'ಸೀತಾ ವಲ್ಲಭ'ದಿಂದ ಸಿನಿಮಾರಂಗಕ್ಕೆ ಬಂದ ಸುಪ್ರೀತಾ!
ಕನ್ನಡದ ಜನಪ್ರಿಯ ಕಿರುತೆರೆ ಧಾರಾವಾಹಿಗಳಲ್ಲಿ `ಸೀತಾ ವಲ್ಲಭ' ಕೂಡ ಸ್ಥಾನ ಪಡೆದಿತ್ತು. ಧಾರಾವಾಹಿ ಮುಗಿದರೂ ಕೆಲವೊಂದು ಕಲಾವಿದರ ಮೇಲೆ ಪ್ರೇಕ್ಷಕರ ಅಭಿಮಾನ ನಿರಂತರವಾಗಿರುತ್ತದೆ. ಅಂಥ ಅದೃಷ್ಟ ಪಡೆದಿರುವ ಮೈಥಿಲಿ ಪಾತ್ರಧಾರಿ ಸುಪ್ರೀತಾ ಪ್ರಸ್ತುತ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ.
ಮೈಥಿಲಿ ಎನ್ನುವ ಹೆಸರು ಕಿರುತೆರೆ ಪ್ರೇಕ್ಷಕರ ಮನಸಲ್ಲಿ ಸೇರಿಕೊಳ್ಳಲು ಕಾರಣ ಸುಪ್ರೀತಾ. `ಸೀತಾ ವಲ್ಲಭ' ಧಾರಾವಾಹಿಯಲ್ಲಿ ತನಗೆ ಸಿಕ್ಕ ಪಾತ್ರಕ್ಕೆ ಆಕೆ ಜೀವ ತುಂಬಿದ ರೀತಿ ಅದು. ಅದೇ ಕಾರಣಕ್ಕೆ ಇನ್ನೊಂದು ಧಾರಾವಾಹಿ, ವೆಬ್ ಸೀರಿಸ್ ಮತ್ತು ಸಿನಿಮಾದ ಅವಕಾಶಗಳು ಆಕೆಯ ಮುಂದೆ ಸಾಲಾಗಿ ನಿಂತಿವೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸುಪ್ರೀತಾ ಅವರು ಸುವರ್ಣ ನ್ಯೂಸ್.ಕಾಮ್ ಗೆ ನೀಡಿರುವ ಸಂದರ್ಶನ ಇದು.
ಶಶಿಕರ ಪಾತೂರು
ಕಿರುತೆರೆ ನಟಿ ಎನ್ನುವಲ್ಲಿಂದ ಹಿರಿತೆರೆ ನಟಿಯಾಗಿ ಬದಲಾಗಿರುವುದು ಹೇಗೆ ಅನಿಸಿದೆ?
ನಿಜ ಹೇಳಬೇಕೆಂದರೆ ನಾನು ಕಿರುತೆರೆಯಲ್ಲಿಯೂ ನಟಿಯಾಗುವ ಕನಸು ಕಂಡವಳಲ್ಲ. ನಾನು ಮೂಲತಃ ಮೈಸೂರಿನವಳು. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಲ್ಲಿ ವೃತ್ತಿ ಶುರು ಮಾಡಿದ್ದೆ. ನನಗೆ ಬರವಣಿಗೆಯಲ್ಲಿ ಆಸಕ್ತಿ ಇತ್ತು. ಹಾಗಾಗಿ ಇಂಜಿನಿಯರಿಂಗ್ ದಿನಗಳಲ್ಲೇ ಸ್ಕ್ರಿಪ್ಟ್ ಬರೆಯುತ್ತಿದ್ದೆ. "ಖಾಸಗಿ ವಾಹಿನಿಯೊಂದರಲ್ಲಿ ವ್ರಿಟನ್ ಎಕ್ಸಾಮ್ ಇದೆ ಹೋಗಿ ನೋಡು" ಎಂದು ನನ್ನ ಸ್ನೇಹಿತರೊಬ್ಬರು ಸಲಹೆ ಮಾಡಿದರು. ನಾನು ಹೋದೆ. ನಾನು ಹೋಗಿದ್ದು ಎಕ್ಸಾಮ್ ಬರೆಯೋದಕ್ಕೆ. ಆದರೆ ವಾಹಿನಿಯ ಮಂದಿ ನನ್ನನ್ನು ನೋಡಿ ತಮ್ಮದೊಂದು ಪ್ರಾಜೆಕ್ಟ್‌ಗೆ ನಟಿಯಾಗಿಸಲು ಬಯಸಿದರು. ವೈಯಕ್ತಿಕವಾಗಿ ನಾನು ಕೂಡ ಹೊಸ ಪ್ರಯೋಗದ ಮೂಲಕ ನನ್ನನ್ನು ಹೊರಗೆಡಹಲು, ಒರೆಗೆ ಹಚ್ಚಲು ಸದಾ ಇಷ್ಟಪಡುತ್ತೇನೆ. ರೆಗ್ಯುಲರ್ ಆಗಿ ಇದೇ ಕೆಲಸವನ್ನಷ್ಟೇ ಮಾಡಬೇಕು ಎನ್ನುವ ಸೀಮಿತ ಮನೋಭಾವ ನನ್ನದಲ್ಲ; ಸೃಜನಶೀಲವಾಗಿರುವುದನ್ನೇನೋ ಮಾಡಬೇಕು ಎನ್ನುವ ಆಸಕ್ತಿ ಇತ್ತು. ಹಾಗಾಗಿ ಈ ಪ್ರಯತ್ನವನ್ನು ಮಾಡಿ ನೋಡೋಣ ಎಂದು ಆಡಿಶನ್‌ಗೆ ಒಪ್ಪಿಕೊಂಡೆ. ಹಾಗೆ ಆಡಿಶನ್ ಮೂಲಕ ಸೀತಾವಲ್ಲಭ ಧಾರಾವಾಹಿಗೆ ನಾಯಕಿಯಾದೆ.
ಸಿನಿಮಾದಲ್ಲಿ ಕೂಡ ಹೊಸದಾದ ಪ್ರಯೋಗಗಳನ್ನು ನಿಮ್ಮಿಂದ ನಿರೀಕ್ಷಿಸಬಹುದೇ?
ನಾನು ಪ್ರಯೋಗ ಮಾಡಬೇಕೆಂದು ಪ್ರಯೋಗಕ್ಕೆ ಇಳಿದವಳಲ್ಲ. ಅಂದರೆ ಆಕ್ಟಿಂಗ್ ಮಾಡಬೇಕೆಂದೇ ಬಂದಿರದಿದ್ದರೂ ಅವಕಾಶ ಸಿಕ್ಕಾಗ ನಟಿಯಾದೆ. ಅದೇ ರೀತಿ ಈಗ ಸಿನಿಮಾದಲ್ಲಿದ್ದೇನೆ. ನಿರ್ದೇಶಕರು ಫೋನ್ ಮಾಡಿ ಕತೆ ಹೇಳಿದಾಗ ತುಂಬ ಇಷ್ಟವಾಯಿತು. ಹಾಗಾಗಿ ಒಪ್ಪಿಕೊಂಡು ಚಿತ್ರತಂಡವನ್ನು ಭೇಟಿಯಾದೆ. ಟೀಮ್ ನಿಜಕ್ಕೂ ಚೆನ್ನಾಗಿದೆ. ಚಿತ್ರತಂಡದಲ್ಲಿರುವ ಪ್ರತಿಯೊಬ್ಬರಿಗೂ ಹೆಸರು ಮಾಡಬೇಕು; ನನ್ನ ಬೆಸ್ಟ್ ಕೊಡಬೇಕು ಎನ್ನುವ ಹಸಿವು ಇದೆ. ಇದು ಕಲಾವಿದರಲ್ಲಿ ಮಾತ್ರವಲ್ಲ, ನಿರ್ದೇಶಕರಲ್ಲಿ, ತಂತ್ರಜ್ಞರಲ್ಲಿ ಪ್ರತಿಯೊಬ್ಬರಲ್ಲಿಯೂ ಬೆಸ್ಟ್ ಔಟ್‌ಪುಟ್ ಕೊಡಬೇಕೆನ್ನುವ ಪ್ಯಾಷನ್ ಇದೆ. ಜೊತೆಗೆ ಅದಕ್ಕಾಗಿ ಹಾರ್ಡ್ ವರ್ಕ್ ಮಾಡುವ ಮನಸ್ಸೂ ಇದೆ. ಸದ್ಯಕ್ಕೆ ನನ್ನ ಕೆಲಸವನ್ನು ಎಂಜಾಯ್ ಮಾಡುತ್ತಿದ್ದೇನೆ; ಹೊರತಾಗಿ ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಮುಂದೆ ಕೆಲವು ಪ್ಲ್ಯಾನ್ಸ್ ಇವೆ. ಆದರೆ ಅದನ್ನು ಈಗಲೇ ಹೇಳುವ ಉದ್ದೇಶವಿಲ್ಲ. ಮುಂದೇನು ಅಂತ ನೋಡೋಣ.
ನಾಟ್ಯ, ನಟನೆಯ ನಿಧಿ: ಯಮುನಾ ಶ್ರೀನಿಧಿ
ಸದ್ಯಕ್ಕೆ ನೀವು ಯಾವೆಲ್ಲ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದೀರಿ?
ಸೀತಾವಲ್ಲಭ ಧಾರಾವಾಹಿ ಈಗಾಗಲೇ 500 ಸಂಚಿಕೆಗಳನ್ನು ದಾಟಿ ಮುಕ್ತಾಯವಾಗಿದೆ. ಪ್ರಸ್ತುತ ಸುವರ್ಣ ವಾಹಿನಿಗಾಗಿ `ಸರಸು' ಎನ್ನುವ ಧಾರಾವಾಹಿಯನ್ನು ಒಪ್ಪಿಕೊಂಡಿದ್ದೇನೆ. ಸದ್ಯದಲ್ಲೇ ಅದು ಕೂಡ ಪ್ರಸಾರವಾಗಲಿದೆ. ಇದರ ಜೊತೆಗೆ ನೆಟ್‌ಫ್ಲಿಕ್ಸ್‌ಗೆ ಒಂದು ವೆಬ್ ಸೀರೀಸ್ ಕೂಡ ಮಾಡುತ್ತಿದ್ದೇನೆ. ಪ್ರಸ್ತುತ ನಾನು ಒಪ್ಪಿಕೊಂಡಿರುವ `ಲಾಂಗ್ ಡ್ರೈವ್' ಸಿನಿಮಾದ ಒಂದು ಹಂತದ ಚಿತ್ರೀಕರಣ ಪೂರ್ತಿಯಾಗಿದೆ. ಚಿತ್ರದಲ್ಲಿ ಅರ್ಜುನ್ ಯೋಗಿ ನಾಯಕರು. ಶ್ರೀರಾಜ್ ನಿರ್ದೇಶಕರು. ಸಿನಿಮಾದ ವಸ್ತು ತುಂಬ ಚೆನ್ನಾಗಿದೆ. ಒಂದು ನೈಜ ಘಟನೆಯನ್ನು ಆಧಾರಿಸಿ ಮಾಡಿರುವ ಕತೆ. ಬಹುಶಃ ಅದೇ ಕಾರಣದಿಂದಲೇ ಇರಬಹುದು ಇದು ಪ್ರತಿಯೊಬ್ಬರ ಜೀವನಕ್ಕೂ ಅನ್ವಯವಾಗುವಂಥ ಸಂಗತಿಗಳನ್ನು ಹೊಂದಿದೆ. ಈಗಾಗಲೇ ಚಿತ್ರದ ಹಾಡಿನ ಚಿತ್ರೀಕರಣ ಬಾಕಿ ಇದೆ. ಪ್ರಸ್ತುತ ನಾನು ಅದರದೇ ಚಿತ್ರೀಕರಣಕ್ಕಾಗಿ ಶಿವಮೊಗ್ಗದಲ್ಲಿದ್ದೇನೆ.
ಎರಡು ಧಾರಾವಾಹಿಗಳ ಬಳಿಕ ಸಿನಿಮಾ ಚಿತ್ರೀಕರಣದ ಅನುಭವ ಹೇಗೆ ವಿಭಿನ್ನ?
ಪ್ರಸ್ತುತ ಒಂದು ಧಾರಾವಾಹಿಯಷ್ಟೇ ಆಗಿದೆ. ಇನ್ನೊಂದು ಇನ್ನೂ ಪ್ರಸಾರ ಶುರುವಾಗಿಲ್ಲ. ಆದರೆ ಸೀರಿಯಲ್‌ಗಿಂತ ಸಿನಿಮಾದಲ್ಲಿ ಭಾಗಿಯಾಗುವುದಕ್ಕೆ ತುಂಬಾ ವ್ಯತ್ಯಾಸಗಳಿವೆ. ಧಾರಾವಾಹಿಯಲ್ಲಿ ಭಾವನೆಗಳನ್ನು ತುಂಬ ಲ್ಯಾಗ್ ಆಗಿ ತೋರಿಸಲಾಗುತ್ತದೆ. ಸೀರಿಯಲ್‌ಗಳ ರುಚಿಯೇ ಬೇರೆ; ಸಿನಿಮಾಗಳ ಪ್ರೇಕ್ಷಕರಿಗೆ ಇರುವ ನಿರೀಕ್ಷೆಗಳೇ ಬೇರೆಯಾಗಿರುತ್ತದೆ. ಸಿನಿಮಾಗಳು ಧಾರಾವಾಹಿಗಳಿಗಿಂತ ಹೆಚ್ಚು ನೈಜತೆಯನ್ನು ಹೊಂದಿರುತ್ತವೆ. ಸೀರಿಯಲ್‌ಗಳಲ್ಲಿ ನಾಟಕೀಯತೆ ಹೆಚ್ಚು. ಎಲ್ಲವೂ ವೀಕ್ಷಕರ ಮೇಲೆ ಡಿಪೆಂಡ್ ಆಗುತ್ತದೆ. ಡೈಲಿ ಸೋಪಲ್ಲಿ ನಮಗೆ ಸಿಗುವ ವೀಕ್ಷಕರೇ ಬೇರೆ. ಸಿನಿಮಾಗಳ ಪ್ರೇಕ್ಷಕರೇ ಬೇರೆ. ಹಾಗಾಗಿ ಮೇಕಿಂಗ್, ಎಮೋಶನ್ಸ್, ಪರ್ಫಾರ್ಮನ್ಸ್ ವಿಚಾರಗಳಲ್ಲಿ ಸಿನಿಮಾಗಳಿಗೂ, ಧಾರಾವಾಹಿಗಳಿಗೂ ತುಂಬಾನೇ ವ್ಯತ್ಯಾಸ ಇವೆ.
ಹೊಸ ಸಿನಿಮನೆ ಸೇರುವ ಬಗ್ಗೆ ಅನು ಸಿರಿಮನೆ ಮಾತು
`ಸರಸು-ಮೈಥಿಲಿ'ಯನ್ನು ಹೋಲಿಸುವ ಪ್ರೇಕ್ಷಕರಿಗೆ ಏನು ಹೇಳ ಬಯಸುತ್ತೀರಿ?
ನನ್ನನ್ನು ಮೈಥಿಲಿಯಾಗಿ ಗುರುತಿಸುವಂತೆ ಮಾಡಿದ್ದು `ಸೀತಾವಲ್ಲಭ' ಧಾರಾವಾಹಿ. ಅದು ನನಗೆ ತುಂಬಾನೇ ನೀಡಿದೆ. ಅದರ ಮೂಲಕ ನನ್ನ ನಿರೀಕ್ಷೆಗಿಂತಲೂ ಹೆಚ್ಚಾಗಿಯೇ ಪಡೆದಿದ್ದೇನೆ. ಅಂದರೆ ಜನರ ಪ್ರೀತಿ ಆಗಲೀ, ಹೆಸರಾಗಲೀ ತುಂಬಾನೇ ಸಿಕ್ಕಿದೆ. ನನ್ನ ಬದುಕಿನಲ್ಲಿ ಅನುಭವ ನೀಡಿದೆ. ತುಂಬಾ ಒಳ್ಳೆಯ ಪ್ರತಿಕ್ರಿಯೆಗಳು ಲಭ್ಯವಾಗಿವೆ. ಎಷ್ಟೋ ಜನ ಮೈಥಿಲಿ ಎನ್ನುವ ನನ್ನ ಪಾತ್ರದ ಹೆಸರನ್ನು ಅವರ ಮನೆಯ ವ್ಯಕ್ತಿಗೆ ಇಟ್ಟಿರುವುದಾಗಿ ಹೇಳುತ್ತಿದ್ದರು. ಚಿಕ್ಕ ಮಕ್ಕಳು ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಹಾಡಿ ಕಳಿಸುತ್ತಿದ್ದರು. ಇವೆಲ್ಲವೂ ಅದ್ಭುತವಾದ ನೆನಪುಗಳು. ಆದರೆ ಸೀತಾವಲ್ಲಭದ `ಮೈಥಿಲಿ'ಗೂ ಬರಲಿರುವ `ಸರಸು'ವಿಗೂ ತುಂಬಾನೇ ವ್ಯತ್ಯಾಸ ಇದೆ. ಈ ವಿಭಿನ್ನತೆ ಬರೇ ನೋಟಕ್ಕೆ ಮಾತ್ರ ಸೀಮಿತವಲ್ಲ. ಧಾರಾವಾಹಿಯ ಕತೆಯಿಂದ ಹಿಡಿದು ನಟನೆ, ನನ್ನ ಪಾತ್ರ, ಪಾತ್ರದ ವರ್ತನೆ ಸೇರಿದಂತೆ ಪ್ರತಿಯೊಂದರಲ್ಲಿಯೂ `ಸೀತಾ ವಲ್ಲಭ'ದಲ್ಲಿ ಕಾಣಿಸಿರದ ಸುಪ್ರೀತಾ ನಿಮಗೆ ಇಲ್ಲಿ ಕಾಣಿಸಲಿದ್ದಾಳೆ. ಹಾಗಾಗಿ ಇವೆರಡಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎಂದೇ ಹೇಳಬಹುದು. ಸರಸು ಧಾರಾವಾಹಿ ಪ್ರಸಾರವಾದ ಬಳಿಕ ನೋಡಿದರೆ ಖಂಡಿತವಾಗಿ ನನ್ನ ಮಾತನ್ನು ಎಲ್ಲರೂ ಒಪ್ಪುತ್ತಾರೆ ಎನ್ನುವ ನಂಬಿಕೆ ಇದೆ.