ಆರ್‌ ಕೇಶವಮೂರ್ತಿ

ನಿಜಕ್ಕೂ ಈ ಚಿತ್ರದ ಕತೆ ಏನು?

ಫೈಟರ್‌ ಕತೆ. ಒಬ್ಬ ಫೈಟರ್‌ನ ಜೀವನದ ಪ್ರಮುಖ ತಿರುಗಳಲ್ಲಿ ‘ಪೊಗರು’ ಸಾಗುತ್ತದೆ. ಮೂರು ಮುಖ್ಯ ಪಾತ್ರಗಳು, ಆ ಪಾತ್ರಗಳಿಗೆ ಕೊಂಡಿಯಾಗಿರುವ ನಾಯಕನ ಪಾತ್ರ, ಇವನನ್ನು ಡಿಸ್ಟರ್ಬ್‌ ಮಾಡುವ ವಿಲನ್‌ಗಳು ಇವೆಲ್ಲವೂ ನಮ್ಮ ಚಿತ್ರದ ಹೈಲೈಟ್ಸ್‌.

'ಪೊಗರು' ನೋಡಲು ಬರುವ ಅಭಿಮಾನಿಗಳಿಗೆ ಧ್ರುವ ವಿಶೇಷ ಗಿಫ್ಟ್ 

ಈ ಚಿತ್ರದ ಕತೆ ನಿಮಗಾಗಿಯೇ ಹುಟ್ಟಿಕೊಂಡಿದ್ದಾ?

ಖಂಡಿತ ಇಲ್ಲ. ನಂದಕಿಶೋರ್‌ ಮೊದಲೇ ಕತೆ ಮಾಡಿಕೊಂಡಿದ್ದರು. ಅವರು ಬರೆದುಕೊಂಡ ಕತೆಗೆ ನಾನು ತಯಾರಾಗಬೇಕಿತ್ತು. ನಾನು ನಿರ್ದೇಶಕರ ಕಲ್ಪನೆಗೆ ಶರಣಾದೆ. ಈ ಹಿಂದಿನ ಮೂರು ಚಿತ್ರಗಳ ಕತೆ ನನಗಾಗಿ ತಯಾರಾಗಿದ್ದು. ಆದರೆ, ‘ಪೊಗರು’ ಸಿನಿಮಾ ಒಂದು ಹೀರೋಗಾಗಿ ಹುಟ್ಟಿಕೊಂಡ ಕತೆ ಅಲ್ಲ. ಸಿನಿಮಾಗಾಗಿ ಹುಟ್ಟಿದ್ದು.

"

ಕತೆ ಹೇಳುವ ಜತೆಗೆ ನಿರ್ದೇಶಕರು ನಿಮಗೆ ಹೇಳಿದ್ದೇನು?

ನೋಡಿ ಈ ಚಿತ್ರಕ್ಕಾಗಿ 17 ವರ್ಷದ ಹುಡುಗನಂತೆ ಆಗಬೇಕು, ಹಾಗೆ ಯಾರೂ ನಿರೀಕ್ಷೆಯೇ ಮಾಡದಂತೆ ದೇಹ ತೂಕ ಹೆಚ್ಚಿಸಿಕೊಳ್ಳಬೇಕು. ಫಿಸಿಕಲ್ಲಾಗಿ ಈ ಏರುಪೇರು ಇರುತ್ತದೆ. ಮಾಡಕ್ಕೆ ಆಗಲ್ಲ ಅಂದರೆ ಕತೆ ಬದಲಾಯಿಸೋಣ ಅಥವಾ ಡ್ಯೂಪ್‌ ಮಾಡೋಣ ಎಂದರು.

ಈ ಚಿತ್ರದ ಪೂರ್ವ ತಯಾರಿಗಳಲ್ಲಿ ಮೊದಲು ಶುರುವಾಗಿದ್ದು ಯಾವುದು?

ಜಿಮ್‌ ಹೋಗುವುದು. ಪ್ರತಿ ದಿನ ವರ್ಕೌಔಟ್‌ ಮಾಡುತ್ತಿದ್ದೆ. ಮೊದಲು 17 ವರ್ಷ ಹುಡುಗನಾಗಲು ಹೆಚ್ಚು ಕಮ್ಮಿ 33 ಕೆಜಿ ತೂಕ ಇಳಿಸಿಕೊಂಡೆ. ಮತ್ತೆ ದಪ್ಪ ಕಾಣಲು 96 ಕೆಜಿ ಹೆಚ್ಚಾದೆ. ನಾನು ನಾರ್ಮಲ್ಲಾಗಿರೋದು 70 ರಿಂದ 72 ಕೆಜಿ. ಹೈಸ್ಕೂಲ್‌ ಹುಡುಗನ ಪಾತ್ರಕ್ಕಾಗಿಯೇ 30 ಕೆಜಿ ಇಳಿಸಿಕೊಂಡಿದ್ದೇನೆ. ದಿನಕ್ಕೆ ಎರಡು ಬೀನ್ಸ್‌, ಎರಡು ಕ್ಯಾರೆಟ್‌, ಒಂದು ಜ್ಯೂಸ್‌ ಇದಿಷ್ಟೆನನ್ನ ಆಹಾರವಾಗಿತ್ತು.

ಪೊಗರು ನೋಡಲು ನಿರ್ದೇಶಕ ಕೊಟ್ಟ 10 ಕಾರಣಗಳು!

 

ಒಂದು ಚಿತ್ರಕ್ಕಾಗಿ ಇಷ್ಟೆಲ್ಲ ರಿಸ್ಕ್‌ ಬೇಕಿತ್ತಾ?

ಖಂಡಿತ ಬೇಕಿತ್ತು. ಕಲಾವಿದನಾಗಿ ನಾನು ಅದನ್ನು ಸವಾಲಾಗಿಯೇ ಸ್ವೀಕರಿಸಿದೆ. ಯಾಕೆಂದರೆ ಕತೆ ಹೇಳುವಾಗ ನಮ್ಮ ನಿರ್ದೇಶಕರು ನನ್ನ ಬಾಲ್ಯದ ಪಾತ್ರಕ್ಕೆ ಡ್ಯೂಪ್‌ ಬಳಸೋಣ ಎಂದರು. ನನ್ನ ಪಾತ್ರ ನಾನು ಮಾಡಬೇಕು. ಬೇರೆಯವರು ಯಾಕೆ ಮಾಡಬೇಕು ಎಂದು ನಾನೇ ಚಿಕ್ಕವನಾಗಲು ಹೊರಟೆ.

ಅದೆಲ್ಲ ಸರಿ. ವಿಕಾರವಾದ ಜುಟ್ಟು, ಗಡ್ಡ, ನಗು, ವಿಚಿತ್ರವಾಗಿರುವ ಡ್ರಸ್‌ ಯಾಕೆ?

ಕತೆಗೆ ಪೂರಕವಾಗಿದೆ. ಯಾಕೆಂದರೆ ಇಲ್ಲಿ ಬಾಲ್ಯದಲ್ಲೇ ಡಿಸ್ಟರ್ಬ್‌ ಆಗಿರುವ ಹುಡುಗ. ಆತ ಬೆಳೆಯುತ್ತ ಹೋದಂತೆ ಏನಾಗುತ್ತಾನೆ, ಅವನ ವರ್ತನೆಗಳು ಹೇಗಿರುತ್ತದೆ ಎಂಬುದಕ್ಕೆ ಈ ಔಟ್‌ ಲುಕ್ಕು. ಅದಕ್ಕಾಗಿ ನಾನು ಖರಾಬಾಗಿ ಕಾಣಿಸಿಕೊಳ್ಳಬೇಕಾಯಿತು.

ನಿಮ್ಮ ಈ ಗೆಟಪ್‌ ನೋಡಿ ನಿಮ್ಮ ಪತ್ನಿ ಪ್ರೇರಣಾ ಅವರು ಮೊದಲ ಪ್ರತಿಕ್ರಿಯೆ ಹೇಗಿತ್ತು?

ಏನೋ ಆಯ್ಕೊಂಡು ತಿನ್ನೋನ ಥರಾ ಕಾಣಿಸುತ್ತಿದ್ದಿಯಾ ಅಂದರು. ಅಷ್ಟೂಖರಾಬಾಗಿದ್ದೀನಾ ಅಂತ ನನ್ನ ನಾನೇ ಕನ್ನಡಿಯಲ್ಲಿ ನೋಡಿಕೊಂಡೆ.

ಈ ಚಿತ್ರದ ಮೂಲಕ ಏನು ಹೇಳಕ್ಕೆ ಹೊರಟಿದ್ದೀರಿ?

ತಾಯಿ, ತಂಗಿ ಮತ್ತು ಮಗ. ಆ ಮಗ ನಾನೇ. ಈ ಮೂವರ ನಡುವೆ ಸಾಗುವ ಭಾವುಕ ಪಯಣವೇ ಚಿತ್ರದ ಅತಿ ಮುಖ್ಯವಾದ ಕತೆ. ಹೀಗಾಗಿ ಹೆಸರು ನೋಡಿ ಮಾಸ್‌, ಆ್ಯಕ್ಷನ್‌ ಪ್ಯಾಕ್‌ ಸಿನಿಮಾ ಎಂದುಕೊಂಡರೆ ತಪ್ಪು. ತೀರಾ ಚಿಕ್ಕಂದಿನಲ್ಲೇ ನಡೆದ ದುರಂತವೊಂದು ಸಂಬಂಧಗಳನ್ನು ಹೇಗೆ ಬೇರೆ ಬೇರೆ ಮಾಡಿರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ನೋಡಬಹುದು. ಇದೇ ಕತೆಯ ಬಹುಮುಖ್ಯವಾದ ಅಂಶ. ಇಲ್ಲಿವರೆಗೂ ನನ್ನ ಸಿನಿಮಾಗಳಲ್ಲಿ ನೋಡದ ಅಂಶವನ್ನು ಇಲ್ಲಿ ನೋಡಬಹುದು. ಶೇ.60 ಭಾಗ ಇಮೋಷನ್‌ ಇದೆ.

"

ಪೊಗರು ಚಿತ್ರದ 5 ಹೈಲೈಟ್ಸ್‌ಗಳು ಏನು?

1.ತಾಯಿ ಸೆಂಟಿಮೆಂಟ್‌.

2. ನಾನು ಮೊದಲ ಬಾರಿಗೆ ನೆಗೆಟೀವ್‌ ಶೇಡ್‌ನಲ್ಲಿ ಕಾಣಿಸಿಕೊಂಡಿರುವುದು.

3. ಬಾಲ್ಯದಲ್ಲೇ ಡಿಸ್ಟರ್ಬ್‌ ಆದ ಹುಡುಗನ ಕತೆ.

4. ಮೇಕಪ್‌ ಹಾಕಿಕೊಳ್ಳದೆ ನಟಿಸಿರುವುದು. ನೈಜತೆಗೆ ಹತ್ತಿರ ಇರುವ ಸಿನಿಮಾ ಇದು.

5. ಅಂತಾರಾಷ್ಟ್ರೀಯ ಬಾಡಿಬಿಲ್ಡರ್‌ಗಳನ್ನು ಕನ್ನಡ ಚಿತ್ರಕ್ಕಾಗಿ ಕರೆಸಿರುವುದು.

ಪೊಗರು ಅಂತ ಗೂಗಲ್ ಮಾಡಿದ್ರೆ ಮೊದಲು ಬರೋದು ಈ 5 ಪ್ರಶ್ನೆ!

ನಿಮ್ಮ ಹೊರತಾಗಿರುವ ಪಾತ್ರಗಳ ಬಗ್ಗೆ ಹೇಳುವುದಾದರೆ?

ಟೀಚರ್‌ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಇದ್ದಾರೆ. ಮಾಸ್‌ ಹುಡುಗ ಲವ್‌ನಲ್ಲಿ ಬಿದ್ದರೆ ಏನಾಗುತ್ತದೆ ಎಂಬುದನ್ನು ನೋಡಬಹುದು. ಹಾಸ್ಯಕ್ಕೆ ಕುರಿ ಪ್ರತಾಪ್‌, ಚಿಕ್ಕಣ್ಣ, ಬಾಡಿ ಬಿಲ್ಡರ್‌ಗಳ ಆಚೆಗೂ ಡಾಲಿ ಧನಂಜಯ್‌ ಅವರೂ ನನ್ನ ಜತೆ ಮುಖಾಮುಖಿ ಆಗುತ್ತಾರೆ. ತಾಯಿ ಪಾತ್ರದಲ್ಲಿ ಪವಿತ್ರಾ ಲೋಕೇಶ್‌, ಚಾಮಯ್ಯ ಮೇಸ್ಟು್ರ ಪಾತ್ರವನ್ನು ನೆನಪಿಸುವ ರಾಘವೇಂದ್ರ ರಾಜ್‌ಕುಮಾರ್‌ ಅವರ ಪಾತ್ರ, ತಾರಾ, ರವಿಶಂಕರ್‌ ಹೀಗೆ ದೊಡ್ಡ ತಾರಾಗಣ ಇದೆ. ಇವರೆಲ್ಲರ ಜತೆ ನಾನೂ ಒಬ್ಬ.