೂ ಒಪ್ಪಿಕೊಂಡ ಸಿನಿಮಾಗಳನ್ನು ಪೂರ್ಣ ಮಾಡಿ, ಮೈ ನೇಮ್‌ ಇಸ್‌ ಸಿದ್ದೇಗೌಡ ಎನ್ನುವ ಸಿನಿಮಾಕ್ಕೆ ನಾನೇ ನಿರ್ದೇಶನ ಮಾಡುವವನಿದ್ದೇನೆ. ಅಲ್ಲಿಗೆ ಹನ್ನೆರಡು ವರ್ಷದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನೂ ಆಗಿದ್ದೇನೆ. ಈಗಷ್ಟೇ ಚಿತ್ರರಂಗದಲ್ಲಿ ಟೀನೇಜ್‌ಗೆ ಕಾಲಿಟ್ಟಿದ್ದೇನೆ. ಇನ್ನು ಮುಂದೆ ಹೊಸ ಬಗೆಯ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾ ಮುಂದೆ ಸಾಗುವ ಹೆಬ್ಬಯಕೆ ನನ್ನದು.