ಕಳೆದ 6 ವರ್ಷಗಳಿಂದ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಮಾಡಿಕೊಂಡಿಲ್ಲ. ಜತೆಗೆ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ ಎಂದರು ನೆನಪಿರಲಿ ಪ್ರೇಮ್‌.

ಆರ್‌. ಕೇಶವಮೂರ್ತಿ

* ಈ ಬಾರಿಯ ಹುಟ್ಟುಹಬ್ಬದ ವಿಶೇಷಗಳೇನು?
ಶೇಷಾದ್ರಿಪುರಂನಲ್ಲಿರುವ ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಹೋಗಿ ಅಲ್ಲಿನವರ ಜತೆಗೆ ಕೇಕ್‌ ಕಟ್‌, ಅವರ ಜತೆಗೇ ಊಟ ಮಾಡುತ್ತೇನೆ. ಇದು ಪ್ರತಿ ವರ್ಷ ಮಾಡುತ್ತಿದ್ದೇನೆ. ಆದರೆ, ಈ ಬಾರಿ ಅಭಿಮಾನಿಗಳ ಜತೆಗೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ವಿಶೇಷ. ಯಾಕೆಂದರೆ ಕಳೆದ 6 ವರ್ಷಗಳಿಂದ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಮಾಡಿಕೊಂಡಿಲ್ಲ. ಜತೆಗೆ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ.

* ಹೊಸ ಚಿತ್ರಗಳ ಬಗ್ಗೆ ಹೇಳುವುದಾದರೆ?
ನಟಿ ರಂಜನಿ ರಾಘವನ್‌ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಮೊದಲ ಬಾರಿಗೆ ಮಹಿಳಾ ನಿರ್ದೇಶಕರ ಜತೆಗೆ ಕೆಲಸ ಮಾಡುತ್ತಿದ್ದೇನೆ. ಜಡೇಶ್‌ ಕೆ ಹಂಪಿ, ರಾಮಕೃಷ್ಣ ಹಾಗೂ ಡಾ.ಆನಂದ ಕುಮಾರ್‌ ನಿರ್ಮಾಣದ ಚಿತ್ರವಿದು. ಇಳಯರಾಜ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕ್ರಿಯೇಟಿವ್ ಹೆಡ್‌ ಆಗಿ ತರುಣ್‌ ಸುಧೀರ್‌ ಇದ್ದಾರೆ.

ಇಷ್ಟು ದಿನ ಲವ್ಲಿ ಸ್ಟಾರ್ ಆಗಿದ್ದು ಸಾಕು, ಇನ್ನು ಮುಂದೆ ಮಾಸ್‌ ಆಗಬೇಕು: ನೆನಪಿರಲಿ ಪ್ರೇಮ್

* ರಂಜನಿ ರಾಘವನ್‌ ಮತ್ತು ನಿಮ್ಮ ಕಾಂಬಿನೇಶನ್‌ ಶುರುವಾಗಿದ್ದು ಹೇಗೆ?
ಇದಕ್ಕೂ ಕಾರಣ ನನ್ನ ಗೆಳೆಯ ತರುಣ್‌ ಸುಧೀರ್‌. ರೆಗ್ಯೂಲರ್‌ ಸಿನಿಮಾ ಬೇಡ, ಭಿನ್ನವಾಗಿರುವ ಸಿನಿಮಾ ಮಾಡಬೇಕು ಅಂದುಕೊಂಡಿದ್ದಾಗ ತರುಣ್‌ ಹೇಳಿದ್ದಕ್ಕೆ ರಂಜನಿ ರಾಘವನ್‌ ಕತೆ ಕೇಳಿದೆ. ತುಂಬಾ ಚೆನ್ನಾಗಿತ್ತು. ಹೀಗಾಗಿ ಒಪ್ಪಿಕೊಂಡೆ.

* ಮತ್ತೊಂದು ಹೊಸ ಚಿತ್ರ ಯಾವುದು?
ಉಪೇಂದ್ರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ನಟನೆಯ ‘ಸ್ಪಾರ್ಕ್‌’ ಸಿನಿಮಾ. ಇದರಲ್ಲಿ ಒಂದು ವಿಶೇಷವಾದ ಪಾತ್ರ ಇದೆ. ಈ ಚಿತ್ರದ ಫಸ್ಟ್‌ ಲುಕ್‌ ಕೂಡ ಇಂದು ರಿಲೀಸ್ ಆಗಿದೆ. ಗೆಟಪ್‌ ಚೆನ್ನಾಗಿದೆ. ಈಗಲೇ ಪಾತ್ರ ಮತ್ತು ಕತೆ ಬಗ್ಗೆ ಹೆಚ್ಚು ಹೇಳಕ್ಕೆ ಆಗಲ್ಲ.

* ಇದಕ್ಕಿದ್ದಂತೆ ಸಿನಿಮಾ ಕಡಿಮೆ ಮಾಡಿದೀರಲ್ಲ, ಯಾಕೆ?
ನಾನೇ ಗ್ಯಾಪ್‌ ತೆಗೆದುಕೊಂಡೆ. ಆಗಲೇ ಹೇಳಿದಂತೆ ಅದೇ ಲವರ್‌ ಬಾಯ್‌, ಫ್ಯಾಮಿಲಿ, ಪ್ರೇಮ ಕತೆಗಳ ಹೊರತಾಗಿರುವ ಸಿನಿಮಾಗಳನ್ನು ಮಾಡಬೇಕು ಅಂತ. ಆದರೂ ವಾರಕ್ಕೆ ಮೂರು- ನಾಲ್ಕು ಕತೆಗಳನ್ನು ಕೇಳುತ್ತಿದ್ದೇನೆ.

* ನಿಮ್ಮ ಮಗಳು ಹೀರೋಯಿನ್‌ ಆದ್ಮೇಲೆ ಸಿನಿಮಾಗಳನ್ನು ಕಡಿಮೆ ಮಾಡಿದ್ದೀರಿ ಅಂತಿದ್ದಾರಲ್ಲ?
ಅಯ್ಯೋ ಹಾಗೇನೂ ಇಲ್ಲ. ಅಪ್ಪನಾಗಿ ಮಗಳಿಗೆ ಒಂದಿಷ್ಟು ಸಮಯ ಕೊಡಬೇಕಿರೋದು ನನ್ನ ಜವಾಬ್ದಾರಿ. ಆದರೆ, ಮಗಳ ಕೆರಿಯರ್‌ ಜತೆಗೆ ನನ್ನ ಕೆರಿಯರ್‌ ಕೂಡ ನೋಡಿಕೊಳ್ಳುತ್ತಿದ್ದೇನೆ. ಅಪ್ಪ ಹೀರೋ ಆಗಿದ್ದಾಗಲೇ ಮಗಳು ಹೀರೋಯಿನ್‌ ಆಗಿ ಚಿತ್ರರಂಗಕ್ಕೆ ಬಂದಿರುವುದು ವಿಶೇಷ ಅಂದುಕೊಳ್ಳುತ್ತೇನೆ.

* ರೆಗ್ಯೂಲರ್‌ ಅಲ್ಲದ ಕತೆ- ಸಿನಿಮಾಗಳ ಮಾಡಬೇಕು ಅನಿಸಿದ್ದೇಕೆ?
ಮೊದಲೆಲ್ಲಾ ಐದ್ಹತ್ತು ವರ್ಷ ಒಂದೇ ರೀತಿಯ ಪಾತ್ರ, ಸಿನಿಮಾ ಮಾಡಿಕೊಂಡಿದ್ದರೂ ಜನ ನೋಡುತ್ತಿದ್ದರು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಪ್ರೇಕ್ಷಕರು ಬದಲಾಗಿದ್ದಾರೆ. ರಿಯಲಿಸ್ಟಿಕ್‌ ಆಗಿ ಯೋಚಿಸುತ್ತಿದ್ದಾರೆ. ಅಂಥದ್ದೇ ಕತೆಗಳು ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತಾರೆ. ಹಾಗಾಗಿ ನಾವೂ ಬದಲಾಗಬೇಕಿದೆ. ಆ ನಿಟ್ಟಿನಲ್ಲೇ ನಾನು ಔಟ್‌ ಆಫ್‌ ದಿ ಬಾಕ್ಸ್‌ ಜಾನರ್‌ ಕತೆಗಳನ್ನು ಎದುರು ನೋಡುತ್ತಿದ್ದೇನೆ.

* ನೀವು ಕತೆ ಕೇಳುವ ರೀತಿ ಹೇಗಿರುತ್ತದೆ?
ಮೊದಲೆಲ್ಲ ನಾನೊಬ್ಬನೇ ಕತೆ ಕೇಳುತ್ತಿದ್ದೆ. ಈಗ ನಾನು, ನನ್ನ ಮಗ, ಮಗಳು ಮತ್ತು ಪತ್ನಿ ಹೀಗೆ ಇಡೀ ಕುಟುಂಬ ಕೂತು ಕತೆ ಕೇಳುತ್ತೇವೆ. ನಿರ್ದೇಶಕರು ಕೂಡ ಒಂದು ಫ್ಯಾಮಿಲಿಗೇ ಕತೆ ಹೇಳುತ್ತಿದ್ದೇನೆಂಬ ಖುಷಿಯಲ್ಲಿ ಬರುತ್ತಾರೆ.

* ನೀವು ಹೀರೋ ಆಗಿದ್ದರಿಂದ ಮಕ್ಕಳನ್ನು ಚಿತ್ರರಂಗಕ್ಕೆ ಕರೆತಂದಿದ್ದು ಸುಲಭ ಆಯಿತಾ?
ಖಂಡಿತಾ ಇಲ್ಲ. ಲಾಯರ್‌ ಮಗ ಲಾಯರ್‌ ಆಗಕ್ಕೆ ಎಜುಕೇಷನ್‌ ಬೇಕು, ಉದ್ಯಮಿ ಮಗ ಬ್ಯುಸಿನೆಸ್‌ ಮ್ಯಾನ್‌ ಆಗಕ್ಕೆ ಅಪ್ಪನ ವ್ಯವಹಾರ-ಪ್ರಭಾವ ಇದ್ದರೆ ಸಾಕು. ಆದರೆ, ಸಿನಿಮಾದಲ್ಲಿ ಹಾಗಿರಲ್ಲ. ಅಪ್ಪ-ಅಮ್ಮನ ಹೆಸರಿನಲ್ಲಿ ಮಕ್ಕಳಿಗೆ ಅದ್ದೂರಿ ಸ್ವಾಗತ ಸಿಗುತ್ತದೆ. ಆದರೆ, ಇಲ್ಲಿ ನಿಲ್ಲಬೇಕು ಎಂದರೆ ಪ್ರತಿಭೆ, ಅದೃಷ್ಟ ಮತ್ತು ಜನರ ಪ್ರೀತಿ-ಆಶೀರ್ವಾದ ಇರಬೇಕು. ಅದರಲ್ಲೂ ಹೀರೋ ಮಕ್ಕಳ ಸಿನಿಮಾ ಎಂದರೆ ಇನ್ನೂ ದೊಡ್ಡ ಸವಾಲು. ಯಾವ ರಿಯಾಯಿತಿಗಳು ನಮ್ಮ ಮಕ್ಕಳಿಗೆ ಇರಲ್ಲ.

ಮಗಳು ಹುಟ್ಟಿದಾಗ 300 ರೂ. ಇತ್ತು, ಮಗ ಹುಟ್ಟಿದಾಗ 2 ಲಕ್ಷದಿಂದ ಜೇಬು ತುಂಬಿಟ್ಟಿತ್ತು: ನೆನಪಿರಲಿ ಪ್ರೇಮ್

* ಚಿತ್ರರಂಗದಲ್ಲಿ ಈಗ ನಿಮ್ಮ ಮಗಳ ಬೆಳವಣಿಗೆ ನೋಡಿ ಏನಿಸುತ್ತದೆ?
ಒಬ್ಬ ತಂದೆಯಾಗಿ ನಾನು ಖುಷಿ. ಯಾಕೆಂದರೆ ಮೊದಲ ಚಿತ್ರದಲ್ಲಿ ಆಕೆಯನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ನನಗೆ ಊಟ ಕೊಟ್ಟ ಕ್ಷೇತ್ರ, ನನ್ನ ಕೈ ಹಿಡಿದ ಕ್ಷೇತ್ರವೇ ಈಗ ನನ್ನ ಮಗಳು, ಮುಂದೆ ಬರಲಿರುವ ನನ್ನ ಮಗನನ್ನೂ ಇದೇ ಸಿನಿಮಾ ಕ್ಷೇತ್ರ ಕೈ ಹಿಡಿದು ನಡೆಸುತ್ತದೆ, ಬೆಳೆಸುತ್ತದೆಂಬ ನಂಬಿಕೆ ಇದೆ.