ಕತೆ ಕೊಂಡೊಯ್ದಲ್ಲಿ ಹೋಗಿ, ಪಾತ್ರ ಕುಣಿಸಿದಂತೆ ಕುಣಿದು, ಕೊನೆಗೆ ಅದಕ್ಕೆ ಸಿನಿಮಾದ ಸ್ಪಷ್ಟರೂಪ ಕೊಟ್ಟು ರಾಜ್‌ ಬಿ ಶೆಟ್ಟಿನಿರ್ದೇಶಿಸಿ ನಟಿಸಿರುವ, ರಿಷಬ್‌ ಶೆಟ್ಟಿಪ್ರಮುಖ ಪಾತ್ರ ವಹಿಸಿರುವ ‘ಗರುಡ ಗಮನ ವೃಷಭ ವಾಹನ’ ಇಂದು ಬಿಡುಗಡೆಯಾಗುತ್ತಿದೆ.

ಪ್ರಿಯಾ ಕೆರ್ವಾಶೆ

ಸಿನಿಮಾಕ್ಕೆ ಯಾವ ಥರದ ರೆಸ್ಪಾನ್ಸ್‌ನ ನಿರೀಕ್ಷೆಯಲ್ಲಿದ್ದೀರಿ?

ಅಂಥಾ ಯಾವ ನಿರೀಕ್ಷೆಗಳೂ ಇಲ್ಲ. ನನಗೆ ಬೇಕಾದಂತೆ ಸಿನಿಮಾ ಮಾಡಿದ್ದೀನಿ. ಸಿನಿಮಾ ಬಗ್ಗೆ ಯಾವ ರೆಸ್ಪಾನ್ಸ್‌ ಬರುತ್ತೋ ಗೊತ್ತಿಲ್ಲ. ಬ್ಲಾಂಕ್‌ ಆಗಿದ್ದೀನಿ. ಪ್ರೀಮಿಯರ್‌ ಶೋದಲ್ಲಿ ಸೆಲೆಬ್ರಿಟಿಗಳ ಜೊತೆಗೆ 450 ಟಿಕೆಟ್‌ ಆಡಿಯನ್ಸ್‌ಗಿತ್ತು. ಅದು ಸೋಲ್ಡ್‌ಔಟ್‌ ಆಗಿತ್ತು. ಹೀಗಾಗಿ ಜನರ ಪ್ರತಿಕ್ರಿಯೆ ಬಗ್ಗೆ ಕುತೂಹಲವಿದೆ. ಸಿನಿಮಾ ಜನರನ್ನು ತಲುಪೋದೇ ಮಿರಾಕಲ್‌, ಒಳ್ಳೆ ಸಿನಿಮಾ ಮಾಡೋದೂ ಮಿರಾಕಲ್‌. ಆ ಎರಡೂ ಮಿರಾಕಲ್‌ಗಳು ಒಂದು ಸಿನಿಮಾಕ್ಕೆ ಆಗಬೇಕು. ಅದಾದರೆ ಐಯ್ಯಾಮ್‌ ವೆರಿ ವೆರಿ ಹ್ಯಾಪಿ.

ಇದು ಯಾವ ಕಾಲದ ಕಥೆ?

ಈಗಿನ ಕಾಲದಲ್ಲಿ ಬದುಕುತ್ತಿರುವವರ ಬಾಲ್ಯದಿಂದ ಈ ಕತೆ ಶುರುವಾಗುತ್ತೆ. ಸುಮಾರು 80ರ ದಶಕ ಹಾಗೂ ಈಗಿನ ಕಾಲಗಳೆರಡರಲ್ಲೂ ಚಲಿಸುತ್ತೆ. ಈ ಸಿನಿಮಾ ಬರೆಯುವಾಗ ನನಗಿದ್ದ ಒಂದೇ ಒಂದು ಹಸಿವು ಅಂದರೆ ಇಲ್ಲಿಯವರೆಗೆ ನಾನು ಬರೆಯುತ್ತಿದ್ದ ಮಾದರಿಯಲ್ಲಿ ಈ ಸಿನಿಮಾ ಬರೆಯಬಾರದು. ಒಂದೆರಡು ಸಿನಿಮಾ ಬರೆದು ಯಶಸ್ಸು ಸಿಕ್ಕ ತಕ್ಷಣ ಗೊತ್ತಿಲ್ಲದೇ ಯಾವುದೋ ಸಿದ್ಧಸೂತ್ರ ನಿಮ್ಮನ್ನು ಕಟ್ಟಿಹಾಕಿಬಿಡುತ್ತೆ. ಸಿನಿಮಾ ಅಂದ್ರೆ ಹೀಗೆ, ಯಶಸ್ಸು ಅಂದರೆ ಹೀಗೆ ಅನ್ನುವ ನಿರ್ಣಯಕ್ಕೆ ಬಂದು ಬಿಡ್ತೀರಿ. ಇದು ನಾವು ಯಾವ ಕಾರಣಕ್ಕೆ ಸಿನಿಮಾ ಮಾಡಬೇಕೋ ಅದಕ್ಕೆ ತದ್ವಿರುದ್ಧ. ಸಿನಿಮಾ ಮಾಡೋಕೆ ನಾವು ಶುರು ಮಾಡಿದ್ದೇ ಸ್ವಾತಂತ್ರ್ಯಕ್ಕೋಸ್ಕರ, ಒಂದು ಜಾಯ್‌ಗೋಸ್ಕರ. ಬರೀಬೇಕಾದ್ರೂ ಬ್ಲಾಂಕ್‌ ಸ್ಪೇಸ್‌ನಲ್ಲಿ ಇದು ಹೀಗೇ ಆಗಬೇಕು ಅನ್ನೋ ಉದ್ದೇಶ ಇಲ್ಲದೇ, ಏನು ಆಗುತ್ತೆ ನೋಡೋಣ ಎಂಬ ಕುತೂಹಲದಲ್ಲಿ ಬರೆದಾಗ ಒಳ್ಳೆಯ ಅನುಭವ ಕೊಡುತ್ತೆ. ಆ ಅನುಭವವೇ ಈ ಸಿನಿಮಾದ ಜೀವಾಳ.

ಈ ಸಿನಿಮಾ ಜೊತೆ ರಾಜ್‌ ಶೆಟ್ಟಿಅವರ ಜರ್ನಿ ಹೇಗಿತ್ತು?

ಈ ಸಿನಿಮಾ ಪರ್ಸನಲೀ ಹತ್ತಿರವಾದ ಸಿನಿಮಾ. ಈ ಸಿನಿಮಾ ಬರೀಬೇಕಾದರೆ ನಾನು ಎಕ್ಸ್‌ಪ್ಲೊರೇಶನ್‌ ಮಾಡುವ ಉತ್ಸಾಹದಲ್ಲಿದ್ದೆ. ಸಿನಿಮಾ ಸಕ್ಸಸ್‌ ಮಾಡೋದು ಡೆಸ್ಟಿನೇಶನ್‌ ಗೊತ್ತಿದ್ದು ಗೂಗಲ್‌ ಮ್ಯಾಪ್‌ ಹಾಕಿದಂಗೆ. ಈ ಚಿತ್ರದಲ್ಲಿ ಅದಕ್ಕಿಂತ ಭಿನ್ನವಾಗಿ ಗೊತ್ತು ಗುರಿಯಿಲ್ಲದೇ ಸುತ್ತು ತಿರುಗಿದ್ದು. ಅದರಿಂದ ಸಿಕ್ಕದ ಅನುಭವದಿಂದ ಇದು ಸ್ಟಾರ್ಟ್‌, ಇದು ಎಂಡ್‌ ಅಂತ ನಮ್ಮ ಟ್ರಾವೆಲ್‌ ಅನ್ನು ಮಾರ್ಕ್ ಮಾಡಿಕೊಂಡದ್ದು. ಹಾಗಾಗಿ ಆರ್ಟಿಸ್ಟ್‌ ಪರ್ಪಸ್‌ನಿಂದ ರೈಟಿಂಗಲ್ಲಿ ಮೋರ್‌ ಪ್ಯೂರ್‌ ಟು ಮಿ.

ಗರುಡ ಗಮನ ವೃಷಭ ವಾಹನ ಚಿತ್ರದ 'ಎಂದೋ ಬರೆದ ಕವಿತೆ' ಹಾಡು ರಿಲೀಸ್

ಮೇಕಿಂಗ್‌ ವೀಡಿಯೋದಲ್ಲಿ ಒಬ್ರು ಹೇಳ್ತಿದ್ರು, ಈ ಸಿನಿಮಾ ಮಾಡ್ತಿರುವಾಗ ರಾಜ್‌ ಅವರ ಹತ್ರ ಹೋಗ್ಲಿಕ್ಕೂ ಭಯ ಆಗ್ತಿತ್ತು ಅಂತ. ಸದಾ ಶಿವನಾಗಿ ಇರ್ತಿದ್ರಾ?

ಭೂಮಿ ಮೇಲೆ ಶಿವನಷ್ಟುಸ್ವಾತಂತ್ರ್ಯದಿಂದ ಬದುಕೋರು ಬಹಳ ಕಮ್ಮಿ ಜನ. ಅವನಿಗೇನು ಅನಿಸುತ್ತೋ ಅದನ್ನು ಹೇಳಿಕೊಂಡು, ಏನು ಅನಿಸುತ್ತೋ ಅದನ್ನು ಮಾಡಿಕೊಂಡು ಅದರ ಬಗ್ಗೆ ಯಾವುದೇ ರೀತಿಯ ತಪ್ಪು ಸರಿಯನ್ನ ಯೋಚನೆ ಮಾಡದೇ ಮಾಡುವಂಥಾ ಫ್ರೀಡಂ ನಮ್ಮ ಈ ಸಮಾಜದಲ್ಲಿ ಯಾರಿಗೂ ಇಲ್ಲ. ಆ ಪಾತ್ರ ಮಾಡಬೇಕಾದ್ರೆ ನಾನೂ ಒಳಗಡೆಯಿಂದ ಅವನಷ್ಟೇ ಖಾಲಿಯಾಗಿರಬೇಕಿತ್ತು. ಅವನಿಗೆ ಎಲ್ಲದರಲ್ಲೂ ಉದ್ವೇಗ. ಯಾವಾಗ ಪಾತ್ರಗಳು ತೀವ್ರತೆಯನ್ನು ಅನುಭವಿಸುತ್ತಾ ಇದ್ದವೋ ಆಗ ನಟನಾಗಿ ನಾನೂ ಅನುಭವಿಸ್ತಾ ಇದ್ದೆ. ಆಗ ಯಾರಾದ್ರೂ ಅನವಶ್ಯಕವಾಗಿ ಹತ್ತಿರ ಬಂದರೆ ತುಂಬ ಇರಿಟೇಟ್‌ ಆಗ್ತಿತ್ತು. ಮಿಸ್ಟೇಕ್‌ಗಳನ್ನು ಮತ್ತೆ ಮತ್ತೆ ಮಾಡಿದಾಗ ಕಂಟ್ರೋಲ್‌ ಕಳ್ಕೊಳ್ತಿದ್ದೆ.

ಗರುಡಗಮನ ವೃಷಭವಾಹನಕ್ಕೆ ರಕ್ಷಿತ್‌ ಶೆಟ್ಟಿ ಬೆಂಬಲ

ಈ ಕತೆ ಹೊಳೆದ ಸಂದರ್ಭ ಯಾವುದು?

ಈ ಕತೆಯಲ್ಲಿ ಬರುವ ಶಿವ ಪಾತ್ರ ಶಿವನಲ್ಲಿರುವ ಸಿಟ್ಟಿನ ರೂಪಕ. ಪ್ರಳಯಾಂತಕ ರುದ್ರ ಸಿಟ್ಟಲ್ಲಿ ಎಲ್ಲವನ್ನೂ ನಾಶ ಮಾಡಬಲ್ಲ. ಇಂಟೆನ್ಸಿಟಿ ಬೇಕಿತ್ತು ಪರ್ಫಾರ್ಮೆನ್ಸ್‌ಗೆ. ಇಲ್ಲಾಂದ್ರೆ ಪೇಲವವಾಗ್ತಿತ್ತು. ಪಟಾಕಿಯಲ್ಲಿ ಯಾವಾಗ ಕಿಡಿ ತಾಗಿ ಯಾವಾಗ ಅದು ಹೊಡೆದುಕೊಳ್ಳೋದಕ್ಕೆ ಶುರುವಾಗುತ್ತೆ ಅಂತ ಪಟಾಕಿಗೂ ಗೊತ್ತಿರೋದಿಲ್ಲ. ಆ ಇಂಟೆನ್ಸಿಟಿ ಇದ್ದಾಗ ಇದೆಲ್ಲ ಆಗಿದ್ದು. ಈ ಕತೆ ಹೊಳೀಲಿಕ್ಕೆ ಪುರಾಣದ ಬ್ರಹ್ಮ, ವಿಷ್ಣು, ಮಹೇಶ್ವರರು ಸ್ಫೂರ್ತಿ. ಅವರೂ ಸೃಷ್ಟಿಯ ವೇಳೆ ಜಗಳ ಮಾಡಿದ್ರು. ಇದು ಇಂಟರೆಸ್ಟಿಂಗ್‌ ಎಕ್ಸ್‌ಪ್ಲೋರೇಶನ್‌ ಥರ ಕಾಣಿಸ್ತು. ದೇವರುಗಳೂ ಜಗಳ ಮಾಡ್ತಾರೆ, ದೇವರಲ್ಲೂ ಅಹಂ ಇದೆಯಾ ಹಾಗಾದ್ರೆ ಅನ್ನುವ ಪ್ರಶ್ನೆ ಬಂತು. ಇಗೋ ಅನ್ನೋದು ಅಷ್ಟುಸಿಂಪಲ್‌ ವಿಷಯ ಅಲ್ಲ ಅಂತ ಗಾಢವಾಗಿ ಅನಿಸಲು ಶುರುವಾಯ್ತು. ಆ ಹುಡುಕಾಟವೇ ಈ ಸಿನಿಮಾ.

ನಿರ್ದೇಶಕ ರಿಶಬ್‌ಗೆ ನಿರ್ದೇಶನ ಮಾಡಿದ, ಅವರೊಂದಿಗೆ ನಟಿಸಿದ ಅನುಭವ?

ರಿಶಬ್‌ ನನಗೆ ಹೊಸಬರಲ್ಲ. ಅವರ ಜೊತೆಗೆ ಆ್ಯಕ್ಟ್ ಮಾಡೋದು ಹೊಸತಷ್ಟೇ. ಅವರು ನಟ, ನಾನು ನಿರ್ದೇಶಕ ಅನ್ನೋ ಭಾವಗಳೆಲ್ಲ ನಮ್ಮ ನಡುವೆ ಬರಲಿಲ್ಲ. ಅವರು ರಿಹರ್ಸಲ್‌ಗೂ ಬರ್ತಿದ್ರು. ಎಷ್ಟೋ ದಿವಸ ಶೂಟ್‌ ಇಲ್ಲದಾಗಲೂ, ದಯವಿಟ್ಟು ನನಗೊಂದು ರಿಹರ್ಸಲ್‌ ಮಾಡಿಸಿ ಶೆಟ್ರೇ ಅಂತ ಹೇಳಿ ಎಲ್ಲ ಹೊಸ ಆಕ್ಟರ್ಸ್‌ ಜೊತೆ ಕೂತ್ಕೊಳ್ತಿದ್ರು. ಆದರೆ ನಮ್ಮ ಸೆಟ್‌ನಲ್ಲೊಬ್ಬ ಹೆಸರು ಮಾಡಿದ ನಿರ್ದೇಶಕ, ನಟ ಇದ್ದಾನೆ ಅಂತ ಹೊಸ ಕಲಾವಿದರಿಗೆ ಅನಿಸದಂತೆ, ಅವರೆಲ್ಲ ಕಂಫರ್ಟ್‌ ಆಗಿರುವಂತೆ ಇದ್ದದ್ದು ರಿಶಬ್‌ ದೊಡ್ಡ ಗುಣ.