Asianet Suvarna News Asianet Suvarna News

ಜನ ಮೆಚ್ಚಿದ ಕನ್ನಡತಿ : ರಂಜನಿ ರಾಘವನ್ ಜೊತೆ ಮಾತುಕತೆ..!

ಒಂದು ಕಾಲದಲ್ಲಿ ಕನ್ನಡಿಗರ ಪಾಲಿನ ಜನಪ್ರಿಯ ಸೊಸೆಯಾಗಿದ್ದ ರಂಜನಿ ರಾಘವನ್ ಈಗ ಶಿಕ್ಷಕಿಯಾಗಿಯೂ ಜನಮೆಚ್ಚುಗೆ ಪಡೆದಿರುವುದು ವಿಶೇಷ. ಇವೆಲ್ಲದರ ಬಗ್ಗೆ ರಂಜನಿಯ ಜೊತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ಮಾತುಕತೆ ಇದು.

Kannadathi serial actress Ranjani raghavan interview
Author
Bengaluru, First Published Oct 13, 2020, 6:20 PM IST
  • Facebook
  • Twitter
  • Whatsapp

-ಶಶಿಕರ ಪಾತೂರು

ಪ್ರತಿಯೊಂದು ಧಾರಾವಾಹಿಯಲ್ಲೂ ವೈವಿಧ್ಯತೆ ನೀಡಬೇಕೆಂದೇ ಶುರು ಮಾಡುವವರಿದ್ದಾರೆ. ಆದರೆ ಎಷ್ಟೇ ವೈವಿಧ್ಯತೆ ನೀಡಿದರೂ ಪ್ರೇಕ್ಷಕರೇ ಇಲ್ಲ ಎನ್ನುವಾಗ ಮತ್ತೆ ಹಳೆಯ ಅತ್ತೆ ಸೊಸೆ ಜಗಳದ ಕಾನ್ಸೆಪ್ಟ್‌ಗೆ ತಂದಂಥ ಉದಾಹರಣೆಗಳು ಸಾಕಷ್ಟಿವೆ. ಆದರೆ `ಕನ್ನಡತಿ' ಆರಂಭದಿಂದಲೇ ಕನ್ನಡದ ಬಗ್ಗೆ ಮೂಡಿಸಿರುವ ಒಲವನ್ನು ಪ್ರೇಕ್ಷಕರಲ್ಲಿ ಹಾಗೆಯೇ ಉಳಿಸಿರುವಂಥ ಅಪರೂಪದ ಧಾರಾವಾಹಿ.

ಅದರ ಯಶಸ್ಸಿನಲ್ಲಿ ಒಟ್ಟು ತಂಡದ ಜೊತೆಗೆ ನಾಯಕಿಯಾಗಿರುವ ರಂಜನಿ ರಾಘವನ್ ಅವರ ಪಾತ್ರ ಪ್ರಮುಖ. ಅದರಲ್ಲಿಯೂ ಒಂದು ಕಾಲದಲ್ಲಿ ಕನ್ನಡಿಗರ ಪಾಲಿನ ಜನಪ್ರಿಯ ಸೊಸೆಯಾಗಿದ್ದಾಕೆ ಈಗ ಶಿಕ್ಷಕಿಯಾಗಿಯೂ ಜನಮೆಚ್ಚುಗೆ ಪಡೆದಿರುವುದು ವಿಶೇಷ. ಇವೆಲ್ಲದರ ಬಗ್ಗೆ ರಂಜನಿಯ ಜೊತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ಮಾತುಕತೆ ಇದು.

ಸಿನಿಮಾದಿಂದ ಸೀರಿಯಲ್‌ಗೆ ಮರಳುವಾಗಿನ ನಿಮ್ಮ ಮನಸ್ಥಿತಿ ಹೇಗಿತ್ತು?

ಮೊದಲು ಯೋಚನೆ ಮಾಡಿದೆ. ಆದರೆ `ಕನ್ನಡತಿ' ಸಬ್ಜೆಕ್ಟ್ ಒಂದು ಸಾಮಾನ್ಯ ಧಾರಾವಾಹಿಯಂತೆ ಇರಲಿಲ್ಲ. ನಿರ್ದೇಶಕರು ಅದನ್ನು ಟಿವಿ ಧಾರಾವಾಹಿ ಎನ್ನುವುದಕ್ಕಿಂತಲೂ ಒಂದು ವೆಬ್ ಸೀರೀಸ್ ಗುಣಮಟ್ಟದಲ್ಲಿ ತೆಗೆದಿದ್ದಾರೆ. ತುಂಬ ಒಳ್ಳೆಯ ಅಭಿರುಚಿ ಹೊಂದಿರುವ ಸಂಭಾಷಣೆಗಳು ಇರುವುದರಿಂದ ಅದಕ್ಕೆ ತಕ್ಕಂತೆ ಅಭಿಮಾನಿಗಳು ಕೂಡ ಇದ್ದಾರೆ. ಹಾಗಾಗಿ ನನಗೆ ಸಿನಿಮಾ ಮಾಡಿದಷ್ಟೇ ತೃಪ್ತಿ ಈ ಧಾರಾವಾಹಿಯಿಂದ ದೊರಕಿದೆ. 

ನಾಟ್ಯ ನಟನೆಯ ನಿಧಿ ಯಮುನಾ ಶ್ರೀನಿಧಿ

`ಕನ್ನಡತಿ'ಯಾದ ಮೇಲೆ ನಿಮ್ಮಲ್ಲಾದ ಬದಲಾವಣೆ ಏನು?

ಜನರಿಗೆ `ಅಚ್ಚ ಕನ್ನಡ ಮಾತನಾಡುವುದು ಎಂದರೆ ಸಾಮಾನ್ಯ ವಿಚಾರವಲ್ಲ' ಎನ್ನುವ ನಂಬಿಕೆ ಇದೆ. ಬಹುಶಃ ನಾನು ಕೂಡ ಅದೇ ನಂಬಿಕೆಯ ಪ್ರಭಾವಕ್ಕೆ ಒಳಗಾಗಿಯೇ ಇದ್ದೆ ಅನ್ಸುತ್ತೆ. ಮೊದಲು ನನ್ನಲ್ಲಿ ಯಾರಾದರೂ ಇಂಗ್ಲಿಷ್ ಮಾತನಾಡಿದರೆ ನಾನು ಕೂಡ ಅದಕ್ಕೆ ಇಂಗ್ಲಿಷ್‌ನಲ್ಲೇ ಪ್ರತಿಕ್ರಿಯೆ ಕೊಡುತ್ತಿದ್ದೆ. ಆದರೆ ಈಗ ಅದನ್ನು ಬದಲಾಯಿಸಿಕೊಂಡಿದ್ದೇನೆ.

ನಮ್ಮ ಭಾಷೆಯನ್ನು ನಾವು ಅಚ್ಚುಕಟ್ಟಾಗಿ ಮಾತನಾಡುವುದೇ ನಮ್ಮ ಕರ್ತವ್ಯ. "ಅರ್ಧಂಬರ್ಧ ಇಂಗ್ಲಿಷ್ ಮಾತನಾಡುವುದೇ ಟ್ರೆಂಡ್" ಎಂದು ಹೇಳುವುದು ಯಾವ ಸೀಮೆಯ ನ್ಯಾಯ? ಇದರ ಜೊತಗೆ ಕನ್ನಡತಿ ಕೊನೆಯಲ್ಲಿ `ಸರಿಗನ್ನಡಂ ಗೆಲ್ಗೆ' ಎನ್ನುವ ಸೆಗ್ಮೆಂಟ್ ಇದೆ. ಅದರಿಂದ ಸಾಕಷ್ಟು ವಿಷಯ ತಿಳಿದುಕೊಂಡಿದ್ದೇನೆ. ಮಾತ್ರವಲ್ಲ, ಒಂದು ಭಾಷೆಯ ಜೊತೆಗೆ ಎಷ್ಟೊಂದು ಭಾಷೆಗಳು ಸೇರಿವೆ, ಫಾರ್ಸಿ ಭಾಷೆ ಭಾರತೀಯ ಭಾಷೆಗೆ ಎಷ್ಟೊಂದು ಹತ್ತಿರದಲ್ಲಿವೆ ಮೊದಲಾದ ಸಂಗತಿಗಳನ್ನು ಅರಿತಿದ್ದೇನೆ.

ಹೊಸ ಸಿನಿಮನೆ ಸೇರುವ ಬಗ್ಗೆ ಅನುಸಿರಿಮನೆ ಮಾತು

ಚಿತ್ರದಿಂದ ಚಿತ್ರಕ್ಕೆ ಎಷ್ಟರ ಮಟ್ಟಿಗೆ ವಿಭಿನ್ನವಾದ ಪಾತ್ರಗಳು ನಿಮಗೆ ಸಿಗುತ್ತಿವೆ?

ಕನ್ನಡತಿಯಲ್ಲಿ ಟೀಚರ್ ಆದರೆ ಮುಂದೆ ಬರಲಿರುವ `ಠಕ್ಕರ್'ನಲ್ಲಿ ನನ್ನದು ಮೆಡಿಕಲ್ ಸ್ಟುಡೆಂಟ್ ಪಾತ್ರ. ಇದಲ್ಲದೆ `ಸತ್ಯಂ' ಎನ್ನುವ ಚಿತ್ರ ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಬರುತ್ತಿವೆ. ಗಣಪ ಸಂತೋಷ್ ಜೊತೆಗೆ ಮಾಡುತ್ತಿರುವ ಆ ಚಿತ್ರದಲ್ಲಿ ನನ್ನದು ತರಲೆ ಹುಡುಗಿಯ ಪಾತ್ರ. ಇದಲ್ಲದೆ ದಿಗಂತ್ ಅವರೊಂದಿಗೆ ಒಂದು ಹೊಸ ಸಿನಿಮಾ ನಡೆಯುತ್ತಿದೆ. ಅದರ ಫೊಟೋ ಶೂಟ್ ಆಗಿದೆ. ಫೊಟೋ ರಿಲೀಸ್ ಮಾಡುವಾಗ ಟೈಟಲ್ ಕೂಡ ಬಿಡುಗಡೆ ಮಾಡುತ್ತಾರೆ. ಅದು ಸಿಗಂಧೂರು ಪಕ್ಕ ನಿಟ್ಟೂರು ಎನ್ನುವಲ್ಲಿ ನಡೆಯುವ ಕತೆ. ವಿನಾಯಕ ಕೋಡ್ಸರ ಅವರು ತುಂಬ ರಿಯಲಿಸ್ಟಿಕ್ ಆಗಿ ಬರೆದಿದ್ದಾರೆ. ಚಿತ್ರ ನೋಡುವಾಗ ನಿಮಗೆ ಒಂದು ಮಲಯಾಳಂ ಸಿನಿಮಾ  ನೀಡುವ ಫೀಲ್ ದೊರೆಯಲಿದೆ. ಯಾಕೆಂದರೆ ಅಲ್ಲಿನ ಸಿನಿಮಾಗಳಲ್ಲಿ ಸ್ಥಳೀಯ ಅಂಶ ಮತ್ತು ಅಲ್ಲಿನ ಕಲ್ಚರ್‌ಗಳಿಗೆ ಒತ್ತು ನೀಡಲಾಗುತ್ತದೆ. ಅಂಥ ಪ್ರಯತ್ನ ಇಲ್ಲಿಯೂ ನಡೆದಿದ್ದು ದಿಗಂತ್ ಅವರು ಗೊಬ್ಬರದ ಅಂಗಡಿ ಇರಿಸಿರುವ ಮಲೆನಾಡಿನ ಹುಡುಗ ಶಂಕರನಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಅತ್ತೆ ಮಗಳ ಪಾತ್ರದಲ್ಲಿ ನಾನು ಕಾಣಿಸಲಿದ್ದೇನೆ. ಕತೆಯ ಮೇಜರ್ ಟ್ವಿಸ್ಟ್ ನನ್ನ ಮೂಲಕವೇ ನಡೆಯುತ್ತದೆ.

ಮದುವೆ ಬಗ್ಗೆ ಶೈನ್ ಶೆಟ್ಟಿ ಹೇಳಿದ್ದೇನು ಗೊತ್ತಾ?

ಮಲೆನಾಡಿನ ಸ್ಥಳೀಯತೆ ಬಗ್ಗೆ ನೀವು ತಿಳಿದುಕೊಂಡಿದ್ದೀರ?

ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಲ್ಲೇ. ಆದರೆ ನನಗೆ ಕರ್ನಾಟಕದ ಎಲ್ಲ ಭಾಗಗಗಳ ಬಗ್ಗೆ ತಿಳಿಯುವ ಆಸಕ್ತಿ. ಹಾಗಾಗಿ ನನಗೆ ಮಲೆನಾಡು ಮಾತ್ರವಲ್ಲ, ಬೀದರ್, ಗುಲ್ಬರ್ಗದ ಬಗ್ಗೆಯೂ ಗೊತ್ತಿದೆ. ಉಡುಪಿಯಲ್ಲಿ ನನ್ನ ಚಿಕ್ಕಮ್ಮ ಇದ್ದಾರೆ. ಹಾಗಾಗಿ ಮಂಗಳೂರು ಕರಾವಳಿಯ ಬಗ್ಗೆಯೂ ಗೊತ್ತಿದೆ. 

ಲಾಕ್ಡೌನ್ ಸಂದರ್ಭದಲ್ಲಿ ಹೇಗೆ ದಿನ ಕಳೆದಿರಿ?

ಆರಂಭದಲ್ಲಿ ಇಷ್ಟು ದೊಡ್ಡದಾಗಿ ಲಾಕ್ಡೌನ್ ಆಗಬಹುದು ಎಂದು ಅಂದುಕೊಂಡಿರಲಿಲ್ಲ. ಮೊದಲು ಇಪ್ಪತ್ತು ದಿನ ರಜದಲ್ಲಿ ಮನೇಲಿರುವುದೇ ಚೆನ್ನಾಗಿದೆ ಅನಿಸಿತು. ಆಮೇಲೆ ಬೋರ್ ಆಗತೊಡಗಿತು. ಹೊಸ ಹವ್ಯಾಸಗಳ ಕಡೆಗೆ ಗಮನ ಹರಿಸಿದೆ. ಒಂದಷ್ಟು ಪುಸ್ತಕಗಳನ್ನು ಓದಿದೆ. ಮನೆಯಲ್ಲಿ ನನಗೆ ಅಡುಗೆ ಮಾಡಿ ಅಭ್ಯಾಸ ಇರಲಿಲ್ಲ. ಯಾಕೆಂದರೆ ಹೆಚ್ಚಾಗಿ ಅಮ್ಮನೇ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ನಾನು ಕೂಡ ಅಡುಗೆ ಮಾಡಲು ಆರಂಭಿಸಿದೆ. ಅದರ ಜತೆಯಲ್ಲೇ ನನಗೆ ಕತೆ ಬರೆಯುವ ಹವ್ಯಾಸ ಶುರುವಾಗಿದೆ. ಹಾಗಾಗಿ ಒಂದಷ್ಟು ಸ್ಕ್ರಿಪ್ಟ್ ಬರೆದಿಟ್ಟೆ. ಬಿಡುವು ಸಿಕ್ಕರೆ ಮುಂದೆ ನಿರ್ದೇಶನ ವಿಭಾಗದಲ್ಲಿ ಕೂಡ ತೊಡಗಿಸಿಕೊಳ್ಳುವ ಆಸಕ್ತಿ ಇದೆ. ಸಿನಿಮಾ ಪರದೆಯ ಹಿಂದಿನ ಕೆಲಸವನ್ನು ಮುಂದೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೀನಿ. ಹಾಗಾಗಿ ಈಗಿನಿಂದಲೇ ಹವ್ಯಾಸವಾಗಿ ಇರಿಸಿಕೊಂಡಿದ್ದೀನಿ. ಸಿನಿಮಾಗಳನ್ನು ನೋಡುತ್ತಿದ್ದೆ. ಹೊಸ ಹಾಡುಗಳನ್ನು ಕಲಿತೆ. ಎರಡನೇ ಲಾಕ್ಡೌನಲ್ಲಿ ಸಿವಿಲ್ ಪೊಲೀಸ್‌ ಪೊಲೀಸ್ ವಾರ್ಡನ್ ಆಗಿ ಕೆಲಸ ಮಾಡಿದೆ. ಏಳೆಂಟು ದಿನ ಹಾಗೆ ಕಳೆಯಿತು. ಇದೀಗ ಶೂಟಿಂಗ್ ಆರಂಭವಾಗಿದ್ದರೂ ದಿನಾ ಬೆಳಿಗ್ಗೆದ್ದು ಓಡುವ ಚಾಲೆಂಜ್ ತೆಗೆದುಕೊಂಡಿದ್ದೇನೆ.

Follow Us:
Download App:
  • android
  • ios