ಸುಮಲತಾ ಈಗ ರಾಜಕಾರಣಿಯಾಗಿ ಜನಪ್ರಿಯೆ. ಆದರೆ ಸಿನಿಮಾರಂಗದಲ್ಲಿ ಇಂದಿಗೂ ಅವರ ಅಭಿಮಾನಿಗಳಿಗೆ ಕೊರತೆ ಇಲ್ಲ. ವಾರಗಳ ಹಿಂದೆ ಅವರಿಗೆ ಕೊರೊನಾ ಸೋಂಕು ದೃಢವಾದಾಗ ಶೀಘ್ರ ಗುಣಮುಖಗೊಳ್ಳುವಂತೆ ಹಾರೈಸಿದವರಲ್ಲಿ ಅಂಬರೀಷ್ ಸಿನಿಮಾ ಅಭಿಮಾನಿಗಳೂ ಇದ್ದರು. ಹಾಗಾಗಿಯೇ ಇಂದು ಅವರು ಗುಣಮುಖರಾದಾಗ ಸಿನಿಮಾ ಪ್ರೇಮಿಗಳಿಗಾಗಿ ಅವರೊಂದಿಗೆ ನಡೆಸಲಾದ ವಿಶೇಷ ಸಂದರ್ಶನ ಇದು. ಸುವರ್ಣ ನ್ಯೂಸ್.ಕಾಮ್ ಜತೆಗೆ ಅವರು ಹಂಚಿಕೊಂಡಿರುವ ಕುತೂಹಲಕರ ವಿಚಾರಗಳು ಇಲ್ಲಿವೆ.

ಶಶಿಕರ ಪಾತೂರು

ಕೊರೋನಾ ನಿಮಗೆ ಯಾವ ಮಟ್ಟಕ್ಕೆ ಕಾಟ ನೀಡಿತು?

ಈಗ ಪರವಾಗಿಲ್ಲ; ನಾನು ಚೆನ್ನಾಗಿದ್ದೇನೆ.  ಖಂಡಿತವಾಗಿ ಇದೊಂದು ಸುಲಭದ ಫೈಟ್ ಆಗಿರಲಿಲ್ಲ. ಮಧ್ಯದಲ್ಲಿ ತುಂಬ ಹೈ ಫೀವರ್ ಇತ್ತು. ಊಟ ಮಾಡೋಕೂ ಆಗುತ್ತಿರಲಿಲ್ಲ. ಮಾನಸಿಕವಾಗಿ ಡಿಪ್ರೆಸ್ ಆಗಿಬಿಟ್ಟಿದ್ದೆ. ಹದಿನೆಂಟು ದಿನಗಳ ಕಾಲ ಯಾರ ಮುಖವನ್ನು ನೋಡದೇ ನಾಲ್ಕು ಗೋಡೆಗಳ ನಡುವೆ ಕಳೆಯುವುದು ಅಂದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಅದು ಕೂಡ ನನಗೆ ಇದ್ದಿದ್ದು ಸಣ್ಣದಾದ ಲಕ್ಷಣಗಳಷ್ಟೇ! ಹಾಗಾಗಿ ದೊಡ್ಡಮಟ್ಟದಲ್ಲಿ ಸೋಂಕಿಗೆ ಒಳಗಾದವರು ಖಂಡಿತವಾಗಿ ತುಂಬ ಪಾಸಿಟಿವ್ ಮೈಂಡ್, ವಿಲ್ ಪವರ್ ಬಳಸಿಕೊಂಡು ಎದುರಿಸಬೇಕು. ಆತ್ಮೀಯರ, ಕುಟುಂಬದ ಸಪೋರ್ಟ್ ಖಂಡಿತವಾಗಿ ಬೇಕಾಗಿರುತ್ತದೆ. 

ಲಾಕ್ಡೌನ್‌ಗಿಂತಲೂ ಕ್ವಾರಂಟೈನ್ ಆಗಬೇಕಾದಾಗ ನಿಮಗೆ ಹೆಚ್ಚು ಕಷ್ಟವಾಗಿರಬಹುದಲ್ಲವೇ?

ಒಂದು ರೀತಿ ನಿಜ. ಯಾಕೆಂದರೆ ಲಾಕ್ಡೌನ್ ಇದ್ದಾಗ ನಾನು ಹೊರಗಡೆ ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಆಕ್ಟಿವ್ ಆಗಿಯೇ ಇದ್ದೆ. ಆದರೆ ಕ್ವಾರಂಟೈನ್ ಆದ ಬಳಿಕ ನನಗೆ  ಅಧಿಕಾರಿಗಳೊಂದಿಗೆ ಫೋನ್  ಸಂಪರ್ಕವಷ್ಟೇ ಸಾಧ್ಯವಾಗಿತ್ತು. ಆದರೆ ಜಿಲ್ಲಾಧಿಕಾರಿ, ಡಿ.ಎಚ್.ಒ ಅಥವಾ ಪೊಲೀಸ್ ಅಧಿಕಾರಿಗಳ ಜತೆಗೆ ಸಂಪರ್ಕದಲ್ಲೇ ಇರುತ್ತಿದ್ದೆ. ಅವರು ಕೂಡ ಯಾವುದೇ ಹೊಸ ಬೆಳವಣಿಗೆ ನಡೆದಾಗಲೂ ನನಗೆ ತಿಳಿಸುತ್ತಿದ್ದರು. ಸಮಸ್ಯೆಗಳೇನಿವೆ? ಏನೆಲ್ಲ ಪರಿಹಾರವಾಗಿದೆ ಎಲ್ಲವನ್ನು ಮೆಸೇಜ್ ಮೂಲಕ ನನಗೆ ತಿಳಿಸುತ್ತಿದ್ದಾರೆ. ನನ್ನ ಭಾಗದಿಂದ ನೀಡಬಹುದಾದ ಸಲಹೆಗಳನ್ನು ಕೊಡುತ್ತಾ ಬಂದಿದ್ದೀನಿ. ನಮ್ಮ ಕಚೇರಿಯ ಮೂಲಕ ಸಾರ್ವಜನಿಕರು ಕೂಡ ಸಂಪರ್ಕಿಸಿದ್ದಾರೆ. ಕಚೇರಿಯ ನೌಕರರಂತೂ ಅವರಿಗೆ ಸಕ್ರಿಯವಾಗಿ ಸ್ಪಂದಿಸಿದ್ದಾರೆ. ಹಾಗಾಗಿ ಕಷ್ಟವಾದರೂ, ನನ್ನ ಅನಾರೋಗ್ಯ, ಕ್ವಾರಂಟೈನ್ ವಿಚಾರಗಳಿಂದಾಗಿ ಯಾವುದೇ ಕೆಲಸ ನಿಂತು ಹೋಗಿಲ್ಲ. 

ಆಹಾರ ಸೇರುತ್ತಿರಲಿಲ್ಲ... ಕೊರೋನಾ ಗೆದ್ದ ನಂತರ ಸುಮಲತಾ ಆಡಿದ ಮಾತುಗಳು


ರಾಜಕಾರಣಿಯಾದ ಮೇಲೆ ನಿಮ್ಮ ವೈಯಕ್ತಿಕ ಬದುಕಿನಲ್ಲಿ ಆಗಿರುವ ಪ್ರಮುಖ ಬದಲಾವಣೆ ಏನು?

ವೈಯಕ್ತಿಕ ಬದುಕಿನಲ್ಲಿ ಸಮಯದ ಕೊರತೆ ಕಾಡಿದೆ. ಮನೆಯಲ್ಲಿರುವುದು ಅಥವಾ ವೈಯಕ್ತಿಕವಾದ ಕೆಲಸಗಳಿಗೆ ಮೀಸಲು ಇರಿಸಲು ಸಮಯವೇ ಸಿಗುತ್ತಿಲ್ಲ. ಟೈಮ್ ಮ್ಯಾನೇಜ್ ಮಾಡುವುದೇ ಒಂದು ಸವಾಲಾಗಿದೆ. ಒಂದು ಕಡೆ ಕ್ಷೇತ್ರ, ಇನ್ನೊಂದು ಪಾರ್ಲಿಮೆಂಟ್ ಸೆಷನ್ಸ್ ಮತ್ತು ಇನ್ನೊಂದೆಡೆ ಕಮಿಟಿ ಮೀಟಿಂಗ್ ಮತ್ತಿತರ ರಾಜಕೀಯ ವಿಚಾರಗಳಿಗೆ ಸಂಬಂಧ ಪಟ್ಟ ಕೆಲಸಗಳಿಂದಾಗಿ ವೈಯಕ್ತಿಕ ಬದುಕಲ್ಲಿ ಹಿಂದಿನಷ್ಟು ಕಾಲಾವಕಾಶ ಸಿಗುತ್ತಿಲ್ಲ. 

ಚಿತ್ರರಂಗದ ಸಂಬಂಧವೂ ದೂರಾಗಿದೆಯೇ? ಸಮಸ್ಯೆಗಳ ಬಗ್ಗೆ ಏನು ಹೇಳುತ್ತೀರಿ?

ಹೌದು. ನಾನು ಈಗ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವಾಗಿರುವಂತಾಗಿದೆ. ಇನ್ನೇನಾದರೂ ಚಿತ್ರೀಕರಣ ಆರಂಭವಾದರೆ ಅದು `ಗಂಡುಗಲಿ ಮದಕರಿ ನಾಯಕ' ಚಿತ್ರದ ಮೂಲಕ. ಬೇರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಆದರೆ ಚಿತ್ರರಂಗದ ಕಡೆಗೆ ಯಾವಾಗಲೂ ನಾನು ಇರುತ್ತೇನೆ. ಅದು ಯಾವುದೇ ಸಮಸ್ಯೆ ಆಗಿದ್ದರೂ, ನನ್ನಕಡೆಯಿಂದ ಏನು ಮಾಡಲು ಸಾಧ್ಯ ಎಂದು ತಿಳಿದುಕೊಂಡು, ಆ ನಿಟ್ಟಿನಲ್ಲಿ ಖಂಡಿತವಾಗಿ ಪ್ರಯತ್ನ ಪಡುತ್ತೇನೆ. ದಕ್ಷಿಣ ಭಾರತೀಯ ಚಿತ್ರರಂಗದ ಪರವಾಗಿ ಮನವಿ ಸಮೇತ ದೆಹಲಿಗೆ ಬಂದಿದ್ದಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಡನೆ ಮಾತನಾಡಲು ನಾನೇ  ಅಪಾಯಿಂಟ್ಮೆಂಟ್ ತೆಗೆಸಿಕೊಟ್ಟಿದ್ದೆ. ಮಾತ್ರವಲ್ಲ, ನಾನು ಕೂಡ ಭೇಟಿಯಾದೆ. ಯಾಕೆಂದರೆ ಆಗ ಅವರು ಫಿಲ್ಮ್ ಛೇಂಬರ್ ಕಡೆಯಿಂದ ಜಿಎಸ್ ಟಿ ವಿಚಾರದಲ್ಲಿ ಮಾತನಾಡಲಿಕ್ಕಾಗಿ ಬಂದಿದ್ದರು.