Asianet Suvarna News Asianet Suvarna News

ನನಗೆ ರಾಜಕೀಯವೂ ಬೇಡ, ಪ್ರಜಾಕೀಯವೂ ಬೇಡ- ಚೇತನ್

`ಆ ದಿನಗಳು' ಸಿನಿಮಾ ಬಳಿಕ ಚೇತನ್ ಸುದ್ದಿಯಾಗಿದ್ದೇ ತಮ್ಮ ಹೋರಾಟದ ದಿನಗಳಿಂದ. ಹಾಗಂತ ರಾಜಕೀಯ ಪ್ರವೇಶದ ಮೂಲಕ ಅವರು ಸೇವೆ ಮಾಡಲು ಬಯಸುವುದಿಲ್ಲ. ಅದೇ ರೀತಿ ಪ್ರಜಾಕೀಯದ ಬಗ್ಗೆಯೂ ಅವರಿಗೆ ಒಲವಿಲ್ಲ. 

kannada Actor Chethan talks about political parties
Author
Bengaluru, First Published Aug 23, 2020, 5:15 PM IST

ನನಗೆ ರಾಜಕೀಯವೂ ಬೇಡ, ಪ್ರಜಾಕೀಯವೂ ಬೇಡ- ಚೇತನ್

ಚೇತನ್ ಮತ್ತೆ ಬಂದಿದ್ದಾರೆ. ಈ ಬಾರಿ ಚಿತ್ರನಟನಾಗಿ. ಒಬ್ಬ ನಾಯಕ ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾರಂಗದಲ್ಲಿ ಕೂಡ ದಮನಿತರ ಪರ ಧ್ವನಿ ಎತ್ತಿದರೆ ಎಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಚೇತನ್ ಜೀವಂತ ಉದಾಹರಣೆ. ಅದರೆ ಅವರು ಹಾಗಂತ ಹೇಳಿಕೊಳ್ಳುವುದಿಲ್ಲ. ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಳ್ಳುವುದರಲ್ಲಿ ತೃಪ್ತಿ ಸಿಗುವ ಕಾರಣ, ಅದನ್ನು ಸೇವೆ ಎಂದು ಕರೆದುಕೊಳ್ಳಲು ಅವರು ಇಷ್ಟಪಡುವುದಿಲ್ಲ. ಅದೇ ಸಂದರ್ಭದಲ್ಲಿ ಸಿನಿಮಾ ಮತ್ತು ಹೋರಾಟ ಎರಡನ್ನು ಒಂದಕ್ಕೊಂದು ಬೆರೆಸಲು ಚೇತನ್ ಇಷ್ಟಪಡುವುದಿಲ್ಲ. ಹಾಗಂತ ಅನ್ಯಾಯ ಕಂಡಾಗ ಸುಮ್ಮನಿರುವ ಜಾಯಮಾನ ಮಾತ್ರ ಇವರದ್ದಲ್ಲ. `ಮಾರ್ಗ' ಎನ್ನುವ ಚಿತ್ರದ ಮೂಲಕ ಮರಳಿ ಬರುತ್ತಿರುವ ಚೇತನ್ ಅವರೊಂದಿಗೆ ಸುವರ್ಣನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.

ಶಶಿಕರ ಪಾತೂರು

ಮಾತೃಶ್ರೀ ಸೇವೆಯಲ್ಲಿ ಧನ್ಯನೆನ್ನುವ ಶ್ರೀಧರ್

ಮಾರ್ಗ ಚಿತ್ರವನ್ನು ನೀವು ಒಪ್ಪಿಕೊಳ್ಳಲು ಕಾರಣವೇನು?

`ಮಾರ್ಗ' ಚಿತ್ರದಲ್ಲಿ ಒಂದು ಒಳ್ಳೆಯ ಚಿತ್ರಕತೆ ಇದೆ. ಆಧುನಿಕತೆಗೆ ಹೊಂದಿಕೊಳ್ಳುವಂಥ ತಾಂತ್ರಿಕವಾಗಿ ಸಂಶೋಧಿಸಲ್ಪಟ್ಟ ವಿಚಾರಗಳು ಚಿತ್ರದಲ್ಲಿ ಬರುತ್ತವೆ. ನನ್ನ ಪಾತ್ರವೂ ಚೆನ್ನಾಗಿದೆ. ನನಗೆ ಮಲ್ಟಿಪಲ್ ಶೇಡ್ಸ್ ಇವೆ. ಸ್ಕ್ರೀನ್ ಪ್ಲೇ ಟೈಟಾಗಿದೆ. ಅಗತ್ಯದ ಸಂಭಾಷಣೆಗಳಷ್ಟೇ ಚಿತ್ರದಲ್ಲಿವೆ. ಕ್ಲಾಸ್ ಮಾಸ್ ಸೇರಿಕೊಂಡು ನೋಡುವಂಥ ಕೌಟುಂಬಿಕ ಚಿತ್ರವಾಗಿ ಹೊಮ್ಮಲಿದೆ. ನಿರ್ದೇಶಕ ಮೋಹನ್ ಅವರಿಗೆ ಇದು ಪ್ರಥಮ ಚಿತ್ರವಾದರೂ, ಅವರು ಅಸೋಸಿಯೇಟ್ ಡೈರೆಕ್ಟರ್ ಆಗಿದ್ದಾಗಲೇ ನಾನು ಬಲ್ಲೆ. ಪ್ರತಿಭಾವಂತ ಎನ್ನುವುದು ಗೊತ್ತು. ಈ ಎಲ್ಲ ನಂಬಿಕೆಯೇ ಚಿತ್ರವನ್ನು ಒಪ್ಪುವಂತೆ ಮಾಡಿತು.

kannada Actor Chethan talks about political parties

ಹಬ್ಬಗಳನ್ನು ನೀವು ಹೇಗೆ ಆಚರಿಸುತ್ತೀರಿ?

ನನ್ನ ಪ್ರಕಾರ ಆರೋಗ್ಯದಿಂದ ಕಳೆಯುವ ಪ್ರತಿಯೊಂದು ದಿನವೂ ಹಬ್ಬವೇ. ನಮ್ಮಿಂದೇನಾದರೂ ಒಳ್ಳೆಯ ಕೆಲಸಗಳೇನಾದರೂ ಆದರೆ ಅದು ಬಲುದೊಡ್ಡ ಹಬ್ಬ. ಅದರ ಹೊರತಾಗಿ ನಾನು ಹಬ್ಬಗಳನ್ನು ಆಚರಿಸಲು ಇಷ್ಟಪಡುವುದಿಲ್ಲ. ಹಾಗಂತ ಆಚರಿಸುವವರ ನಂಬಿಕೆಯನ್ನು ನಾನು ಪ್ರಶ್ನಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರವರ ಧರ್ಮದ ಅಥವಾ ಧರ್ಮಕ್ಕೆ ಸಂಬಂಧಿಸಿರದ ಹಬ್ಬಗಳನ್ನು ಆಚರಿಸುವ ಅವಕಾಶ ಇದೆ. ಆದರೆ ಕಷ್ಟದಲ್ಲಿರುವವರಿಗೆ ಮಾನಸಿಕವಾಗಿ, ಆರ್ಥಿಕವಾಗಿ ನೆರವಾಗುವುದೇ ಎಲ್ಲ ಹಬ್ಬಗಳ ಮುಖ್ಯ ಗುರಿ ಎಂದು ನನ್ನ ಅನಿಸಿಕೆ.

ನಿರ್ದೇಶಕನಾಗುವ ಕನಸಿನಲ್ಲಿ ಪ್ರಮೋದ್

ಕೋವಿಡ್ ಸಮಯದಲ್ಲಿ ಎಷ್ಟರ ಮಟ್ಟಿಗೆ ಜನಸೇವೆಯ ಅವಕಾಶ ದೊರಕಿದೆ?

ಚಿತ್ರರಂಗದಲ್ಲಿರುವ ಕಾರ್ಮಿಕರ ಪರವಾಗಿ ಕೆಲಸ ಮಾಡಿದ್ದೇನೆ. ಚಿತ್ರರಂಗವು ವಸತಿ ಸಚಿವರನ್ನೇ ನೀಡಿದ್ದರೂ ನಮ್ಮ ಕಾರ್ಮಿಕರಿಗೆ ವಸತಿ ಸೌಕರ್ಯ ಆಗಿರಲಿಲ್ಲ ಎನ್ನುವುದು ವಿಪರ್ಯಾಸ. ಈ ವೇಳೆ ಸಂಕಷ್ಟದಲ್ಲಿರುವ ನಾಲ್ಕೈದು ಸಾವಿರ ಕಾರ್ಮಿಕರ ಲೆಕ್ಕ ಸಂಗ್ರಹಿಸಿದ್ದೇವೆ. ಅವರಲ್ಲಿ ಮೊದಲ ಹಂತದಲ್ಲಿ ತುಂಬ ಕಷ್ಟದಲ್ಲಿರುವ 146 ಮಂದಿಗೆ ಸರ್ಕಾರದ ಮೂಲಕ ಮನೆ ನೀಡಲು ಸಾಧ್ಯವಾಗಿದೆ. ನಿರ್ದೇಶಕ ಪವನ್ ಕುಮಾರ್ ಅವರೊಂದಿಗೆ ಸೇರಿಕೊಂಡು `ಫೈರ್' ಸಂಸ್ಥೆಯ ಮುಖಾಂತರ ಐನೂರು ಮಂದಿ ಕಾರ್ಮಿಕರಿಗೆ ಎರಡೆರಡು ಸಾವಿರದಂತೆ ತಲುಪಿಸಿದ್ದೇವೆ. ಸಿನಿಮಾ ಕಾರ್ಮಿಕರಿಗೆ ಆಹಾರ ಪದಾರ್ಥಗಳನ್ನು ನೀಡಿದ್ದೇವೆ.

ರಾಜಕೀಯ ಕ್ಷೇತ್ರ ಸೇರಿಕೊಂಡರೆ ನಿಮ್ಮಿಂದ ಇನ್ನಷ್ಟು ಸಮಾಜ ಸೇವೆ ಸಾಧ್ಯವಿಲ್ಲವೇ?

ರಾಜಕೀಯ ಕ್ಷೇತ್ರಕ್ಕೆ ಹೋದೊಡನೆ ನೀವು ಒಂದು ಪಕ್ಷಕ್ಕೆ ಸೀಮಿತವಾಗಿ ಬಿಡುತ್ತೀರಿ. ಆಗ ಪಕ್ಷ ಹೇಳುವುದನ್ನು ಕೇಳಬೇಕಾಗುತ್ತದೆ. ಬಹುಶಃ ಸಚಿವ ಸ್ಥಾನ ಏನಾದರೂ ದೊರಕಿದರೆ ಆಗ ಏನಾದರೂ ಕೆಲಸ ಮಾಡಲು ಸಾಧ್ಯವೇನೋ. ಅದರ ಹೊರತು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದುಕೊಂಡು ನಮಗೆ ಅನಿಸಿದ ಕೆಲಸಗಳನ್ನು, ಸಮಾಜ ಸೇವೆಯನ್ನು ಮಾಡುವ ಸ್ವಾತಂತ್ರ್ಯ ಅಲ್ಲಿರುವುದಿಲ್ಲ. ಅದಕ್ಕೆ ನಾಯಕರ ಒಪ್ಪಿಗೆ, ಅಜೆಂಡಾದ ಅನುಸರಣೆ ಎಲ್ಲವನ್ನು ಮಾಡಬೇಕಾಗುತ್ತದೆ. ನಮ್ಮ ರಾಜ್ಯದ ಪಕ್ಷಗಳು ಬಡವರ ಪರ ಮಾತನಾಡಿದಷ್ಟು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಬಡವರಿಗೆ ಸಹಾಯ ಮಾಡಲು ಸರ್ಕಾರದಲ್ಲಿ ದುಡ್ಡಿಲ್ಲವಾದರೆ ಶ್ರೀಮಂತರಿಗೆ ತೆರಿಗೆ ಹಾಕಬಹುದಲ್ಲವೇ? ರಾಜ್ಯಕ್ಕೆ ಆ ಪವರ್ ಇದೆ. ಆದರೆ ಶ್ರೀಮಂತರ ಹಣವನ್ನು ಚುನಾವಣೆಗೆ ಮಾತ್ರ ಬಳಸಿಕೊಳ್ಳುತ್ತಿದೆ. ಹಾಗಾಗಿ ರಾಜಕೀಯ ಸೇರದೇನೇ ಒಂದು ಪಕ್ಷಕ್ಕಿಂತ ಹೆಚ್ಚು ಕೆಲಸ ಮಾಡಿ ತೋರಿಸುವಂಥದ್ದು ನಮ್ಮ ಗುರಿಯಾಗಿದೆ.  

kannada Actor Chethan talks about political parties

ಸಿನಿಮಾ ಭಾಷೆ ಕಲಿಯುತ್ತಿರುವ ರಶ್ಮಿಕಾ ಮಂದಣ್ಣ

ಇಂಥ ತೊಡಕುಗಳಿಗೆ ಪ್ರಜಾಕೀಯ ಪರಿಹಾರ ಅನಿಸುವುದಿಲ್ಲವೇ?

ಪ್ರಜಾಕೀಯ ಮಾಡಿರುವ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಪಕ್ಷ ಕಟ್ಟುವುದು ಅಷ್ಟು ಸುಲಭದ ವಿಚಾರವಲ್ಲ. ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಸಿದ್ದರಾಮಯ್ಯ ಎಲ್ಲರೂ ಪಕ್ಷ ಕಟ್ಟಲು ಪ್ರಯತ್ನಿಸಿದ್ದಾರೆ ಎನ್ನುವುದನ್ನು ಕೇಳ್ಪಟ್ಟಿದ್ದೇವೆ. ಅವರೆಲ್ಲ ಹಳ್ಳಿಹಳ್ಳಿಗೆ ಹೋಗಿ ಸಂಘಟನೆ ಮಾಡಿದ ಬಳಿಕ ಪಕ್ಷಕಟ್ಟಲು ಪ್ರಯತ್ನ ಮಾಡಿದವರು. ಆದರೆ ಟಿವಿಯಲ್ಲಿ, ಅಂತರ್ಜಾಲದಲ್ಲಿ ಮಾತನಾಡಿ, ಸಂದರ್ಶನ ನೀಡಿ ಪಕ್ಷ ಕಟ್ಟುವುದು ಎನ್ನುವುದು ಭ್ರಮೆ. ಪಕ್ಷ ಕಟ್ಟಬೇಕಾದರೆ ತಳಮಟ್ಟಕ್ಕೆಇಳಿದು ಕೆಲಸ ಮಾಡಬೇಕು.

ನಿಮ್ಮ ಹೋರಾಟದ ಉದ್ದೇಶಗಳ ಬಗ್ಗೆ ನೀವೇ ಸಿನಿಮಾ ಮಾಡಬಾರದೇಕೆ? 

ಚಿತ್ರೋದ್ಯಮಕ್ಕೆ  ನಿರ್ದೇಶಕರೇ ಅಡಿಪಾಯ. ಅದೇ ಕಾರಣದಿಂದ ನನಗೆ ನಿರ್ದೇಶನ ಎಂದರೆ ವಿಶೇಷ ಅಭಿಮಾನ ಇದೆ. ಆದರೆ ನಿರ್ದೇಶನ ಮಾಡಲು ಬಂದರೆ ಅದನ್ನು ಮಾತ್ರ ಮಾಡಬೇಕು. ಅದು ಬಿಟ್ಟು ಹೋರಾಟ ಮಾಡ್ತೀನಿ, ಹೀರೋ ಆಗಿ ಮಾಡುತ್ತೀನಿ, ಡೈರೆಕ್ಷನೂ ಮಾಡ್ತೀನಿ ಅಂದರೆ ಕಷ್ಟ. ಸದ್ಯಕ್ಕೆ ನನಗೆ ನಟನೆಯೇ ವೃತ್ತಿ. ಅದರಿಂದಲೇ ಸಂಪಾದನೆಯಾಗಬೇಕು. ಸಾಮಾಜಿಕ ಹೋರಾಟದಿಂದ  ದುಡ್ಡು ಬರುವುದಿಲ್ಲ. ಹೋರಾಟದ ಮೂಲಕ ನಾವು ಸಮಾಜಕ್ಕೆ ನೀಡುತ್ತಿದ್ದೇವೆ. ಸಿನಿಮಾದಲ್ಲಿ ಸಿಗುವುದನ್ನು ಸಮಾಜಕ್ಕೆ ಹೇಗೆ ವಾಪಾಸು  ಕೊಡಬಹುದು ಎನ್ನುವ ಪ್ರಯತ್ನದಲ್ಲಿದ್ದೇನೆ. ಹಾಗಾಗಿ ಸಿನಿಮಾಗಿಂತ ಬದುಕಲ್ಲೇ ಸಂದೇಶ ನೀಡಲು ಬಯಸುತ್ತೇನೆ. ಸಿನಿಮಾರಂಗದಲ್ಲಿ ಇರುವುದು  ಎಂದರೆ ನಟನೆ ಮಾತ್ರ ಎಂದು ನಾನು ತಿಳಿದಿಲ್ಲ. ಸಿನಿಮಾರಂಗದ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದರೂ ಸಾಕು.‌  
 

Follow Us:
Download App:
  • android
  • ios